Site icon Vistara News

ಗೋ ಸಂಪತ್ತು: ತುಪ್ಪದಿಂದ ಯಾವೆಲ್ಲಾ ಔಷಧಿ ತಯಾರಿಸುತ್ತಾರೆ ನೋಡಿ!

go sampattu column by shylesh holla about benefits of cow ghee according to Ayurveda

#image_title

ದೇಶದಲ್ಲೇ ಅತಿ ಹೆಚ್ಚು ಗೋಸಂಬಂಧಿ ಔಷಧಿಗಳು ಹಾಗೂ ಉತ್ಪನ್ನಗಳಿಗೆ ಪೇಟೆಂಟ್ ಪಡೆದಿರುವ ಮಹಾರಾಷ್ಟ್ರದ ನಾಗಪುರದಲ್ಲಿರುವ ಗೋವಿಜ್ಞಾನ ಅನುಸಂಧಾನ ಕೇಂದ್ರವು (http://govigyan.com) ನಿರಂತರವಾಗಿ ಗೋವಿನ ಉತ್ಪನ್ನಗಳಲ್ಲಿರುವ ಅಂಶಗಳನ್ನು ಹೆಕ್ಕಿ ತೆಗೆಯುವ ಮೂಲಕ ಗೋವನ್ನು ಆರ್ಥಿಕ ಮೂಲವಾಗಿ ತೋರಿಸುವ ಕಾರ್ಯವನ್ನು ಮಾಡುತ್ತಿದೆ.

ವಿಶೇಷವಾಗಿ ತುಪ್ಪದ ಕುರಿತಂತೆ ಸಾಕಷ್ಟು ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿ ಅದರಲ್ಲಿರುವ ಒಂದಷ್ಟು ಔಷಧೀಯ ಗುಣಗಳನ್ನು ಬಹಿರಂಗ ಪಡಿಸುವುದಷ್ಟೇ ಅಲ್ಲದೆ, ಅದರಿಂದ ಇಂದಿನ ದಿನಗಳಲ್ಲಿ ಕಾಡುತ್ತಿರುವ ಕೆಮ್ಮು, ಜ್ವರದಂತಹ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೂ ಔಷಧಿಯನ್ನು ಸಿದ್ಧಪಡಿಸುತ್ತಿದೆ.
ಸಹಜವಾಗಿ ಮೇವನ್ನು ತಿಂದು, ಹೊರಗಡೆ ಮುಕ್ತವಾಗಿ ಓಡಾಡಿಕೊಂಡು ಯಾವುದೇ ಇಂಜೆಕ್ಷನ್ ಇಲ್ಲದೇ ಅಲೋಪತಿ ಔಷಧಿಯನ್ನು ತೆಗೆದುಕೊಳ್ಳದ ಗೋವುಗಳ ಹಾಲಿನಿಂದ ಪಾರಂಪರಿಕವಾಗಿ ತಯಾರಿಸಲಾದ ತುಪ್ಪದಿಂದ ಇಲ್ಲಿ ಪ್ರಯೋಗಗಳನ್ನು ನಡೆಸಲಾಗಿದ್ದು, ಅಂತಹ ಗೋವುಗಳಿಂದಲೇ ಇಂದಿಗೂ ಔಷಧಿಗಳನ್ನು ತಯಾರಿಸಲಾಗುತ್ತಿದೆ.

ಪ್ರಾರಂಭದಲ್ಲಿ ಕುಡಿತದ ಅಭ್ಯಾಸವಿರುವ ಏಳು ಜನರನ್ನು ಮತ್ತು ಕುಡಿತದ ಅಭ್ಯಾಸವೇ ಇಲ್ಲದ ಸುಮಾರು 10 ಜನರ ಮೇಲೆ ತುಪ್ಪದಿಂದಾಗುವ ಔಷಧೀಯ ಪ್ರಯೋಜನಗಳ ಕುರಿತಂತೆ ಅಭ್ಯಸಿಸಲು ಪ್ರಯೋಗವನ್ನು ನಡೆಸಲಾಗಿತ್ತು. ಅಂತಿಮ ಹಂತದಲ್ಲಿ ಈ ಎರಡು ವಿಭಾಗದ ಜನರಲ್ಲಿ ತುಪ್ಪವು ಧನಾತ್ಮಕ ಪರಿಣಾಮವನ್ನು ಬೀರಿದ್ದು ಸಾಬೀತಾಯಿತು. ಈ ಎರಡು ವಿಭಾಗದ ಜನರಲ್ಲೂ ಇದ್ದ ಸಾಕಷ್ಟು ದೇಹ ಸಂಬಂಧಿ ಕಾಯಿಲೆಗಳು ದೂರವಾಗಿದ್ದವು. ಇದರಿಂದ ತುಪ್ಪವು ಆಲ್ಕೋಹಾಲ್‌ಗೂ ಸೆಡ್ಡು ಹೊಡೆದು ದೇಹವನ್ನು ಸ್ವಾಸ್ಥ್ಯವಾಗಿಸಿದ್ದು ರುಜುವಾತಾಗಿತ್ತು.

