Site icon Vistara News

Hanuman Jayanti 2023 : ಮುದ್ದು ಮುಖದಾತ ನಮ್ಮ ಮುಖ್ಯ ಪ್ರಾಣನಾಥನೊ…

Hanuman Chalisa: Significance and importance Of Reciting Hanuman Chalisa in kannada

anjaneya

ಮೇರುಮಂದಾರ ಗಾತ್ರನೂ, ಜಯಾಸಂಕರ್ಷಣ ಪುತ್ರನೂ, ಪರಮ ಪವಿತ್ರನೂ, ಸಾಧಕ ಜನರ ಗತಿಗೋತ್ರನೂ, ಚಿತ್ರ ಚರಿತ್ರನೂ, ಸೂತ್ರನಾಮಕನೂ, ಗೋತ್ರೋದ್ಧಾರಕನೂ ಆದ ಹನುಮಂತ ಯುಗಯುಗಗಳಲ್ಲಿಯೂ ಪೂಜಿತನಾಗಿದ್ದಾನೆ. ಚೈತ್ರ ಶುದ್ಧ ಪೂರ್ಣಿಮೆಯಂದು ಹನುಮಂತ ಅವತಾರ ಮಾಡಿದ ದಿನ (Hanuman Jayanti 2023). ಈ ದಿನ ಹನುಮಂತದೇವರ ವಿಗ್ರಹವನ್ನು ತೊಟ್ಟಿಲಲ್ಲಿ ಇಟ್ಟು ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ.

ಪರಿಪೂರ್ಣ ವ್ಯಕ್ತಿತ್ವಹನುಮಂತನದ್ದಾಗಿದೆ. ಹನುಮಂತನ ಚಿತ್ರಣ ರಾಮಾಯಣದ ಘನತೆಯನ್ನು ಹೆಚ್ಚಿಸಿದೆ. ಆತ
ದಕ್ಷ, ಸಮರ್ಥ ಹಾಗೂ ಸಂಸ್ಕಾರವಂತ. ಹನುಮನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ರಾಮನ ಚಿಂತನೆಯ
ಕಾರ್ಯರೂಪವೇ ಹನುಮ. ರಾಮನ ಆಲೋಚನೆಗಳನ್ನು ವಾಸ್ತವಕ್ಕೆ ತರುವುದೇ ಹನುಮನ ಜೀವನದ ಗುರಿ.

ಇಂತಹ ಮಹಾನ್‌ ವ್ಯಕ್ತಿಯನ್ನು ಕೋತಿಯ ದೇಹದ ಮುಖಾಂತರ ರೂಪಿಸುವ ವಾಲ್ಯೀಕಿಗಳ ಮೇಧಾಶಕ್ತಿಗೆ ನಮೋ ನಮಃ ಎಂದು ಹೇಳಲೇಬೇಕು. ವಿಚಾರವಂತ ಸಾಧಕ ಒಮ್ಮೆ ನಿಂತು ಆಲೋಚಿಸುವಂತೆ ಮಾಡುವುದೇ ವಾಲ್ಮೀಕಿಗಳ ಮುಖ್ಯ ಉದ್ದೇಶವಾಗಿತ್ತಂತೆ.

