ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಭಾರತದ ರಾಷ್ಟ್ರೀಯ ದೇಗುಲವಾಗಲಿದೆ ಎಂದಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಭವ್ಯ ರಾಮ ಮಂದಿರದ ಗರ್ಭಗೃಹಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಬುಧವಾರ ಅವರು ಮಾತನಾಡಿದರು. ʻʻದೇಶದ ಜನ ಈ ದಿನಕ್ಕಾಗಿ ಬಹುಕಾಲದಿಂದ ಕಾಯುತ್ತಿದ್ದರು, ಅಯೋಧ್ಯೆಯ ರಾಮ ಮಂದಿರ ದೇಶದ ಏಕತೆಯ ಸಂಕೇತವಾಗಲಿದೆʼ” ಎಂದರು.
ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಹೂವಿನ ಮಾಲೆಗಳಿಂದ ಅಲಂಕೃತವಾದ ಶಿಲಾ ಕೆತ್ತನೆಯೊಂದರ ಮೇಲೆ ಇಟ್ಟಿಗೆಯನ್ನು ಇಟ್ಟು ಶ್ರೀ ರಾಮ ಮಂದಿರದ ಗರ್ಭಗುಡಿಗೆ ಶಿಲಾನ್ಯಾಸ ಮಾಡಿದರು. ಋತ್ವಿಜರು ಮಂತ್ರ ಘೋಷ ಮಾಡುತ್ತಿರುವ ನಡುವೆಯೇ ಅವರು ಇಟ್ಟಿಗೆಗೆ ಸಿಮೆಂಟ್ ಹಾಕಿ ಗಟ್ಟಿಗೊಳಿಸಿದರು.
ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು 90ಕ್ಕೂ ಅಧಿಕ ಮಠ ಮತ್ತು ಮಂದಿರಗಳ ಸಂತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗರ್ಭಗುಡಿಗೆ ಮೂರು ರಾಜ್ಯದ ಕಲ್ಲು
ಗರ್ಭಗುಡಿ ನಿರ್ಮಾಣಕ್ಕೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಿಂದ 17000 ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಈ ಹಿಂದೆಯೇ ಹೇಳಿದ್ದರು. ಈ ನಡುವೆ ಗರ್ಭಗೃಹದ ಪ್ರಧಾನ ಕಟ್ಟಡಕ್ಕೆ ರಾಜಸ್ಥಾನದಿಂದ ಗುಲಾಬಿ ಬಣ್ಣದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರದಲ್ಲಿ ಇದಕ್ಕಾಗಿ ಕಲ್ಲು ಕೋರೆಗಳನ್ನು ಗುರುತಿಸಲಾಗಿದೆ. ರಾಜಸ್ಥಾನ ಸರಕಾರವೂ 17 ಗಣಿಗಳಿಂದ ಕಲ್ಲುಗಳನ್ನು ಎತ್ತಬಹುದು ಎಂದು ಅನುಮತಿ ನೀಡಿದೆ. ಇನ್ನೂ ಹನ್ನೆರಡು ಗಣಿಗಳಿಂದ ಕಲ್ಲುಗಳನ್ನು ಪಡೆಯಲು ಜುಲೈ ಮಧ್ಯಭಾಗದೊಳಗೆ ಅನುಮತಿ ದೊರೆಯಲಿದೆ. ಬನ್ಸಿ ಪಹಾಡ್‌ಪುರ ಗುಲಾಬಿ ಬಣ್ಣದ ಕಲ್ಲುಗಳಿಗೆ ಪ್ರಸಿದ್ಧವಾಗಿದೆ.
ಒಂದುವರೆ ವರ್ಷದಲ್ಲಿ ಸಿದ್ಧ
ಪ್ರಧಾನಿ ನರೇಂದ್ರ ಮೋದಿ ಅವರು 2020ರ ಆಗಸ್ಟ್ 5ರಂದು ಭವ್ಯ ಶ್ರೀ ರಾಮ ಮಂದಿರಕ್ಕೆ ಅಡಿಗಲ್ಲು ಇಟ್ಟಿದ್ದರು. ಕಳೆದ ಎರಡು ವರ್ಷಗಳಲ್ಲಿ ದೇಗುಲ ನಿರ್ಮಾಣ ಕಾರ್ಯ ಅತ್ಯಂತ ಭರದಿಂದ ನಡೆಯುತ್ತಿದೆ. 2023ರ ಡಿಸೆಂಬರ್ ಇಲ್ಲವೇ 2024ರ ಜನವರಿಯಲ್ಲಿ ದೇವಾಲಯ ಉದ್ಘಾಟನೆಯಾಗಲಿದೆ ಎಂದು ಹೇಳಲಾಗಿದೆ.
ವೇಗವಾಗಿ ನಿರ್ಮಾಣ ಕಾರ್ಯ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2019ರಲ್ಲಿ ಸುಪ್ರೀಂಕೋರ್ಟ್ ಬಹು ದೀರ್ಘಾವಧಿಯ ರಾಮಮಂದಿರ – ಬಾಬರಿ ಮಸೀದಿ ವಿವಾದವನ್ನು ಬಗೆಹರಿಸಿತ್ತು. ವಿವಾದಿತ ಜಾಗವು ರಾಮನಿಗೆ ಸೇರಿದ್ದು ಎಂಬ ಮಹತ್ವದ ತೀರ್ಪನ್ನು ನೀಡಿದ್ದ ಕೋರ್ಟ್ ಮಸೀದಿ ನಿರ್ಮಾಣಕ್ಕೆ ಬೇರೆ ಜಾಗವನ್ನು ಒದಗಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಈಗಾಗಲೇ ಮಸೀದಿಗೂ ಜಾಗವನ್ನು ಸೂಚಿಸಲಾಗಿದೆ.