ಬೆಂಗಳೂರು: ಭಾರತ ಶಾಂತಿಪ್ರಿಯ ದೇಶ. ಯಾವ ದೇಶದ ಜಾಗವನ್ನೂ ಒಂದಿಚೂ ಆಕ್ರಮಿಸಿಕೊಳ್ಳಲು ಹೋಗಿಲ್ಲ. ನೆರೆಯ ದೇಶಗಳೊಂದಿಗೆ ಕಾಲುಕೆರೆದು ಜಗಳಕ್ಕಿಳಿದಿಲ್ಲ. ನಾವು ತೊಂದರೆ ಕೊಡುವುದಿಲ್ಲ. ಹಾಗೆಯೇ ತೊಂದರೆ ಕೊಟ್ಟವರನ್ನು ಬಿಡುವುದಿಲ್ಲ. ಇದು ಭಗವದ್ಗೀತೆ ನೀಡಿರುವ ಸಂದೇಶ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನಗರದಲ್ಲಿ ಇಸ್ಕಾನ್ ಆಯೋಜಿಸಿದ್ದ “ಗೀತಾ ಜಯಂತಿʼʼ (Gita Jayanti 2022) ಹಾಗೂ “ಗೀತಾ ದಾನ ಯಜ್ಞ ಮಹೋತ್ಸವʼʼ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಗವಗ್ಗೀತೆಯನ್ನು ನಾವೆಲ್ಲರೂ ಮಾತ್ರವಲ್ಲದೆ ಜಗತ್ತೇ ಒಪ್ಪಿಕೊಂಡಿದೆ. ಮಹಾತ್ಮಾ ಗಾಂಧೀಜಿಯವರು ಇದಕ್ಕೆ ತಾಯಿಯ ಸ್ಥಾನ ನೀಡಿದ್ದರು ಎಂದು ಹೇಳಿದ ಸಚಿವ ರಾಜನಾಥ್ ಸಿಂಗ್, ಗೀತೆ ನಮ್ಮ ಜೀವನದ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ. ಅಂತೆಯೇ ದೇಶದ ಸಮಸ್ಯೆಗಳಿಗೂ ಇದರಲ್ಲಿ ಉತ್ತರವಿದೆ ಎಂದರು. ಭಗವದ್ಗೀತೆಯ ಸಂದೇಶದಂತೆ ಭಾರತ ಯಾವಾಗಲೂ ಶಾಂತಿಯನ್ನೇ ಬೋಧಿಸಿಕೊಂಡು ಬಂದಿದೆ ಎಂದು ವಿವರಿಸಿದರು.
ಸಾವಿರಾರು ವರ್ಷಗಳಿಂದ ರಸಾಯನ ಶಾಸ್ತ್ರ, ಭೌತಶಾಸ್ತ್ರಗಳಲ್ಲಿ ಸೂತ್ರಗಳಿವೆಯೋ ಹಾಗೆಯೇ ಭಗವದ್ಗೀತೆಯೂ ಜೀವನದ ಸೂತ್ರಗಳನ್ನು ಒಳಗೊಂಡಿದೆ. ಗೀತೆಯನ್ನು ಕೇವಲ ಧಾರ್ಮಿಕ ಗ್ರಂಥವಾಗಿ ನೋಡದೆ ಸ್ಫೂರ್ತಿಯ ಸೆಲೆಯಾಗಿ ನೋಡಬೇಕು ಎಂದರು.
ಗೀತೆಯನ್ನು ಸಮರ್ಪಕವಾಗಿ ಅಧ್ಯಯನ ಮಾಡಿದರೆ ಬೇರಾವುದೇ ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಓದುವ ಅಗತ್ಯ ಬೀಳುವುದಿಲ್ಲ. ಹೀಗಾಗಿಯೇ ಇಂದು ಭಗವದ್ಗೀತೆಯು ವಿದೇಶದಲ್ಲಿಯೂ ಜನಪ್ರಿಯವಾಗಿದೆ ಎಂದು ಹೇಳಿದ ಅವರು, ಗೀತಾದಾನ ಯಜ್ಞದ ಮೂಲಕ ಒಂದು ತಿಂಗಳ ಅವಧಿಯಲ್ಲಿ ಒಂದು ಲಕ್ಷ ಭಗವದ್ಗೀತೆಯ ಪ್ರತಿಗಳನ್ನು ವಿತರಿಸುತ್ತಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಜ್ಞಾನ ದಾನಕ್ಕಿಂತ ಮಿಗಿಲಾದ ಮತ್ತೊಂದು ದಾನವಿಲ್ಲ. ಈ ಪುಣ್ಯದ ಕೆಲಸವನ್ನು ಇಸ್ಕಾನ್ ಮಾಡುತ್ತಿದೆ. ಜ್ಞಾನ ದಾನ ಮಾಡುವುದರಿಂದಲೇ ಹೆಚ್ಚುತ್ತದೆ ಎಂದರು.
