Site icon Vistara News

Guru Purnima 2023 : ʻಗುರುʼ ಎಂದರೆ ʻಲಘುʼ ಅಲ್ಲ; ಗುರುವೇ ದೇವರು

Guru Purnima 2023

ಸ್ವಾಮಿ ವೀರೇಶಾನಂದ ಸರಸ್ವತೀ
ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು
ಮನುಷ್ಯನ ಸರ್ವತೋಮುಖ ಅಭಿವೃದ್ಧಿಯತ್ತ ವಿಶೇಷವಾಗಿ ಗಮನಿಸಿ ಅರ್ಥಪೂರ್ಣವಾಗಿ ಕಾರ್ಯೋನ್ಮುಖ ವಾಗುವ ವಿಚಾರದಲ್ಲಿ ಪ್ರಾಚೀನ ಭಾರತ ಜಗತ್ತಿಗೆ ನೀಡಿದ ಕೊಡುಗೆ ಅತ್ಯಪಾರ. ಪ್ರತಿಯೊಬ್ಬ ಮಾನವನ ಬದುಕನ್ನು ರೂಪಿಸುವಲ್ಲಿ ಜನ್ಮ ನೀಡುವ ಮಾತಾಪಿತೃಗಳು ಹಾಗೂ ವಿದ್ಯೆ ಸಂಸ್ಕಾರಗಳನ್ನಿತ್ತ ಗುರು ಸಮೂಹವು ಗೌರವಾನ್ವಿತರೆನಿಸುತ್ತಾರೆ, ಪೂಜನೀಯರೂ ಆಗಿದ್ದಾರೆ.

ತಾಯಿ-ತಂದೆ ಮತ್ತು ಗುರುವಿನ ಗರಡಿಯಲ್ಲಿ ಸಮರ್ಪಕವಾಗಿ ತರಬೇತಿ ಹೊಂದಿದ ಜೀವಿಯು ಕಾಲಕ್ರಮದಲ್ಲಿ “ಮಾನವ ಸಂಪನ್ಮೂಲ”ವಾಗಿ ಜಗತ್ತಿಗೆ ಸಮರ್ಪಿತವಾಗುವ ಪ್ರಕ್ರಿಯೆ ಮನೋಜ್ಞವಾದದ್ದು. ಈ ಮೂರು ಅದ್ಭುತ ಶಕ್ತಿಗಳನ್ನು, “Parents are first teachers and teachers are second parents”ಎಂಬ ಮಾತನ್ನು ಸಮಾಜವು ಸಮರ್ಥಿಸಿರುವುದು ಮಾನವನ ಸಮಗ್ರ ರಕ್ಷಣೆ, ಪೋಷಣೆ ಹಾಗೂ ಉದ್ಧಾರದ ಪಯಣಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ನ ಗುರೋರಧಿಕಂ ತತ್ತ್ವಂ ನ ಗುರೋರಧಿಕಂ ತಪಃ।
ತತ್ತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ॥

ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀಗುರುವನ್ನು ನಮಿಸುತ್ತೇನೆ. ಇದೊಂದು ಅದ್ಭುತವಾದ ಗುರುಸ್ತುತಿ.

ತತ್ತ್ವದ ಮೂರ್ತರೂಪವಾದ ಗುರುವು ನಮ್ಮ ಬದುಕಿನ ಪಯಣದಲ್ಲಿ ಚುಕ್ಕಾಣಿಗನಾಗಿ ನಮ್ಮೊಂದಿಗೆ ಸಂಚರಿಸುತ್ತಾನೆ. ಧರ್ಮದ ಪ್ರತಿನಿಧಿ ಎಂದೆನಿಸಿದ ಆತನ ಕೃಪೆ ಅಸಾಧಾರಣವಾದದ್ದು ಮತ್ತು ಯುಗಪ್ರವರ್ತಕರಾದ ಅವತಾರಪುರುಷರೂ ಈ ಗುರುಶಕ್ತಿಗೆ ಮಣಿದಿದ್ದಾರೆ.

ಶ್ರೀಗುರುವು ತನ್ನ ಶಿಷ್ಯನನ್ನು ಧರ್ಮನಿಷ್ಟನಾಗಿ ಬದುಕಿಗೆ ಪ್ರೇರೇಪಿಸಿದಾಗ ಅವನು ತನ್ನ ಆತ್ಮಸಾಕ್ಷಿಯನ್ನು ಗೌರವಿಸಿ ಬದುಕಿನ ಒಳಿತು ಕೆಡಕುಗಳೊಂದಿಗೆ ಹೋರಾಡುತ್ತಾನೆ. ಕಾಮ-ಕ್ರೋಧಗಳನ್ನು ತನ್ನ ನೈತಿಕ ಬಲದಿಂದ ನಿಯಂತ್ರಿಸಿ ಅವುಗಳನ್ನು ಯೋಗ್ಯ ಪ್ರಮಾಣದಲ್ಲಿ ನಿರ್ವಹಿಸುತ್ತಾನೆ. ಅವನ ಆಲೋಚನೆಗಳು ಮತ್ತು ಅವುಗಳಿಂದ ಉಂಟಾಗುವ ನಡೆವಳಿಕೆಗಳು ಆತ್ಮಸಾಕ್ಷಿಗೆ ಮಣಿದು ಸಾಗುತ್ತವೆ. “ಅಂತರಂಗಕ್ಕಿಂತ ನ್ಯಾಯಾಲಯವಿಲ್ಲ; ಆತ್ಮಸಾಕ್ಷಿಗಿಂತ ತೀರ್ಪು ಮತ್ತೊಂದಿಲ್ಲ” ಎಂಬ ಸತ್ಯವನ್ನು ಗುರುವು ಶಿಷ್ಯನ ಆಂತರ್ಯದಲ್ಲಿ ಪ್ರತಿಷ್ಠಾಪಿಸುತ್ತಾನೆ.

ಗುರು ಶಕ್ತಿ ಮೀರಿದ್ದು ಇನ್ನಾವುದೂ ಇಲ್ಲ!

ಲೌಕಿಕ ಗುರುಗಳು ವಿವೇಕಿಗಳಾಗಿ ಮುಂದುವರೆದದ್ದೇ ಆದರೆ ಅವರು ಆಧ್ಯಾತ್ಮಿಕ ಗುರುಗಳ ಸತ್ಸಂಗದ ಅಮೃತವನ್ನು ತಾವೂ ಸವಿಯಬಲ್ಲರು, ಶಿಷ್ಯರಿಗೂ ಉಣಬಡಿಸಬಲ್ಲರೆಂಬ ಸತ್ಯವನ್ನು ನಾವು ಗಮನಿಸಬೇಕು. ಗುರುಶಕ್ತಿಯನ್ನು ಮೀರಿದ್ದು ಈ ಜಗತ್ತಿನಲ್ಲಿ ಇನ್ನಾವುದೂ ಇಲ್ಲ. ತನ್ನಡೆಗೆ ಬಂದ ಪುಣ್ಯಾತ್ಮರನ್ನು ಆತ ಸಂತೋಷದಿಂದಲೂ ಮತ್ತು ಪಾಪಾತ್ಮರನ್ನು ಕಡೆಗಣಿಸದೆ ಕರುಣೆಯಿಂದ ಸ್ವೀಕರಿಸುವ ವಿಧಾನವೇ ಆಲೋಚನಾಯೋಗ್ಯವಾದದ್ದು. ಕೈಯಲ್ಲಿ ಬಿಡಿಗಾಸಿಲ್ಲದವನನ್ನು ಅಥವಾ ಹೊಟ್ಟೆಗೆ ತುತ್ತು ಅನ್ನವಿಲ್ಲದವನನ್ನು ಜನರು “ದೀನ” ಎಂದೇ ಗುರ್ತಿಸಿರಬಹುದಾದರೂ ಗುರುಕೃಪೆ ಇಲ್ಲದವನಿಗಿಂತ ದೀನ ಮತ್ತೊಬ್ಬನಿಲ್ಲ! ಗುರುಕೃಪೆಯನ್ನು ಕಳೆದುಕೊಂಡವನ ನಷ್ಟ ಅಷ್ಟಿಷ್ಟಲ್ಲ.
ಶ್ರೀಗುರುವಿನ ಬಗ್ಗೆ ಜಗತ್ತು ಕಂಡರಿತ ಅದ್ಭುತ ವಿಚಾರಗಳು ಇಂತಿದೆ;
ಗುರುಚರಣಾಂಬುಜ ನಿರ್ಭರ ಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ
ಇಂದ್ರಿಯ ಮಾನಸ ನೀಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಂ॥
“ಎಲೈ ಮಾನವನೇ, ಶ್ರೀ ಗುರುಪಾದಪದ್ಮಗಳಲ್ಲಿ ಪರಿಪೂರ್ಣ ಭಕ್ತಿಯುಳ್ಳವನಾಗಿ ಸಂಸಾರದಿಂದ ಶೀಘ್ರವಾಗಿ ಮುಕ್ತನಾಗು. ಇಂದ್ರಿಯಗಳೊಂದಿಗೆ ಮನಸ್ಸನ್ನು ನಿಗ್ರಹಿಸಿದಾಗ ನಿನ್ನ ಹೃದಯಸ್ಥನಾದ ಈಶ್ವರನನ್ನು ನೋಡುವೆ” ಎಂದಿದ್ದಾರೆ ಶ್ರೀಶಂಕರ ಭಗವತ್ಪಾದರು.

ಮನುಷ್ಯನು ಜಾಗೃತ ಸ್ಥಿತಿಯಲ್ಲಿ ಬದುಕಲು ಪೂರಕವಾದ ಜೀವನ ವಿಧಾನಕ್ಕೆ ಶ್ರೀ ಗುರುವು ಪ್ರೇರೇಪಿಸುತ್ತಾನೆ. ಧರ್ಮಕ್ಕೆ ನಿರಂತರವಾಗಿ ಗೌರವ ತೋರುತ್ತಾ ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳಬೇಕೆಂಬ ಪ್ರಚೋದನೆ ಮಹಾಭಾರತದ ಈ ಶ್ಲೋಕದಲ್ಲಿ ವ್ಯಕ್ತವಾಗಿದೆ.
ನ ಜಾತು ಕಾಮಾತ್ ನ ಭಯಾತ್ ನ ಲೋಭಾತ್
ಧರ್ಮಂ ತ್ಯಜೇತ್ ಜೀವಿತಸ್ಯಾಪಿ ಹೇತೋಃ।
ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ
ಜೀವೋ ನಿತ್ಯೋ ಹೇತುರಸ್ಯತ್ವನಿತ್ಯಃ ॥

ಕಾಮದಿಂದಾದಲಿ, ಭಯದಿಂದಾಗಲಿ, ಲೋಭದಿಂದಾಗಲಿ ಮಾನವನು ತನ್ನ ಜೀವವನ್ನು ಉಳಿಸಿಕೊಳ್ಳುವುದಕ್ಕೂ ಕೂಡ ಧರ್ಮವನ್ನು ತ್ಯಜಿಸಬಾರದು. ಏಕೆಂದರೆ ಧರ್ಮವು ನಿತ್ಯವಾದದ್ದು. ಸುಖದುಃಖಗಳು ಅನಿತ್ಯವಾದವು. ಜೀವವು ನಿತ್ಯ, ದೇಹದಲ್ಲಿ ಆತ್ಮವು ಮಿತಗೊಳ್ಳುವುದಕ್ಕೆ ಕಾರಣವು ಅಂದರೆ ಜೀವಕಾರಣವು ಅನಿತ್ಯ!

ಲೋಕ ಗುರು ಶ್ರೀ ಶಂಕರಭಗವತ್ಪಾದರು ತಮ್ಮ ವಿವೇಕಚೂಡಾಮಣಿಯಲ್ಲಿ ಮಾನವರನ್ನು ವಿವಿಧ ಸ್ತರಗಳಲ್ಲಿ ವಿಶ್ಲೇಷಿಸಿ ವಿವರಿಸಿದ ರೀತಿ ಅದ್ಭುತ.
ದೇಹೋಹಮಿತ್ಯೇವ ಜಡಸ್ಯ ಬುದ್ಧಿಃ
ದೇಹೇ ಚ ಜೀವೇ ವಿದುಷತ್ವಹಂ ಧೀಃ।
ವಿವೇಕವಿಜ್ಞಾನವತೋ ಮಹಾತ್ಮನೋ
ಬ್ರಹ್ಮಾಹಮಿತ್ಯೇವ ಮತಿಸ್ಸದಾತ್ಮನಿ॥

