Site icon Vistara News

Deepavali 2023: ಅರ್ಥಪೂರ್ಣ ಉಡುಗೊರೆ ನೀಡಿ, ಪ್ರೀತಿಪಾತ್ರರ ದೀಪಾವಳಿ ಸ್ಮರಣೀಯವಾಗಿಸಿ!

gift

gift

ಬೆಂಗಳೂರು: ಮನ-ಮನೆಯೊಳಗೆ ಆವರಿಸಿರುವ ಕತ್ತಲೆಯನ್ನು ತೊಡೆದು ಹಾಕಲು ಬೆಳಕಿನ ಹಬ್ಬ (Deepavali) ಬಂದೇ ಬಿಟ್ಟಿತು. ಇದು ಬೇರೆ ಬೇರೆ ಕಡೆ ಹಂಚಿ ಹೋಗಿರುವ ಕುಟುಂಬ ಸದಸ್ಯರು ಒಂದು ಕಡೆ ಕಲೆತು ಖುಷಿಯಿಂದ ಸಮಯ ಕಳೆಯುವ ಶುಭ ಸಂದರ್ಭವೂ ಹೌದು. ಸಾಂಪ್ರದಾಯಿಕ ಆಚರಣೆಯೊಂದಿಗೆ ಹೊಸ ಬಟ್ಟೆ ತೊಟ್ಟು, ಹಬ್ಬದ ಊಟ ಸವಿಯುವ ಈ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನೆನಪಿನ ಉಡುಗೊರೆಯನ್ನೂ (Gift) ಕೊಡಬಹುದು. ಚಿಕ್ಕದಾಗಿರಲಿ, ದೊಡ್ಡದಾಗಿರಲಿ ನೀವು ಕೊಡುವ ಗಿಫ್ಟ್‌ ಅವರ ಪಾಲಿಗೆ ಸ್ಮರಣೀಯವಾಗಲಿದೆ. ಅಂತಹ ಉಡುಗೊರೆಗಳ ಪಟ್ಟಿ ಇಲ್ಲಿದೆ.

ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿ

ನಿಮ್ಮ ಪ್ರೀತಿ ಪಾತ್ರರ ಇಷ್ಟ, ಅಭಿರುಚಿ ಬಗ್ಗೆ ಹೇಗೂ ನಿಮಗೆ ಮಾಹಿತಿ ಇರುತ್ತದೆ. ಅದಕ್ಕೆ ತಕ್ಕಂತ ಉಡುಗೊರೆಗಳನ್ನು ಆಯ್ಕೆ ಮಾಡಿದರೆ ಅವರಿಗೆ ಖುಷಿಯಾಗುವುದರಲ್ಲಿ ಸಂಶಯವಿಲ್ಲ. ಅಲಂಕೃತ ವಸ್ತು, ಕೆತ್ತನೆ ಮಾಡಿದ ಪರಿಕರಗಳು, ಬಟ್ಟೆಗಳಂತಹ ವಸ್ತುಗಳು ನಿಮ್ಮ ಉಡುಗೊರೆಗೆ ಹೆಚ್ಚಿನ ಮೌಲ್ಯ ಒದಗಿಸಲಿದೆ. ಬಟ್ಟೆ ನೀಡುವುದಾದರೆ ಸೀರೆ, ಪಂಚೆ, ಶರ್ಟ್‌, ಕುರ್ತಾ, ಪೈಜಾಮ ನಿಮ್ಮ ಆಯ್ಕೆಯಾಗಿರಲಿ.

ಉಪಯುಕ್ತ ವಸ್ತುಗಳಿಗೆ ಆದ್ಯತೆ ನೀಡಿ

ಪ್ರಾಯೋಗಿಕ ಮತ್ತು ದೈನಂದಿನ ಜೀವನದಲ್ಲಿ ಬಳಸಬಹುದಾದ ಉಡುಗೊರೆಗಳನ್ನು ಆರಿಸಿ. ಅಡುಗೆ ಉಪಕರಣಗಳು, ಮನೆ ಅಲಂಕಾರಿಕ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಮುಂತಾದ ಉಪಯುಕ್ತ ವಸ್ತುಗಳ ಆಯ್ಕೆ ನಿಮ್ಮ ಪ್ರೀತಿಪಾತ್ರರ ಅಗತ್ಯ ಪೂರೈಸುವಂತಿರಲಿ.

ಸಾಂಪ್ರದಾಯಿಕತೆಗೆ ಒತ್ತು ನೀಡಿ

ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸ್ಪಡುವುದರಿಂದ ಸಾಂಪ್ರದಾಯಿಕ ವಸ್ತುಗಳ ಉಡುಗೊರೆಯನ್ನು ಆಯ್ಕೆ ಮಾಡಿ. ವಿವಿಧ ವಿನ್ಯಾಸದ ದೀಪ, ಸುವಾಸನೆಯುಕ್ತ ಕ್ಯಾಂಡಲ್‌, ಅಗರ್‌ ಬತ್ತಿ, ಸಿಹಿ ತಿನಿಸು ಮುಂತಾದವುಗಳ ಆಯ್ಕೆ ಸಂಪ್ರದಾಯದ ಬಗ್ಗೆ ನಿಮಗಿರುವ ಆಸಕ್ತಿ ಮತ್ತು ಗೌರವವನ್ನು ಸೂಚಿಸುತ್ತದೆ.