ವಯಸ್ಸಾದವರಿಗೆ ದಿವ್ಯ ಔಷಧಿ

2019ರ ಒಂದು ಸಮೀಕ್ಷೆಯಂತೆ ಪ್ರಪಂಚದಲ್ಲಿರುವ ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು7 ಬಿಲಿಯನ್ ಅಂದರೆ 700 ಕೋಟಿಗೂ ಅಧಿಕ ಜನರು 65 ವರ್ಷಕ್ಕೂ ಹೆಚ್ಚಿನವರಾಗಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಇನ್ನು 850 ಕೋಟಿಗೂ ಹೆಚ್ಚಾಗಲಿದೆಯಂತೆ. ಇಂತಹ ಸಂದರ್ಭದಲ್ಲಿ ಭಾರತೀಯ ಗೋವಿನ ತುಪ್ಪವು ಮುಂಬರುವ ದಿನಗಳಲ್ಲಿ ಅತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಲಾಗುತ್ತಿದೆ. ಕಾರಣ ತುಪ್ಪದಲ್ಲಿರುವ ಸಾಕಷ್ಟು ಅಂಶಗಳು ವಯಸ್ಸಾದಂತೆ ಕಾಡುವ ಬಹುತೇಕ ಕಾಯಿಲೆಗಳಿಗೆ ರಾಮಬಾಣವಾಗಿ ಪರಿಣಮಿಸುವುದೇ ಆಗಿದೆ.

ಹೀಗಾಗಿ ಇಂದು ವಿಶ್ವದಾದ್ಯಂತ ಈ ಕುರಿತಂತೆ ಚರ್ಚೆಗಳು ನಡೆದು, ತುಪ್ಪವನ್ನು ಔಷಧೀಯ ರೂಪದಲ್ಲಿ ಬಳಸುವ, ಇಲ್ಲವೇ ಈಗಿರುವ ಔಷಧಿಗಳೊಂದಿಗೆ ಬೆರೆಸುವ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲದ ಭಾರತೀಯರು ಗೋಹತ್ಯೆಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ನೆರವಾಗುತ್ತಿರುವುದಷ್ಟೇ ಅಲ್ಲದೆ, ಈ ಕುರಿತಂತೆ ಲಘುವಾಗಿ ಮಾತಾಡುತ್ತಾ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ದುರ್ದೈವವೇ ಸರಿ.

ಆಯುರ್ವೇದದ ಎಲ್ಲಾ ಅಷ್ಟಾಂಗಗಳಲ್ಲೂ ತುಪ್ಪವನ್ನು ಔಷಧೀಯ ರೂಪದಲ್ಲಿ ಬಳಸುವುದರ ಕುರಿತಂತೆ ಮತ್ತು ಪಥ್ಯದ ಕುರಿತಂತೆ ವಿವರಿಸಲಾಗಿದೆ. ಹೀಗಾಗಿ ಇಂದು ಆಯುರ್ವೇದಲ್ಲಿ ತುಪ್ಪದ ಔಷಧೀಯ ಗುಣಗಳ ಕುರಿತಂತೆ ಹೇಳಲಾಗಿರುವ ಅಷ್ಟು ವಿಚಾರಗಳನ್ನು ನಮಗಿಂತ ವಿದೇಶಿಯರು ಹೆಚ್ಚಾಗಿ ಅಭ್ಯಸಿಸುವ ಮೂಲಕ ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗುತ್ತಿದ್ದಾರೆ. ಯಾವ ಕಾಯಿಲೆಗೆ ಯಾವ ರೀತಿಯ ತುಪ್ಪವನ್ನು ಬಳಸಬೇಕು ಮತ್ತು ಹೇಗೆ ಬಳಸಬೇಕು ಎಂಬುದಾಗಿ ಹೇಳಿರುವುದರ ಕುರಿತಂತೆ ಪ್ರಯೋಗಗಳು ವಿದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿವೆ.

