Site icon Vistara News

Dharma Dangal : ಬೇಲೂರು ರಥೋತ್ಸವದ ವೇಳೆ ನಡೆಯುವ ಕುರಾನ್‌ ಪಠಣ ಅಧಿಕೃತವಲ್ಲ; ದಾಖಲೆಗಳಲ್ಲಿ ಹೇಳಿಲ್ಲ ಎಂದ ಆಗಮ ಪಂಡಿತರು

beluru temple

#image_title

ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ (Beluru channakeshava temple) ರಥೋತ್ಸವದ ವೇಳೆ ನಡೆದುಕೊಂಡು ಬರುತ್ತಿರುವ ಕುರಾನ್‌ ಪಠಣ ಅಧಿಕೃತವಲ್ಲ, ಕುರಾನ್‌ ಪಠಣ ಮಾಡಬೇಕು ಎಂದು ಯಾವ ದಾಖಲೆಗಳಲ್ಲೂ ಹೇಳಲಾಗಿಲ್ಲ- ಹೀಗೆಂದು ದೇಗುಲಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಹೇಳಿದ್ದಾರೆ.

ಚನ್ನಕೇಶವ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ರಥೋತ್ಸವದ ವೇಳೆ ಕುರಾನ್‌ ಪಠಣ ನಡೆದು ನಂತರ ರಥ ಮುಂದುವರಿಯುವ ವಾಡಿಕೆ ಇದೆ. ಇದರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಹಿಂದು ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಾರಿ ಅದು ಸ್ವಲ್ಪ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿದೆ. ಈ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಧಿಕಾರಿಯಾಗಿರುವ ಎಂ.ಎಸ್.ಅರ್ಚನಾ ಆಗಮ ಪಂಡಿತರನ್ನು ಕರೆಸಿ ಅವರಿಂದ ವಿವರ ಪಡೆಯಲು ನಿರ್ಧರಿಸಿದ್ದರು.

ಜಿಲ್ಲಾಧಿಕಾರಿ ಅರ್ಚನಾ ಅವರು ಹೇಳಿದ್ದೇನು?

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ಅವರು, ʻʻಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಸಾಧ್ಯವಿಲ್ಲ. ಇದು ಹೊಸದಾಗಿ ಸೃಷ್ಟಿಯಾದುದಲ್ಲ. 1929ರಿಂದಲೂ ಈ ಪದ್ಧತಿ ಇದೆ. ಅದು ಮ್ಯಾನುಯಲ್‌ನಲ್ಲಿಯೂ ಸೇರಿದೆ. ರಥೋತ್ಸವದ ವೇಳೆ ಮೌಲ್ವಿಗಳು ಬಂದು ಮುಜ್ರೆ ಸೇವೆ ಅಂತ ಮಾಡುತ್ತಾರೆ. ಕಳೆದ ವರ್ಷ ಇದನ್ನು ನಿಲ್ಲಿಸಲು ಒತ್ತಡ ಬಂದಿತ್ತು. ಆ ಬಗ್ಗೆ ಮುಜರಾಯಿ ಇಲಾಖೆಗೆ ಸ್ಪಷ್ಟನೆ ಕೇಳಿದ್ದೆವು. ಹಿಂದಿನ ಪದ್ಧತಿಯನ್ನು ಬದಲಾವಣೆ ಮಾಡುವುದು ಬೇಡ ಎಂದಿದ್ದರು. ಅದರಂತೆ ಕಳೆದ ವರ್ಷ ಪದ್ಧತಿ ಪ್ರಕಾರ ನಡೆದುಕೊಂಡು ಹೋಗಿದೆ ಎಂದು ಅರ್ಚನಾ ತಿಳಿಸಿದರು.

