ಬೆಂಗಳೂರು: ಗಣೇಶನ ಹಬ್ಬ (Ganesh Chaturthi) ಹತ್ತಿರವಾಗುತ್ತಿದ್ದಂತೆ ಖಾಸಗಿ ಬಸ್ಸುಗಳು ಸುಲಿಗೆ ಆರಂಭಿಸಿವೆ. ಹಬ್ಬದ ಆಸುಪಾಸಿನಲ್ಲಿ ಟಿಕೆಟ್ (Bus Ticket) ದರವನ್ನು ದುಪ್ಪಟ್ಟು, ಮೂರು ಪಟ್ಟು ಏರಿಸಿವೆ.
ಗಣೇಶ ಹಬ್ಬಕ್ಕೆ ಖಾಸಗಿ ಬಸ್ ಪ್ರಯಾಣಿಕರಿಗೆ ಬೆಲೆಯೇರಿಕೆ ಶಾಕ್ ನೀಡಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಊರಿಗೆ ತೆರಳಲಿರುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳು ಯದ್ವಾತದ್ವಾ ಟಿಕೆಟ್ ದರ ಏರಿಕೆ ಮಾಡಿ ಬಿಸಿ ಮುಟ್ಟಿಸಿವೆ. ಹಬ್ಬಕ್ಕೆ ಹೋಗಲು ಮುಂಗಡ ಟಿಕೆಟ್ ಬುಕ್ ಮಾಡುವವರಿಗೂ ದರ ಹೆಚ್ಚಳದ ಶಾಕ್ ಬಡಿದಿದೆ. ಗಣೇಶ ಹಬ್ಬದ ಹಿಂದಿನ ದಿನ ಊರಿಗೆ ಹೋಗಬೇಕೆಂದರೆ ಈಗ ಎರಡು-ಮೂರು ಪಟ್ಟು ಹೆಚ್ಚು ಹಣ ಕೊಟ್ಟು ತೆರಳಬೇಕು. ವಾಪಸ್ ಬರುವಾಗಿನ ಬುಕ್ಕಿಂಗ್‌ಗೂ ಈಗಲೇ ಟಿಕೆಟ್ ದರ ಏರಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ 500-700 ರೂ. ಇದ್ದ ಟಿಕೆಟ್ ಬೆಲೆ ಇದೀಗ ಹಬ್ಬದ ಕಾರಣಕ್ಕೆ 1500- 2500 ರೂ.ಗೆ ಹೆಚ್ಚಳವಾಗಿದೆ. ಮಂಗಳೂರು, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಎಲ್ಲ ಪ್ರಮುಖ ನಗರಗಳಿಗೆ ಪ್ರಯಾಣಿಸಲು ದುಬಾರಿ ಬೆಲೆ ಕೊಡಬೇಕಾಗಿದೆ. ಹೆಚ್ಚಿನ ಜನ ಊರಿಗೆ ತೆರಳುವ ಹಿನ್ನೆಲೆಯಲ್ಲಿ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಖಾಸಗಿ ಬಸ್‌ಗಳು ದರ ಏರಿಸಿವೆ. ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಈಗಾಗಲೇ ಊರಿಗೆ ಹೋಗುವ ಮತ್ತು ಬರುವ ಟಿಕೆಟ್‌ಗಳು ಭರ್ತಿಯಾಗಿರುವುದರಿಂದ, ಜನ ಖಾಸಗಿ ಬಸ್ಸುಗಳ ಮೊರೆ ಹೋಗಬೇಕಾಗಿದೆ.
ಆನ್‌ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ. ಯದ್ವಾತದ್ವಾ ದರ ಹೆಚ್ಚಳ ಮಾಡದಂತೆ ಸಾರಿಗೆ ಆಯುಕ್ತರ ಸೂಚನೆ ಇದ್ದರೂ ಖಾಸಗಿ ಬಸ್ಸುಗಳು ಡೋಂಟ್ ಕೇರ್ ಮಾಡಿವೆ.
ಸೆ. 18-19 ಗಣೇಶ ಹಬ್ಬವಿದೆ. ಸೆ. 17ರಂದು ಭಾನುವಾರವಿದೆ. ಹೀಗಾಗಿ ಸೆ. 15ರಂದು ರಾತ್ರಿ ಟೆಕ್ಕಿಗಳು ಮತ್ತಿತರ ಖಾಸಗಿ ಕಂಪನಿ ಉದ್ಯೋಗಿಗಳು, ಸೆ. 16ರಂದು ಕೆಲಸ ಮುಗಿಸಿ ಸರ್ಕಾರಿ, ಖಾಸಗಿ ಕಂಪನಿ ನೌಕರರು ರಾತ್ರಿ ಊರಿಗೆ ಹೋಗಲಿದ್ದಾರೆ. ಹೀಗಾಗಿ ಶುಕ್ರವಾರದಿಂದಲೇ ಜನ ಊರಿಎಗ ಹೊರಟಿದ್ದು, ಅಂದಿನಿಂದಲೇ ದರ ಏರಿಕೆಯಾಗಿದೆ. ಮರಳಿ ಬರುವಾಗಲೂ ಭಾನುವಾರ ರಾತ್ರಿ ಹಾಗೂ ಸೋಮವಾರ ರಾತ್ರಿಯ ಬಸ್ಸು ದರಗಳನ್ನೂ ಒಂದಕ್ಕೆರಡು ಪಟ್ಟು ಏರಿಸಲಾಗಿದೆ.
ಇದನ್ನೂ ಓದಿ: Bus Ticket: ಊರಿಗೆ ತೆರಳಿದ ಪ್ರಯಾಣಿಕರಿಗೆ ಖಾಸಗಿ ಬಸ್ ಬರೆ; ತಿರುಗಿ ಬರಲೂ ಟಿಕೆಟ್ ದರ ದುಪ್ಪಟ್ಟು