Site icon Vistara News

Money Guide: ದೀಪಾವಳಿ ಸಂದರ್ಭದಲ್ಲಿ ಹೀಗೆ ಉಳಿತಾಯ, ಹೂಡಿಕೆ ಮಾಡಿ

online shopping

online shopping

ಬೆಂಗಳೂರು: ಸಂಭ್ರಮವನ್ನು ಹೆಚ್ಚಿಸಲು ಮತ್ತೆ ದೀಪಾವಳಿ (Deepavali 2023 ) ಬಂದಿದೆ. ಹಬ್ಬದ ಸಿದ್ಧತೆ ಎಲ್ಲೆಡೆ ಜೋರಾಗಿದೆ. ಖರೀದಿ ಭರಾಟೆ ಜತೆಗೆ ತಯಾರಿಯೂ ಕಳೆಕಟ್ಟಿದೆ. ಈ ಸಂದರ್ಭದಲ್ಲಿ ನಿಮ್ಮ ಅಗತ್ಯಗಳಿಗೆ ರಾಜಿ ಮಾಡಿಕೊಳ್ಳದೆ ಹಬ್ಬವನ್ನು ಹೇಗೆ ಆನಂದಿಸಬಹುದು? ಉಳಿತಾಯ ಮಾಡುವುದು ಹೇಗೆ? ಹೂಡಿಕೆಗೆ ಯಾವ ವಿಧಾನ ಉತ್ತಮ ಎನ್ನುವುದರ ವಿವರ ಮನಿಗೈಡ್‌(Money Guide)ನಲ್ಲಿದೆ.

ಖರೀದಿಗೆ ಮುನ್ನ ಲೆಕ್ಕಾಚಾರ ಹಾಕಿ

ಹಬ್ಬ ಬಂತೆಂದರೆ ಸಾಕು ಅದರ ತಯಾರಿಗೆ ಸಾಕಷ್ಟು ಖರೀದಿ ಅಗತ್ಯವಾಗಿರುತ್ತದೆ. ಬಟ್ಟೆಯಿಂದ ಹಿಡಿದು ಮನೆ ಅಲಂಕಾರ ವಸ್ತುಗಳವರೆಗೆ ಸಾಕಷ್ಟು ಶಾಪಿಂಗ್‌ ನಡೆಸಬೇಕಾಗುತ್ತದೆ. ಅದರಲ್ಲೂ ದೀಪಾವಳಿ ಎಂದರೆ ಖರೀದಿ ಭರಾಟೆ ಹೆಚ್ಚೇ ಇರುತ್ತದೆ. ಹೀಗಾಗಿ ಸಾಕಷ್ಟು ದೀಪಾವಳಿ ಶಾಪಿಂಗ್ ಅನ್ನು ಸ್ವಲ್ಪ ಮುಂಚಿತವಾಗಿ ಮಾಡಿದರೆ ಉತ್ತಮ ರಿಯಾಯಿತಿಗಳನ್ನು ಪಡೆಯಬಹುದು. ಮೇಣದ ಬತ್ತಿಗಳು, ದೀಪಗಳು ಮುಂತಾದ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿ. ಇದು ಕೊನೆಯ ಕ್ಷಣದಲ್ಲಿ ಆರ್ಥಿಕವಾಗಿ ಒತ್ತಡ ಬೀಳುವುದನ್ನು ತಪ್ಪಿಸಬಹುದು.

ಬಜೆಟ್‌ ತಯಾರಿಸಿ

ಹಬ್ಬದ ಖರೀದಿಗೆ ಮುನ್ನ ಬಜೆಟ್‌ ತಯಾರಿಸಿ. ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಅಂದಾಜಿಸಲು ಇದರಿಂದ ಸಾಧ್ಯವಾಗುತ್ತದೆ. ಜತೆಗೆ ಖರೀದಿಗೆ ಮುನ್ನ ವಸ್ತುಗಳ ಉಪಯುಕ್ತತೆ ಬಗ್ಗೆ ಸಾಕಷ್ಟು ಸಮಾಲೋಚನೆ ನಡೆಸುವುದನ್ನು ಮರೆಯಬೇಡಿ

ಆನ್‌ಲೈನ್‌ ಶಾಪಿಂಗ್‌ನತ್ತ ಗಮನ ಹರಿಸಿ

ಹಬ್ಬದ ಋತುವಿನಲ್ಲಿ ಕೆಲವೊಂದು ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ಉತ್ತಮ ಕೊಡುಗೆಗಳನ್ನು ಪ್ರಕಟಿಸುತ್ತವೆ. ಇದರತ್ತ ಗಮನ ಹರಿಸಿದರೆ ಬಹಳಷ್ಟು ವಸ್ತುಗಳನ್ನು ಆನ್‌ಲೈನ್‌ ಮೂಲಕ ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಚಿನ್ನದ ಮೇಲಿನ ಹೂಡಿಕೆ