ಇಂತಹ ತುಪ್ಪಕ್ಕೆ ಅಭಿದಾರ, ಜೀವನಿತಾಜ್, ಆಧಾರ್, ಸರ್ಪಿ, ಹವಿ ಮತ್ತು ಪವಿತ್ರ ಎಂಬ ಸಮಾನಾರ್ಥಕ ಪದಗಳಿವೆ. ಸಂಸ್ಕೃತದಲ್ಲಿ ತುಪ್ಪವನ್ನು ಘೃತ ಎಂದು ಕರೆಯಲಾಗುತ್ತದೆ. ಬಹಳ ಹಿಂದಿನಿಂದಲೂ ಅಂದರೆ ವೇದ ಕಾಲದಿಂದಲೂ ತುಪ್ಪವನ್ನು ಮಾನವ ಆಹಾರದ ರೂಪದಲ್ಲಿ ಇಲ್ಲವೇ ಔಷಧೀಯ ರೂಪದಲ್ಲಿ ಬಳಸುತ್ತಿದ್ದುದರ ಕುರಿತಂತೆ ಮಾಹಿತಿ ದೊರೆಯುತ್ತದೆ. ಅಂತೆಯೇ ಆಯುರ್ವೇದಲ್ಲಿ ತುಪ್ಪವನ್ನು ಸಪ್ತಧಾತು ವರ್ಧಕ ಮತ್ತು ಓಜೋ ವರ್ಧಕ ಎಂಬುದಾಗಿ ಹೇಳುತ್ತಾ ದಿನ ಬಳಕೆಯಲ್ಲಿ ತುಪ್ಪವನ್ನು ಬಳಸುವಂತೆ ಹೇಳಲಾಗಿದೆ.

ನಿರಂತರ ಜ್ವರದಿಂದಾಗುವ ನಿಶಕ್ತಿಗೆ ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆಗೆ ಎರಡು ಚಮಚ ದೇಶಿ ಗೋವಿನ ತುಪ್ಪವನ್ನು ಹಾಲಿನೊಂದಿಗೆ ತೆಗೆದುಕೊಳ್ಳಬೇಕು ಎಂಬುದಾಗಿ ವೈದ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಮೂಗಿನ ಮೂಲಕ ಸ್ವಲ್ಪ ಬಿಸಿಯಾದ ತುಪ್ಪವನ್ನು ಎರಡೆರಡು ಹನಿ ಹಾಕಿಕೊಳ್ಳುವುದರಿಂದ ಇಂದ್ರಿಯ ಅಂಗಗಳು ಚುರುಕುಗೊಳ್ಳುವುದು ಕಂಡುಬಂದಿದೆ. ಇದರೊಂದಿಗೆ ಕೂದಲು ಉದರುವ ಸಮಸ್ಯೆ,. ತಲೆ ನೋವು ಸೇರಿದಂತೆ ಹಲವು ಸಮಸ್ಯೆಗಳು ದೂರವಾಗುತ್ತವೆ.

ಕಣ್ಣಿಗೆ ಒಂದೆರಡು ಹನಿ ಹಾಕುವುದರಿಂದ ಕಣ್ಣಿನ ಉರಿ ಕಡಿಮೆಯಾಗುವುದಷ್ಟೇ ಅಲ್ಲದೆ ದೃಷ್ಟಿಯೂ ಹೆಚ್ಚುತ್ತದೆ. ಉತ್ತಮವಾದ ನಿದ್ರೆಯನ್ನು ಪಡೆಯಲು ಪ್ರತಿ ನಿತ್ಯ ಒಂದು ಚಮಚ ದೇಶಿ ಗೋವಿನ ತುಪ್ಪವನ್ನು ಸೇವಿಸುವುದು ಉತ್ತಮ. ತುಪ್ಪದ ಲೇಪನದೊಂದಿಗೆ ಎಲ್ಲಾ ರೀತಿಯ ಗಾಯಗಳು ವಾಸಿಯಾಗುವುದು ಕಂಡುಬಂದಿದೆ. ಜೀರ್ಣಶಕ್ತಿ ಹೆಚ್ಚಿಸುವ ತುಪ್ಪವು ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ಅಷ್ಟೂ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿ ಯಾದುದು ಎನ್ನಲಾಗಿದೆ.

