ರಾಜಗುರು ಬಿ.ಎಸ್.ದ್ವಾರಕನಾಥ್
ಗುರುವಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನವಿದೆ. ಗುರು ಶಬ್ದದೊಳಗಿನ ‘ಗ’ಕಾರ ಸಿದ್ಧಿದಾಯಕವಾಗಿ ದೆಯಲ್ಲದೆ, ಇದರಲ್ಲಿ ಗಣೇಶ, ಅಗ್ನಿ, ವಿಷ್ಣು, ಗುರು ಈ ನಾಲ್ಕು ದೈವಿ ಶಕ್ತಿಗಳು ಸಮ್ಮಿಳಿತಗೊಂಡಿವೆ. ‘ಉ’ ಕಾರವು ವಿಷ್ಣುವಿನ ಅವ್ಯಕ್ತ ಸ್ವರೂಪವಾಗಿದೆ. ‘ರ’ಕಾರಕ್ಕೆ ಶಾಪವನ್ನು ನಾಶಮಾಡುವವನು ಎಂಬ ಅರ್ಥವಿದೆ. ಶ್ರೀ ಗುರುಚರಿತ್ರೆಯ ಪ್ರಕಾರ ಗುರು ಶಬ್ದದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಅಗ್ನಿ, ಶಾಙ್ರ್ಮಧರ ಇವರೆಲ್ಲರೂ ಅಡಕವಾಗಿರುತ್ತಾರೆ.
ವಿವೇಕ, ಧರ್ಮ, ಭಕ್ತಿ, ವೈರಾಗ್ಯ ಇವುಗಳಿಗೆಲ್ಲಾ ಗುರುವೇ ಮಾರ್ಗದರ್ಶಕನಾಗಿರುವುದರಿಂದ ತ್ರಿಮೂರ್ತಿ ಹಾಗೂ ಸಕಲ ದೇವತೆಗಳಿಗಿಂತಲೂ ಗುರುವೇ ಹೆಚ್ಚಿನವನು. ಅವನನ್ನು ಪೂಜಿಸುವುದರಿಂದ,ಅನುಸರಿಸುವುದರಿಂದ ಸಕಲ ಸಿದ್ಧಿಗಳು ಸುಲಭವಾಗಿ ನೆರವೇರುವವು.
ಗುರುಃ ಪಿತಾಗುರುರ್ ಮಾತಾ| ಗುರುದೇವ ಪರಃಶಿವಃ|
ಶಿವೇರುಷ್ಟೇ ಗುರುಸ್ತ್ರಾತಾಗುರೌರುಷ್ಟೇ ನ ಕಶ್ಚನ ||
ಅಂದರೆ ಗುರುವೇ ತಂದೆ, ಗುರುವೇ ತಾಯಿ, ಗುರುವೇ ಪರಶಿವನ ಸಗುಣ ಸ್ವರೂಪನು. ಒಂದು ವೇಳೆ ಶಿವನೇ ಸಿಟ್ಟಾದರೂ ಕೂಡ ಗುರು ಅವನನ್ನು ರಕ್ಷಿಸುವನು. ಆದರೆ ಗುರುವು ಕೋಪಗೊಂಡರೆ ಅವನನ್ನು ಯಾರೂ ರಕ್ಷಿಸಲಾರರು. ಗುರು ನಿಜವಾಗಿ ಬ್ರಹ್ಮನು, ರುದ್ರನು, ಮಹಾವಿಷ್ಣುವೂ ಆಗಿದ್ದಾನೆ. ಒಟ್ಟಾರೆ ಪರಮಾತ್ಮನ ಸ್ವರೂಪ. ಗುರುವನ್ನು ಅಚಲ ನಿಷ್ಠೆಯಿಂದ ನಂಬಿದರೆ ಸಕಲ ವರಗಳನ್ನು ದಯಪಾಲಿಸುವನು. ಗುರು ಒಲಿದರೆ, ಹರಿಹರರೂ ಪ್ರಸನ್ನರಾಗುತ್ತಾರೆ.