ಬೇಲೂರು ದೇವಾಲಯಕ್ಕೆ ಆಗಮಿಸುತ್ತಿರುವ ಆಗಮ ಪಂಡಿತರ ತಂಡ

ಈ ವರ್ಷ ಮತ್ತೆ ಪದ್ಧತಿ ಬದಲಾಯಿಸಿ ಎಂದು ಕೇಳಿದ್ದಾರೆ. ದಿಢೀರ್ ಆಗಿ ಇಂತಹ ಪದ್ಧತಿಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಿನ್ನೆ ಪ್ರತಿಭಟನೆ ಮಾಡಿದ್ದಾರೆ, ಆ ವೇಳೆ ಯಾರೋ ಒಬ್ಬ ಯುವಕ ಘೋಷಣೆ ಕೂಗಿದ ಅನ್ನುವ ಕಾರಣಕ್ಕೆ ಘರ್ಷಣೆ ಶುರುವಾಗಿದೆ. ತಕ್ಷಣ ಪೊಲೀಸರು ನಿಯಂತ್ರಿಸಿದ್ದಾರೆ. ಆಮೇಲೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಅದನ್ನು ಸದ್ಯ ನಿಯಂತ್ರಣಕ್ಕೆ ತರಲಾಗಿದೆ. ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲಾಗುವುದಿಲ್ಲ. ಪರಿಸ್ಥಿತಿಯನ್ನು ಮುಜರಾಯಿ ಇಲಾಖೆಗೂ ತಿಳಿಸಿದ್ದು, ಪರಿಶೀಲನೆಗೆ ಆಗಮ ಪಂಡಿತರು ಬರುತ್ತಿದ್ದಾರೆ. ಅವರು ನೋಡಿ ರಿಪೋರ್ಟ್ ಕೊಟ್ಟ ನಂತರ ಆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ದೇವಾಲಯಕ್ಕೆ ಆಗಮಿಸಿ ಪರಿಶೀಲಿಸಿದ ಆಗಮ ಪಂಡಿತರ ತಂಡ

ಜಿಲ್ಲಾಧಿಕಾರಿಯವರ ಮನವಿಯ ಮೇರೆಗೆ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಅವರ ನೇತೃತ್ವದ ತಂಡ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ವಿಜಯ ಕುಮಾರ್‌ ಅವರು, ʻʻರಥೋತ್ಸವ ದಿನ ಯಾರು ಯಾರು ಯಾವ ಕರ್ತವ್ಯ ನಿರ್ವಹಿಸಬೇಕು? ಏನೇನು ವ್ಯತ್ಯಾಸ ಆಗಿದೆ? ಜನರಲ್ಲಿ ಏನು ಗೊಂದಲ ಆಗಿದೆ? ಅವುಗಳ ಪರಿಶೀಲನೆಗೆ ಮೇಲಾದಿಕಾರಿಗಳ ಸೂಚನೆ ಇದೆ. ಹೀಗಾಗಿ ಬಂದಿದ್ದೇವೆʼʼ ಎಂದು ಹೇಳಿದರು.

ʻʻದೇವಾಲಯದಲ್ಲಿ ಯಾರು, ಯಾವ ಸಂದರ್ಭದಲ್ಲಿ ಯಾವ ಕರ್ತವ್ಯವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮ್ಯಾನ್ಯುಯಲ್ ಇದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಬಿಡುಗಡೆ ಆಗಿರುವ ಮ್ಯಾನ್ಯುಯಲ್‌. ಅದರಂತೆ ಎಲ್ಲ ವಿಧಿ ವಿಧಾನ, ಪೂಜಾ ಕೈಂಕರ್ಯ ಕರ್ತವ್ಯ ನಡೆಯುತ್ತಿದೆ. ಈ ಮಧ್ಯೆ ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಬಂದು ಆ ಗ್ರಂಥ ಪರಿಶೀಲನೆ ಮಾಡಿದ್ದೇವೆ. ವ್ಯವಸ್ಥಾಪನಾ ಸಮಿತಿ, ಆಡಳಿತ ಅಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆದಿದೆ. ಮ್ಯಾನ್ಯುಯಲ್‌ನಲ್ಲಿ ಏನು ಹೇಳಿದೆ? ಯಾರು ಏನೇನು ಮಾಡುತ್ತಿದ್ದಾರೆ? ಏನು ತಪ್ಪು ಆಗಿದೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅನೇಕ ಗ್ರಂಥಗಳನ್ನು ಅದ್ಯಯನ ಮಾಡಿ ಎಲ್ಲವನ್ನೂ ತಿಳಿದು ನಾನು ಹಿರಿಯ ಅಧಿಕಾರಿಗಳಿಗೆ ವರದಿ ಕೊಡಬೇಕಾಗುತ್ತದೆʼʼ ಎಂದು ಹೇಳಿದು ವಿಜಯಕುಮಾರ್‌.

