Site icon Vistara News

Deepavali 2023: ದೀಪಾವಳಿಯ ಹಿಂದೆ ಎಷ್ಟೊಂದು ಆಸಕ್ತಿದಾಯಕ ಕಥೆಗಳು! ತಪ್ಪದೇ ಓದಿ

Family Lighting Candles at Home for Diwali

ಸಂಭ್ರಮ, ಸಂತೋಷಗಳಿಗೆ ಕಾರಣಗಳು ಬೇಕು. ಆ ಕಾರಣಗಳಿಗೆ ಹೊಂದುವಂಥ ಆಚರಣೆ, ವ್ರತ, ಹಬ್ಬ- ಹೀಗೆ ಏನಾದರೊಂದು ಬೆನ್ನಿಗೆ ಹುಟ್ಟಿಕೊಳ್ಳುತ್ತದೆ. ಅಂದರೆ ಪ್ರತೀ ಆಚರಣೆಯ ಹಿಂದೆಯೂ ಏನಾದರೊಂದು ಕಾರಣ ಇದ್ದೇಇರುತ್ತದೆ. ಈ ಕಾರಣಗಳು ಪ್ರಾಂತ್ಯ, ಭಾಷೆ, ಸಂಸ್ಕೃತಿಗಳಿಗೆ ಭಿನ್ನ ಆಗಿರಬಹುದು. ಆಯಾ ಜನರಿಗೆ ಬೇಕಾದಂತೆ ಕಾರಣಗಳು ಸೃಷ್ಟಿಯಾಗಿರಬಹುದು. ಆದರೆ ಕಾರಣವಿಲ್ಲದೆ ಆಚರಣೆಗಳಿಲ್ಲ. ಈಗ ಬೆಳಕಿನ ಹಬ್ಬ (deepavali 2023) ನಮ್ಮ ಮುಂದಿರುವ ಹೊತ್ತಿನಲ್ಲಿ, ಇದಕ್ಕೂ ಒಂದಿಷ್ಟು ಪೌರಾಣಿಕ ಕಥನಗಳು ಇರಲೇಬೇಕಲ್ಲ. ಏನು ಅ ಕಥೆಗಳು? ಬೆಳಕಿನ ಬೇರುಗಳು ಎಷ್ಟು ಆಳಕ್ಕಿವೆ? ಎಂಬುದನ್ನು ಈಗ ತಿಳಿಯೋಣ.

ರಾಮಾಯಣದ ನಂಟು

ತಂದೆಯ ಮಾತು ಉಳಿಸುವುದಕ್ಕೆ 14 ವರ್ಷಗಳ ಕಾಲ ಶ್ರೀರಾಮಚಂದ್ರ ಕಾಡಿಗೆ ಹೋದ ಕಥೆಯನ್ನು ಎಲ್ಲರೂ ಕೇಳಿರುತ್ತೇವೆ. ಆತ, ಮಡದಿ ಮತ್ತು ತಮ್ಮನೊಂದಿಗೆ ಅಯೋಧ್ಯೆಯನ್ನು ಬಿಟ್ಟು ತೆರಳಿದ ಮೇಲೆ, ಪುರಜನರ ನೆಮ್ಮದಿಯೇ ಹಾಳಾಯ್ತು. ದಶರಥ ಚಕ್ರವರ್ತಿ ಕಾಲವಾದ; ರಾಮ-ಸೀತೆ-ಲಕ್ಷ್ಮಣರು ಕಾಡು ಪಾಲಾದರು; ಭರತನೂ ಊರ ಹೊರಗಿದ್ದು ರಾಮನನ್ನು ನಿರೀಕ್ಷಿಸತೊಡಗಿದ. ಕಳೆಕಳೆಯಾಗಿದ್ದ ಅಯೋಧ್ಯೆ ಒಮ್ಮೆಲೆ ಮಂಕಾಯಿತು. ಮುಂದೆ ಎಂದಾದರೂ ಒಂದು ದಿನ ಅಯೋಧ್ಯೆಗೆ ಜೀವಕಳೆ ಬರಬಹುದು ಎಂಬ ನಿರೀಕ್ಷೆಯನ್ನೇ ಹೊತ್ತ ಜನ, ಕಾಯತೊಡಗಿದರು.