ಭಗವದ್ಗೀತೆ ದೇವರ ಹಾಡು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಗವದ್ಗೀತೆಯನ್ನು ದೇವರ ಹಾಡು ಎಂದು ಬಣ್ಣಿಸಿದರು. “ದೇವರ ಹಾಡು ಎಂದರೆ ನಾವೆಲ್ಲಾ ಭಕ್ತಿಯಿಂದ ಹಾಡುತ್ತೇವೆ. ಸೃಷ್ಟಿಕರ್ತ ಸೃಷ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹಾಡಿದ್ದಾನೆ. ಹೀಗಾಗಿಯೇ ಈ ಗೀತೆಯಲ್ಲಿ ಎಲ್ಲವೂ ಅಡಗಿದೆ. ಇದು ವಿಜ್ಞಾನ ಹಾಗೂ ಆಧ್ಯಾತ್ಮಿಕವಾಗಿದೆʼʼ ಎಂದು ವಿವರಿಸಿದರು.
ಎಲ್ಲಾ ಧರ್ಮಗಳ ಗ್ರಂಥಗಳ ಸಾರ ಮಾನವನ ಅಭಿವೃದ್ಧಿ. ಒಂದೇಡೆ ನಾಶ ಮತ್ತೊಂದೆಡೆ ಮನುಕುಲದ ರಕ್ಷಣೆ ಸಂದರ್ಭದಲ್ಲಿ ಶ್ರೀಕೃಷ್ಣ ಈ ಗೀತೆಯನ್ನು ಬೋಧನೆ ಮಾಡಿದ್ದರು. ಭಗವದ್ಗೀತೆ ಓದಿದರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದ ಅವರು, ಭಗವದ್ಗೀತೆ ಓದುವವರು, ಪಡೆಯುವರು, ಹಂಚುವವರು ಎಲ್ಲರೂ ಧನ್ಯರು. ಈ ಪುಣ್ಯದ ಕೆಲಸವನ್ನು ಇಸ್ಕಾನ್ ಮಾಡುತ್ತಿದೆ ಎಂದರು.
ಎಲ್ಲಾ ಧರ್ಮಗಳ ತಾಯಿ
ಭಗವದ್ಗೀತೆ ಎಲ್ಲ ಧರ್ಮಗಳ ತಾಯಿ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದು ಪ್ರಪಂಚಕ್ಕೆ ಭಾರತದ ಅದ್ಭುತ ಕೊಡುಗೆ. ಇದರಲ್ಲಿ ಎಲ್ಲರ ಸಮಸ್ಯೆಗಳಿಗೆ ಪರಿಹಾರವಿದೆ. ಇದನ್ನು ಜಗತ್ತಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ. ಈ ಮಹಾನ್ ಕಾರ್ಯಕ್ಕೆ ನಮ್ಮ ಬೆಂಬಲವಿದೆ ಎಂದರು.
ವಸಂತಪುರದಲ್ಲಿರುವ ಇಸ್ಕಾನ್‌ನ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಇಸ್ಕಾನ್ ಅಧ್ಯಕ್ಷ ಶ್ರೀ ಮಧುಪಂಡಿತ ದಾಸ್ ಭಾಗವಹಿಸಿದ್ದರು. ದೇವಾಲಯದ ಸಂಕೀರ್ಣದಲ್ಲಿ ಮಕ್ಕಳು ಮತ್ತು ವಯಸ್ಕರರು ವಿವಿಧ ಗುಂಪುಗಳಲ್ಲಿ ಗೀತೆಯ ಶ್ಲೋಕಗಳನ್ನು ಪಠಿಸಿದರು. ಖ್ಯಾತ ಭಕ್ತಿ ಗಾಯಕ ವಿದ್ಯಾಭೂಷಣ ಅವರ ಭಗವದ್ಗೀತೆ ಪಠಣದ ಮಲ್ಟಿಮೀಡಿಯಾ ವಿಡಿಯೋ ಪ್ರಸ್ತುತಿ ಜೊತೆಗೆ ಆರು ಭಾಷೆಗಳಲ್ಲಿ ಅನುವಾದನ್ನು ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ | Virat Kohli | ವಿರಾಟ್ ಕೊಹ್ಲಿಯ ಇನಿಂಗ್ಸ್ ಭಗವದ್ಗೀತೆಯಂತೆ ಇತ್ತು ಎಂದು ಗ್ರೆಗ್ ಚಾಪೆಲ್