ಅಂಜನಾದ್ರಿಯಲ್ಲಿನ ಆಂಜನೇಯ

ನಮ್ಮಸಂಸ್ಕೃತಿಯಲ್ಲಿ ಕೋತಿಯನ್ನು ಮನಸ್ಸಿನ ಆಲೋಚನೆಗಳಿಗೆ ಹೋಲಿಸಲಾಗಿದೆ. ಕೋತಿ ಹಾಗೂ ಆಲೋಚನೆ ಇವೆರಡೂ ಚಂಚಲ ಹಾಗೂ ಅಸ್ಥಿರ. ಸುಗ್ರೀವ ಎಂದರೆ ಸುಷ್ಟುಗ್ರೀವ -ಸ್ಥಿರವಾದ ಕತ್ತುಳ್ಳವನೆಂದರ್ಥ. ಅವನ ಮಂತ್ರಿ ಹನುಮಂತ. ಹನುಮಾನ್‌ ಬುದ್ಧಿವಂತ ಹಾಗೂ ವಿಚಾರವಂತ. ಇಂತಹ ವ್ಯಕ್ತಿ ಕೇವಲ ಸುಗ್ರೀವನಿಗೆ ಮಂತ್ರಿಯಾಗಿದ್ದಿದ್ದರೆ ಆತನ ನಿಜವಾದ ಶಕ್ತಿ ಅಭಿವ್ಯಕ್ತವಾಗುತ್ತಿರಲಿಲ್ಲ ಕೇವಲ ಬುದ್ಧಿವಂತಿಕೆ ಹಾಗೂ ವಿಚಾರಶೀಲತೆ ಜೀವನವಲ್ಲ ಅದು ಸದುಪಯೋಗಗೊಳ್ಳಬೇಕು.

ಇದನ್ನರಿತ ವಾಲ್ಮೀಕಿಗಳು ಈ ಹನುಮನನ್ನು ಚೈತನ್ಯರೂಪಿ ಶ್ರೀರಾಮಚಂದ್ರನನ್ನು ಸೇರುವಂತೆ ಮಾಡಿ ಅಧ್ಯಾತ್ಮದ ತತ್ವವನ್ನು ನಾವೆಲ್ಲರೂ ಅರಿಯುವಂತೆ ಮಾಡಿದ್ದಾರೆ. ಬುದ್ಧಿವಂತಿಕೆ ಹಾಗೂ ವಿಚಾರಶೀಲತೆ ರಾಮನಿಗೆ ಶರಣಾಗತ ವಾದಾಗ ಮಾತ್ರ ನಿಜವಾದ. ಅಧ್ಯಾತ್ಮವು ಅರಿವಾಗುತ್ತದೆ ಎಂಬ ವಾಸ್ತವವನ್ನು ವಾಲ್ಮೀಕಿಗಳು ಜಗತ್ತಿಗೆ ರಾಮಾಯಣದ ಮುಖಾಂತರ ತಿಳಿಸಿಕೊಟ್ಟಿದ್ದಾರೆ.

ಪೂಜೆ ಹೇಗೆ?
ಹನುಮನ ಜಯಂತಿಯ ದಿನ ರಾಮಾಯಣದ ʻಸುಂದರಕಾಂಡʼ ಪಾರಾಯಣ ಮಾಡಬೇಕು. ಪ್ರಾತಃಕಾಲದಲ್ಲಿ ವಾಯುಸ್ತುತಿಯನ್ನು ಪಠಿಸುತ್ತ ಪ್ರಾಣದೇವರ ಪ್ರತಿಮೆಗೆ ಮಧು ಅಭಿಷೇಕ ಮಾಡಬೇಕು. ಪವಮಾನ ಹೋಮವನ್ನೂ ಮಾಡಬಹುದು. ಪಾನಕ, ಕೋಸಂಬರಿ ಲಡ್ಡುಗಳನ್ನು ನೈವೇದ್ಯ ಮಾಡಬೇಕು.
ಅರ್ಘ್ಯ ಮಂತ್ರ;
ನಮಸ್ತೆ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಭುಧಿಚಂದ್ರಾಯ ಭವಿಷ್ಯಧ್ ಬ್ರಹ್ಮಣೇನಮಃ ||

ಪ್ರಾರ್ಥನೆ ಮಂತ್ರ;
ಬಳಿತ್ಥಾದಿತ್ರಯಿವೇದ್ಯ ತ್ರಿರೂಪಾಯತ್ರಿರೂಪಾಯ ಮಹಾತ್ಮಾನೇ |
ಭಕ್ತಾಭಿಷ್ಟಪ್ರದಾಯಾಸ್ತು ನಮಸ್ತೇ ಭಾರತಿಪತೇ ||