ಮಹಾಗುರು ಶ್ರೀ ಶಂಕರಾಚಾರ್ಯರು ʼಶ್ರೀ ಗುರುವಾಷ್ಟಕʼ ದಲ್ಲಿ ಹೀಗೆಂದಿದ್ದಾರೆ;
ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರುಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||1॥
ಇದರ ಅರ್ಥ ತಾನು ಸುಂದರನಾಗಿದ್ದು, ತನ್ನ ಪತ್ನಿಯೂ ಸುಂದರಿ ಯಾಗಿದ್ದು, ತನ್ನ ಕೀರ್ತಿ ಜಗದಗಲ ಹರಡಿದ್ದು, ಸಂಪತ್ತು ಮೇರು ಪರ್ವತದಷ್ಟಿದ್ದರೂ. ಏನಿದ್ದರೇನು ಏನು ಫಲ!? ಮನಸ್ಸು ಗುರು ಪದಕಮಲದಲ್ಲಿ ಶರಣಾಗದಿದ್ದರೆ ಫಲವೇನು? ಎಂದಾಗಿದೆ. ಶಂಕರ ಭಗವತ್ಪಾದರು ಈ ಅಷ್ಟಕದಲ್ಲಿ ಬಹಳ ಸುಂದರಾವಾಗಿ ಗುರು ಮಹಿಮೆಯನ್ನು ಹೇಳಿದ್ದಾರೆ.
ರಾಮಾಯಣದಲ್ಲಿ ರಾವಣನನ್ನು ಕೊಲ್ಲಲು ಗುರು ವಸಿಷ್ಠರ ಮಾರ್ಗದರ್ಶನವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಗುರುಗಳ ಅನುಗ್ರಹವಿಲ್ಲದೆ, ನಮ್ಮಿಂದಯಾವ ಸಾಧನೆಯೂ ಆಗದು. ಇಂದಿಗೂ ನಮ್ಮದೇಶವನ್ನು ಕಾಯುತ್ತಿರುವುದೇ ನಮ್ಮ ಗುರು ಪರಂಪರೆ. ಗುರು ವಿದ್ಯಾಕಾರಕ, ಸನ್ನಡತೆಯನ್ನು ಹೇಳಿಕೊಡುವವನು, ಅನುಗ್ರಹ ಮಾಡುವವನು. ಶ್ರೀ ವೇದವ್ಯಾಸರು ಮೊದಲ ಗುರುಗಳು. ಅವರ ಜಯಂತಿಯೇ ಗುರು ಪೂರ್ಣಿಮೆ.
ವೇದವ್ಯಾಸರು ಮಹಾತ್ಮರಾದ ಪರಾಶರ ಮುನಿಗಳ ಕೃಪೆಯಿಂದ ಸತ್ಯಾವತಿ ಗರ್ಭದಲ್ಲಿ ಜನಿಸಿದರು. ಹುಟ್ಟಿದ ಕೂಡಲೇ ಅಳುವುದಕ್ಕೆ ಬದಲಾಗಿ ಸತ್ಯವತಿ ಮುಂದೆ ಕೈ ಜೋಡಿಸಿ ʼಮಾತೃದೇವೋಭವʼ ಎಂದು ಕೈಮುಗಿದಿದ್ದರಂತೆ. ವ್ಯಾಸರು ವೇದವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದರಿಂದ ಅವರಿಗೆ ವೇದವ್ಯಾಸ ಎಂದೂ, ಕಪ್ಪುವರ್ಣದವರಾಗಿ ಯಮುನಾ ನದಿ ದ್ವೀಪದಲ್ಲಿ ಹುಟ್ಟಿದುದರಿಂದ ಕೃಷ್ಣದೈಪಾಯನ ಎಂದೂ, ಬದರಿಕಾಶ್ರಮದಲ್ಲಿ ನೆಲಸಿದುದರಿಂದ ಬಾದರಾಯಣ ಎಂದೂ, ಸತ್ಯವತಿಗೆ ವಾಸವಿ ಎಂಬ ಹೆಸರಿದ್ದು ವಾಸವಿಯ ಮಗನಾದ್ದರಿಂದ ವಾಸವೇಯ ಎಂದೂ ಹೆಸರಿದೆ. ಬ್ರಹ್ಮರ್ಷಿ ವೇದವ್ಯಾಸರು ಮಹಾಭಾರತದ ರಚನಾಕಾರರು ಮಾತ್ರವಲ್ಲದೆ, ೧೮ ಮಹಾ ಪುರಾಣಗಳನ್ನೂ ಬರೆದಿದ್ದಾರೆ.
