ವಾರಾಣಸಿ: ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಮುಂದಿನ ವಿಚಾರಣಾ ದಿನಾಂಕವನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಮಂಗಳವಾರ ನಿರ್ಧರಿಸಲಿದೆ. ದಿಲ್ಲಿ ಮೂಲದ ಐವರು ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿಯ ಗೋಡೆಗಳ ಮೇಲಿರುವ ದೇವರ ಚಿತ್ರಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೂಚನೆಯಂತೆ ಸ್ಥಳೀಯ ನ್ಯಾಯಾಲಯದಿಂದ ಜಿಲ್ಲಾ ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸಿದ ಬಳಿಕ ಸೋಮವಾರ ಮೊದಲ ಬಾರಿಗೆ ಜಿಲ್ಲಾ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ಬಳಿಕ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಹಿಂದೂ ಪರ ವಕೀಲರು 1991 ಪೂಜಾ ಸ್ಥಳಗಳ ಕಾಯಿದೆಯನ್ನು ರದ್ದು ಮಾಡಬೇಕು ಎಂದು ವಾದಿಸಿದರೆ, ಮುಸ್ಲಿಂ ಪರ ವಕೀಲರು ಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿದ ಅರ್ಜಿಯನ್ನೇ ರದ್ದುಪಡಿಸಬೇಕು ಆಗ್ರಹಿಸಿದರು. 1991ರ ಪೂಜಾಸ್ಥಳಗಳ ಕಾಯಿದೆ ಪ್ರಕಾರ, ಅಯೋಧ್ಯೆಯನ್ನು ಹೊರತುಪಡಿಸಿ ಉಳಿದೆಲ್ಲ ಪೂಜಾಸ್ಥಳಗಳನ್ನು 1947ರ ಪೂರ್ವದಲ್ಲಿ ಹೇಗಿತ್ತೋ ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ಅದನ್ನೇ ಪಾಲಿಸಬೇಕು ಎಂದಾದರೆ ಜ್ಞಾನವಾಪಿ ಮಸೀದಿ ವಿವಾದಕ್ಕೆ ಹಿನ್ನಡೆ ಆಗಲಿದೆ. ಹೀಗಾಗಿ ಅದನ್ನು ರದ್ದುಪಡಿಸಬೇಕು ಎನ್ನುವುದು ಹಿಂದೂ ಪರ ವಕೀಲರ ವಾದ.
ಗೌಪ್ಯ ವಿಚಾರಣೆ
ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಅತ್ಯಂತ ಗೌಪ್ಯವಾಗಿ ನಡೆಯಿತು. ಸಾಮಾನ್ಯವಾಗಿ ಮುಕ್ತ ಕೋರ್ಟ್‌ನಲ್ಲಿ ವಿಚಾರಣೆ ನಡೆದರೆ ಇಲ್ಲಿ ಕೇವಲ 23 ಜನರ ಸಮ್ಮುಖದಲ್ಲಿ ಮುಚ್ಚಿದ ಬಾಗಿಲ ಹಿಂದೆ ನಡೆಯಿತು. 23 ಮಂದಿಯ ಪೈಕಿ 19 ಮಂದಿ ಎರಡೂ ಕಡೆಯ ವಕೀಲರಾದರೆ ನಾಲ್ವರು ಅರ್ಜಿದಾರರು. ಈ ಹಿಂದೆ ಕೋರ್ಟ್ ಕಮೀಷನರ್ ಆಗಿದ್ದು, ಜ್ಞಾನವಾಪಿ ಮಸೀದಿ ಆವರಣದಲ್ಲಿ ಆರಂಭಿಕ ಹಂತದಲ್ಲಿ ಸರ್ವೆ ನಡೆಸಿದ್ದ ಅಜಯ್ ಕುಮಾರ್ ಮಿಶ್ರಾ ಅವರು ಕೋರ್ಟ್ ಆವರಣಕ್ಕೆ ಬಂದಿದ್ದರಾದರೂ ಅವರನ್ನು ಒಳಗೆ ಬಿಟ್ಟಿಲ್ಲ.
ಯಾವುದು ಮೊದಲು?
ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಾದ ವಿಚಾರ ಯಾವುದು ಎಂಬ ಬಗ್ಗೆ ಜಿಜ್ಞಾಸೆಯನ್ನು ಸೃಷ್ಟಿಸಲಾಗಿದೆ. ಹಿಂದೂ ವಕೀಲರ ಪ್ರಕಾರ, ಕೋರ್ಟ್ ತಕ್ಷಣವೇ ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆದ ಸರ್ವೆಯ ವರದಿಯನ್ನು ಕೈಗೆತ್ತಿಕೊಳ್ಳಬೇಕು. ಆದರೆ, ಮುಸ್ಲಿಂ ವಕೀಲರು ಹೇಳುವ ಪ್ರಕಾರ, ವಿಚಾರಣೆಯನ್ನು ಮೊದಲಿನಿಂದಲೇ ಆರಂಭಿಸಬೇಕು.
ಇದನ್ನೂ ಓದಿ| Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?
ಜ್ಞಾನವಾಪಿ ಮಸೀದಿ ಆವರಣದಲ್ಲಿ ಸರ್ವೆ ನಡೆಸಬೇಕು ಎಂಬ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಪ್ರಶ್ನಿಸಿತ್ತು ಮತ್ತು ಕೋರ್ಟ್ ಕಮೀಷನರನ್ನು ಬದಲಾಯಿಸುವ ಬೇಡಿಕೆಯೂ ಇತ್ತು. ಇದಕ್ಕೆ ಒಪ್ಪದಿದ್ದಾಗ ಮುಸ್ಲಿಂ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಹಂತದಲ್ಲಿ ಸರ್ವೆ ಕೂಡಾ ನಡೆದಿದ್ದು ವರದಿಯನ್ನೂ ಸಲ್ಲಿಸಲಾಗಿದೆ. ಈ ನಡುವೆ, ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಿದೆ. ಹೀಗಾಗಿ, ಸರ್ವೆಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ವಾರಾಣಸಿ ನ್ಯಾಯಾಲಯ ಮೊದಲು ವಿಚಾರಣೆ ನಡೆಸಬೇಕು ಎನ್ನುವುದು ಮುಸ್ಲಿಂ ವಕೀಲರ ವಾದ. ಆದರೆ, ಹಿಂದೂ ಪರ ವಕೀಲರು ಇದನ್ನು ಆಕ್ಷೇಪಿಸಿ, ಅದೆಲ್ಲ ಹಂತವನ್ನು ಮೀರಿ ಬಂದಾಗಿದೆ. ಈಗ ಸರ್ವೆ ಆಧರಿತ ವಿಚಾರಣೆ ನಡೆಸಬೇಕು. ಜತೆಗೆ ದೇವಾಲಯ ಮರುನಿರ್ಮಾಣಕ್ಕೆ ಅಡ್ಡಿಯಾಗಿರುವ 1991 ಪೂಜಾ ಸ್ಥಳಗಳ ಕಾಯಿದೆಯನ್ನು ರದ್ದು ಮಾಡಬೇಕು ಎಂದು ವಾದಿಸಿದೆ.
ಎರಡೂ ಕಡೆಗಳ ವಾದವನ್ನು ಪರಿಗಣಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿದ್ದು, ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ತನ್ನ ತೀರ್ಪನ್ನು ಪ್ರಕಟಿಸಲಿದೆ.
ಇದನ್ನೂ ಓದಿ | ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರುನಿರ್ಮಾಣ ಬೇಕಿಲ್ಲ ಎಂದ ಸದ್ಗುರು