ಸಂಖ್ಯೆಗಿಂತ ಗುಣಮಟ್ಟ ಗಮನಿಸಿ

ದುಬಾರಿ ಮತ್ತು ಹಲವು ಚಿಕ್ಕ ಚಿಕ್ಕ ಉಡುಗೊರೆಗಳ ಬದಲು ಉತ್ತಮ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಿ. ಬಹು ದೀರ್ಘ ಕಾಲ ಬಾಳಿಕೆ ಬರುವ, ಉತ್ತಮ ವಿನ್ಯಾಸ ಹೊಂದಿದ, ಹಲವು ವರ್ಷಗಳ ಕಾಲ ಸಿಹಿ ನೆನಪನ್ನು ಹೊತ್ತು ತರುವ ಉಡುಗೊರೆ ಇದಾಗಿರಲಿ. ಯಾರೂ ದುಬಾರಿ ಬೆಲೆಯ ಉಡುಗೊರೆ ನಿರೀಕ್ಷೆ ಮಾಡುವುದಿಲ್ಲ. ಪ್ರೀತಿಯಿಂದ ಕೊಡುವುದಷ್ಟೇ ಮುಖ್ಯವಾಗುತ್ತದೆ.

ಪ್ಯಾಕ್‌ ಆಕರ್ಷಕವಾಗಿರಲಿ

ನೀವು ಯಾವುದೇ ಉಡುಗೊರೆಯನ್ನಾದರೂ ಕೊಡಿ. ಅದಕ್ಕೂ ಮೊದಲು ಗಮನಿಸಬೇಕಾದ ಅಂಶವೆಂದರೆ ಆಕರ್ಷಕ ಪ್ಯಾಕ್‌ಗಳ ಆಯ್ಕೆ. ನೋಡಿದೊಡನೆ ಗಮನ ಸೆಳೆಯುವಂತೆ ಪ್ಯಾಕ್‌ ಮಾಡಿ. ನಿಮ್ಮ ಉಡುಗೊರೆಯನ್ನು ಪ್ರಸ್ತುತಪಡಿಸುವ ವಿಧಾನವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ವೈಯಕ್ತಿಕ ಟಿಪ್ಪಣಿ ಅಥವಾ ಹೃತ್ಪೂರ್ವಕ ಸಂದೇಶವನ್ನೂ ಉಡುಗೊರೆ ಜತೆಗೆ ಸೇರಿಸಬಹುದು.

ಇದನ್ನೂ ಓದಿ: Deepavali Fashion: ಬೆಳಕಿನ ಹಬ್ಬ ದೀಪಾವಳಿಗೆ ಬಂತು ಗ್ರ್ಯಾಂಡ್‌ ಫ್ಯಾಷನ್‌

ದೇವರ ವಿಗ್ರಹವನ್ನೂ ನೀಡಬಹುದು

ದೇವರ ವಿಗ್ರಹವನ್ನೂ ನೀಡಬಹುದು. ಗಣಪತಿ, ಲಕ್ಷ್ಮೀ ಜತೆಗೆ ಅವರಿಷ್ಟದ ದೇವರ ಮೂರ್ತಿಯನ್ನು ಗಿಫ್ಟ್‌ ಮಾಡಬಹುದು. ಅಲ್ಲದೆ ದೀಪಾವಳಿ ಆಚರಣೆಗೆ ಅಗತ್ಯವಾದ ವಸ್ತುಗಳಿಂದ ತುಂಬಿರುವ ಸುಂದರವಾಗಿ ವಿನ್ಯಾಸಗೊಳಿಸಲಾದ ತಟ್ಟೆ, ಹರಿವಾಣವನ್ನೂ ನೀಡಬಹುದು.

ವಸ್ತುಗಳೇ ಆಗಬೇಕೆಂದಿಲ್ಲ

ಉಡುಗೊರೆಯಾಗಿ ವಸ್ತುಗಳನ್ನೇ ನೀಡಬೇಕೆಂದಿಲ್ಲ. ಸಂಗೀತ ಕಛೇರಿ, ಸ್ಪಾ, ಟೂರ್‌ ಪ್ಯಾಕೇಜ್‌ ಮುಂತಾದವುಗಳ ಟಿಕೆಟ್‌ ನೀಡಬಹುದು. ಅಲ್ಲದೆ ಪ್ರೀತಿ ಪಾತ್ರರನ್ನು ಸ್ವತಃ ನೀವೇ ಪ್ರವಾಸ ಕರೆದೊಯ್ಯಬಹುದು. ಇದು ಅವರಲ್ಲಿ ಶಾಶ್ವತ ಮಧುರ ನೆನಪನ್ನು ಉಳಿಸಬಲ್ಲದು. ಜತೆಗೆ ಫೋಟೊ, ಸೆಲ್ಫಿ ತೆಗೆಯುವುದನ್ನು ಮರೆಯಬೇಡಿ.

Exit mobile version