Site icon Vistara News

Guru Purnima 2024: ಇಂದು ಗುರು ಪೂರ್ಣಿಮೆ; ಇದರ ಹಿನ್ನೆಲೆ ಏನು? ಆಚರಣೆ ಹೇಗೆ?

Guru Purnima 2024

ಬದುಕಿನ ಮೌಲ್ಯಗಳನ್ನು ತಿಳಿಸುವ ಗುರುವಿಗೆ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಉನ್ನತ ಮತ್ತು ಗೌರವದ ಸ್ಥಾನಮಾನವಿದೆ. ಜೀವನ ಮತ್ತು ಆಧ್ಯಾತ್ಮಿಕ (Life and Spirituality) ಶಕ್ತಿಯ ಮೌಲ್ಯವನ್ನು ತಿಳಿಸುವ ಗುರುವಿಗೆ ಗೌರವ ಸಲ್ಲಿಸಲು ಗುರುಪೂರ್ಣಿಮೆಯನ್ನು (Guru Purnima 2024) ಪ್ರತಿ ವರ್ಷ ಆಚರಿಸಲಾಗುತ್ತದೆ. ಗುರುಪೂರ್ಣಿಮೆಯು ಹಿಂದುಗಳಿಗೆ (hindu) ಮಾತ್ರವಲ್ಲ ಜೈನ (jain), ಬೌದ್ಧರಿಗೂ (Buddhist) ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ದಿನವಾಗಿದೆ.

ಗುರುವೆಂದರೆ ಶಾಲೆಯಲ್ಲಿ ಪಾಠ ಕಳಿಸಿದ ಶಿಕ್ಷಕರೇ ಆಗಬೇಕಿಲ್ಲ. ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ತೋರುವ ಪ್ರತಿಯೊಬ್ಬರೂ ಗುರುವಿಗೆ ಸರಿ ಸಮಾನರಾಗಿರುತ್ತಾರೆ. ಅದು ತಂದೆ, ತಾಯಿ, ಸಹೋದರ, ಸಹೋದರಿ, ಸ್ನೇಹಿತರು, ಬಂಧುಗಳು… ಹೀಗೆ ಯಾರೇ ಆಗಿರಬಹುದು. ಒಟ್ಟಿನಲ್ಲಿ ನಮ್ಮ ಹಿತವನ್ನು ಬಯಸಿ ನಮ್ಮ ಬದುಕಿಗೆ ಸರಿಯಾದ ಮಾರ್ಗದರ್ಶನ ತೋರುವವರೇ ಗುರುಗಳಾಗಿರುತ್ತಾರೆ. ಗುರು ಪೂರ್ಣಿಮೆಯ ದಿನ ಇವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಯಾವಾಗ ?

ಈ ಬಾರಿ ಗುರು ಪೂರ್ಣಿಮೆಯನ್ನು ಆಷಾಢ ತಿಂಗಳ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಜುಲೈ 21ರಂದು ಭಾನುವಾರ ಆಚರಿಸಲಾಗುತ್ತಿದೆ. ಗುರು ಪೂರ್ಣಿಮೆ ತಿಥಿಯು ಜುಲೈ 20ರಂದು ಶನಿವಾರ ಸಂಜೆ 5.59ರಿಂದ ಜುಲೈ 21ರಂದು ಮಧ್ಯಾಹ್ನ 3.46ರವರೆಗೆ ಇರುತ್ತದೆ.


ಇದರ ಇತಿಹಾಸ ಏನು?

ಭಾರತದಾದ್ಯಂತ ವೇದಗಳ ಕಾಲದಿಂದಲೂ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಇದು ಐತಿಹಾಸಿಕ ಮತ್ತು ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿದೆ. ಹಿಂದೂಗಳು ಈ ದಿನವನ್ನು ಗುರು ವೇದವ್ಯಾಸರ ಜನ್ಮದಿನವಾಗಿ ಆಚರಿಸುತ್ತಾರೆ. ʼಮಹಾಭಾರತʼ ಬರೆದ ವ್ಯಾಸ ಪರಾಶರ ಋಷಿ ಮತ್ತು ಮೀನುಗಾರನ ಮಗಳು ಸತ್ಯವತಿಗೆ ಈ ದಿನ ವೇದವ್ಯಾಸರು ಜನಿಸಿದ್ದರು. ಹೀಗಾಗಿ, ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಆಚರಿಸಲಾಗುತ್ತದೆ. ಮಹಾಭಾರತ ಮತ್ತು ಪುರಾಣವನ್ನು ಬರೆದಿರುವ ಗುರು ವೇದವ್ಯಾಸರು ಸಾಮಾನ್ಯ ಜನರಿಗೂ ಅಧ್ಯಯನ ಮಾಡಲು ಸುಲಭವಾಗುವ ಹಾಗೆ ವೇದಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಬರೆದರು.