ಇತ್ತ, ವನವಾಸದ ಅವಧಿ ಮುಗಿಯುತ್ತಾ ಬಂದಾಗಲೇ ಸೀತೆಯನ್ನು ರಾವಣ ಅಪಹರಿಸಿದ. ಸೀತಾನ್ವೇಷಣೆಗೆ ಹೊರಟ ದಾಶರಥಿಗಳು ಕಡೆಗೆ ವಾನರರ ನೆರವಿನಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಲಂಕೆಯನ್ನು ಮೆಟ್ಟಿ, ರಾವಣನನ್ನು ಕುಟ್ಟಿ ಕೆಡವಿದರು. ರಾವಣ ಸಂಹಾರದ ನಂತರ ಎಲ್ಲರೂ ಅಯೋಧ್ಯೆಗೆ ಮರಳುವ ದಿನ ಬಂದಿತ್ತು. ಆಗ ರಾಮ-ಸೀತೆ-ಲಕ್ಷ್ಮಣರ ಬರವನ್ನೇ ನಿರೀಕ್ಷಿಸುತ್ತಿದ್ದ ಜನರೆಲ್ಲ, ದಾರಿ ಬದಿಯಲ್ಲಿ ಸಾಲು ದೀವಿಗೆಯನ್ನು ಇರಿಸಿ, ಬರುವವರಿಗೆ ಹಾದಿ ಗುರುತಿಸಲು ನೆರವಾದವರು. ಸೀತಾರಾಮರು ಅಯೋಧ್ಯೆಗೆ ಮರಳಿದ ನೆನಪಿಗಾಗಿ ಸಾಲು ದೀವಿಗೆಯನ್ನು ಇರಿಸಿ, ದೀಪಾವಳಿಯನ್ನು ಆಚರಿಸುವ ಪ್ರತೀತಿಯಿದೆ.

ನರಕ ಚತುರ್ದಶಿ

ಮಹಾವಿಷ್ಣುವು ವರಾಹ ರೂಪದಲ್ಲಿದ್ದಾಗ, ಆತನ ದೇಹದಿಂದ ಬಿದ್ದ ಹನಿ ಬೆವರಿನಿಂದ ಭೂಮಿಯಲ್ಲಿ ಹುಟ್ಟಿದವ ನರಕಾಸುರ ಅಥವಾ ಭೌಮಾಸುರ. ಪ್ರಾಗ್ಜೋತಿಷಪುರವನ್ನು ಆಳುತ್ತಿದ್ದ ಆತ ಲೋಕಕಂಟಕನಾಗಿದ್ದ. ತನ್ನ ಹೆತ್ತವರಿಂದ ಮಾತ್ರವೇ ತನಗೆ ಮರಣ ಬರಬೇಕು ಎನ್ನುವ ವರ ಪಡೆದಿದ್ದರಿಂದ, ಯಾರಿಗೂ ಆತನನ್ನು ಮಣಿಸುವುದು ಸಾಧ್ಯವಿರಲಿಲ್ಲ. ದೇವಲೋಕಕ್ಕೆ ಲಗ್ಗೆ ಇಟ್ಟು, ಇಂದ್ರನ ತಾಯಿ ಅದಿತಿದೇವಿಯ ಕರ್ಣಕುಂಡಲಗಳನ್ನು ಅಪಹರಿಸಿದ. ದೇವತೆಗಳ ಪೀಡಕನಾದ.

