Site icon Vistara News

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನ; ಜೈ ಶ್ರೀರಾಮ್‌ ಎಂದ ಪ್ರಯಾಣಿಕರು! ವಿಡಿಯೊ ಇದೆ

Ayodhya Airport

First Flight Arrives At Ayodhya Airport; Passengers Chant Jai Shri Ram

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ವಿಮಾನ ನಿಲ್ದಾಣಕ್ಕೆ (Ayodhya Airport) ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ. ರಾಮಮಂದಿರದ (Ram Mandir) ಕಲ್ಪನೆಯಲ್ಲಿಯೇ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಒಳಗಡೆ ರಾಮನ ಚಿತ್ರಗಳು ರಾರಾಜಿಸುತ್ತಿವೆ. ಇನ್ನು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮಿಸಿದ್ದು, ಅಯೋಧ್ಯೆ ತಲುಪುತ್ತಲೇ ಪ್ರಯಾಣಿಕರು ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಇಂಡಿಗೋ ವಿಮಾನವು ಶನಿವಾರ ಸಂಜೆ ಅಯೋಧ್ಯೆ ವಿಮಾನ ನಿಲ್ದಾಣವನ್ನು ತಲುಪಿತು. ಕರ್ನಾಟಕ ಸೇರಿ ದೇಶದ ಹಲವು ಭಾಗಗಳ ಪ್ರಯಾಣಿಕರು ವಿಮಾನ ಹತ್ತುವಾಗಲೇ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿದರು. ಇನ್ನು ಅಯೋಧ್ಯೆ ತಲುಪುತ್ತಲೇ ನೂರಾರು ಪ್ರಯಾಣಿಕರು ಸಂತಸದಿಂದ ಕೆಳಗೆ ಇಳಿದರು. ಇದೇ ವೇಳೆ ಒಂದಷ್ಟು ಪ್ರಯಾಣಿಕರು ಅಯೋಧ್ಯೆ ವಿಮಾನ ನಿಲ್ದಾಣದ ನೆಲಕ್ಕೆ ನಮಿಸಿದರು. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು. ಕೆಲ ಪ್ರಯಾಣಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ತಿಳಿಸಿದರು.

ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್‌

ದೆಹಲಿಯಿಂದ ಇಂಡಿಗೋ ವಿಮಾನ ಹೊರಡುವ ಮುನ್ನ ಪೈಲಟ್‌ ಆಶುತೋಶ್‌ ಶೇಖರ್‌ ಅವರು ಪ್ರಯಾಣಿಕರಿಗೆ ಸ್ವಾಗತ ಕೋರಿದರು. “ಇಂತಹ ಮಹತ್ವದ ಪ್ರಯಾಣದ ಸಂದರ್ಭದಲ್ಲಿ ವಿಮಾನದ ಪೈಲಟ್‌ ಆಗಿ ಇಂಡಿಗೋ ನನ್ನನ್ನು ನಿಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ನಿಮ್ಮೆಲ್ಲರನ್ನೂ ಕರೆದೊಯ್ಯುವ ಖುಷಿ ನಮ್ಮದಾಗಿದೆ. ಸುಖಕರ ಪ್ರಯಾಣ ನಮ್ಮದಾಗಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು. ಇದಾದ ಬಳಿಕವೂ ಪ್ರಯಾಣಿಕರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಬೆಂಗಳೂರಿನಿಂದಲೂ ಇದೆ ವಿಮಾನ

ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತಿದ್ದಂತೆಯೇ ದೇಶದ ಬೇರೆ ಬೇರೆ ಭಾಗಗಳಿಂದ ನೇರ ವಿಮಾನ ಯಾನ ಆರಂಭವಾಗಲಿದೆ. ಹಾಗೆ ವಿಮಾನ ಯಾನ ಆರಂಭವಾಗುವ ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು. ಜನವರಿ 17ರಂದು ಅಯೋಧ್ಯೆಗೆ ಬೆಂಗಳೂರು ಮತ್ತು ಕೋಲ್ಕೊತಾದಿಂದ ನೇರ ವಿಮಾನ ಯಾನ ಆರಂಭವಾಗಲಿದೆ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಪ್ರಕಟಿಸಿದೆ.

ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಜತೆಗೆ ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳು ಓಡಾಡಲಿವೆ. ಮುಂದೆ ಹಂತ ಹಂತವಾಗಿ ಬೇರೆ ಬೇರೆ ನಗರಗಳಿಂದ ಅಯೋಧ್ಯೆಗೆ ನೇರ ಸಂಪರ್ಕ ದೊರೆಯಲಿದೆ. ಇದುವರೆಗೆ ಅಯೋಧ್ಯೆಗೆ ನೇರವಾಗಿ ವಿಮಾನದಲ್ಲಿ ಹೋಗುವುದು ಸಾಧ್ಯವಿರಲಿಲ್ಲ. ಒಂದೋ ಲಕ್ನೋ ವಿಮಾನ ನಿಲ್ದಾಣ, ಇಲ್ಲವೇ ವಾರಾಣಸಿಗೆ ಹೋಗಿ ಅಲ್ಲಿಂದ ಅಯೋಧ್ಯೆಗೆ ಹೋಗಬೇಕಾಗಿತ್ತು. ಲಕ್ನೋ ವಿಮಾನ ನಿಲ್ದಾಣ ಕೂಡಾ ದೊಡ್ಡದೇನಲ್ಲ.

ಇದನ್ನೂ ಓದಿ: ಅಯೋಧ್ಯೆ ವಿಮಾನ ನಿಲ್ದಾಣ ಹೇಗಿದೆ? ಮೋದಿ ಅಲೆ ಹೇಗಿತ್ತು? ಫೋಟೊಗಳು ಇಲ್ಲಿವೆ

ಸಮಯ-ವೇಳಾಪಟ್ಟಿ ಹೇಗೆ?

  1. ಬೆಂಗಳೂರು-ಅಯೋಧ್ಯೆ ಮಾರ್ಗದಲ್ಲಿ ಮೊದಲ ವಿಮಾನವು ಜನವರಿ 17 ರ ಬೆಳಿಗ್ಗೆ 8.05 ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ.
  2. ಅದೇ ರೀತಿ ಹಿಂತಿರುಗುವ ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 3.40 ಕ್ಕೆ ಹೊರಡಲಿದ್ದು, ಸಂಜೆ 6.10 ಕ್ಕೆ ಬೆಂಗಳೂರಿಗೆ ತಲುಪಲಿದೆ.
  3. ಅಯೋಧ್ಯೆ-ಕೋಲ್ಕತ್ತಾ ಮಾರ್ಗದಲ್ಲಿ, ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದೆ. ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ.
  4. ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10ಕ್ಕೆ ಅಯೋಧ್ಯೆಯನ್ನು ತಲುಪಲಿದೆ.

    ಬೆಂಗಳೂರಿನಿಂದ ವಾರಕ್ಕೆ ಮೂರು ವಿಮಾನ
  5. ಅಯೋಧ್ಯೆ ಮತ್ತು ಬೆಂಗಳೂರು ಹಾಗೂ ಅಯೋಧ್ಯೆ ಮತ್ತು ಕೋಲ್ಕೊತಾ ನಡುವೆ ವಾರಕ್ಕೆ ಮೂರು ತಡೆರಹಿತ, ನೇರ ವಿಮಾನ ಯಾನ ಇರಲಿದೆ.
  6. ವೇಳಾಪಟ್ಟಿ ಮತ್ತು ಬುಕ್ಕಿಂಗ್ ವ್ಯವಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವೆಬ್‌ಸೈಟ್ (airindiaexpress.com), ಆಪ್‌ಗಳಲ್ಲಿ ಲಭ್ಯವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version