ಗುರು ಪೂರ್ಣಿಮೆಗೆ ವ್ಯಾಸ ಜಯಂತಿ ಎಂದೇ ಕರೆಯುತ್ತಾರೆ. ಗುರು ಪೂರ್ಣಮೆಯ ಮೂಲ ಉದ್ದೇಶವೇ ಆತ್ಮಶೋಧನೆ. ಯಾರು ಮನದ ಅಂಧಃಕಾರ ಕಳೆಯಬಲ್ಲರೋ ಅವರೇ ನಿಜವಾದ ಗುರು. ಸಾಮಾನ್ಯವಾಗಿ ಜ್ಞಾನ ಎಂದರೆ ವಿದ್ಯೆ ಎಂದು ಅರ್ಥೈಸಿ ಕೊಳ್ಳುವವರೇ ಹೆಚ್ಚು. ಯಾರು ಜ್ಞಾನವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅವರೇ ನಿಜವಾದ ಗುರು.
ಎಲ್ಲರಿಗೂ ಗೊತ್ತಿರುವ ವಿಷಯ ಎಂದರೆ ಮಹಾಭಾರತದ ಯುದ್ಧ ಆರಂಭವಾದಾಗ ತಮ್ಮವರ ಮೇಲೇ ಯುದ್ಧ ಮಾಡಬೇಕಲ್ಲ ಎಂದು ಅರ್ಜುನ ಮರುಗುತ್ತಾನೆ. ತನ್ನ ಸಾರಥಿಯಾಗಿದ್ದ ಶ್ರೀಕೃಷ್ಣನ ಮುಂದೆ ತನ್ನ ಅಸಹಾಯಕ ಸ್ಥಿತಿಯನ್ನು ತೋಡಿಕೊಳ್ಳುತ್ತಾನೆ. ಸಂದಿಗ್ಧ ಸನ್ನಿವೇಶದಿಂದ ಪಾರುಮಾಡು ಎಂದು ಕೇಳಿಕೊಳ್ಳುತ್ತಾನೆ. ಶ್ರೀಕೃಷ್ಣ ಅರ್ಜುನನಿಗೆ ‘ಅಭ್ಯಾಸಂತು ಕೌಂತೇಯ ವೈರಾಗ್ಯೇನ ಚ ಗೃಹ್ಯತೇ’ ಅಂದರೆ ಸತತ ಸಾಧನೆ ಮಾಡು ಎಂದು ತಿಳಿಹೇಳುತ್ತಾನೆ. ಆ ಸಾಧನೆಯೇ ಗೊಂದಲ ಸ್ಥಿತಿಯಿಂದ ಹೊರಬರುವ ಮಾರ್ಗ ತೋರಿಸುತ್ತದೆ ಎಂದು ಮಾರ್ಗದರ್ಶನ ನೀಡುತ್ತಾನೆ. ಹೀಗೆ ಗುರುವಿನ ಮಾರ್ಗದರ್ಶನದಲ್ಲಿ ಜೀವನದುದ್ದಕ್ಕೂ ಸತತ ಸಾಧನೆ ಮಾಡುವುದೇ ನಮ್ಮ ಗುರಿಯಾಗಬೇಕು. ಆಗ ಗುರಿಯನ್ನು ಮುಟ್ಟಲು ಸಾಧ್ಯ.
