Site icon Vistara News

ಜ್ಞಾನವಾಪಿ ವಿಚಾರಣೆ 26ಕ್ಕೆ ಮುಂದೂಡಿಕೆ, ಸರ್ವೆ ವರದಿಗೆ ಆಕ್ಷೇಪ ಸಲ್ಲಿಸಲು ಅವಕಾಶ

ಜ್ಞಾನವಾಪಿ

ವಾರಾಣಸಿ: ಬಹು ನಿರೀಕ್ಷಿತ ಜ್ಞಾನವಾಪಿ-ಶೃಂಗಾರ ಗೌರಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಮೇ 26ಕ್ಕೆ ಮುಂದೂಡಿದೆ. ಇದೇ ವೇಳೆ, ಮಸೀದಿ ಆವರಣದಲ್ಲಿ ನ್ಯಾಯಾಲಯದ ಸೂಚನೆಯಂತೆ ನಡೆದ ವಿಡಿಯೊಗ್ರಫಿ ಸರ್ವೆಯ ವರದಿಯ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಸೋಮವಾರ ನಡೆದ ವಿಚಾರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ಎ.ಕೆ. ವಿಶ್ವೇಶ್‌ ಅವರು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದವನ್ನು ಸಂಪೂರ್ಣವಾಗಿ ಆಲಿಸಿ ತೀರ್ಪನ್ನು ಕಾದಿರಿಸಿದ್ದರು. ಹೀಗಾಗಿ ಮಂಗಳವಾರ ತೀರ್ಪು ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.

ಮಂಗಳವಾರ ವಿಚಾರಣೆ ಆರಂಭಗೊಂಡಾಗ ಹಿಂದೂಗಳ ಕಡೆಯ ನಾಲ್ವರೂ ಅರ್ಜಿದಾರರು ಉಪಸ್ಥಿತರಿದ್ದರು. ಅವರನ್ನು ಪ್ರತಿನಿಧಿಸುವ ವಕೀಲ ವಿಷ್ಣು ಜೈನ್‌ ಅವರು, ʻʻಮಸೀದಿಯ ಒಳಗೆ ಶಿವಲಿಂಗ ಪತ್ತೆಯಾಗಿರುವುದರಿಂದ ಅಲ್ಲೇ ಪೂಜೆ ಮಾಡುವ ಅಧಿಕಾರವನ್ನು ನೀಡಬೇಕುʼʼ ಎಂದು ಕೋರ್ಟನ್ನು ವಿನಂತಿಸಿದರು.

ಈ ನಡುವೆ, ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಸರ್ವೆಗೆ ಆದೇಶದ ನೀಡಿದ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮೇ 26ಕ್ಕೆ ಕೈಗೆತ್ತಿಕೊಳ್ಳುವುದಾಗಿ ಜಿಲ್ಲಾ ನ್ಯಾಯಾಲಯ ತಿಳಿಸಿತು. ಆದೇಶ 7, ನಿಯಮ 11ರ ಅಡಿಯಲ್ಲಿ ಅರ್ಜಿಯ ಸ್ವೀಕಾರದ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಕೋರ್ಟ್‌ ಹೇಳಿತು.

ಏನಿದು ಜ್ಞಾನವಾಪಿ ವಿವಾದ?
ವಾರಾಣಸಿಯ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯಲ್ಲಿ ದೇವರ ಚಿತ್ರಗಳಿವೆ. ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ಮಹಿಳೆಯರು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟ್‌ ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸಂಕೇತಗಳು ಏನೆಲ್ಲ ಇವೆ ಎಂದು ತಿಳಿಯುವುದಕ್ಕಾಗಿ ವಿಡಿಯೊಗ್ರಫಿ ಸರ್ವೆ ನಡೆಸಲು ಸೂಚಿಸಿತು. ಅದಕ್ಕಾಗಿ ನ್ಯಾಯವಾದಿ ಅಜಯ್‌ ಕುಮಾರ್‌ ಮಿಶ್ರಾ ಅವರನ್ನು ಕೋರ್ಟ್‌ ಕಮೀಷನರ್‌ ಆಗಿ ನೇಮಿಸಿತು. ಆದರೆ, ಜ್ಞಾನವಾಪಿ ಆಡಳಿತ ಮಂಡಳಿ ಈ ಆದೇಶ ಮತ್ತು ಕೋರ್ಟ್‌ ಕಮೀಷನರ್‌ ಆಗಿ ಮಿಶ್ರಾ ಅವರನ್ನು ನೇಮಿಸಿದ್ದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿತು.

