Site icon Vistara News

Ganesha Chaturthi : ಜೆ.ಪಿ ನಗರದ ಗಣಪನಿಗೆ 50 ಲಕ್ಷ ಮೌಲ್ಯದ ನಾಣ್ಯ, ಕೋಟ್ಯಂತರ ಮೌಲ್ಯದ ನೋಟಿನಿಂದ ಅಲಂಕಾರ!

JP Nagara Money Ganapati

ಬೆಂಗಳೂರು: ಗಣೇಶನ ಹಬ್ಬ (Ganesha Festival) ಬರುತ್ತಿದೆ. ದೇಶದಾದ್ಯಂತ ಗಣೇಶ ಚತುರ್ಥಿಯನ್ನು (Ganesha Chaturthi) ಸಂಭ್ರಮದಿಂದ ಆಚರಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಗಣೇಶನ ಹಬ್ಬವೆಂದರೆ ಅದು ಸಾರ್ವಜನಿಕ ಉತ್ಸವ (Public Ganeshothsava). ಬಾಲಗಂಗಾಧರ ತಿಲಕರಿಂದಾಗಿ ಸಾರ್ವಜನಿಕ ಸಾಂಸ್ಕೃತಿಕ ಸಂಭ್ರಮವಾಗಿ ಜೀವ ತಳೆದ ಇದನ್ನು ಊರೂರಿನಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಆಚರಿಸಲಾಗುತ್ತದೆ. ಗಣೇಶನ ಮೂರ್ತಿ ಇಟ್ಟು, ಬಗೆಬಗೆಯ ಅಲಂಕಾರ ಮಾಡಿ ಖುಷಿಪಡುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಹೂ, ಹಣ್ಣು, ತರಕಾರಿಗಳಿಂದ ಗಣೇಶನನ್ನು ಅಲಂಕರಿಸಿ ಕಣ್ಣು ತುಂಬಿಕೊಳ್ಳುವುದು ರೂಢಿ. ಆದರೆ, ಬೆಂಗಳೂರಿನ ಜೆ.ಪಿ. ನಗರದ ಗಣೇಶನಿಗೆ (JP Nagara Ganesha) ನಾಣ್ಯ ಮತ್ತು ಕರೆನ್ಸಿಗಳೇ ಅಲಂಕಾರ (Coins and currencies). ಅದೂ ಎಷ್ಟು ಅಂತೀರಾ? ಕೋಟಿಗಟ್ಟಲೆ ಹಣ!

ಪ್ರತಿ ವರ್ಷ ಗಣೇಶ ಹಬ್ಬದ ಪ್ರಯುಕ್ತ ಒಂದಿಲ್ಲೊಂದು ಹೊಸತನದ ಕಾರ್ಯಕ್ರಮ ಹಮ್ಮಿಕೊಳ್ಳುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ (JP Nagar Sri sathyaganapathi Shirdi sai trust)ನಿಂದ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ.

JP Nagar Ganapati

ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್‌, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ಕಟಾಕ್ಷದ ಸ್ಪರ್ಶ ನೀಡುತ್ತಿದೆ.

ದುಡ್ಡು ಎಷ್ಟಿದೆ ಗೊತ್ತಾ?

ಇಲ್ಲಿ ಮೂರ್ತಿಯನ್ನು ಅಲಂಕರಿಸುವ ಹಣದ ಮೊತ್ತ ಕಡಿಯೇನಿಲ್ಲ. ಐವತ್ತು ಲಕ್ಷ ರೂಪಾಯಿ ಮೊತ್ತದ ನಾಣ್ಯಗಳನ್ನು ಬಳಸಲಾಗುತ್ತಿದೆಯಂತೆ. ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಒಂದು ವಾರದ ಹಿಂದೆಯೇ ಆರಂಭವಾಗಿದೆ. 150ಕ್ಕೂ ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ನೋಟುಗಳ ಅಲಂಕಾರದಲ್ಲಿ ನಿರತವಾಗಿದೆ.