ಈತನ ಹಿಂಸೆಯನ್ನು ತಾಳಲಾರದ ಇಂದ್ರ ದ್ವಾರಕೆಗೆ ಬಂದು ಶ್ರೀಕೃಷ್ಣನಲ್ಲಿ ಮೊರೆಯಿಟ್ಟ. ತಂದೆ-ತಾಯಿಯರು ಒಟ್ಟಾಗಿ ಬಂದಾಗಲೇ ಮರಣ ಎಂಬ ವರ ಆತನಿಗೆ ಇದ್ದಿದ್ದರಿಂದ, ನರಕನನ್ನು ಮಣಿಸುವುದಕ್ಕಾಗಿ ಸತ್ಯಭಾಮೆಯೊಂದಿಗೆ ಶ್ರೀಕೃಷ್ಣ ಹೊರಟ. ಮಾರ್ಗದಲ್ಲಿ ಮುರಾಸುರ ಮತ್ತಿತರ ಅಸುರರನ್ನೆಲ್ಲಾ ಸಂಹರಿಸಿ, ಕಡೆಯದಾಗಿ ನರಕನನ್ನೂ ಸಂಹರಿಸುತ್ತಾನೆ. ಕೃಷ್ಣ-ಭಾಮೆಯರೇ ವಿಷ್ಣು-ಭೂಮಿಯರು ಎಂಬುದು ನರಕನಿಗೆ ಅರಿವಾಗಿ, ತನ್ನ ಸಾವಿನ ದಿನವನ್ನು ನರಕ ಚತುರ್ದಶಿಯಾಗಿ ಜನ ನೆನಪಿಸಿಕೊಳ್ಳಬೇಕು ಎಂದು ಕೋರುತ್ತಾನೆ. ನರಕನ ಮೋಕ್ಷದ ನಂತರ, ಆತನಲ್ಲಿದ್ದ 16,000 ರಾಜಕುಮಾರಿಯರನ್ನು ಕೃಷ್ಣ ವಿವಾಹವಾಗುತ್ತಾನೆ.

ಲಕ್ಷ್ಮೀ ಪೂಜೆ

ಇದಕ್ಕೂ ಪುರಾಣದೊಂದಿಗೆ ನಂಟಿದೆ. ಅಮೃತವನ್ನು ಪಡೆಯಲೆಂದು ಸುರಾಸುರರು ಸಮುದ್ರವನ್ನು ಕಡೆದ ಕಥೆಯಿದು. ಹೀಗೆ ಮಥಿಸುತ್ತಾ ಹೋದಾಗ, ಅಮೃತಕ್ಕೂ ಮೊದಲು ಬಹಳಷ್ಟು ಸುವಸ್ತುಗಳು ಹುಟ್ಟುತ್ತಾ ಹೋದವು. ನಡುವಿಗೆ ವಿಷವೂ ಹುಟ್ಟಿತು. ಹೀಗೆ ಮಥನದ ಸಂದರ್ಭದಲ್ಲಿ ಲಕ್ಷ್ಮೀದೇವಿ ಹುಟ್ಟಿಬಂದಳು. ಸಂಪತ್ತಿನ ಅಧಿದೇವತೆಯಾದ ಈಕೆ, ಮಹಾವಿಷ್ಣುವನ್ನು ವರಿಸಿದಳು. ಇದರ ನೆನಪಿಗಾಗಿ, ಸಂಪತ್ತು ಹೆಚ್ಚಲಿ ಎಂದು ಕೋರಿ ದೀಪಾವಳಿಯ ಎರಡನೇ ದಿನ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ.