ಬಹಳಷ್ಟು ಮಂದಿ ದೀಪಾವಳಿಯ ಸಮಯದಲ್ಲಿ ಚಿನ್ನವನ್ನು ಖರೀದಿಸುತ್ತಾರೆ. ಆಭರಣಗಳನ್ನು ಹೊರತುಪಡಿಸಿ ಸ್ಟಾಕ್ ಎಕ್ಸ್‌ಚೇಂಜ್‌ನಿಂದ ಎಸ್‌ಜಿಬಿ (Sovereign Gold Bonds) ಖರೀದಿಸುವುದು ತುಂಬಾ ಅಗ್ಗವಾಗಿದೆ. ಇದರಲ್ಲಿ ಹೆಚ್ಚುವರಿ 2.5% ಬಡ್ಡಿ ಸಹ ಸಿಗುತ್ತದೆ.

ಹೂಡಿಕೆಗೆ ವಿವಿಧ ಆಯ್ಕೆ

ಬೋನಸ್ ಮೊತ್ತವು ದೊಡ್ಡದಾಗಿದ್ದರೆ ಅದನ್ನು ಇಂಡೆಕ್ಸ್ ಫಂಡ್‌ಗಳು, ಆಕ್ಟಿವ್ ಈಕ್ವಿಟಿ ಫಂಡ್‌ಗಳು, ಬಾಂಡ್‌ಗಳು, ಬ್ಯಾಂಕ್ ಠೇವಣಿಗಳು, ಎಸ್‌ಜಿಬಿ ಮುಂತಾದ ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು. ನೀವು ಕಡಿಮೆ ತೆರಿಗೆ ಸ್ಲ್ಯಾಬ್ ನಲ್ಲಿದ್ದರೆ ಡೆಬ್ಟ್ ಫಂಡ್‌ಗಳು(Debt funds) ಮತ್ತು ಕೆಲವು ಅಂತಾರಾಷ್ಟ್ರೀಯ ಫಂಡ್‌ಗಳನ್ನು ಖರೀದಿಸಲು ಸಹ ಪ್ರಯತ್ನಿಸಬಹುದು.

ಕಾರ್ಪೊರೇಟ್ ಬಾಂಡ್ ಖರೀದಿಗೆ ಮುನ್ನ ಯೋಚಿಸಿ

ಹೆಚ್ಚಿನ ಲಾಭವನ್ನು ತಂದು ಕೊಡುವ ಕಾರ್ಪೊರೇಟ್ ಬಾಂಡ್‌ಗಳು ಇತ್ತೀಚೆಗೆ ಸಾಕಷ್ಟು ಪ್ರಚಲಿತದಲ್ಲಿವೆ. ಆಕರ್ಷಕ ಆದಾಯದ ದರದ ಹೊರತಾಗಿಯೂ ಈಕ್ವಿಟಿ ಬಾಂಡ್‌ಗಳು ಖರೀದಿಸಿದವರು ದಿವಾಳಿಯಾಗಿರುವ ಉದಾಹರಣೆ ಇದೆ. 100% ಅಪಾಯವನ್ನು ಹೊಂದಿರುವುದರಿಂದ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾದ ಹಣಕಾಸಿನ ಸಲಹೆಯನ್ನು ಪಡೆಯುವುದು ಮುಖ್ಯ. IL & FS ಮತ್ತು DHFLನಂತಹ ಪ್ರಕರಣಗಳನ್ನು ನೋಡಿರುವುದರಿಂದ ಹೂಡಿಕೆ ಮುನ್ನ ತಜ್ಞರ ಸಲಹೆಯನ್ನು ಪಡೆಯಲು ಮರೆಯದಿರಿ.

ಇದನ್ನೂ ಓದಿ: Money Guide: ಕೋಟ್ಯಧಿಪತಿಯಾಗಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ದೀಪಾವಳಿ ಹೂಡಿಕೆ ಮಾಡಲು ಉತ್ತಮ ಸಮಯವೂ ಹೌದು. ಅದಾಗ್ಯೂ ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವತ್ತ ಗಮನ ಹರಿಸುವುದು ಕೂಡ ಅಷ್ಟೇ ಮುಖ್ಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version