ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಹಿಂದೂ ಧರ್ಮದಲ್ಲಿ ಪ್ರಾತಃಕಾಲ ಮತ್ತು ಸಂಧ್ಯಾಕಾಲಕ್ಕೆ ವಿಶೇಷವಾದ ಮಹತ್ವವಿದೆ. ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಮಾಡುವ ಕೆಲಸಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಒಂದು ವೇಳೆ ಜಾತಕದಲ್ಲಿ ಸೂರ್ಯ ಗ್ರಹ ಉಚ್ಛ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯದೇವನಿಗೆ ನಮಿಸಿ, ಜಲವನ್ನು ಅರ್ಪಿಸುವುದರಿಂದ ಸೂರ್ಯನ ಕೃಪೆ ಸದಾ ಇರುತ್ತದೆ. ಸೂರ್ಯೋದಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಸೂರ್ಯಾಸ್ತಕ್ಕೂ ವಿಶೇಷತೆ ಇದೆ. ಸೂರ್ಯಾಸ್ತದಲ್ಲಿ ಮಾಡಿದ ಉತ್ತಮ ಕೆಲಸಗಳು ಪುಣ್ಯ ಪ್ರಾಪ್ತಿಗೆ ಸಹಾಯಕವಾಗುತ್ತವೆ. ದೇವರ ಅನುಗ್ರಹ ಪಡೆಯಲು ಸೂರ್ಯಾಸ್ತವು ಸಹ ಪ್ರಶಸ್ತವಾದ ಸಮಯವಾಗಿದೆ.
ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಸೂರ್ಯದೇವನ ಕೃಪೆ ಸಿಗುವುದಲ್ಲದೇ, ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದರಿಂದ ದೇವತೆಗಳ ಅನುಗ್ರಹ ಸಿಗುವುದರ ಜೊತೆಗೆ ಲಕ್ಷ್ಮೀ ದೇವಿಯ ಕೃಪೆಯಿಂದ ಮನೆಯಲ್ಲಿ ಸಂಪತ್ತು ನೆಲೆಸುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಆ ಕಾರ್ಯಗಳು ಯಾವುವು ಎಂಬುದನ್ನು ತಿಳಿಯೋಣ.
ದೇವರಿಗೆ ದೀಪ ಹಚ್ಚುವುದು
ಸೂರ್ಯಾಸ್ತದ ಸಮಯದಲ್ಲಿ ಅಂದರೆ ಸಂಧ್ಯಾಕಾಲದಲ್ಲಿ ದೇವರ ಮನೆಯಲ್ಲಿ ದೀಪ ಬೆಳಗಿಸಿ, ಪ್ರಾರ್ಥಿಸಿಕೊಳ್ಳಬೇಕು. ಸೂರ್ಯಾಸ್ತದ ಸಮಯದಲ್ಲಿ ದೀಪ ಹಚ್ಚುವಾಗ ಹೇಳುವ ಮಂತ್ರ ಹೀಗಿದೆ;
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಃ|
ಶತ್ರು ಬುದ್ಧಿ ವಿನಾಶಾಯ ಸಂಧ್ಯಾ ದೀಪಂ ನಮೋಸ್ತುತೆ ||
ದೀಪಂ ಜ್ಯೋತಿ ಪರಂಬ್ರಹ್ಮ ದೀಪಂ ಜ್ಯೋತಿ ಜನಾರ್ಧನ |
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೆ||
ಈ ಮಂತ್ರಗಳನ್ನು ಹೇಳುತ್ತಾ ದೇವರಿಗೆ ದೀಪ ಬೆಳಗಬೇಕು. ನಂತರ ದೇವರ ನಾಮಗಳನ್ನು, ಸ್ತೋತ್ರಗಳನ್ನು, ಭಜನೆಗಳನ್ನು ಮನೆಯ ಸದಸ್ಯರು ಒಟ್ಟಾಗಿ ಕುಳಿತು ಮಾಡಬೇಕು.
