ಲಕ್ಷ್ಮೀಪೂಜೆಗೆ (Deepavali 2023) ಸಂಭ್ರಮದ ಸಿದ್ಧತೆಗಳು ಆರಂಭವಾಗಿರುತ್ತವೆ ಈಗಾಗಲೇ. ಸಂಪತ್ತಿನ ಅಧಿದೇವತೆ, ಶ್ರೀಮನ್ನಾರಾಯಣನ ಹೃದಯದಲ್ಲಿ ಸ್ಥಿತಳಾದವಳು, ಸಮೃದ್ಧಿ ಪ್ರದಾಯಿನಿ, ಅದೃಷ್ಟ ದೇವತೆ- ಹೀಗೆ ಹಲವು ರೀತಿಯಲ್ಲಿ ಪೂಜಿತಳಾಗುವವಳು ಮಹಾಲಕ್ಷ್ಮಿ. ಧನ-ಕನಕದಂಥವು ಮಾತ್ರವೇ ಅಲ್ಲ, ಆರೋಗ್ಯ, ಆಯಸ್ಸು, ಆಹಾರ, ಸತ್ ಸಂತಾನ- ಹೀಗೆ ಸಕಲ ರೀತಿಯ ಸಂಪತ್ತನ್ನೂ ಕೋರಿ ದೀಪಾವಳಿಯ ಅಮಾವಾಸ್ಯೆಯಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಈ ಲಕ್ಷ್ಮೀ ದೇವಿಯ ಉದ್ಭವದ ಹಿಂದೆಯೂ ಒಂದು ಕಥೆಯಿದೆ.
ಅದು ಕೊರತೆಯೇ ಇಲ್ಲದ ಲೋಕ
ಸುರಲೋಕವೆಂದರೆ ಕೊರತೆಯೇ ಇಲ್ಲದ ಲೋಕ. ಸಕಲ ಸುವಸ್ತುಗಳೂ ತುಂಬಿರುವ ಲೋಕವೆಂಬುದು ನಮ್ಮ ಕಲ್ಪನೆ. ಹಿಂದೊಮ್ಮೆ ಲಕ್ಷ್ಮೀದೇವಿ ತನ್ನೆಲ್ಲಾ ಸಮೃದ್ಧಿಗಳನ್ನು ಒಡಗೂಡಿಕೊಂಡು ದೇವಲೋಕದಲ್ಲೇ ನೆಲೆಸಿದ್ದಳಂತೆ. ಹಾಗಾಗಿ ಸುಖವೆಂದರೆ… ಇದಕ್ಕಿಂತ ಬೇರೆ ಇಲ್ಲವೇಇಲ್ಲ ಎನ್ನುವಂಥ ಜಾಗವದು. ದೇವೇಂದ್ರನಿಗೆ ತನ್ನ ಲೋಕದ ಸಂಪತ್ತನ್ನು ಕಂಡು ಅಹಂಕಾರ ನೆತ್ತಿಗೇರಿತ್ತು. ಅದೇ ಸಂದರ್ಭದಲ್ಲಿ ದೂರ್ವಾಸರು ದೇವಲೋಕಕ್ಕೆ ಆಗಮಿಸಿದರು. ಇಲ್ಲಿನ ಸಿರಿ-ಸಂಪತ್ತು-ಸಮೃದ್ಧಿಯನ್ನು ಕಂಡು ಅವರಿಗೆ ಸಂತೋಷವಾಯಿತು. ಇದೇ ಖುಷಿಯಲ್ಲಿ ತಮ್ಮ ಕೊರಳಲ್ಲಿದ್ದ ಮಾಲೆಯನ್ನು ದೇವೇಂದ್ರನತ್ತ ಎಸೆದರು.
ಇತ್ತ ಸುಖ ಲೋಲುಪನಾಗಿದ್ದ ಸುರೇಂದ್ರನಿಗೆ ದೂರ್ವಾಸರು ಆಗಮಿಸಿದ ಬಗ್ಗೆ ಗಮನವೇ ಇಲ್ಲ! ಅವರು ತನ್ನತ್ತ ಆಶೀರ್ವಾದಪೂರ್ವಕವಾಗಿ ಎಸೆದ ಮಾಲೆಯನ್ನಾತ ತನ್ನ ಬಿಳಿಯಾನೆ ಐರಾವತಕ್ಕೆ ಹಾಕಿದ. ಆ ಐರಾವತವೋ… ಮಾಲೆಯನ್ನು ಕೆಳಗೆ ಬಿಸಾಕಿ, ಕಾಲಿನಲ್ಲಿ ಹೊಸಕಿ ಹಾಕಿತು. ಒಡೆಯನೇ ಹಾಗಿದ್ದ ಮೇಲೆ, ಸೇವಕ ಇನ್ನು ಹೇಗಿರುವುದಕ್ಕೆ ಸಾಧ್ಯ! ಇಷ್ಟು ಸಾಲದೇ ದೂರ್ವಾಸರು ಕೆಂಡಾಮಂಡಲವಾಗುವುದಕ್ಕೆ? ʻಎಲವೋ ಇಂದ್ರ! ಅಹಂಕಾರದಲ್ಲಿ ನಿನ್ನ ಕಣ್ಣೇ ಕುರುಡಾಗಿದೆ. ಯಾವೆಲ್ಲಾ ವಿಷಯಗಳಿಗಾಗಿ ನೀನು ಇಷ್ಟು ಮದವನ್ನು ತೋರುತ್ತಿದ್ದೀಯೊ, ಅವೆಲ್ಲ ನಿನ್ನಿಂದ ದೂರಾಗಿ ಪಾತಾಳ ಸೇರಲಿʼ ಎಂದು ಋಷಿ ಶಪಿಸಿದರು. ಶಾಪದ ಅನ್ವಯ ಲಕ್ಷ್ಮಿಯನ್ನೂ ಸೇರಿದಂತೆ, ಸ್ವರ್ಗವನ್ನು ಸಂಪತ್ಭರಿತವಾಗಿಸಿದ್ದ ಎಲ್ಲವೂ, ಎಲ್ಲರೂ ಪಾತಾಳಕ್ಕಿಳಿದರು.
ಎಚ್ಚರಗೊಂಡ ದೇವೇಂದ್ರ
ಮೈಮರೆತಿದ್ದ ದೇವೇಂದ್ರನಿಗೆ ಈಗ ಸರಿಯಾಗಿ ಎಚ್ಚರವಾಯಿತು. ಋಷಿಗಳ ಕಾಲಿಗೆ ಬಿದ್ದು ಹೊರಳಾಡಿದ; ʻತಪ್ಪಾಯ್ತು, ಮನ್ನಿಸಿʼ ಎಂದು ಬೇಡಿದ; ಸ್ವರ್ಗವೆಲ್ಲಾ ನರಕದಂತಾಯ್ತು ಎಂದು ಗೋಳಾಡಿದ. ದೂರ್ವಾಸರಿಗೆ ಕರುಣೆ ಬಂತು. ಪಾತಾಳ ಸೇರಿದ ಒಳಿತೆಲ್ಲಾ ಮತ್ತೆ ಮೇಲೆ ಬರಬೇಕೆಂದರೆ ಮಹಾಸಮುದ್ರವನ್ನು ಮಥಿಸಬೇಕು. ಮಂದರ ಪರ್ವತವನ್ನು ಕಡೆಗೋಲನ್ನಾಗಿಸಿ, ಆದಿಶೇಷನನ್ನು ಹಗ್ಗವಾಗಿಸಿ ಸಾಗರವನ್ನು ಮಥಿಸಿ ಎಂದು ಹೇಳಿದರು. ಇತ್ತ, ರಕ್ಕಸರಿಗೂ ಸ್ವರ್ಗದ ಸುವಸ್ತುಗಳ ಮೇಲೆ ಮೋಹ ಮತ್ತು ಅಮೃತದ ಮೇಲೆ ಆಸೆ ಇದ್ದುದರಿಂದ, ಆದಿಶೇಷನ ಒಂದು ತುದಿಯನ್ನು ದೇವತೆಗಳೂ ಇನ್ನೊಂದು ತುದಿಯನ್ನು ದಾನವರೂ ಹಿಡಿದು ಕಡೆಯತೊಡಗಿದರು.
ಸ್ವರ್ಗದಿಂದ ದೂರಾಗಿ ಪಾತಾಳ ಸೇರಿದ್ದ ಸುವಸ್ತುಗಳೆಲ್ಲ ಒಂದೊಂದಾಗಿ ಮೇಲೆದ್ದು ಬರತೊಡಗಿದವು. ಕಾಮಧೇನು, ಕಲ್ಪವೃಕ್ಷ, ಐರಾವತ ಮುಂತಾದವೆಲ್ಲ ಮೇಲೆದ್ದು ಬಂದವು. ಇವುಗಳ ಜೊತೆಗೆ ಲಕ್ಷ್ಮಿಯೂ ಉದ್ಭವಿಸಿದಳು. ಇದರ ಅಂಗವಾಗಿ ಕಾರ್ತಿಕ ಶುದ್ಧ ಪ್ರತಿಪದೆಯ ಹಿಂದಿನ ಅಮವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಕ್ರಮ ದೇಶದೆಲ್ಲೆಡೆ ಇದೆ. ಇದಲ್ಲದೆ, ಮೂಲಾನಕ್ಷತ್ರದಂದು ಲಕ್ಷ್ಮಿ ಜನಿಸಿದಳೆನ್ನುವ ಕಾರಣಕ್ಕೆ ನವರಾತ್ರಿಯಲ್ಲಿಯೂ ಲಕ್ಷ್ಮಿಪೂಜೆ ಮಾಡುವ ಕ್ರಮವಿದೆ.
ಈ ಪೂಜೆಯ ವಿಶೇಷ ಏನು?
ಸಿರಿ, ಸಂಪತ್ತಿನ ಅಧಿದೇವತೆಯಾದ್ದರಿಂದ ಸಹಜವಾಗಿ ಲಕ್ಷ್ಮೀ ಪೂಜೆಗೆ ಭಾರತೀಯ ಪರಂಪರೆಯಲ್ಲಿ ಮಹತ್ವವಿದೆ. ಮನೆಯನ್ನೆಲ್ಲಾ ಬೆಳಗಿ, ಅಲಂಕರಿಸಿ, ಕಳಶ ಲಕ್ಷ್ಮಿಯನ್ನು ಜೊತೆಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಲಕ್ಷ್ಮಿಯೊಂದಿಗೆ ಉದಿಸಿದ ಸುವಸ್ತುಗಳನ್ನು ಸಾಂಕೇತಿಕವಾಗಿ ಇರಿಸಿ ಪೂಜಿಸುವ ಕ್ರಮವಿದೆ. ಮನೆಯ ಸಂಪತ್ತುಗಳನ್ನು ಅಂದು ಪೂಜೆಗೆ ಇರಿಸುತ್ತಾರೆ. ಜೊತೆಗೆ ವ್ಯಾಪಾರ- ವಹಿವಾಟುಗಳು, ಅಂಗಡಿ-ಮುಂಗಟ್ಟುಗಳು ಹಾಗೂ ಉದ್ದಿಮೆಗಳಲ್ಲೆಲ್ಲಾ ಅಂದು, ವಿಶೇಷ ಅಲಂಕಾರ, ಪೂಜೆ.
ಇದನ್ನೂ ಓದಿ: Deepavali 2023: ದೀಪಾವಳಿಯಂದು ಅಭ್ಯಂಗ ಸ್ನಾನ ಮಾಡುವುದೇಕೆ? ಇದರ ಪ್ರಯೋಜನ ತಿಳಿದಿರಲಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