ಬೌದ್ದ ಧರ್ಮದ ಅನುಯಾಯಿಗಳು ಈ ದಿನವನ್ನು ಬುದ್ಧನ ಗೌರವಾರ್ಥವಾಗಿ ಆಚರಿಸುತ್ತಾರೆ. ಬೌದ್ಧಧರ್ಮದ ಪ್ರಕಾರ ಬುದ್ಧನು ಈ ದಿನ ಜ್ಞಾನೋದಯದ ಬಳಿಕ ಮೊದಲ ಬಾರಿಗೆ ಸಾರಾನಾಥದಲ್ಲಿ ಧರ್ಮೋಪದೇಶ ನೀಡಿದ ಎನ್ನಲಾಗುತ್ತದೆ. ಗುರು ಪೂರ್ಣಿಮೆಯ ದಿನದಂದು ಗೌತಮ ಬುದ್ಧನು ತನ್ನ ಮೊದಲ ಐದು ಅನುಯಾಯಿಗಳಿಗೆ ಧರ್ಮೋಪದೇಶ ಮಾಡಿದನು ಮತ್ತು ತನ್ನ ಶಿಷ್ಯರ ಸಮುದಾಯವನ್ನು ರಚಿಸಿದನು.

ಜೈನ ಧರ್ಮದಲ್ಲೂ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಟ್ರೀನೋಕ್ ಗುಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಮಹಾವೀರನು ಕೈವಲ್ಯವನ್ನು ಪಡೆದ ಅನಂತರ ಗೌತಮ ಸ್ವಾಮಿಯನ್ನು ತನ್ನ ಮೊದಲ ಶಿಷ್ಯನನ್ನಾಗಿ ಮಾಡಿಕೊಂಡನು ಎನ್ನಲಾಗುತ್ತದೆ.

ಆಚರಣೆಯ ಮಹತ್ವವೇನು?

ಸಾವಿರಾರು ವರ್ಷಗಳ ಹಿಂದಿನಿಂದ ಆಚರಿಸಲಾಗುವ ಗುರು ಪೂರ್ಣಿಮೆಯನ್ನು ಇಂದಿನ ಮಕ್ಕಳಿಗೆ ಗುರುವಿನ ಸ್ಥಾನಮಾನಗಳನ್ನು ತಿಳಿಸಲು ಬಳಸಲಾಗುತ್ತದೆ. ತಮ್ಮ ಜೀವನವನ್ನು ಶ್ರೇಷ್ಠಗೊಳಿಸುವ ವ್ಯಕ್ತಿಗೆ ಗೌರವ ನೀಡುವುದನ್ನು ಕಲಿಸಲು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಗುರು ಪೂರ್ಣಿಮೆಯು ಮಕ್ಕಳನ್ನು ಅಧ್ಯಾತ್ಮದತ್ತ ಸೆಳೆಯುವ ಒಂದು ದಾರಿಯಾಗಿದೆ. ನಾವು ಗುರುಗಳಿಗೆ ತೋರುವ ಗೌರವ, ಭಕ್ತಿಯನ್ನು ನಮ್ಮ ಮಕ್ಕಳಲ್ಲೂ ಬೆಳೆಸಲು ಈ ದಿನದ ಆಚರಣೆ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ: Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

ಇದರ ಆಚರಣೆ ಹೇಗೆ?

ಗುರು ಪೂರ್ಣಿಮೆಯ ದಿನ ಹಿಂದೂಗಳು ಬೇಗನೆ ಎದ್ದು ಮಹಾ ಗುರುವಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ. ಮಹಾ ಗೀತೆಯ ಪಠಣದ ಮೂಲಕ ಮಹಾ ಗುರುವನ್ನು ಸ್ಮರಿಸಲಾಗುತ್ತದೆ ಮತ್ತು ಅವರ ಬೋಧನೆಗಳನ್ನು ಪಾಲಿಸಲಾಗುತ್ತದೆ. ಈ ಮಂಗಳಕರ ದಿನದಂದು ಗುರುಗಳಿಗೆ ಹೂವು, ಉಡುಗೊರೆಗಳನ್ನು ಅರ್ಪಿಸಲಾಗುತ್ತದೆ. ಪಾದ ಪೂಜೆ ನಡೆಸಲಾಗುತ್ತದೆ. ವೇದವ್ಯಾಸರಿಗೆ ಮೀಸಲಾದ ಆಶ್ರಮಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ.

Exit mobile version