“‘ನಾನೇ ದೇಹ’ ಎಂದು ಭಾವಿಸುವವನು ಜಡಬುದ್ಧಿಯವನು. ತಿಳುವಳಿಕೆಯುಳ್ಳವನು ದೇಹದಲ್ಲಿರುವ ಜೀವಿಯು ತಾನೆಂದು ಭಾವಿಸುತ್ತಾನೆ. ಆದರೆ ವಿವೇಕ ಮತ್ತು ಸಾಕ್ಷಾತ್ಕಾರಗಳನ್ನು ಪಡೆದ ಮಹಾತ್ಮನಾದರೋ ಶಾಶ್ವತವಾದ ಆತ್ಮನೇ ತನ್ನಾತ್ಮ ಎಂದು ಭಾವಿಸಿ ‘ನಾನೇ ಬ್ರಹ್ಮ’ ಎಂದು ತಿಳಿದಿರುತ್ತಾನೆ.”

“ನಿನಗೆ ನೀನೇ ಬೆಳಕಾಗು”ಎಂಬ ಸಂದೇಶವನ್ನಿತ್ತು ಶ್ರೀ ಭಗವಾನ್ ಬುದ್ಧನು ತನ್ನ ಪ್ರಿಯ ಶಿಷ್ಯ ಆನಂದನನ್ನು ಸಂತೈಸುತ್ತಾನೆ. ಭಗವದ್ಗೀತೆಯ ಧ್ಯಾನಯೋಗದಲ್ಲಿ ಶ್ರೀಕೃಷ್ಣನು ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಜಗತ್ತನ್ನು ಎಚ್ಚರಿಸಿದ್ದು ಹೀಗೆ;
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್।
ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ॥

ಅಂದರೆ ಮನಸ್ಸಿನಿಂದಲೇ ತನ್ನನ್ನು ಸಂಸಾರಸಾಗರದಿಂದ ಉದ್ಧಾರ ಮಾಡಿಕೊಳ್ಳಬೇಕು; ಎಂದಿಗೂ ಮನಸ್ಸಿನಿಂದ ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ ಪ್ರತಿಯೊಬ್ಬರ ವಿಷಯದಲ್ಲೂ ಮನಸ್ಸೇ ಬಂಧು, ಮನಸ್ಸೇ ತನ್ನ ಶತ್ರು.
ಪ್ರಾಚೀನ ಭಾರತದ ಗುರುಪರಂಪರೆಯ ಮಹಾನ್ ಚೇತನಗಳನ್ನು ಉಲ್ಲೇಖಿಸಿದಾಗ, ಅವರ ಮಾತುಗಳನ್ನು ಅವಲೋಕಿಸಿದಾಗ ನಮಗೆ ಅರಿವಾಗುವ ಸತ್ಯವೆಂದರೆ ಜಗತ್ತಿನಲ್ಲಿ ನಮ್ಮ ಇಷ್ಟಮಿತ್ರ ಬಂಧು ವರ್ಗವೆಲ್ಲವೂ ಒಂದಿಲ್ಲೊಂದು ದಿನ ನಮ್ಮನ್ನು ತೊರೆದೇ ತೊರೆಯುತ್ತಾರೆ, ಆದರೆ ಗುರುಕೃಪೆ ಎಂಬುದು ಜನ್ಮಜನ್ಮಗಳಲ್ಲಿಯೂ ನಮ್ಮೊಂದಿಗೆ ಸಂಚರಿಸುತ್ತಾ ಸಾಗುತ್ತದೆ!

