Site icon Vistara News

View Point : ದೇವಳದ ಗೋಪುರಕ್ಕೆ ಅಡ್ಡಲಾಗಿ ವ್ಯೂ ಪಾಯಿಂಟ್‌ ನಿರ್ಮಾಣ ಯತ್ನ; ಶಂಕರ್‌ ಗುಹಾ ತಂಡದಿಂದ ತಡೆ

Dr. Shankar Guha at Kumaraswamy Temple

ಬೆಂಗಳೂರು: ಬಸವನಗುಡಿಯ ಹನುಮಂತನಗರದ ಪುರಾಣ ಪ್ರಸಿದ್ಧ, ಐತಿಹಾಸಿಕ ದೇವಾಲಯವಾದ ಶ್ರೀ ಕುಮಾರಸ್ವಾಮಿ ದೇವಸ್ಥಾನದ (Kumaraswamy Temple at Hanumanthanagar) ಆವರಣದಲ್ಲಿ ದೇವಾಲಯದ ಗೋಪುರಕ್ಕೆ (Temple Gopuram) ಅಡ್ಡವಾಗಿ ‘ವ್ಯೂ ಪಾಯಿಂಟ್’ ನಿರ್ಮಿಸುವ (View point Construction) ಪ್ರಯತ್ನವನ್ನು ಕಾಂಗ್ರೆಸ್‌ ವಕ್ತಾರ ಡಾ. ಶಂಕರ್‌ ಗುಹಾ (Dr. Shankar Guha) ನೇತೃತ್ವದಲ್ಲಿ ಸೋಮವಾರ ತಡೆಯಲಾಗಿದೆ.

ಹನುಮಂತನಗರದ ಶ್ರೀ ಕುಮಾರಸ್ವಾಮಿ ದೇವಸ್ಥಾನ

ಈ ಕಾಮಗಾರಿಗೆ ಹಿಂದೊಮ್ಮೆ ಚಾಲನೆ ನೀಡಲು ಯತ್ನಿಸಲಾಗಿತ್ತು. ಆಗ ವಿರೋಧ ಮಾಡಿದ್ದರಿಂದ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ಮುಂದಾದಾಗ ಡಾ. ಶಂಕರ್‌ ಗುಹಾ ತಂಡ ಮತ್ತೆ ವಿರೋಧ ವ್ಯಕ್ತಪಡಿಸಿ ನಿಲ್ಲಿಸಿದೆ.

ವ್ಯೂ ಪಾಯಿಂಟ್‌ ನಿರ್ಮಾಣ ಕಾಮಗಾರಿಗೆ ಡಾ. ಶಂಕರ್‌ ಗುಹಾ ತಂಡದಿಂದ ವಿರೋಧ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಚ್೯ ತಿಂಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದು ಇದನ್ನು ಸ್ಥಳೀಯರು, ದೇವಸ್ಥಾನದ ಭಕ್ತಾದಿಗಳು ಮತ್ತು ಅರ್ಚಕರ ಮನವಿ ಮೇರೆಗೆ ಡಾ.ಶಂಕರ್ ಗುಹಾ ವಿರೋಧ ವ್ಯಕ್ತಪಡಿಸಿದ್ದರು. ಚುನಾವಣಾ ಸಂದರ್ಭವಾಗಿದ್ದರಿಂದ ಅಂದು ಕೆಲಸ ನಿಲ್ಲಿಸಿದ ಹಾಗೆ ಮಾಡಿ ಈಗ ಮತ್ತೆ ಕಾರ್ಯವನ್ನು ಆರಂಭಿಸಿದ್ದರು. ಧಾರ್ಮಿಕ ಭಾವನೆ ಮತ್ತು ಪರಂಪರೆಗೆ ವಿರುದ್ಧವಾದ ಈ ಅಸಂಬದ್ಧ ನಿರ್ಮಾಣ ಕಾರ್ಯವನ್ನು ತಡೆಯಲು ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ನೇತೃತ್ವದ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದರು. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಯನ್ನು ನೀಡಿ ತಕ್ಷಣದ ಕಾಮಗಾರಿಯನ್ನು ನಿಲ್ಲಿಸಲಾಗಿದೆ.