ಶ್ರೀ ಗುರು ಚರಿತ್ರೆಯ ಎರಡನೇ ಅಧ್ಯಾಯದಲ್ಲಿ ಗುರುವಿನ ಮಹತ್ವವನ್ನು ಬಹಳ ಚೆನ್ನಾಗಿ ವರ್ಣೀಸಲಾಗಿದೆ. ಇದನ್ನು ಪಾರಾಯಣ ಮಾಡುವುದರಿಂದ ನಾವು ಗುರುವಿನ ಕೃಪೆಗೆ ಪಾತ್ರರಾಗಬಹುದು. ಅದರಲ್ಲೊಂದು ಶ್ಲೋಕ ಹೀಗಿದೆ;
ನ ತೀರ್ಥಯಾತ್ರಾ ನಚ ದೇವಯಾತ್ರಾ|
ನ ದೇಹಯಾತ್ರಾ ನಚ ಲೋಕಯಾತ್ರಾ||
ಅರ್ಹನಿಶಂ ಬ್ರಹ್ಮ ಹರೀಶ ಬಂಧ್ಯಾ|
ಗುರುಂ ಪ್ರಸನ್ನೋ ನಹಿ ಸೇವ್ಯ ಮನ್ಯತ್||
ಇದರ ಅರ್ಥ, ಒಳ್ಳೆಯ ಶಿಷ್ಯನಿಗೆ ತೀರ್ಥಯಾತ್ರೆ, ದೇವಯಾತ್ರೆ, ದೇಹಯಾತ್ರೆ, ಲೋಕಯಾತ್ರೆ ಯಾವುದೂ ಅವಶ್ಯವಾಗಿಲ್ಲ. ಹರಿ, ಹರ,ಬ್ರಹ್ಮ ಈ ತ್ರೀಮೂರ್ತಿಗಳ ಸಾಕಾರ ರೂಪವಾಗಿರುವ ಸದ್ಗುರುವಿನ ಸೇವೆ ಮಾಡಿ ಅವರನ್ನು ಪ್ರಸನ್ನಗೊಳಿಸಿಕೊಳ್ಳುವುದರಲ್ಲಿಯೇ ಆತನಿಗೆ ಈ ಎಲ್ಲ ಯಾತ್ರೆಗಳ ಫಲವೂ ಸುಲಭವಾಗಿ ದೊರೆಯುತ್ತದೆ ಎಂದು. ಗುರು ಪೂರ್ಣಿಮೆಯಂದು ನಾವು ಗುರುವನ್ನು ಪೂಜಿಸುವುದರಿಂದ ನಮಗೂ ಈ ಎಲ್ಲ ಫಲಗಳು ದೊರೆಯುತ್ತವೆ.
‘ಗುರು ಪೂರ್ಣಮಿ’ ಎನ್ನುವುದು ಕೇವಲ ಗುರುವನ್ನು ಸ್ತುತಿಸುವ, ಪ್ರಶಂಸಿಸುವ, ಪೂಜಿಸುವ ದಿನವಾಗಬಾರದು. ಬದಲಿಗೆ ಗುರುವೆನ್ನುವ ಪದದಲ್ಲಿನ ಅರ್ಥ ನಮಗೆ ನಿಚ್ಛಳವಾಗಬೇಕು. ನಮ್ಮೊಳಗಿನ ಅಜ್ಞಾನವನ್ನು ತೊಡೆದುಕೊಳ್ಳಲು ಪೂರಕ ಸಂಕಲ್ಪವಾಗಬೇಕು. ಈ ದಿಸೆಯಲ್ಲೇ ನಮ್ಮೆಲ್ಲಾ ಪ್ರಯತ್ನಗಳು ಸಾಗಬೇಕು. ಆಗ ಮಾತ್ರ ಈ ಆಚರಣೆಗೊಂದು ಅರ್ಥ.
ನಮ್ಮ ಕುಲಗುರುಗಳಾದ ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹಾಗೂ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯರಿಗೆ ನಮಿಸುತ್ತಲೇ ಗುರು ಪೂರ್ಣಿಯೆ ಕುರಿತ ಈ ಲೇಖನವನ್ನು ನಿಮಗರ್ಪಿಸುತ್ತಿದ್ದೇನೆ. ಎಲ್ಲರಿಗೂ ಗುರು ಕಾರುಣ್ಯ ದೊರೆಯಲಿ ಎಂದು ಆಶಿಸುತ್ತೇನೆ.
ಇದನ್ನೂ ಓದಿ | Chaturmas 2022 | ಯಾವ ಯತಿವರ್ಯರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲಿ?