ಕೊಪ್ಪಳ: ರಾಜ್ಯಾದ್ಯಂತ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಧರ್ಮ ದಂಗಲ್ ನಡೆಸುತ್ತಿರುವವರ ನಡುವೆಯೇ ಇಲ್ಲೊಬ್ಬ ವ್ಯಕ್ತಿ ತಾನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಹನುಮನ ಮೇಲಿನ ಭಕ್ತಿಯಿಂದ ಮಾಲೆ ಧರಿಸಿ (Hanuma jayanti) ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹನುಮ ಜಯಂತಿ ಆಚರಣೆ ನಡೆಯುತ್ತಿದ್ದು, ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಬೆಟ್ಟದ ಮೇಲಿನ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಇವರ ಪೈಕಿ ಇಮಾಮ ಜಾಫರ ಸೈಯದ್ ಸಾಬ ಚಪ್ಪರಬಂದ ಅವರೂ ಅಂಜನಾದ್ರಿಗೆ ಆಗಮಿಸಿ ದರ್ಶನ ಪಡೆದರು.
ಇಮಾಮ ಜಾಫರ ಸೈಯದ್ ಸಾಬ ಚಪ್ಪರಬಂದ ಅವರು ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದವರು. 11 ದಿನ ಹನುಮ ಮಾಲೆ ಧರಿಸಿದ ಜಾಫರಸಾಬ ಅವರು ಸೋಮವಾರ ಗ್ರಾಮದ ಇನ್ನುಳಿದ ಹನುಮ ಮಾಲಾಧಾರಿಗಳೊಂದಿಗೆ ಬಂದು ಆಂಜನೇಯನ ದರ್ಶನ ನಡೆದರು.
ಸರ್ವ ದೇವರ ಭಕ್ತ ಈ ಚಪ್ಪರಬಂದ, ಅಯ್ಯಪ್ಪ ಮಾಲೆ ಕೂಡಾ ಹಾಕಿದ್ದರು
ನಿತ್ಯ ನಮಾಜು ಮಾಡುವ ಈ ಶ್ರದ್ಧಾವಂತ ಮುಸ್ಲಿಂ ವ್ಯಕ್ತಿ ಅದೇ ಹೊತ್ತಿಗೆ ಹಿಂದು ದೇವರ ಪೂಜೆಯನ್ನೂ ಮಾಡುತ್ತಾರೆ. 1994ರಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದ ಜಾಫರಸಾಬ ಈಗ ಹನುಮಮಾಲೆ ಧಾರಣೆ ಮಾಡಿದ್ದಾರೆ.
ನಾವೆಲ್ಲರೂ ಒಂದೇ ಎನ್ನುವ ಜಾಫರ ಸಾಬ
ʻʻಜಾತಿ ಧರ್ಮ ಬಿಟ್ಟು ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು. ಒಂದೇ ಎಂಬ ಅಭಿಪ್ರಾಯ ಬಂದರೆ ಬೇರೆ ದೇಶದವರು ಏನು ಮಾಡೋಕೆ ಆಗೊಲ್ಲʼʼ ಎನ್ನುವುದು ಜಾಫರ ಸಾಬ ಅವರ ಮುಗ್ಧ ಮತ್ತು ಅಷ್ಟೇ ಪ್ರಬುದ್ಧವಾದ ಮಾತು.
ಇದನ್ನೂ ಓದಿ | ಹನುಮ ಜಯಂತಿ| ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನಕ್ಕೆ ಜನಸಾಗರ