ವಾರಾಣಸಿ: ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದ ಒಳಗೆ ಇರುವ ಶೃಂಗಾರ ಗೌರಿ ಸ್ಥಳದಲ್ಲಿರುವ ಹಿಂದೂ ದೇವರ ಚಿತ್ರಗಳಿಗೆ ಪೂಜೆ ಮಾಡಲು ಅವಕಾಶ ಕೋರಿ ಐವರು ಮಹಿಳಾ ಭಕ್ತರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವೇ ಎಂಬ ವಿಚಾರಕ್ಕೆ ಸಂಬಂಧಿಸಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ಮರು ಆರಂಭಗೊಂಡಿತು. ಈ ವೇಳೆ, ಪೂಜೆಗೆ ಅವಕಾಶ ನೀಡಲಾಗದು ಎಂದು ಮುಸ್ಲಿಂ ಅರ್ಜಿದಾರರು ವಾದಿಸಿದರು.
ಅಂಜುಮಾನ್ ಇನ್ತೆಜಾಮಿಯಾ ಮಸೀದಿ ಸಮಿತಿ ವಕೀಲರು ತಮ್ಮ ವಾದ ಮಂಡಿಸಿ, ೧೯೯೧ರ ಪೂಜಾಸ್ಥಳಗಳ ಕಾಯಿದೆಯ ಪ್ರಕಾರ ಇಲ್ಲಿ ಪೂಜೆಗೆ ಅವಕಾಶ ನೀಡಲಾಗದು ಎಂದು ಹೇಳಿದರು. ವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ ೧೨ಕ್ಕೆ ಮುಂದೂಡಿತು.
ಸಮೀಕ್ಷೆಯ ಬಳಿಕ ತಿರುವು
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಗೋಡೆಯಲ್ಲಿರುವ ಹಿಂದೂ ದೇವರುಗಳ ಚಿತ್ರಕ್ಕೆ ಪೂಜೆ ಮಾಡಲು ಅವಕಾಶ ಕೋರಿ ಮಹಿಳೆಯರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಾರಾಣಸಿಯ ಸ್ಥಳೀಯ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು. ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ನಡೆದ ವಿಡಿಯೊಗ್ರಫಿ ಸರ್ವೆ ವೇಳೆ ಮಸೀದಿಯ ಆವರಣದಲ್ಲಿ ಮುಸ್ಲಿಮರು ಪ್ರಾರ್ಥನೆಗೆ ಮುನ್ನ ಕೈಕಾಲು ತೊಳೆಯುವ ನೀರಿನ ಕೊಳದ ನಡುವೆ ಶಿವಲಿಂಗದ ಆಕೃತಿಯ ರಚನೆ ಪತ್ತೆಯಾಗಿತ್ತು. ಇದನ್ನು ಹಿಂದೂ ಪರ ವಕೀಲರು ಈ ಹಿಂದೆ ಪೂಜಿಸುತ್ತಿದ್ದ ಶಿವಲಿಂಗ ಎಂದು ವಾದಿಸಿದರೆ ಮುಸ್ಲಿಂ ಅರ್ಜಿದಾರರು ಇದು ಶಿವಲಿಂಗವಲ್ಲ, ಕಾರಂಜಿಯ ಅಡಿ ಭಾಗ ಎಂದು ವಾದಿಸಿದ್ದರು.