ಸ್ವಾಮಿ ವಿವೇಕಾನಂದರ ಗುರು ನಮನ

ಇನ್ನು ಈ ಮಹಾನ್ ಗುರುಪರಂಪರೆಯಲ್ಲಿ ಕಳೆದ ಶತಮಾನದಲ್ಲಿ ನಾವು ಗಮನಿಸುವ ಪ್ರಮುಖರಾದ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಜೀವನ ಹಾಗೂ ಅವರಿತ್ತ ಸಂದೇಶಗಳು ಮಾನವನ ಬದುಕಿನಲ್ಲಿ ನವೋತ್ಸಾಹ ಮೂಡಿಸಿವೆ. 1897ರಲ್ಲಿ ಸ್ವಾಮಿ ವಿವೇಕಾನಂದರು ಮದ್ರಾಸಿನಲ್ಲಿ ನೀಡಿದ “ಭಾರತದ ಸಂತರು” ಎಂಬ ಉಪನ್ಯಾಸದಲ್ಲಿ ತಮ್ಮ ಗುರುವಾದ ಶ್ರೀರಾಮಕೃಷ್ಣರ ಬಗ್ಗೆ ಹೃದಯಸ್ಪರ್ಶಿಯಾದ ಮಾತು ಬಂದಿವೆ; ಶಂಕರಾಚಾರ್ಯರ ಪ್ರಖರವಾದ ಬುದ್ಧಿಮತ್ತೆಯನ್ನು, ಶ್ರೀ ಚೈತನ್ಯ ಮಹಾಪ್ರಭುವಿನ ಅದ್ಭುತವೂ ಅನಂತವೂ ಆದ ಹೃದಯವನ್ನು ಒಂದು ದೇಹದಲ್ಲಿ ಮಿಲನಗೊಂಡ ವ್ಯಕ್ತಿತ್ವವೊಂದರ ಅವತರಣಕ್ಕೆ ಕಾಲವು ಪರಿಪಕ್ವವಾಗಿತ್ತು. ಪ್ರತಿಯೊಂದು ಪಂಥದಲ್ಲಿಯೂ ಒಂದೇ ಚೈತನ್ಯವು ಅದೇ ಭಗವಂತನು ಕಾರ್ಯನಿರ್ವಹಿಸುತ್ತಿರುವುದನ್ನು ಕಾಣುವಂಥವನು; ಪ್ರತಿಯೊಂದರಲ್ಲೂ ಭಗವಂತನನ್ನು ಕಾಣಬಲ್ಲವನು; ಭಾರತದ ಒಳಗಾಗಲೀ, ಹೊರಗಾಗಲೀ ಈ ಜಗತ್ತಿನಲ್ಲಿರುವ ಪ್ರತಿಯೊಬ್ಬನ ವಿಷಯಕ್ಕೂ – ದರಿದ್ರ, ದುರ್ಬಲ, ಬಹಿಷ್ಕೃತ, ದಲಿತ–ಈ ಎಲ್ಲರಿಗಾಗಿಯೂ ಯಾರ ಹೃದಯವು ಮರುಗಿ ಕಣ್ಣೀರು ಇಡುತ್ತಿತ್ತೋ ಅಂಥವನು; ಭಾರತದಲ್ಲಿ ಮಾತ್ರವಲ್ಲದೆ ಭಾರತದ ಹೊರಗೂ ಇದ್ದ ಎಲ್ಲ ಪರಸ್ಪರ ವಿರೋಧಾತ್ಮಕ ಪಂಥಗಳನ್ನು ಸಮನ್ವಯಗೊಳಿಸಬಲ್ಲ ಉದಾತ್ತವಾದ ಭಾವನೆಗಳನ್ನು ಯಾರ ತೀಕ್ಷ್ಣವಾದ ಮತಿಯು ಕಲ್ಪಿಸಿಕೊಳ್ಳಬಹುದಾಗಿತ್ತೋ, ಹಾಗೆ ಕಲ್ಪಿಸಿಕೊಂಡು ಬುದ್ಧಿ ಹೃದಯಗಳ ವಿಶ್ವಧರ್ಮಗಳ ಅದ್ಭುತ ಸಾಮರಸ್ಯವನ್ನು ಅಸ್ತಿತ್ವಕ್ಕೆ ತರಬಲ್ಲವನಾಗಿದ್ದನೋ ಅಂಥವನ ಜನ್ಮಕ್ಕೆ ಕಾಲವು ಪರಿಪಕ್ವವಾಗಿತ್ತು. ಅಂಥ ವ್ಯಕ್ತಿಯೊಬ್ಬರ ಜನನವಾಯ್ತು. ಆತನ ಪದತಲದಲ್ಲಿ ಅನೇಕ ವರ್ಷಗಳು ಕುಳಿತುಕೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಕಾಲವು ಪಕ್ವವಾಗಿತ್ತು, ಅಂಥ ಮಾನವನೊಬ್ಬನ ಆಗಮನದ ಅವಶ್ಯಕತೆಯಿತ್ತು. ಆತ ಬಂದ.