ಬಲಿ ಪಾಡ್ಯಮಿ

ಅಸುರರ ರಾಜ ಬಲಿ ಚಕ್ರವರ್ತಿ. ಹಿಂದೆ ಮಹಾವಿಷ್ಣುವಿನಿಂದ ನರಸಿಂಹಾವತಾರದಲ್ಲಿ ರಕ್ಷಣೆ ಪಡೆದಿದ್ದ ಪ್ರಹ್ಲಾದನ ಮೊಮ್ಮಗ ಈತ. ರಕ್ಕಸ ಗುರು ಶುಕ್ರಾಚಾರ್ಯರ ನೆರವಿನಿಂದ ವಿಶ್ವಜಿತ್‌ ಎಂಬ ಯಾಗ ಮಾಡಿದ; ಪಿತಾಮಹ ಪ್ರಹ್ಲಾದನಿಂದ ದಿವ್ಯಧನು ಮತ್ತು ಬರಿದಾಗದ ಬತ್ತಳಿಕೆಯನ್ನು ಪಡೆದು ಮಹಾಬಲಿಷ್ಠನಾದ. ಸ್ವರ್ಗಕ್ಕೆ ಅಧಿಪತಿಯಾಗಿದ್ದು ಸಾಲದೆಂಬಂತೆ, ಅಶ್ವಮೇಧ ಯಜ್ಞವನ್ನು ಮಾಡತೊಡಗಿದ. ಇದರಿಂದ ದೇವಾಧಿದೇವತೆಗಳು ಹೆದರಿ ವಿಷ್ಣುವಿನ ಮೊರೆ ಹೋದರು.

ಆಗ ವಾಮನ ರೂಪದಿಂದ ಬಲಿಯ ಬಳಿ ಬಂದ ವಿಷ್ಣುವು ದಾನ ಬೇಡಿದ. ದಾನಶೂರನಾದ ಬಲಿಯು ಏನು ಬೇಡಿದರೂ ಕೊಡುವುದಾದರೂ ವಾಮನನಿಗೆ ಮಾತು ಕೊಟ್ಟ; ಮೂರು ಅಡಿ ಭೂಮಿ ಬೇಕೆಂಬ ವಾಮನನ ಕೋರಿಕೆಯನ್ನು ಬಲಿ ತಕ್ಷಣವೇ ಒಪ್ಪಿದ. ಭೂವ್ಯೋಮವನ್ನು ವ್ಯಾಪಿಸುವಂತೆ ಬೆಳೆದ ವಾಮನ, ತನ್ನ ಎರಡೇ ಹೆಜ್ಜೆಗಳಲ್ಲಿ ಭೂಮ್ಯಂತರಿಕ್ಷಗಳನ್ನು ಅಳೆದುಬಿಟ್ಟ. ಮೂರನೇ ಹೆಜ್ಜೆಗೆ ಜಾಗವೇ ಇಲ್ಲವಲ್ಲ, ಎಲ್ಲಿಡಲಿ ಎಂದು ಬಲಿಯನ್ನು ಕೇಳಿದ. ಕೊಟ್ಟ ಮಾತಿಗೆ ತಪ್ಪದ ಬಲಿ, ತನ್ನ ತಲೆಯ ಮೇಲೆ ಹೆಜ್ಜೆ ಇಡು ಎಂದು ಹೇಳಿದ. ಅದರಂತೆ, ಮೂರನೇ ಅಡಿಯನ್ನು ತಲೆಯ ಮೇಲಿಟ್ಟ ವಾಮನ, ಬಲಿಯನ್ನು ಪಾತಾಳಕ್ಕೆ ತುಳಿದ. ಹೀಗೆ ಪಾತಾಳ ಸೇರಿದ ಬಲಿ, ಕಾರ್ತಿಕ ಮಾಸದ ಶುದ್ಧ ಪಾಡ್ಯದಂದು ಭೂಮಿಗೆ ಬಂದು ಪೂಜೆಗೊಳ್ಳುತ್ತಾನೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: Deepavali 2023: ದೀಪಾವಳಿ ಹಬ್ಬದ ದಿನಗಳು, ಮುಹೂರ್ತ ಮತ್ತು ವಿಶೇಷತೆಗಳು ಹೀಗಿವೆ…

Exit mobile version