ಹತ್ತಾರು ಮಾದರಿಯ ಔಷಧ

ಬಹಳ ಹಿಂದಿನಿಂದಲೂ ನಾನಾ ಕಾಯಿಲೆಗಳಿಗೆ ತಕ್ಕಂತೆ ಪ್ರಮುಖವಾಗಿ ಸುಮಾರು ಹತ್ತಕ್ಕೂ ಹೆಚ್ಚು ಮಾದರಿಯ ಔಷಧಿ ತುಪ್ಪವನ್ನು ನಮ್ಮ ವೈದ್ಯಾಚಾರ್ಯರು ಸಿದ್ಧಪಡಿಸಿ ಚಿಕಿತ್ಸೆ ನೀಡುತ್ತಿದ್ದುದು ಕಂಡುಬರುತ್ತದೆ.

1. ಅಷ್ಟಮಂಗಲ ಘೃತ : ಆಯುರ್ವೇದದಲ್ಲಿ ಗೋವಿನ ತುಪ್ಪದೊಂದಿಗೆ ಕೆಲವೊಂದು ಔಷಧೀಯ ಸಸ್ಯಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿದ ಈ ತುಪ್ಪವನ್ನು ಸೇವಿಸುವುದರಿಂದ ಮಕ್ಕಳಲ್ಲಿ ಗ್ರಹಿಸುವ ಶಕ್ತಿ ಹೆಚ್ಚಾಗುತ್ತದೆ. ಈ ಕುರಿತಂತೆ ಸುಮಾರು 22 ಮಕ್ಕಳ ಮೇಲೆ ನಾಲ್ಕು ತಿಂಗಳು ಪ್ರಯೋಗವನ್ನು ನಡೆಸಿದಾಗ, ಇದು ಸತ್ಯವೆಂಬುದು ರುಜುವಾತಾಗಿದೆ. ಇದರ ಸೇವನೆಯಿಂದ ಮಕ್ಕಳು ಸೇರಿದಂತೆ ದೊಡ್ಡವರಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುವ ತಲೆನೋವು, ಮೈಗ್ರೇನ್ ಸಹ ಶಮನವಾಗುವುದು ಕಂಡುಬಂದಿದೆ.

2. ಪಂಚತಿಕ್ತ ಘೃತ : ಇದರ ಸೇವನೆಯಿಂದ ವಾತಾ, ಪಿತ್ತ ಮತ್ತು ಕಫದ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಇದರೊಂದಿಗೆ ಸೋಂಕಿನ ಗಾಯಗಳು, ಹುಳದ ಸಮಸ್ಯೆಗಳು ಸೇರಿದಂತೆ ಐದು ರೀತಿಯ ಕೆಮ್ಮು ಮತ್ತು ಅಸ್ತಮ ಹತೋಟಿಗೆ ಬರುವುದಷ್ಟೇ ಅಲ್ಲದೆ ಕುಷ್ಠ ರೋಗವು ನಿಯಂತ್ರಣಕ್ಕೆ ಬರುವುದು ಸಾಬೀತಾಗಿದೆ.

3. ಫಲ ಘೃತ : ಇದರ ಸೇವನೆಯಿಂದ ಗರ್ಭ ಕೋಶದ ಸಮಸ್ಯೆ, ವೀರ್ಯ ಉತ್ಪತ್ತಿಯ ಸಮಸ್ಯೆ ಹಾಗೂ ಕೆಲವೊಂದು ಸ್ತೀ ಸಂಬಂಧಿ ದೋಷಗಳು ನಿಯಂತ್ರಣಕ್ಕೆ ಬರುತ್ತವೆ.

4. ಜಟ್ಯಾದಿ ಘೃತ : ಇದರ ಸೇವನೆಯಿಂದ ಚರ್ಮ ಸಂಬಂಧಿ ಕಾಯಿಲೆಗಳು, ಸೋಂಕಿನ ಗಾಯಗಳು, ಕೀವು ತುಂಬಿದ ಗಾಯಗಳು, ಮೂಲವ್ಯಾಧಿ ಸೇರಿದಂತೆ ಹತ್ತು ಹಲವು ಕಾಯಿಲೆಗಳು ಶಮನವಾಗುವುದು ಸಾಬೀತಾಗಿದೆ. ಕೆಲವು ವರ್ಷಗಳ ಹಿಂದೆ ಇಲಿಗಳ ಮೇಲೆ ಪ್ರಯೋಗ ನಡೆಸಿದಾಗ ಇದು ಅತ್ಯಂತ ಪರಿಣಾಮಕಾರಿ ಫಲಿತಾಂಶ ನೀಡಿರುವುದು ರುಜುವಾತಾಗಿದೆ.