ಇದನ್ನೂ ಓದಿ | ಜ್ಞಾನವಾಪಿ ಮಸೀದಿ: ಮುಂದಿನ ವಿಚಾರಣೆ ದಿನಾಂಕ ನಾಳೆ ಫಿಕ್ಸ್, ರದ್ದಾಗುತ್ತಾ ಪೂಜಾ ಸ್ಥಳಗಳ ಕಾಯಿದೆ?

ಆದರೆ, ಕೋರ್ಟ್‌ ಈ ಎರಡೂ ಆಕ್ಷೇಪಗಳನ್ನು ಒಪ್ಪಿಕೊಳ್ಳಲಿಲ್ಲ. ಕೋರ್ಟ್‌ ಕಮಿಷನರ್‌ ಅವರನ್ನು ಬದಲಾಯಿಸಲು ಒಪ್ಪಲಿಲ್ಲ. ಇದನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ಪರ ವಕೀಲರು ಸುಪ್ರೀಂಕೋರ್ಟ್‌ ಮೊರೆ ಹೊಕ್ಕರು. ಸುಪ್ರೀಂಕೋರ್ಟ್‌ ಕೂಡಾ ತಕ್ಷಣಕ್ಕೆ ಸರ್ವೆಗೆ ತಡೆಯಾಜ್ಞೆ ನೀಡಲು ಒಪ್ಪಲಿಲ್ಲ.

ಇತ್ತ ಕೋರ್ಟ್‌ ಕಮಿಷನರ್‌ ನಡೆಸಿದ ಮೂರು ದಿನಗಳ ವಿಡಿಯೊಗ್ರಫಿ ಸರ್ವೆ ವೇಳೆ ಜ್ಞಾನವಾಪಿ ಆವರಣದ ಕೊಳದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ ಎಂಬ ಮಾತು ಕೇಳಿಬಂತು. ಈ ವಿಚಾರ ಸರ್ವೆ ಹಂತದಲ್ಲೇ ಬಯಲಾದ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆಗಾಗಿ ನ್ಯಾಯಾಲಯವು ಕೋರ್ಟ್‌ ಕಮೀಷನರ್‌ ಹುದ್ದೆಯಿಂದ ಮಿಶ್ರಾ ಅವರನ್ನು ವಜಾಗೊಳಿಸಿತು. ಇತ್ತ ಸುಪ್ರೀಂಕೋರ್ಟ್‌ ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಸ್ಥಳೀಯ ನ್ಯಾಯಾಲಯದ ಬದಲು ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದೆ.

ಮುಂದೇನಾಗುತ್ತದೆ?
ಮೇ 26ರವರೆಗೆ ಸರ್ವೆ ವರದಿಗೆ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಮುಸ್ಲಿಂ ಪರ ವಕೀಲರು ಈ ಸರ್ವೆಯೇ ಕಾನೂನುಬಾಹಿರ ಎಂದು ವಾದಿಸುವ ಸಾಧ್ಯತೆಗಳಿವೆ. ಹಿಂದೂ ಪರ ವಕೀಲರು ಸರ್ವೆಯ ಆಧಾರದಲ್ಲಿ ಶಿವಲಿಂಗ ಮತ್ತು ದೇವರ ಮೂರ್ತಿಗಳಿಗೆ ಪೂಜೆ ಮಾಡಲು ಅವಕಾಶ ಕೇಳುವ ಸಾಧ್ಯತೆ ದಟ್ಟವಾಗಿದೆ. ಒಟ್ಟಿನಲ್ಲಿ ಪ್ರಕರಣ ಕಗ್ಗಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ | Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

Exit mobile version