ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಹತ್ತನೇ ವರ್ಷದ ಪಾದಯಾತ್ರೆ ವಿಜೃಂಭಣೆಯಿಂದ ನಡೆಯಿತು. ಇಪ್ಪತೈದು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಜನಾರ್ಧನ ಸ್ವಾಮಿ ದೇವಾಲಯದಿಂದ ಆರಂಭಗೊಂಡ ಪಾದಯಾತ್ರೆಗೆ ದೀಪ ಬೆಳಗಿಸುವುದರ ಮೂಲಕ ದೇವಾಲಯದ ಮುಖ್ಯಸ್ಥ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು.
ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸರಳವಾಗಿ ನಡೆದಿದ್ದ ಪಾದಯಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದು, ಸಾಗರೋಪಾದಿಯಲ್ಲಿ ಜನರು ಮಂಜುನಾಥ ಸ್ವಾಮಿಯ ಸನ್ನಿಧಿಗೆ ಭಕ್ತಿ ಭಾವದೊಂದಿಗೆ ತೆರಳಿದರು. 50 ಯಕ್ಷಗಾನ ವೇಷಧಾರಿಗಳು, ವಿವಿಧ ಭಜನಾ ಮಂಡಳಿಗಳು ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು. ಮಕ್ಕಳು, ಹಿರಿಯ ನಾಗರಿಕರು, ಗಣ್ಯವ್ಯಕ್ತಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಕ್ಷೇತ್ರದ ಹಲವಾರು ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಪಾದಯಾತ್ರೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ್ ಪರಿಷತ್ ಸದಸ್ಯರಾದ ಕೆ. ಪ್ರತಾಪ್ ಸಿಂಹ ನಾಯಕ್, ಕೆ. ಹರೀಶ್‌ಕುಮಾರ್, ಪಾದಯಾತ್ರೆ ಸಮಿತಿಯ ಸಂಚಾಲಕ ಪೂರನ್ ವರ್ಮ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್.ಮಂಜುನಾಥ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಯಾತ್ರೆಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಕ್ಷಣಾ ದೃಷ್ಟಿಯಿಂದ ಆರಕ್ಷಕ ಪಡೆ, ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಅಲ್ಲಲ್ಲಿ ಬಾಯಾರಿಕೆ ನೀಗಿಸಲು ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಉಜಿರೆಯಿಂದ ಆರಂಭವಾದ ಪಾದಯಾತ್ರೆ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸಂಪೂರ್ಣಗೊಂಡಿತು.
(ವರದಿ: ಸುಚೇತಾ ಹೆಗ್ಡೆ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ
ಚಿತ್ರಗಳು: ಅರ್ಪಿತ್ ಇಚ್ಛೆ, ಶಶಿಧರ್ ಮತ್ತು ಗ್ಲೆನ್ ಮೋನಿಸ್, ಎಸ್.ಡಿ.ಎಂ ಕಾಲೇಜು, ಉಜಿರೆ)
ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್ ವಿಳಾಸ: janasamparka@vistaranews.com
ಇದನ್ನೂ ಓದಿ | Dharmasthala deepothsava | ಕಣ್ಣಿಗೆ ಹಬ್ಬ, ಮನಸಿಗೆ ತೃಪ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ವೈಭವ