ಆದರೆ ಅದರಲ್ಲಿನ ಅತ್ಯಂತ ಆಶ್ಚರ್ಯಕರವಾದ ವಿಚಾರವೆಂದರೆ ಆತನ ಜೀವನ ಚಟುವಟಿಕೆಗಳು ನಡೆದದ್ದು ಪಾಶ್ಚಾತ್ಯ ಚಿಂತನೆಗಳಿಂದ ತುಂಬಿ ತುಳುಕುತ್ತಿದ್ದ ನಗರವೊಂದರ ಸಮೀಪದಲ್ಲಿ. ಈ ಪಾಶ್ಚಾತ್ಯ ಭಾವನೆಗಳ ಹಿಂದೆ ಹುಚ್ಚು ಹಿಡಿದು ಓಡುತ್ತಿದ್ದ ನಗರವು ಅದಾಗಿತ್ತು. ಭಾರತದ ಬೇರಾವುದೇ ನಗರಕ್ಕಿಂತಲೂ ಹೆಚ್ಚಿನ ಐರೋಪ್ಯ ಪ್ರಭಾವಕ್ಕೊಳಗಾಗಿದ್ದ ನಗರವದು. ಅಲ್ಲಿ ಆತ ಬಾಳಿದ, ಯಾವುದೇ ಪುಸ್ತಕದ ಓದು ಇಲ್ಲದೇ. ಈ ಮಹೋನ್ನತ ಮತಿಯು ತನ್ನ ಹೆಸರನ್ನು ಬರೆಯುವುದನ್ನೂ ಕಲಿತಿರಲಿಲ್ಲ. ಆದರೆ ನಮ್ಮ ವಿಶ್ವವಿದ್ಯಾನಿಲಯದ ಅತ್ಯಂತ ಧೀಮಂತ ಪದವೀಧರರು ಅವರಲ್ಲಿ ಬುದ್ಧಿಯ ಮೇರುವನ್ನೇ ಕಂಡರು. ವಿಚಿತ್ರವ್ಯಕ್ತಿಯಾಗಿದ್ದ ಆತನೇ “ಶ್ರೀರಾಮಕೃಷ್ಣ ಪರಮಹಂಸರು.”

ಸ್ವಾಮಿ ವಿವೇಕಾನಂದರಿಂದ “ಅವತಾರವರಿಷ್ಠ”ರೆಂದೇ ಸ್ತುತಿಸಲ್ಪಟ್ಟ ಭಗವಾನ್ ಶ್ರೀರಾಮಕೃಷ್ಣರು ಜಗತ್ತಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾನ್ ಮೈಲಿಗಲ್ಲಾದರು. “ಭಗವಂತನು ಯುಗಯುಗಗಳಲ್ಲಿಯೂ ಗುರು ರೂಪದಲ್ಲಿ ಅವತೀರ್ಣನಾಗಿದ್ದಾನೆ. ಸಚ್ಚಿದಾನಂದನೇ ಗುರು, ನಿಷ್ಕಾಮ ಭಾವನೆಯಿಂದ ಕಾರ್ಯಮಾಡುವುದರಿಂದ ಚಿತ್ತಶುದ್ಧಿಯಾಗುವುದಲ್ಲದೇ ಭಗವಂತನಲ್ಲಿ ಅನುರಾಗ ವೃದ್ಧಿಸಿ ಆತನ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ, ಉಸಿರಾಡುವುದೂ ಕರ್ಮವೇ. ಆದ್ದರಿಂದ ಕರ್ಮವನ್ನು ತ್ಯಾಗ ಮಾಡದೆ ಕರ್ಮಫಲವನ್ನು ಭಗವಂತನಿಗರ್ಪಿಸಿ ನಿಶ್ಚಿಂತೆಯಿಂದಿರು…” ಇಂತಹ ಅತ್ಯದ್ಭುತ ಸಂದೇಶಗಳನ್ನಿತ್ತ ಶ್ರೀ ರಾಮಕೃಷ್ಣರು ಮನುಷ್ಯನ ಬದುಕಿಗಿತ್ತ ಭರವಸೆ, ಧ್ಯೇಯ ಹಾಗೂ ಆದರ್ಶೋಪಾಸನೆಯ ವಿಚಾರಗಳು ಸಾಧಕರಿಗೆ ಆಪ್ಯಾಯಮಾನವಾಗಿವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಗುರುಪಥ ಮೊದಲು!

