Site icon Vistara News

Chaturmasya 2022 | ಭಗವಂತನ ಕೃಪೆಯಿಂದ ಮುಕ್ತಿ ಹೊಂದಬೇಕು; ಸ್ವರ್ಣವಲ್ಲೀ ಶ್ರೀ

ಶಿರಸಿ: ಪ್ರತಿಯೊಬ್ಬ ಮನುಷ್ಯನೂ ಕೂಡ ಭಗವಂತನ ಕೃಪೆಯನ್ನು ಪಡೆದು ಮುಕ್ತಿಯನ್ನು ಹೊಂದಲು ಪ್ರಯತ್ನಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (Chaturmasya 2022) ಪ್ರವಚನ ನೀಡಿದರು.

ಸ್ವರ್ಣವಲ್ಲೀಯಲ್ಲಿ ೩೨ನೇ ಚಾತುರ್ಮಾಸ್ಯದ ವ್ರತದಲ್ಲಿರುವ ಶ್ರೀಗಳು ಸೋಮವಾರದಂದು (ಜುಲೈ 18) ಗುಂದ ಸೀಮೆ ಹಾಗೂ ಚಾಪಖಂಡ ಭಾಗದ ಶಿಷ್ಯ-ಭಕ್ತರು ಸಮರ್ಪಿಸಿದ ವಿವಿಧ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನೀಡಿ ಭಕ್ತಾದಿಗಳನ್ನು ಹರಸಿದರು.

ಚಾತುರ್ಮಾಸ್ಯದ ಪುಣ್ಯಪರ್ವದಲ್ಲಿ ಭಕ್ತಾದಿಗಳಿಗೆ ಆಶೀರ್ವದಿಸಿದ ಶ್ರೀಗಳು ʼಮನುಷ್ಯನ ಜನ್ಮ ಲಭಿಸುವುದು ದುರ್ಲಭ. ಅದರಲ್ಲೂ ಸುಸಂಸ್ಕೃತ ಕುಟುಂಬದಲ್ಲಿ ಜನ್ಮ ಆಗುವುದು ಇನ್ನೂ ದುರ್ಲಭ. ಆದ್ದರಿಂದ ಲಭಿಸಿದ ಪರಮ ದುರ್ಲಭವಾದ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕುʼ ಎಂದು ನುಡಿದರು.

ಮುಕ್ತಿ ಎಂದರೆ ಬಿಡುಗಡೆ, ಅದನ್ನು ಪಡೆಯಬೇಕೆಂಬಾಗ ನಾವು ಬಂಧನದಲ್ಲಿ ಇದ್ದೇವೆ ಎಂಬುದು ಸಿದ್ಧವಾಗುತ್ತದೆ. ನಾವೆಲ್ಲರೂ ಮನಸ್ಸಿನ ಹಿಂದಿರುವ ಸತ್ವ, ರಜ, ತಮೋಗುಣಗಳಿಂದ ಬಂಧಿಸಲ್ಪಟ್ಟಿದ್ದೇವೆ ಎಂದರು.

ನಾನು ಎಂದರೇನು?

ನಾನು ಎಂದರೆ ಶರೀರವಲ್ಲ. ಅದರೊಳಗಿನ ಜೀವ. ಇದು ಸಾಮಾನ್ಯರ ಅರಿವಿಗೆ ಬಾರದು. ಇದು ಕೂಡ ಸತ್ವ, ರಜಸ್ಸು ಹಾಗೂ ತಮಸ್ಸು ಗುಣಗಳ ಪ್ರಭಾವವೇ ಆಗಿದೆ. ಗುಣತ್ರಯಗಳ ಬಗ್ಗೆ ಒಂದು ಉದಾಹರಣೆಯನ್ನು ನೀಡುವ ಮೂಲಕ ಸ್ವರ್ಣವಲ್ಲೀ ಶ್ರೀಗಳು ಅರ್ಥೈಸಿದರು.

ಮನೆಯಲ್ಲಿ ಬಾಲಕರು ರಾತ್ರಿ ಊಟ ಮಾಡಿ ಅಧ್ಯಯನಕ್ಕೆ ಕುಳಿತಾಗ ತೂಕಡಿಸುತ್ತಾರೆ. ಆಗ ಸ್ವಲ್ಪ ಎದ್ದು ಓಡಾಡಿದರೆ ನಿದ್ದೆ ದೂರವಾಗಿ ಓದಲು ಆಸಕ್ತಿ ಬರುತ್ತದೆ. ಇಲ್ಲಿ ಮೂರು ಗುಣಗಳು ಗೋಚರವಾಗುತ್ತವೆ. ಮೊದಲಿಗೆ, ನಿದ್ದೆ ಬಂದದ್ದು ತಮೋಗುಣ, ಎದ್ದು ಓಡಾಡಿದ ಚಟುವಟಿಕೆ ರಜೋಗುಣದ ಲಕ್ಷಣ, ನಂತರದಲ್ಲಿ ಮನಸ್ಸು ಹಗುರವಾದಾಗ ಓದುವ ಕುರಿತು ಆಸಕ್ತಿ ಬಂದದ್ದು ಸತ್ವಗುಣಕ್ಕೆ ಸಂಬಂಧಪಡುತ್ತದೆ. ಮನಸ್ಸು ಪರಿಶುದ್ಧವಾಗಬೇಕು ಎಂದರೆ ಈ ಮೂರು ಗುಣಗಳು ಒಂದು ಹದದಲ್ಲಿ ಬೆರೆಯಬೇಕು. ಅಂಥ ಮನಸ್ಸು ಮುಕ್ತಿ ಹೊಂದುವ ಹಾದಿಯನ್ನು ಕಂಡುಕೊಳ್ಳುತ್ತದೆ ಎಂದು ಶ್ರೀಗಳು ಆಶೀರ್ನುಡಿಗಳನ್ನು ಕರುಣಿಸಿದರು.

ಮುಕ್ತಿಗೆ ಭಕ್ತಿಮಾರ್ಗವೇ ಸರಿ:

ಮನಸ್ಸಿನ ಬಂಧನದಿಂದ ಬಿಡುಗಡೆ ಹೊಂದಲು ಸಾಮಾನ್ಯರು ಕೂಡ ಅನುಸರಿಸಬಹುದಾದ ಸುಲಭವಾದ ಹಾಗೂ ಶ್ರೇಷ್ಠವಾದ ಮಾರ್ಗ ಎಂದರೆ ಅದು ಭಕ್ತಿಮಾರ್ಗ. ಭಗವಂತನಲ್ಲಿ ಅಚಲವಾದ ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಭವಬಂಧನದಿಂದ ಮುಕ್ತರಾಗಿ ಮೋಕ್ಷವನ್ನು ಹೊಂದಬಹುದು ಎಂದು ಶ್ರೀಗಳು ವಿವರಿಸಿದರು.

ಈ ವೇಳೆ ಗುಂದ ಹಾಗೂ ಚಾಪಖಂಡ ಭಾಗದಿಂದ ಆಗಮಿಸಿದ ಶಿಷ್ಯಭಕ್ತರು ಕುಂಕುಮಾರ್ಚನೆ, ಗಾಯತ್ರಿ ಜಪ, ಶ್ರೀಗಳವರ ಭಿಕ್ಷೆ ಪಾದಪೂಜೆ ಮುಂತಾದ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು.

ಇದನ್ನೂ ಓದಿ | ಸ್ವರ್ಣವಲ್ಲೀ ಶ್ರೀಗಳ 32ನೇ ಚಾತುರ್ಮಾಸ್ಯ ವ್ರತ

Exit mobile version