ಮೂರು ದಿನದಲ್ಲಿ ವರದಿ ಕೊಡುತ್ತೇನೆ

ʻʻಇನ್ನು ಎರಡು ಮೂರು ದಿನದಲ್ಲಿ ನಮ್ಮ ವರದಿಯನ್ನು ನೀಡುತ್ತೇನೆ. ಕೈಪಿಡಿಯಲ್ಲಿ ಏನಿದೆಯೋ ಅದನ್ನು ಮಾಡಬೇಕು, ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಮ್ಯಾನ್ಯುಯಲ್ ಪ್ರಕಾರ ಎಲ್ಲರಿಗೂ ಹಿಂದು ಧಾರ್ಮಿಕ ದತ್ತಿ ಕಾಯಿದೆ ಸೆಕ್ಷನ್ 58ರ ಪ್ರಕಾರ ದೇವಾಲಯದ ಸಂಪ್ರದಾಯ ನಡೆಸಿಕೊಂಡು ಹೋಗಬೇಕು ಎಂದಿದೆ. ಅದರಂತೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆʼʼ ಎಂದು ವಿಜಯಕುಮಾರ್‌ ಹೇಳಿದರು.

ಕುರಾನ್‌ ಪಠಣ ಮಾಡಬೇಕು ಎಂದು ಹೇಳಿಲ್ಲ

ಈ ಮಧ್ಯೆ ತಮ್ಮ ಪರಿಶೀಲನೆಯ ಅತ್ಯಂತ ಮಹತ್ವದ ಅಂಶವನ್ನ ವಿಜಯಕುಮಾರ್‌ ಬಿಚ್ಚಿಟ್ಟರು. ಅವರು ಕಂಡಕೊಂಡ ಪ್ರಕಾರ ರಥದ ಮುಂದೆ ಕುರಾನ್ ಪಠಣ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.

ʻʻನಾನು ಓದಿದ ಪ್ರಕಾರ ರಥದ ಮುಂದೆಯಾಗಲಿ, ದೇವಾಲಯದ ಮುಂದೆಯಾಗಲಿ ಕುರಾನ್‌ ಪಠಣ ಮಾಡಬೇಕು ಎಂದು ಹೇಳಿಲ್ಲ. ಮುಸ್ಲಿಮರಿಗೆ ಗೌರವ ಸಲ್ಲಿಸಬೇಕು, ಅವರು ನಮಸ್ಕರಿಸಬೇಕು ಎಂದು ಹೇಳಲಾಗಿದೆ. ಅವರು ಮರ್ಯಾದೆ ಸಲಾಂ ಮಾಡಬೇಕು ಎಂದಿದೆ. ಅವರು ಮರ್ಯಾದೆ ಮಾಡಬೇಕು ಎಂದು ಉಲ್ಲೇಖ ಇದೆ. ಯಾರಿಗೆ ನಮಸ್ಕಾರ ಮಾಡಬೇಕು, ದೇವಸ್ಥಾನಕ್ಕೆ ಮಾಡಬೇಕೋ, ಅಧಿಕಾರಿಗಳಿಗೆ ನಮಸ್ಕಾರ ಮಾಡಬೇಕೋ ಎಂಬುದರ ಉಲ್ಲೇಖವಿಲ್ಲ. ನಮಸ್ಕಾರ ಯಾರಿಗೆ ಮಾಡಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಈ ಎಲ್ಲ ವಿಚಾರಗಳನ್ನು ಒಳಗೊಂಡ ವರದಿಯನ್ನು ನಾವು ಕೊಡಲಿದ್ದೇವೆʼʼ ಎಂದರು ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್.

ಏಪ್ರಿಲ್‌ ನಾಲ್ಕು ಮತ್ತು ಐದರಂದು ಇಲ್ಲಿ ರಥೋತ್ಸವ ನಡೆಯಲಿದ್ದು, ಈ ವೇಳೆ ಹೇಗೆ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಜಿಲ್ಲಾಧಿಕಾರಿ ಮತ್ತು ಮುಜರಾಯಿ ಇಲಾಖೆ ದಾಖಲೆಗಳ ಆಧಾರದಲ್ಲಿ ಇದನ್ನು ಅಂತಿಮಗೊಳಿಸಲಿದೆ.

ಇದನ್ನೂ ಓದಿ : Dharma Dangal:‌ ಬೇಲೂರು ದೇವಸ್ಥಾನದಲ್ಲಿ ಕುರಾನ್‌ ಪಠಣ: ಆಗಮ ಪಂಡಿತರ ಮೊರೆ ಹೋದ ಜಿಲ್ಲಾಡಳಿತ

Exit mobile version