ಬೆಂಗಳೂರು: ಮುಸ್ಲಿಮ್ರ ಪವಿತ್ರ ಹಬ್ಬ ಬಕ್ರೀದ್ ಹಬ್ಬಕ್ಕೆ (Eid al Adha) ದಿನಗಣನೆ ಶುರುವಾಗಿದೆ. ಜೂನ್ 29ರಂದು ಬಕ್ರೀದ್ (bakrid festival) ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ಅಧಿನಿಯಮ 2020ರ ಪ್ರಕಾರ ಅನಧಿಕೃತವಾಗಿ ಪ್ರಾಣಿವಧೆಯನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದರೆ ಅಂತಹ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
ಈ ಸಂಬಂಧ ಬಿಬಿಎಂಪಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಧಾರ್ಮಿಕ ಚಟುವಟಿಕೆ ಸಂದರ್ಭಗಳಲ್ಲಿ ಹಾಗೂ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಪ್ರಾಣಿವಧೆ ಮತ್ತು ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನ, ಮಸೀದಿ ಹಾಗೂ ಇತರೆ ಧಾರ್ಮಿಕ ಸ್ಥಳಗಳ ಆವರಣಗಳಲ್ಲಿ ಅನಧಿಕೃತ ಪ್ರಾಣಿವಧೆ ಮತ್ತು ಬಲಿ ಕೊಡುವುದನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ. ರಸ್ತೆಯಲ್ಲಿ, ಪಾದಚಾರಿ ಮಾರ್ಗ ಹಾಗೂ ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್, ಶಾಲಾ- ಕಾಲೇಜು, ಆಟದ ಮೈದಾನ ಸೇರಿದಂತೆ ಉದ್ಯಾನವನ ಒಳಗೆ ಮತ್ತು ಹೊರಗೆ ಅಥವ ಇನ್ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂದರ್ಭಗಳಲ್ಲೂ ಅನಧಿಕೃತ ಪ್ರಾಣಿವಧೆ ಮಾಡುವಂತಿಲ್ಲ.
ಬಲಿ ಕೊಟ್ಟರೆ 6 ತಿಂಗಳ ಸಜೆ ಗ್ಯಾರಂಟಿ
ಕರ್ನಾಟಕ ರಾಜ್ಯ ಪ್ರಾಣಿ ಬಲಿ ತಡೆ ಕಾಯ್ದೆ 1959ರ ಸೆಕ್ಷನ್ 3ರ ಪ್ರಕಾರ ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧವಾಗಿದೆ. ಅಂಥವರಿಗೆ 6 ತಿಂಗಳ ಸಜೆ ಅಥವಾ ದಂಡ ಎರಡೂ ವಿಧಿಸಬಹುದಾಗಿದೆ. ಸಾರ್ವಜನಿಕರು ಪ್ರಾಣಿವಧೆ ಕಾಯ್ದೆಯ ಪ್ರಕಾರ ವಧೆಗೆ ಅರ್ಹವಾದ ಮತ್ತು ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ಇದೆ. ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್ 429ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅನಧಿಕೃತವಾಗಿ ಕೊಂದರೆ 5 ವರ್ಷ ಜೈಲು ಶಿಕ್ಷೆಯೂ ಇದೆ.
ಯಾವುದನ್ನೂ ಕೊಲ್ಲುವಂತಿಲ್ಲ?
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಯಾವುದೇ ವಯಸ್ಸಿನ ದನ, ಆಕಳು, ಎತ್ತು ಹೋರಿ, ಕರುಗಳನ್ನು ಬಲಿ (ಕುರ್ಬಾನಿ/ವಧೆ) ಕೊಡುವುದನ್ನು ನಿಷೇಧಿಸಲಾಗಿದೆ. ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಹೋರಿ, ಕರುಗಳನ್ನು ಸಾಗಾಟ ಮಾಡುವುದೂ ಸಹ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಇದನ್ನೂ ಓದಿ: Eid al Adha: ಚಾಮರಾಜಪೇಟೆ ಮೈದಾನದಲ್ಲಿ ಬಕ್ರೀದ್ಗೆ ಕುರಿ-ಮೇಕೆ ಸಿಗಲ್ಲ!
ವಧೆ ಕಂಡು ಬಂದರೆ ಕರೆ ಮಾಡಿ
ಇನ್ನು ಸಾರ್ವಜನಿಕರು ಸಹಕಾರ ನೀಡುವಂತೆ ಬಿಬಿಎಂಪಿ ಕೋರಿದೆ. ಜತೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ದೂರು, ಮಾಹಿತಿ ನೀಡಬಹುದಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