“ಗುರು ಹಾಗೂ ಗೋವಿಂದರಲ್ಲಿ ನಾನು ಮೊದಲು ವಂದಿಸುವುದು ಗುರುವನ್ನು” ಎಂದಿದ್ದಾರೆ ಕಬೀರದಾಸರು. “ಶಿವಪಥವರಿವಡೆ ಗುರುಪಥ ಮೊದಲು” ಎಂದಿದ್ದಾರೆ ಶರಣರು.
ಅಲೆಗ್ಸಾಂಡರ್ ಚಕ್ರವರ್ತಿ ತನ್ನ ಗುರುವನ್ನು “ಬದುಕಿನ ಉದ್ಧಾರಕ” ಎಂದಿದ್ದಾನೆ. “ಹರಿ ಮುನಿದರೆ ಗುರು ಕಾಯ್ವನು, ಗುರು ಮುನಿದರೆ ಕಾವರಾರು?” ಎಂದಿದ್ದಾರೆ ಸಾಧಕರು.
“ಗುರು” ಎಂದರೆ “ಲಘು” ಅಲ್ಲ. ಗುರುವೇ ತತ್ತ್ವ, ಆತನೇ ತಪಸ್ಸು! ತರಗತಿಯಲ್ಲಿ ಮಕ್ಕಳ ಮುಂದಿರುವ ಶಿಕ್ಷಣವೇ ಶ್ರೇಷ್ಠ ಗ್ರಂಥ! The last reference bookಆತನೇ ಆಗಿದ್ದಾನೆ.

ಗುರುವನ್ನು ಲಘುವಾಗಿ ಭಾವಿಸುವುದರೊಂದಿಗೆ ಮಾನವನ ಸಂತತಿ ಅವನತಿಯತ್ತ ಸಾಗುತ್ತದೆ. ಆದರೆ “ಗುರು”ವಾದವನು ತನ್ನ ಘನತೆ, ಗೌರವ, ಪವಿತ್ರತೆ ಮೊದಲಾದ ಆದರ್ಶಗಳಿಗೆ ಚ್ಯುತಿ ತರದಂತೆ ಎಚ್ಚೆತ್ತ ಜೀವನ ನಡೆಸಬೇಕು. ಶಿಕ್ಷಕನ ಬದುಕಿನಲ್ಲಿ ಸಡಿಲವಾದ, ಹಗುರವಾದ ಉಡಾಫೆಯ ನಡೆವಳಿಕೆ ಸಲ್ಲದು. ಸಮಾಜವು ಶಿಕ್ಷಕರಲ್ಲಿ ಭರವಸೆ ಕಳೆದುಕೊಳ್ಳಬಾರದು. ಅಷ್ಟೇ ಅಲ್ಲದೇ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಶ್ರದ್ಧೆ ನಿಷ್ಠೆ, ಭರವಸೆಗಳನ್ನು ಕಳೆದುಕೊಂಡು ಬಾಳುವೆ ನಡೆಸುವದಿನಗಳು ಎಂದೆಂದೂ ಬಾರದಿರಲಿ ಎಂಬ ಪ್ರಾರ್ಥನೆ ನನ್ನದು.
ಅಂತಿಮವಾಗಿ, “ದೇವರಿಗಿಂತ ಗುರುವೇ ಅಧಿಕ” ಎಂದು ಕೆಲವರು. ಇಲ್ಲ, “ಗುರುವಿಗಿಂತ ದೇವರೇ ಅಧಿಕ” ಎಂದು ಇನ್ನು ಕೆಲವರು. ಆದರೆ ಏಕೆ ಈ ಅಧಿಕಪ್ರಸಂಗ? “ಗುರುವೇ ದೇವರು, ದೇವರೇ ಗುರು!” ಎಂದಿದ್ದಾರೆ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು.

ಇದನ್ನೂ ಓದಿ : Guru Purnima 2022 | ಗುರು ಪದದ ಅರ್ಥ ಅರಿತವರಿಗಷ್ಟೇ ಮುಕ್ತಿ

ನಾವು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಪ್ರಾರಂಭದಲ್ಲಿ ಗುರುವಿಗೆ ವಂದನೆ ಸಲ್ಲಿಸಲೇಬೇಕು. ವೇದಾಧ್ಯಯನವು ಪ್ರಾರಂಭವಾಗುವುದೂ “ಶ್ರೀ ಗುರುಭ್ಯೋ ನಮಃ” ಎಂದೇ!
ಜಗಬೆಳಗಿದ ಗುರುಪರಂಪರೆಗೆ ಕೋಟಿ ಕೋಟಿ ನಮನಗಳು.

Exit mobile version