ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ (dodda ganapati temple) ಪೂಜಾ ಸಾಮಗ್ರಿಗಳ ಮಳಿಗೆ ಟೆಂಡರ್ ವಿವಾದವನ್ನು ಧಾರ್ಮಿಕ ದತ್ತಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮರು ಟೆಂಡರ್‌ಗೆ ಆದೇಶ ನೀಡಲಾಗಿದೆ. ಅಕ್ರಮದ ಆರೋಪ ಹೊತ್ತಿದ್ದ ಅಧಿಕಾರಿಗಳಿಗೆ ಕಮಿಷನರ್ ರೋಹಿಣಿ ಸಿಂಧೂರಿ ಅವರು ಕ್ಲಾಸ್ ತೆಗೆದುಕೊಂಡಿದ್ದು ಮರು ಟೆಂಡರ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಮುಜರಾಯಿ ಇಲಾಖೆಯ ಟೆಂಡರ್‌ಗೆ ಸಂಬಂಧಿಸಿ ಲತಾ ಎಂಬ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹತ್ತು ಲಕ್ಷ ರೂ. ಹರಾಜು ಕೂಗಿದ ತನಗೆ ಪೂಜಾ ಸಾಮಗ್ರಿಗಳ ಮಳಿಗೆ ಟೆಂಡರ್ ನೀಡದೆ, ೮.೫ ಲಕ್ಷ ರೂ. ನೀಡಿದವರಿಗೆ ನೀಡಲಾಗಿದೆ. ಈ ಮೂಲಕ ತನಗೆ ಅನ್ಯಾಯ ಮತ್ತು ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಲತಾ ಅವರು ಬುಧವಾರ ದೇವಸ್ಥಾನಕ್ಕೆ ೧೦ ಲಕ್ಷ ರೂ. ನಗದನ್ನು ತಂದು ದೇವಸ್ಥಾನದ ಮುಂದಿಟ್ಟು ತನಗೆ ಮೋಸವಾಗಿದೆ ಎಂದು ಆರೋಪಿಸಿದ್ದರು. ಬಳಿಕ ಲತಾ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿಗೆ ದೂರು ನೀಡಿದ್ದರು. ಆರಂಭಿಕ ಹಂತದಲ್ಲಿ ರೋಹಿಣಿ ಸಿಂಧೂರಿ ಅವರು ಕೂಡಾ ಇದನ್ನು ಕಡೆಗಣಿಸಿ ಮಹಿಳೆಯನ್ನೇ ದಬಾಯಿಸಿ ಕಳುಹಿಸಿದ್ದರು.
ಆದರೆ, ಬಳಿಕ ಇದರಲ್ಲಿ ಗಂಭೀರವಾದ ವಿಚಾರಗಳಿರುವುದನ್ನು ಗಮನಿಸಿದ ಅವರು ಪ್ರತ್ಯೇಕ ಸಭೆ ನಡೆಸಿ ವಿವರ ಪಡೆದರು. ಆಕ್ರಮದ ಆರೋಪ ಹೊತ್ತಿದ್ದ ಮುಜರಾಯಿ ಇಲಾಖೆಯ ಎಸಿ ಪುರುಷೋತ್ತಮ್, ದೊಡ್ಡಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡು ಮರು ಟೆಂಡರ್‌ಗೆ ಸೂಚನೆ ನೀಡಿದರು. ಈ ವಿಚಾರವನ್ನು ಎಸಿ ಪುರುಷೋತ್ತಮ್ ಸ್ಪಷ್ಟಪಡಿಸಿದ್ದಾರೆ.
ಮರು ಟೆಂಡರ್ ಗೆ ಇನ್ನೂ ದಿನಾಂಕ ನಿಗಧಿ ಮಾಡಿಲ್ಲ. ದಿನಾಂಕ ಘೋಷಣೆಯಾದ ಮೇಲೆ ಮರು ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ದೊಡ್ಡಗಣಪತಿ ದೇವಸ್ಥಾನ ಜಾತ್ರೆ ಇದೇ ೨೧ರಿಂದ ಮೂರು ದಿನಗಳ ನಡೆಯಲಿದೆ. ಜಾತ್ರೆಗೂ ಮುನ್ನವೇ ದೇಗುಲದ ಅಂಗಳದಲ್ಲಿ ಟೆಂಡರ್ ಗಲಾಟೆಯಾಗಿದೆ. ಒಂದೊಮ್ಮೆ ಈಗಾಗಲೇ ಆಗಿರುವ ಟೆಂಡರ್ ಊರ್ಜಿತಕ್ಕೆ ಬಂದಿದ್ದರೆ ನವೆಂಬರ್ ೨೧ರಿಂದ ಜಾರಿಗೆ ಬರುತ್ತಿತ್ತು.
ಇದನ್ನೂ ಓದಿ | Dodda ganapati temple | ಟೆಂಡರ್ ಅನ್ಯಾಯ ಆರೋಪ: 10 ಲಕ್ಷ ರೂ. ದೇವರ ಮುಂದಿಟ್ಟು ಪ್ರತಿಭಟಿಸಿದ ಮಹಿಳೆ