ರಾಮಾಯಣದಲ್ಲಿ ಹನುಮಂತನ ಪ್ರವೇಶದ ನಂತರ ಇಡೀ ರಾಮಾಯಣವೇ ಸುಂದರವಾಗುತ್ತದೆ. ಹನುಮಂತನಿಗಾಗಿಯೇ ಮೀಸಲಾದ ಖಂಡ ಸುಂದರಕಾಂಡ. ಹನುಮಂತನ ಗುಣಗಾನ. ಆತನ ನೈಜ ವ್ಯಕ್ತಿತ್ವ ಆತನ ಬುದ್ಧಿಶಕ್ತಿಯ ಉಪಯೋಗ ಇವೆಲ್ಲವೂ ರಾಮಾಯಣದ ಹಿರಿಮೆಯನ್ನು ಒಂದು ಹೆಜ್ಜೆ ಮುಂದೆ ಕರೆದೊಯ್ಯುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಮ್ಮ ಮನಸ್ಸಿನ ಪ್ರತಿಯೊಂದು ಆಲೋಚನೆಯು ಸಹ ಒಂದು ಕೋತಿಯಂತೆ, ಆ ಆಲೋಚನೆಯನ್ನು ಹನುಮಂತನನ್ನಾಗಿ ಮಾಡುವ ಸಾಮರ್ಥ್ಯ ನೀಡುವವನು ನಮ್ಮ ಚೈತನ್ಯರೂಪಿ ಶ್ರೀರಾಮ. ಶ್ರೀರಾಮನ ಆಗಮನದ ನಂತರ ಹನುಮಂತನ ವ್ಯಕ್ತಿತ್ವವೇ ಬೇರೆ ತರನಾಗಿದೆ. ಹನುಮಂತನೆಂಬ ಆಲೋಚನೆ ಶ್ರೀರಾಮಚಂದ್ರನ ಬಳಿ ಬಂದಾಗ, ಆ ಆಲೋಚನೆಯು. ವಂದಿಸಲು ಯೋಗ್ಯ. ಆ ವ್ಯಕ್ತಿ ಸರ್ವೋತ್ತಮ. ಆ ಹನುಮಂತನು ಮುಂದೆ ಜಗದ್ವಂದ್ಯನಾಗುತ್ತಾನೆ. ಮುಂದಿನ ಹಲವಾರು ಯುಗಗಳಲ್ಲಿ ದೇವರಾಗಿ ಪೂಜಿಸಲು ಯೋಗ್ಯನಾಗುತ್ತಾನೆ.

ರಾಮನ ಯಶಸ್ಸು ಹನುಮನ ಯಶಸ್ಸು. ಹನುಮನ ಬುದ್ಧಿಸಾಮರ್ಥ್ಯಕ್ಕೆ ಸರಿಸಾಟಿ ಯಾರೂ ಇಲ್ಲ. ಅವನು ಉತ್ತಮರಿಗಿಂತ ಉತ್ತಮ, ಭಕ್ತಿ ಅವನ ಶಕ್ತಿ, ಹನುಮನ ಮುಖಾಂತರ ಅಭಿವ್ಯಕ್ತಗೊಂಡ ಚೈತನ್ಯವು ಮುಂದೆ ಕೇವಲ ಕೋತಿಯಾಗಿರದೆ, ಲೋಕಕ್ಕೆ ಆದರ್ಶವಾಗುತ್ತದೆ.

ಇಂದಿನ ಯುವಪೀಳಿಗೆಗೆ ಹನುಮಂತನೆಂಬ ಆದರ್ಶ ನಮ್ಮಲ್ಲಿದೆ, ಅದನ್ನು ಸಾಕಾರಗೊಳಿಸಿ ಜಗತ್ತಿಗೆ ಉತ್ತಮ ಕೊಡುಗೆಯನ್ನು ನೀಡಬೇಕೆಂಬ ಸತ್ಯವನ್ನು ಅರಿತರೆ ಆಗ ರಾಮಾಯಣ ಪೂರ್ಣ ಸಾರ್ಥಕತೆ ಪಡೆಯುತ್ತದೆ.

ಇದನ್ನೂ ಓದಿ: Prerane : ಆಧ್ಯಾತ್ಮಿಕ ಮಾರ್ಗದಲ್ಲಿ ಪುರಾಣ ಗ್ರಂಥಗಳಿಗೆ ಮಹತ್ವವಿದೆಯೇ?

Exit mobile version