ವಿಡಿಯೊಗ್ರಫಿ ಸರ್ವೆಯ ವರದಿಯನ್ನು ಕೋರ್ಟ್‌ನಿಂದ ನೇಮಿಸಲಾದ ವಿಶೇಷ ಸಹಾಯಕ ಕಮೀಷನರ್ ವಿಶಾಲ್ ಸಿಂಗ್ ಅವರು ಮೇ ೧೯ರಂದು ವಾರಾಣಸಿ ಕೋರ್ಟ್‌ಗೆ ಸಲ್ಲಿಸಿದ್ದರು. ಈ ನಡುವೆ, ವಿಡಿಯೊಗ್ರಫಿಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ವರದಿಯನ್ನು ಸ್ಥಳೀಯ ನ್ಯಾಯಾಲಯದ ಬದಲು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಅದಾದ ಬಳಿಕ ವಿಚಾರಣೆ ವಾರಾಣಸಿ ಕೋರ್ಟ್‌ನಲ್ಲಿ ನಡೆಯುತ್ತಿದೆ. ʻಶಿವಲಿಂಗʼಕ್ಕೆ ಸೂಕ್ತವಾದ ರಕ್ಷಣೆ ನೀಡಬೇಕು ಮತ್ತು ಮುಸ್ಲಿಮರ ಪಾರ್ಥನೆಗೆ ಯಾವ ರೀತಿಯಲ್ಲೂ ಅಡ್ಡಿಪಡಿಸಬಾರದು ಎಂದು ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿತ್ತು.
ಮುಸ್ಲಿಂ ಅರ್ಜಿದಾರರ ವಾದ
ಹಿಂದೂ ಅರ್ಜಿದಾರರು ಮಸೀದಿ ಆವರಣದಲ್ಲಿರುವ ದೇವರ ಮೂರ್ತಿಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿ ಮುಸ್ಲಿಂ ಅರ್ಜಿದಾರರು ೫೨ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇವುಗಳ ಪೈಕಿ ೩೯ ಅಂಶಗಳ ಬಗ್ಗೆ ಈಗಾಗಲೇ ಮುಸ್ಲಿಂ ಅರ್ಜಿದಾರರು ವಾದ ಮಾಡಿದ್ದರು. ಮುಸ್ಲಿಂ ಅರ್ಜಿದಾರರ ಪರ ಅಡ್ವೊಕೇಟ್ ಅಭಯ ನಾಥ್ ಯಾದವ್ ಸೋಮವಾರ ವಾದ ಮುಂದುವರಿಸಿದರು.
ಹಿಂದೂ ವಕೀಲರು ಹೇಳುವುದೇನು?
ಮುಸ್ಲಿಂ ಅರ್ಜಿದಾರರ ಪರ ವಕೀಲರ ವಾದದ ಬಳಿಕ ಹಿಂದೂ ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡಿಸಲಿದ್ದಾರೆ. ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಾದ ವಿಷ್ಣು ಜೈನ್ ಅವರು, ʻʻಒಮ್ಮೆ ಕೋರ್ಟ್ ಈ ಅರ್ಜಿಯ ವಿಚಾರಣಾರ್ಹತೆಯನ್ನು ಎತ್ತಿಹಿಡಿಯುತ್ತಿದ್ದಂತೆಯೇ ಪ್ರಾಚ್ಯವಸ್ತು ಇಲಾಖೆ ನಡೆಸಿದ ತನಿಖೆಯ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗುವುದು,ʼʼ ಎಂದು ಹೇಳಿದರು.
ʻʻಕೆಲವರು ಪೂಜಾಸ್ಥಳಗಳ ನಿರ್ವಹಣಾ ಕಾಯಿದೆ ೧೯೯೧ರ ಪ್ರಕಾರ, ೧೯೪೫ಕ್ಕಿಂತ ಮೊದಲಿನ ಪ್ರಕರಣಗಳನ್ನು ಪರಿಗಣಿಸುವಂತಿಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಕೋರ್ಟ್‌ನಲ್ಲೇ ವಾದ ಮಂಡಿಸಲಿದ್ದೇವೆʼʼ ಎಂದು ವಿಷ್ಣು ಜೈನ್ ಹೇಳಿದರು.
೪೦ ಮಂದಿಗೆ ಮಾತ್ರ ಅವಕಾಶ
ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ವಿಚಾರಣೆಯ ವೇಳೆ ಕೇವಲ ೪೦ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರ್ಜಿದಾರರು ಮತ್ತು ಅವರ ಪರ ವಕೀಲರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಕೋರ್ಟ್‌ನ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಆವರಣದಲ್ಲೂ ಕಟ್ಟೆಚ್ಚರ ವಹಿಸಲಾಗಿತ್ತು.