5. ಅರ್ಶೋರಮ್ ಮರ್‌ಹಮ್ : ಇದರ ಸೇವನೆಯನ್ನು ವೈದ್ಯರ ಆದೇಶಾನುಸಾರವೇ ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ಇದನ್ನು ಮುಂಜಾನೆ ಸಿದ್ಧಪಡಿಸಿ ಗಾಯದ ಮೇಲೆ ಲೇಪಿಸಿ ರಾತ್ರಿ ಇಡೀ ಬಿಡುವುದರಿಂದ ಉತ್ತಮ ಫಲಿತಾಂಶ ದೊರೆತಿದೆ. ಹಾಗೆಯೇ ಸೈನಸ್ ಸಮಸ್ಯೆಗೆ ಉತ್ತಮ ಫಲಿತಾಂಶ ದೊರೆತಿರುವುದು ಕಂಡುಬಂದಿದೆ.

6. ಚಂದನಾಡಿ ಯಮಕ್ : ಇದನ್ನು ಸಹ ವೈದ್ಯರ ಆದೇಶಾನುಸಾರವೇ ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ಇದು ಸುಟ್ಟ ಗಾಯಗಳಿಗೆ, ಸೋಂಕಿತ ಗಾಯಗಳಿಗೆ ಮತ್ತು ಆಘಾತಕಾರಿ ಗಾಯಗಳಿಗೆ ಪರಿಣಾಮಕಾರಿಯಾದುದು ಎನ್ನಲಾಗಿದೆ. ಈ ತುಪ್ಪದ ಪರಿಣಾಮಕಾರಿ ಬಳಕೆಯ ಕುರಿತಂತೆ ಇಂದಿಗೂ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಹಿಂದೆ ಇಲಿಗಳ ಮೇಲೆ ನಡೆಸಿದ ಎಲ್ಲಾ ಪ್ರಯೋಗಗಳು ಯಶಸ್ವಿಯಾಗಿವೆ.

7. ಹಿಂಗ್ವದ್ಯ ಘೃತ : ಇದು ಸಂಧಿವಾತ, ಹಸಿವಾಗದೇ ಇರುವುದು, ಹೊಟ್ಟೆ ಹುಳ ಸೇರಿದಂತೆ ಹಲವು ಸಮಸ್ಯೆಗಳಿಗೆ ಮತ್ತು ವಾಯು ಸಂಬAಧಿ ಸಮಸ್ಯೆಗಳಿಗೆ ಇದು ಪರಿಣಾಮಕಾರಿಯಾದುದು ಎಂಬುದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಸ್ಪಷ್ಟವಾಗಿದೆ.

8. ಶಟ್ದ್ವಾತ್‌ ಘೃತ : ಇದರ ಸೇವನೆಯಿಂದ ರಕ್ತ ಮತ್ತು ಪಿತ್ತ ಸಂಬಂಧಿ ಕಾಯಿಲೆಗಳು ದೂರವಾಗಿ, ಕಾಲು ಒಡೆಯುವುದು ಹಾಗೂ ಒಣ ಚರ್ಮದ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

9. ಅರ್ಜುನ್ ಘೃತ : ಹೃದಯ ಸಂಬಂಧಿತ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇದರ ಸೇವನೆ ಅತಿ ಸೂಕ್ತ. ಹಾಗೆಯೇ ಉಸಿರಾಟದ ಸಮಸ್ಯೆ ಮತ್ತು ಅತಿ ಭಯದ ಸಮಸ್ಯೆಯೂ ಇದರಿಂದ ದೂರವಾಗುತ್ತದೆ.

10. ಲಘು ಸುತ್‌ಶೇಖರ್ ರಸ್ : ಇದರ ಸೇವನೆಯಿಂದ ಮೈಗ್ರೇನ್ ಸೇರಿದಂತೆ ಕಾಡುವ ಹಲವು ತಲೆ ನೋವಿನ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: ಗೋ ಸಂಪತ್ತು: ತುಪ್ಪದ ವೈಜ್ಞಾನಿಕ ಮಹತ್ವ, ಔಷಧೀಯ ಗುಣ ನಿಮಗೆ ಗೊತ್ತೇ?

Exit mobile version