JP Nagar Ganapati

ಚಂದ್ರಯಾನವೂ ಇದೆ, ಮೇರಾ ಭಾರತ್‌ ಮಹಾನ್‌ ಕೂಡಾ ಇದೆ

ಕೇವಲ ಹಣದಿಂದ ಅಲಂಕರಿಸುವುದಲ್ಲದೆ, ಬಗೆ ಬಗೆಯ ಥೀಮ್‌ಗಳಿಂದಲೂ ಗಮನ ಸೆಳೆಯಲಿದ್ದಾನೆ ಜೆ.ಪಿ. ನಗರದ ಗಣಪ.

ವಿಕ್ರಂ ಲ್ಯಾಂಡರ್‌, ಚಂದ್ರಯಾನ – 3, ಜೈ ಕರ್ನಾಟಕ, ಜೈ ಜವಾನ್‌ ಜೈ ಕಿಸಾನ್‌, ಮೇರಾ ಭಾರತ್‌ ಮಹಾನ್‌ ಥೀಮ್‌ ಅಳವಡಿಸಿಕೊಂಡಿದ್ದು ಎಲ್ಲರ ಗಮನ ಸೆಳೆಯಲು ಸಿದ್ಧವಾಗುತ್ತಿವೆ.

ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್‌ ರಾಜ್‌ ಮಾತನಾಡಿ, ಐದು, ಹತ್ತು, ಇಪ್ಪತ್ತು ರೂಪಾಯಿ ಮೊತ್ತದ ತಲಾ ಒಂದೂವರೆ ಲಕ್ಷ ನಾಣ್ಯಗಳು, ಐದು, ಹತ್ತು, ಇಪ್ಪತ್ತು, 100, 500 ರೂ ಮೊತ್ತದ ನೋಟುಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಗುತ್ತಿದೆ ಎಂದು ಹೇಳಿದರು.

JP Nagar Ganapati

ನೋಟುಗಳ ಮೌಲ್ಯ ಇನ್ನೂ ನಿಗದಿ ಮಾಡಿಲ್ಲ. ಭಕ್ತಾದಿಗಳು ಗಣೇಶನ ಅಲಂಕಾರಕ್ಕಾಗಿ ಲಕ್ಷಾಂತರ ರೂ ಮೊತ್ತದ ನೋಟುಗಳನ್ನು ಪ್ರತಿನಿತ್ಯ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಬ್ಬದ ವೇಳೆಗೆ ನೋಟುಗಳ ಮೌಲ್ಯ ತಿಳಿಯಲಿದೆ ಎಂದರು.

ಇದನ್ನೂ ಓದಿ: Ganesh Chaturthi: ದೇಶದ ಟಾಪ್‌ 10 ಗಣೇಶ ಪೆಂಡಾಲ್‌ಗಳಿವು, ಇವುಗಳ ವಿಶೇಷ ಏನು?

ನಾಡಿದ್ದು ಸೆಪ್ಟೆಂಬರ್‌ 18ಕ್ಕೆ ಬನ್ನಿ

ಈ ರೀತಿ ದುಡ್ಡಿನಲ್ಲೇ ಅಲಂಕರಿಸಲಾಗಿರುವ ಗಣಪತಿಯನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂದಾದರೆ ನೀವು ನಾಡಿದ್ದು ಸೆಪ್ಟಂಬರ್ 18ರಂದು ಗಣೇಶ ಚತುರ್ಥಿಯಂದು ಇಲ್ಲಿಗೆ ಭೇಟಿ ನೀಡಬೇಕು. ಅಂದು ಬೆಳಗ್ಗೆಯಿಂದಲೇ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಇಡೀ ದಿನ ದೇವರನ್ನು, ವಿವಿಧ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳಬಹುದು.

JP Nagar Ganapati
Exit mobile version