ತುಳಸಿಗೆ ದೀಪ ಬೆಳಗಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿಡಬೇಕು. ಈ ರೀತಿ ಮಾಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಅಂಥ ಮನೆಯ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುವುದಲ್ಲದೇ, ಸಂಪತ್ತು ಹೆಚ್ಚುತ್ತದೆ.
ಸೂರ್ಯನಿಗೆ ನಮಸ್ಕಾರ ಮಾಡಿ
ಉದಯಿಸುತ್ತಿರುವ ಸೂರ್ಯನಿಗೆ ನಮಿಸುವುದರಿಂದ ಉನ್ನತಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಅಸ್ತವಾಗುತ್ತಿರುವ ಸೂರ್ಯನಿಗೆ ನಮಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಮನೆಗೆ ಬರುವಾಗ ಬರೀಗೈಯಲ್ಲಿ ಬರಬಾರದು: ಸೂರ್ಯಾಸ್ತದ ನಂತರ ಮನೆಗೆ ಹೋಗುವಾಗ ಬರೀಗೈಯಲ್ಲಿ ಮನೆಗೆ ಹೋಗಬಾರದು. ಯಾವಾಗಲೂ ಏನನ್ನಾದರೂ ತೆಗೆದುಕೊಂಡೇ ಹೋಗಬೇಕೆಂದು ಹೇಳಲಾಗುತ್ತದೆ. ಇದರಿಂದ ಮನೆಗೆ ಲಕ್ಷ್ಮೀ ಕೃಪೆ ಸಿಗುತ್ತದೆ.
ಹಿರಿಯರ ಫೋಟೋಗೆ ನಮಿಸಬೇಕು: ಸಂಜೆಯ ಸಮಯದಲ್ಲಿ ದೇವರಿಗೆ ದೀಪ ಬೆಳಗಿ ಪ್ರಾರ್ಥಿಸಿದ ನಂತರ ಹಿರಿಯರ ಫೋಟೋಗೆ ನಮಿಸಬೇಕು. ಇದರಿಂದ ಮನೆಗೆ ಹಿರಿಯರ ಆಶೀರ್ವಾದವೂ ಲಭಿಸುತ್ತದೆ.
ಸಂಧ್ಯಾಕಾಲದಲ್ಲಿ ಮಲಗಬಾರದು: ದೇವರಿಗೆ ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿ ಮಲಗಬಾರದು. ಸಂಧ್ಯಾಕಾಲದಲ್ಲಿ ದೇವರ ಭಜನೆ, ಸ್ತೋತ್ರಗಳನ್ನು ಹೇಳುತ್ತಾ ಲಕ್ಷ್ಮೀಯನ್ನು ಬರ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಹಾಸಿಗೆ ಮೇಲಿದ್ದರೆ ಲಕ್ಷ್ಮೀ ದೇವಿ ಕೋಪಗೊಂಡು ಮನೆಯನ್ನು ಪ್ರವೇಶಿಸುವುದಿಲ್ಲ. ಹಾಗಾಗಿ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಯಾರೂ ಮಲಗಿ ನಿದ್ರೆ ಮಾಡುತ್ತಿರಬಾರದು.
ಮನೆಯಲ್ಲಿ ಕತ್ತಲಿರಬಾರದು : ಸಂಜೆ ಹೊತ್ತಿನಲ್ಲಿ ದೇವರಿಗೆ ದೀಪ ಹಚ್ಚಿದ ನಂತರ ಮನೆಯಲ್ಲಿ ಬೆಳಕಿರಬೇಕು. ಮನೆಯನ್ನು ಪ್ರಕಾಶಮಾನವಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಇದನ್ನೂ ಓದಿ : Prerane : ನಮ್ಮೆಲ್ಲರ ಜೀವನವೇ ಧ್ಯಾನವಾಗಲಿ