ವ್ಯೂ ಪಾಯಿಂಟ್‌ ಯಾಕೆ ಬೇಡ: ವಿರೋಧಿಸುವವರು ಕೊಡುವ ಕಾರಣವೇನು?

  1. ವ್ಯೂ ಪಾಯಿಂಟ್ ನಿರ್ಮಾಣ ಮತ್ತು ಉದ್ಯಾನವನದಿಂದಾಗಿ ಅಲ್ಲಿ ಪವಿತ್ರ ಧಾರ್ಮಿಕ ಕ್ಷೇತ್ರವೆಂಬ ಪರಿಕಲ್ಪನೆ ನಿಧಾನಕ್ಕೆ ಕಳೆದು ಹೋಗುತ್ತಿದೆ.
  2. ಕುಮಾರಸ್ವಾಮಿ ಉದ್ಯಾನವನ ಪ್ರೇಮಿಗಳ ಉದ್ಯಾನವನವಾಗಿ ಬದಲಾಗುತ್ತಿದೆ. ಮೋಜು ಮಸ್ತಿ ಮಾಡುವ ಪ್ರವಾಸಿ ತಾಣದಂತೆ ಜನರ ನಡವಳಿಕೆ ಮಾರ್ಪಟ್ಟಿದೆ.
  3. ವ್ಯಾಯಾಮ ಮಾಡಲು ಬಂದ ಜನ ದೇವಸ್ಥಾನದ ಸುತ್ತಮುತ್ತ ಶೂ, ಚಪ್ಪಲಿಗಳನ್ನು ಹಾಕಿಕೊಂಡು ದೇವಸ್ಥಾನಕ್ಕೆ ಒಳಹೋಗುವ ಮೆಟ್ಟಿಲ ಮೇಲೆ ವ್ಯಾಯಾಮ ಮಾಡುತ್ತಿರುತ್ತಾರೆ. ಇನ್ನೂ ಅಲ್ಲಿ ವೀವ್ ಪಾಯಿಂಟ್ ನಿರ್ಮಾಣವಾದರೆ ಅದು ಲವರ್ಸ್ ಪಾಯಿಂಟ್ ಆಗುತ್ತದೆ. ಇದರಿಂದ ದೇವಸ್ಥಾನದ ಪವಿತ್ರತೆ ಇನ್ನಷ್ಟು ಹಾಳಾಗುತ್ತದೆ.

ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಗುಹಾ ಆಕ್ರೋಶ

ಗೋಪುರಕ್ಕೆ ಅಡ್ಡಲಾಗಿ ವ್ಯೂ ಪಾಯಿಂಟ್‌ ಕಟ್ಟುವುದು ಅತ್ಯಂತ ಅಸಂಬದ್ಧ ಎನ್ನುವ ಡಾ. ಶಂಕರ್‌ ಗುಹಾ ಈ ಸಂಬಂಧ ಸ್ಥಳೀಯ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಾ. ಶಂಕರ್‌ ಗುಹಾ ಮತ್ತು ತಂಡದಿಂದ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ

ʻʻಸಂಸದ ಮತ್ತು ಶಾಸಕರು ಡೋಂಗಿ ಹಿಂದುತ್ವವನ್ನು ಪ್ರದರ್ಶಿಸುತ್ತಾರೆ. ಚುನಾವಣೆ ಬಂದಾಗ ಮಾತ್ರ ಮಠಮಾನ್ಯಗಳಿಗೆ ಮತ್ತು ಧಾರ್ಮಿಕ ಮುಖಂಡರ ಬಳಿ ಓಡಿ ಹೋಗಿ ಸಹಾಯಚಿಸುವ ಬಿಜೆಪಿಯವರಿಗೆ ದೇವಸ್ಥಾನದ ಆವರಣದಲ್ಲಿ ಗೋಪುರಕ್ಕೆ ಅಡ್ಡಲಾಗಿ ಕಟ್ಟಡ ನಿರ್ಮಾಣ ಮಾಡುವಾಗ ಅವರ ಸಲಹೆಯನ್ನು ಪಡೆಯಬೇಕು ಎಂಬ ಕನಿಷ್ಠ ಜ್ಞಾನ ಇಲ್ಲವಾಯಿತೇ? ಗೋಪುರದ ಪಕ್ಕದಲ್ಲಿ ಅದಕ್ಕಿಂತ ಎತ್ತರವಾಗಿ ಏನನ್ನೂ ನಿರ್ಮಿಸಬಾರದು ಎನ್ನುವುದು ಅತ್ಯಂತ ಸಾಮಾನ್ಯರಿಗೂ ತಿಳಿದಿರುವ ವಿಚಾರ. ಇದು ಈ ನಾಯಕರಿಗೆ ತಿಳಿಯುವುದಿಲ್ಲವೇʼʼ ಎಂದು ಡಾ. ಶಂಕರ್‌ ಗುಹಾ ಪ್ರಶ್ನೆ ಮಾಡಿದ್ದಾರೆ.

ʻʻಸಂಸದ ತೇಜಸ್ವಿಸೂರ್ಯ ಅವರು ಕಳೆದ ವರ್ಷ ಕಾವುಡಿ ಹೊತ್ತುಕೊಂಡು ಭಕ್ತಿ ಸೇವೆ ಸಲ್ಲಿಸುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದರು. ಅದು ತೋರಿಕೆಗಾಗಿ ಮಾಡಿದ್ದೆ? ಅಥವಾ ನಿಜವಾಗಿಯೂ ಅವರಿಗೆ ಆ ರೀತಿಯ ಧಾರ್ಮಿಕ ಭಾವನೆ ಇದೆಯೇ? ಎನ್ನುವ ಪ್ರಶ್ನೆ ಮೂಡುತ್ತಿದೆ. ಶಾಸಕ ರವಿಸುಬ್ರಹ್ಮಣ್ಯ ರವರು ಕಮಿಷನ್ ಕಾಮಗಾರಿಗೆ ಋಣ ಸಂದಾಯ ಮಾಡಲು ಈ ರೀತಿಯ ಯೋಜನೆಗಳಿಗೆ ಕೈ ಹಾಕಿದ್ದಾರೆಯೇ?ʼʼ ಎಂದು ಡಾ.ಶಂಕರ್ ಗುಹಾ ಕಿಡಿ ಕಾರಿದ್ದಾರೆ.

ಮತ್ತೆ ಕಾಮಗಾರಿ ಶುರು ಮಾಡಿದರೆ ಉಗ್ರ ಹೋರಾಟ

ಇದೀಗ ಕಾಮಗಾರಿ ನಡೆಸಲು ಬಂದ ವಾಹನಗಳನ್ನು, ಸಲಕರಣೆಗಳನ್ನು ದೇವಸ್ಥಾನದ ಆವರಣದಿಂದ ಹೊರಹಾಕಲಾಗಿದೆ. ಮುಂದೆ ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಅಲ್ಲಿ ಧ್ಯಾನ ಮಂಟಪವನ್ನೋ ಅಥವಾ ಸಮುದಾಯ ಭವನವನ್ನೋ ನಿರ್ಮಿಸಲು ಚರ್ಚಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅದಕ್ಕೂ ಮೊದಲು ಮತ್ತೆ ಕಾಮಗಾರಿಯನ್ನು ಪ್ರಾರಂಭಿಸಿದರೆ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಡಾ.ಶಂಕರ್ ಗುಹಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇಗುಲದ ಗೋಪುರದ ಮೇಲೆ ಹಕ್ಕಿಗಳು-ವಿಮಾನ ಹಾರಾಡುವುದಿಲ್ಲವೇಕೆ?; ಇಲ್ಲಿದೆ ಕಾರಣ

Exit mobile version