Site icon Vistara News

Deepavali 2023: ದೀಪಾವಳಿಗೆ ಚಿನ್ನ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

gold purchase

gold purchase

ಬೆಂಗಳೂರು: ಹಬ್ಬದಂತಹ ಶುಭ ಸಂದರ್ಭಗಳಲ್ಲಿ ಭಾರತೀಯರು ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇನ್ನೇನು ದೀಪಾವಳಿ (Deepavali 2023) ಹಬ್ಬ ಬಂದೇ ಬಿಟ್ಟಿತು. ಈ ಬೆಳಕಿನ ಹಬ್ಬವನ್ನು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಜತೆಗೆ ಖರೀದಿ ಭರಾಟೆಯೂ ಜೋರಾಗಿರುತ್ತದೆ. ಚಿನ್ನಾಭರಣಗಳತ್ತ ಹಲವರು ತಮ್ಮ ದೃಷ್ಟಿ ನೆಟ್ಟಿದ್ದಾರೆ. ಹಾಗಾದರೆ ಚಿನ್ನ ಕೊಳ್ಳುವ ಮುನ್ನ ಯಾವೆಲ್ಲ ಅಂಶಗಳತ್ತ ಗಮನ ಹರಿಸಬೇಕು? ಹೇಗೆ ಹೆಚ್ಚಿನ ಲಾಭ ಕಂಡುಕೊಳ್ಳಬಹುದು ಎನ್ನುವುದನ್ನು ಇಲ್ಲಿ (Money Guide) ವಿವರಿಸಲಾಗಿದೆ.

ಮೇಕಿಂಗ್‌ ಚಾರ್ಜಸ್‌

ಚಿನ್ನಾಭರಣ ಬೆಲೆಯಲ್ಲಿ ಮೇಕಿಂಗ್‌ ಚಾರ್ಜಸ್‌ (Making Charges) ಪ್ರಧಾನ ಪಾತ್ರ ವಹಿಸುತ್ತದೆ. ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿನ್ನದ ಬೆಲೆಯನ್ನು ಆಧರಿಸಿ ತಯಾರಿಕಾ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ತಯಾರಿಕಾ ಶುಲ್ಕಗಳಲ್ಲಿ ಹಣವನ್ನು ಉಳಿಸಲು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ 8 ಗ್ರಾಂ ಚಿನ್ನದ ಸರದ ಬೆಲೆ 40,000 ರೂ. ಎಂದಿಟ್ಟುಕೊಳ್ಳೋಣ. ಪ್ರತಿ ಗ್ರಾಂಗೆ 300 ರೂ. ಫ್ಲಾಟ್ ದರದಲ್ಲಿ ತಯಾರಿಕಾ ಶುಲ್ಕವು 2,400 ರೂ. ಆಗಿರುತ್ತದೆ. 12%ದಂತೆ ಲೆಕ್ಕ ಹಾಕಿದರೆ ಇದು ಗರಿಷ್ಠ 4,800 ರೂ.ವರೆಗೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಮೇಕಿಂಗ್‌ ಚಾರ್ಜಸ್‌ ಕಡಿಮೆ ಇರುವ ಜ್ಯುವೆಲ್ಲರಿಯನ್ನು ಆಯ್ದುಕೊಳ್ಳಿ.

