Site icon Vistara News

Ram Mandir: ನಿಮಗೆ ಗೊತ್ತಿದೆಯೇ? ರಾಮ ನಾಮ ಜಪಕ್ಕಿದೆ ಮಹಾ ಶಕ್ತಿ!

Sriram

ತಾರಕ ಬ್ರಹ್ಮನೆಂದೇ (Ram Mandir) ಹೆಸರಾದವನು ರಾಮ. ಆತನ ನಾಮವೇ ಮಧುರ. ರಾಮನಾಮವನ್ನು ವಿಜಯಮಂತ್ರ ಎಂದೂ ಕರೆಯಲಾಗುತ್ತದೆ. ಇದನ್ನು ಪಠಿಸುವುದರಿಂದ ಭಯವನ್ನು ದೂರಮಾಡಿಕೊಳ್ಳಬಹುದು ಮಾತ್ರವಲ್ಲ, ಸುಖ-ಸಮೃದ್ಧಿಯನ್ನು ಪಡೆದುಕೊಳ್ಳಬಹುದು ಎಂದು ರಾಮಾಯಣದಲ್ಲಿಯೇ ಹೇಳಲಾಗಿದೆ.
ಆಧ್ಯಾತ್ಮ ಸಾಧನೆಯಲ್ಲಿ ರಾಮ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿಯೇ ಪುರಂದರ ದಾಸರು ʻರಾಮ ಮಂತ್ರವ ಜಪಿಸೋ ಹೇ ಮನುಜʼ ಎಂದಿದ್ದು. ದಾಸರು ಮುಂದುವರಿದು, ʻಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ, ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರʼ ಎಂದು ಹೇಳಿದ್ದಾರೆ. ರಾಮ, ರಾಮ, ರಾಮ ಎಂದು ಮೂರು ಸಲ ಹೇಳಿದರೂ ಸಾಕು, ವಿಷ್ಣುಸಹಸ್ರನಾಮ ಪಾರಾಯಣದ ಫಲ ಸಿಗುತ್ತದೆ ಎಂದೇ ಶಾಸ್ತ್ರಗಳು ಹಲವು ಕಡೆ ಹೇಳಿವೆ.

ಬೀಜಾಕ್ಷರಗಳಿಂದ ಕೂಡಿದೆ

ರಾಮ ಎನ್ನುವ ಪದ ಬೀಜಾಕ್ಷರಗಳಿಂದ ಕೂಡಿದೆ. ಸ್ವರಪ್ರಸ್ತಾರದಲ್ಲಿ ʻರಾಮʼ ಎನ್ನುವ ಪದ ಪ್ರಯೋಗ ಮಂದಸ್ಥಾಯಿಯಲ್ಲಿ ಬರುತ್ತದೆ. ರಾಮ ನಾಮ ಸಾಧಕರಿಗೆ ರಾಮ ತಾರಕ ಮಂತ್ರವು ಅಪ್ಯಾಯಮಾನವಾಗಿದೆ. ಈ ಮಂತ್ರಕ್ಕೆ ಎಲ್ಲಿಲ್ಲದ ಆಧ್ಯಾತ್ಮಿಕ ಶಕ್ತಿ ಸಹ ಇದೆ.

ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಿ ಮಂತ್ರದಲ್ಲಿನ ʻರಾʼ ಮತ್ತು ಓಂ ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿ ಮಂತ್ರದಲ್ಲಿನ ʻಮʼ ಎಂಬ ಅಕ್ಷರವು ಸೇರಿ ʻರಾಮʼ ಎಂಬ ದಿವ್ಯ ಮಂತ್ರವು ಹರಿಹರಾತ್ಮಕವೆಂದು ಪ್ರಸಿದ್ಧಿಯಾಗಿದೆ. ರಾಮ ಎಂಬೆರಡಕ್ಷರಗಳು ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಂತ್ರಗಳ ಆತ್ಮಸ್ವರೂಪವಾಗಿದೆ.
ʻರಾಮʼ ನಾಮದಲ್ಲಿ ʻರಾʼ ಎಂಬುದು ಅಗ್ನಿ ಬೀಜಾಕ್ಷರ. ಹೀಗಾಗಿ ರಾಮ ಎನ್ನುವಾಗ ʻರಾʼʼ ಎಂದು ಉಚ್ಚರಿಸಿದಾಗ ನಮ್ಮ ಪಾಪ ಅಥವಾ ದೋಷ ರಾಶಿಗಳು ಉರಿದು ಬೂದಿಯಾಗುತ್ತವೆ. ʻಮʼ ಎಂದು ಉಚ್ಚರಿಸಿದಾಗ ಅಮೃತ ಬೀಜಾಕ್ಷರವಾದುದರಿಂದ ಆನಂದ ಹಾಗೂ ಮುಕ್ತಿಯು ಲಭಿಸುತ್ತದೆ.

ಇದನ್ನೂ ಓದಿ | Ram Mandir: ಹೀಗಿತ್ತು, ರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟದ ರೋಚಕ ಹಾದಿ…

ನಾವು ʻರಾʼ ಎಂದು ಹೇಳುವಾಗ ಬಾಯಿಯನ್ನು ದೊಡ್ಡದಾಗಿ ತೆರೆಯಬೇಕಾಗುತ್ತದೆ. ಆಗ ನಮ್ಮ ಹೃದಯದಲ್ಲಿ ಅಡಗಿದ್ದ ಎಲ್ಲ ದೋಷಗಳು ಹೊರಕ್ಕೆ ಹೋಗುತ್ತವೆ. ಹಾಗೆಯೇ ʻಮʼ ಎಂದು ಹೇಳುವಾಗ ತುಟಿಗಳೆರಡನ್ನೂ ಮುಚ್ಚಿಕೊಳ್ಳುತ್ತೇವೆ. ಇದರಿಂದ ಹೊರಕ್ಕೆ ಹೋದ ಪಾಪಗಳು ಮತ್ತೆ ಒಳಕ್ಕೆ ಬರಲಾರವು. ಹೃದಯವು ಪ್ರತಿ ರಾಮ ಮಂತ್ರದ ಉಚ್ಚಾರದಿಂದ ಶುದ್ಧವಾಗುತ್ತಾ ಆನಂದಪೂರ್ಣವಾಗುತ್ತದೆ.

ರಾಮರಹಸ್ಯೋಪನಿಷತ್ತಿನ ಪ್ರಕಾರ ರಾಮನಾಮ ಜಪಿಸುವುದು ಎಲ್ಲ ತಪಸ್ಸಿಗಿಂತ ಹೆಚ್ಚಿನದು. ಸಕಲ ಶಾಸ್ತ್ರಸಾರ ಜ್ಞಾನದೀಪವೇ ಶ್ರೀರಾಮ ತತ್ತ್ವವೆಂದೂ ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷವನ್ನು ಕರುಣಿಸಬಲ್ಲವನು ಶ್ರೀರಾಮನೆಂದೂ ಈ ಉಪನಿಷತ್ತು ಹೇಳಿದೆ. ಆ ಶ್ಲೋಕ ಹೀಗಿದೆ:

ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂ ತಪಃ |
ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮತಾರಕಂ ||
ಶ್ರೀರಾಮನಾಮ ಜಪಿಸುವುದರಿಂದ ಸಂಕಷ್ಟಗಳು ಪರಿಹಾರವಾಗುತ್ತವೆ, ಬೇಡಿದವರಿಗೆ ಸಕಲ ವಿಧ ಸಂಪತ್ತುಗಳನ್ನು ರಾಮ ಅನುಗ್ರಹಿಸುತ್ತಾನೆ ಎಂದು ಅಧ್ಯಾತ್ಮ ರಾಮಾಯಣ ಹೇಳಿದೆ. ರಾಮನಾಮ ಪಠಿಸಿದರೆ ಮಾತ್ರವಲ್ಲ ಕೇಳಿದರೂ ಕೈವಲ್ಯ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದು ವಾಲ್ಮೀಕಿ ರಾಮಾಯಣದಲ್ಲಿಯೇ (ವಾಲ್ಮೀಕೀ ಮುನಿಸಿಂಹಸ್ಯ ಕವಿತಾ ವನಚಾರಿಣಃ || ಶ್ರುಣ್ವನ್ರಾಮ ಕಥಾನಾದಂ ಕೋ ನ ಯಾತಿ ಪರಾಂ ಗತಿಂ|| ) ಹೇಳಲಾಗಿದೆ.
ಕಲೌಯುಗೇ ಕಲ್ಮಷಮಾನಹಾನಾರಿ ನಾನ್ಯತ್ರಧರ್ಮಃ ಖಲುನಿಶ್ಚಯೇನ |
ರಾಮೇತಿ ವರ್ಣದ್ವಯಮಾದರೇಣ ಸದಾಜಪನ್ಮುಕ್ತಿ ಮುಪೈತಿ ಜನ್ತು ||

ಇದರ ಅರ್ಥ ಕಲಿಯುಗವೆಂದರೆ ಕಲ್ಮಷ ಮನಸ್ಸಿನಿಂದ (ದುರಾಸೆಗಳಿಂದ ತುಂಬಿದ), ನರಳುತ್ತಿರುವವರು, ಪಾಪಗಳಿಂದ ದುಃಖಗಳಿಂದ ದೂರವಾಗಲು ಆಚರಿಸಬೇಕಾದ ಧರ್ಮಕರ್ಮಗಳಲ್ಲಿ ʻರಾಮʼ ಎಂಬ ಎರಡಕ್ಷರವನ್ನು ಪ್ರೀತಿಯಿಂದ, ಭಕ್ತಿಯಿಂದ, ಭಾವಪೂರ್ಣರಾಗಿ, ಅದರಿಂದ ಸದಾ ಜಪಿಸಿದವರು ಮುಕ್ತಿಯನ್ನು ಹೊಂದುವರು.
ʻಅಸಾರತರಸಂಸಾರಸಾಗರೋತ್ತಾರಕಾರಕಂ |
ಹಾರಕಂ ದುಃಖಜಾಲಾನಂ ಶ್ರೀರಾಮೇತ್ಯಕ್ಷರದ್ವಯಂ||ʼʼ
ಎಂದರೆ ಶ್ರೀರಾಮನಾಮವೆಂಬ ಎರಡಕ್ಷರದ ತಾರಕ ಮಂತ್ರವೇ ಅಸಾರತರವಾದ ಸಂಸಾರ ಸಾಗರದಿಂದ ಉದ್ದರಿಸಿ ಸರ್ವ ದುಃಖಗಳನ್ನು ನಿವಾರಣೆಗೊಳಿಸುತ್ತದೆ ಎಂದು ʻಮಂತ್ರ ಮಹೋದಧಿʼಯಲ್ಲಿ ಹೇಳಲಾಗಿದೆ.

ರಾಮ ತಾರಕ ಮಂತ್ರ

ಅತ್ಯಂತ ಶ್ರೇಷ್ಠ ಮಂತ್ರಗಳಲ್ಲಿ ಶ್ರೀ ರಾಮ ತಾರಕ ಮಂತ್ರಕ್ಕೆ ಅಗ್ರಸ್ಥಾನವಿದೆ. ಇದನ್ನು ಸಾಮೂಹಿಕವಾಗಿ ಪ್ರಾರ್ಥಿಸುವುದರಿಂದ ಭಗವಂತನನ್ನೇ ಭೂಮಿಗೆ ಕರೆಸಿಕೊಳ್ಳಬಹುದು. ರಾಮತಾರಕ ಮಂತ್ರದ ಕುರಿತು ʻರಾಮರಕ್ಷಾ ಸ್ರೋತ್ರʼದಲ್ಲಿ ಬುಧಕೌಶಿಕರು ಹೀಗೆ ಹೇಳಿದ್ದಾರೆ:

ಶ್ರೀ ಶಬ್ದ ಪೂರ್ವೇ ಜಯ ಶಬ್ದ ಮಧ್ಯೇ |
ಜಯ ದ್ವಯೇನಾಪಿ ಪುನಃ ಪ್ರಯುಕ್ತಮ್‌||
ಅಂದರೆ ರಾಮನಾಮದ ಪೂರ್ವಾರ್ಧದಲ್ಲಿ ಶ್ರೀ ಅಕ್ಷರವನ್ನು ಹಾಕಬೇಕು. ನಂತರ ರಾಮ ರಾಮ ಶಬ್ದಗಳ ನಡುವೆ ಮತ್ತು ಅಂತಿಮದಲ್ಲಿ ಜಯ ಪದವನ್ನು ಸೇರಿಸಬೇಕು. ಎಲ್ಲವನ್ನೂ ಒಂದಾಗಿಸಿ ಮತ್ತೆ ಪುನರಾವರ್ತಿಸಬೇಕು. ರಾಮ ತಾರಕ ಮಂತ್ರ ಹೀಗಿದೆ; ʻಶ್ರೀರಾಮ ಜಯ ರಾಮ ಜಯ ಜಯ ರಾಮʼ
ರಾಮ ತಾರಕ ಮಂತ್ರವನ್ನು ಮೂರು ಭಾಗಗಳಾಗಿ ವಿಂಗಡಿಸಿವೆ. ಅದೆಂದರೆ ʻಶ್ರೀರಾಮ (ಶಕ್ತಿ) ಜಯ ರಾಮ (ಕೀಲಕ) ಜಯ ಜಯ ರಾಮ (ವಿನಿಯೋಗ)ʼ. ಶ್ರೀರಾಮ ತಾರಕ ಮಂತ್ರದ ಮಹಿಮೆ ಅರಿತಿದ್ದ ಹನುಮಂತ ಸದಾ ರಾಮ ನಾಮ ಸಂಕೀರ್ತನೆಯಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದ.

ಇದನ್ನೂ ಓದಿ | Ram Mandir: ನಾಳೆ ಭಾರತೀಯರಿಗೆ ಸುದಿನ; ಈಡೇರಲಿದೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಕ್ಷಣ!

ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯ ದಿನ ಈ ತಾರಕ ಮಂತ್ರವನ್ನು ಎಲ್ಲರೂ ಪಠಿಸಬಹುದು. ಶ್ರೀರಾಮ ಜಪಕ್ಕೆ ಯಾವುದೇ ನಿಯಮವಿಲ್ಲ, ಇರುವ ನಿಯಮ ಒಂದೇ ನಾಮವನ್ನು ಯಥೇಚ್ಛವಾಗಿ ಜಪಿಸುವುದು ಅಷ್ಟೇ.

ರಾಮನಾಮದ ಮಹತ್ವವನ್ನು ಅರಿತ ಬುಧಕೌಶಿಕ ಋಷಿಗಳು;
ಕೂಜನ್ತಮ್ ರಾಮ ರಾಮೇತಿರಾಮೇತಿ ಮಧುರಮ್ ಮಧುರಾಕ್ಷರಮ್ |
ಆರೂಹ್ಯ ಕವಿತಾ ಶಾಖಾಮ್ ವನ್ದೇ ವಾಲ್ಮೀಕಿ ಕೋಕಿಲಮ್||
ಎಂದಿದ್ದಾರೆ. ಇದರ ಅರ್ಥ; “ಕಾವ್ಯದ ಕೊಂಬೆಯನ್ನೇರಿ ರಾಮ, ರಾಮಾ ಅನ್ನುವ ಅತ್ಯಂತ ಮಧುರವಾದ ಪದಗಳನ್ನು ಉಲಿಯುತ್ತಿರುವ ವಾಲ್ಮೀಕಿಯೆಂಬ ಕೋಗಿಲೆಗೆ ನಮಸ್ಕಾರ” ಎಂದು. ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಈ ಹೊತ್ತಲ್ಲಿ ನಾವೆಲ್ಲರೂ ರಾಮ ನಾಮ ಜಪಿಸೋಣವೇ?

Exit mobile version