ಬೆಲೆ ಲೆಕ್ಕ ಹಾಕಿ

ಚಿನ್ನದ ದರ ಅದರ ಶುದ್ಧತೆಯ ಮೇಲೆ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತಿರುತ್ತದೆ. ಜ್ಯುವೆಲ್ಲರಿಗಳು ದಿನಂಪ್ರತಿ ಆಯಾ ದಿನದ ಬೆಲೆ ಪ್ರದರ್ಶಿಸುತ್ತವೆ. ಇದನ್ನು ಗಮನಿಸಿ. ಆಭರಣದ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹೀಗಾಗಿ ಖರೀದಿಗೆ ತೆರಳುವ ಮುನ್ನ ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಬೆಲೆ ತಿಳಿದುಕೊಂಡರೆ ನಿಮ್ಮ ಬಜೆಟ್‌ಗೆ ಅನುಗುಣವಾದ ವಿನ್ಯಾಸ, ಪ್ರಮಾಣವನ್ನು ಲೆಕ್ಕ ಹಾಕಲು ಸುಲಭವಾಗುತ್ತದೆ. ಇದರಿಂದ ಕೊನೆಯ ಕ್ಷಣದ ಗೊಂದಲದಿಂದ ಪಾರಾಗಬಹುದು.

ಇದನ್ನೂ ಓದಿ: Money Guide: ಎಲ್‌ಐಸಿ ಪಾಲಿಸಿ ಪಾವತಿಸುವ ಅವಧಿ ಮೀರಿದರೆ ಚಿಂತೆ ಬಿಡಿ; ಹೀಗೆ ಪುನಃ ನವೀಕರಿಸಿ

ಬೆಲೆಗಳನ್ನು ಹೋಲಿಸಿ

ತಕ್ಷಣ ಚಿನ್ನಾಭರಣ ಖರೀದಿಸಲು ಮುಂದಾಗಬೇಡಿ. ಹೇಳಿ ಕೇಳಿ ಇದು ಹಬ್ಬದ ಋತು. ವಿವಿಧ ಜ್ಯುವೆಲ್ಲರಿಗಳು ಹಲವು ಕೊಡುಗೆಗಳನ್ನು ಪ್ರಕಟಿಸುತ್ತವೆ. ಇದರತ್ತ ಕಣ್ಣಾಡಿಸಿ. ಬೆಲೆಗಳನ್ನು ಹೋಲಿಸಿ ನೋಡಿ. ದರ ಮತ್ತು ಗುಣಮಟ್ಟವನ್ನು ಹೋಲಿಸಲು ಅನೇಕ ಆಭರಣ ತಯಾರಕರಲ್ಲಿ ವಿಚಾರಿಸಿ. ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ.

ತಯಾರಿಕಾ ಶುಲ್ಕ ಕಡಿಮೆ ಮಾಡಲು ಮಾತುಕತೆ ನಡೆಸಿ

ಮೊದಲೇ ಹೇಳಿದಂತೆ ಆಭರಣದ ಬೆಲೆಯಲ್ಲಿ ತಯಾರಿಕಾ ವೆಚ್ಚವೂ ಸೇರಿರುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ. ಆದ್ದರಿಂದ ವಿವಿಧ ಹಂತಗಳಲ್ಲಿನ ಶುಲ್ಕಗಳನ್ನು ಹೋಲಿಸಿ ಎನ್ನುವುದು ತಜ್ಞರು ನೀಡುವ ಟಿಪ್ಸ್‌. ನೀವು ವಜ್ರದ ಆಭರಣ ಖರೀದಿಸುವ ಯೋಜನೆಯಲ್ಲಿದ್ದರೆ ಸರಳ ವಿನ್ಯಾಸದತ್ತ ಗಮನ ಹರಿಸಿ. ಸಂಕೀರ್ಣ ವಿನ್ಯಾಸ ಹೊಂದಿದ ಆಭರಣಕ್ಕೆ ಅಧಿಕ ಮೊತ್ತದ ತಯಾರಿಕಾ ಶುಲ್ಕ ವಿಧಿಸಲಾಗುತ್ತದೆ. ಸ್ವಲ್ಪ ಚರ್ಚೆ ನಡೆಸಿದರೆ ಕೆಲವು ಜ್ಯುವೆಲ್ಲರಿ ಮಾಲಕರು ಮೇಕಿಂಗ್‌ ಚಾರ್ಜಸ್‌ನಲ್ಲಿ ರಿಯಾಯಿತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಮಾತುಕತೆ ನಡೆಸಲು ಹಿಂಜರಿಕೆ ಬೇಡ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version