Site icon Vistara News

Happy Christmas 2023 : ಪ್ರೀತಿ, ವಾತ್ಸಲ್ಯ, ಕರುಣೆಯ ಜಗತ್ತು ಕಟ್ಟಿದ ಮಹಿಮಾನ್ವಿತ ಯೇಸು ಕ್ರಿಸ್ತರು

Christmas 2023

ಜೆರಾಲ್ಡ್‌ ಫರ್ನಾಂಡಿಸ್‌, ಮಂಗಳೂರು

ತನ್ನ ಬದುಕಿನ ಉದ್ದಕ್ಕೂ ಸರಳತೆ, ಅಹಿಂಸೆ, ದೇವರ ಮೇಲೆ ಅಚಲ ನಂಬಿಕೆ ಮತ್ತು ಮನುಷ್ಯತ್ವವನ್ನು ಬೋಧಿಸಿದವರು ಯೇಸು ಕ್ರಿಸ್ತರು. ಇವರು ಮಾನವನ ಕಲ್ಯಾಣಕ್ಕಾಗಿ ದೇವರು ಕಳಹಿಸಿದ ದೇವಪುತ್ರ. ತನ್ನ ಜನನ, ಮರಣ, ಪುನರುತ್ಥಾನದ ಮೂಲಕ ಜಗತ್ತಿಗೆ ಅದ್ಭುತ ಸಂದೇಶವನ್ನು ನೀಡಿದವರು. ಅಂಥ ಯೇಸು ಕ್ರಿಸ್ತರ ಜನ್ಮ ದಿನವೇ ಕ್ರಿಸ್ಮಸ್‌ (Happay Christmas 2023).

ಡಿಸೆಂಬರ್‌ 25ರಂದು ಯೇಸು ಕ್ರಿಸ್ತರ ಜನ್ಮದಿನವಾಗಿ ಆಚರಿಸುವ ಕ್ರಿಸ್ಮಸ್‌ ಶಾಂತಿ, ಪ್ರೀತಿ ಮತ್ತು ತ್ಯಾಗದ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ಯೇಸು ದೇವಪುತ್ರನಾದರೂ ಅತ್ಯಂತ ಸರಳವಾಗಿ ಬದುಕುತ್ತಾರೆ ಎಂದು ಮನು ಕುಲಕ್ಕೆ ತಿಳಿಸಲು ದೇವರು ಸಮಾಜದ ಕಟ್ಟಕಡೆಯ ಮಾನವನನ್ನೂ ಪ್ರೀತಿಸುತ್ತಾರೆ ಎಂದು ತಿಳಿಸಿ ಹೇಳಲು ಯೇಸರು ದನದ ಕೊಟ್ಟಿಗೆಯಲ್ಲಿ ಜನಿಸಿದರು. ಯಾವುದೇ ಆಡಂಬರವಿಲ್ಲದೆ, ಶ್ರೀಮಂತಿಕೆ ಇಲ್ಲದೆ ದನದ ಕೊಟ್ಟಿಗೆಯಲ್ಲಿ ಹುಟ್ಟಿದ ಒಂದು, ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕಿದರೂ ಅಸಾಮಾನ್ಯ ಸಾಧನೆ ಮಾಡಬಹುದು ಎನ್ನುವುದಕ್ಕೂ ಯೇಸು ಕ್ರಿಸ್ತರ ಜನನ ಒಂದು ಪ್ರತಿಮೆ.

ಯೇಸು ಕ್ರಿಸ್ತರು ಹುಟ್ಟಿದ್ದು ಜೆರುಜುಲೇಮಿನ ಬೆತ್ಲೆಹೆಮ್ ಎಂಬ ಪುಟ್ಟ ಊರಿನಲ್ಲಿ. ಬೆತ್ಲೆಹೆಮ್ ಎಂಬ ಶಬ್ದದ ಅರ್ಥ ನಿತ್ಯ ಅಹಾರದ ಮನೆ ಎಂದು. ಬೈಬಲ್‌ನಲ್ಲಿ ಬೆಥ್ಲೆಹೆಮ್ ಎಂಬ ಸ್ಥಳ ದಾವಿದ್ ಅರಸನ ನಗರವೆಂಬ ಹೆಸರಿನಿಂದ ಪ್ರಖ್ಯಾತ ವಾಗಿದೆ. ದಾವಿದ್ ಅರಸನಿಗಿಂತ ಮಿಗಿಲಾದ ಸಾಮರ್ಥ್ಯವುಳ್ಳ ಅರಸನೊಬ್ಬ ಬೆಥ್ಲೆಹೆಮ್‌ನಿಂದ ಜನಿಸಿ ಬರುವವನೆಂದು ಯೆಹೂದ್ಯರು ನಂಬಿದ್ದರು. ಅವನು ದೇವರಿಂದ ಅಭಿಷಿಕ್ತನಾದವನು ಎಂಬುದು ಅವರ ನಂಬಿಕೆಯಾಗಿತ್ತು. ಸರ್ವೇಶ್ವರನಾದ ದೇವರು ಇಸ್ರೇಲ್‌ ಜನಾಂಗದವರಿಗೆ ಒಬ್ಬ ವಿಮೋಚಕನನ್ನು ಕಳುಹಿಸುವವರಿದ್ದಾರೆ. ಬಾಬಿಲೊನಿಯರ ಗುಲಾಮಗಿರಿಯಿಂದ ಅವರಿಗೆ ವಿಮೋಚನೆ ಸಿಗುವುದು ಎಂಬ ಧೈರ್ಯವನ್ನು ಯೆಶಾಯ ಪ್ರವಾದಿ ‌ ಇಸ್ರಾಯೇಲರಲ್ಲಿ ತುಂಬಿದ್ದರು.

ದೇವವಾಕ್ಯದಂತೆ ಮೇರಿ ಮತ್ತು ಜೋಸೆಫನ ಮಗನಾಗಿ ಯೇಸುವಿನ ಜನನವಾಗುತ್ತದೆ. ಮೇರಿ ಮತ್ತು ಜೋಸೆಫರಿಗೆ ಮೊದಲೇ ವಿವಾಹ ನಿಶ್ಚಿತಾರ್ಥವಾಗಿತ್ತು. ಮೇರಿ ಮತ್ತು ಜೋಸೆಫ್‌ ಇಬ್ಬರೂ ದೈವಭಕ್ತರು. ಇದ್ದಕ್ಕಿದ್ದ ಹಾಗೆ ಮರಿಯಳಿಗೆ ಒಂದು ಆಶರೀರವಾಣಿ ಕೇಳಿಸುತ್ತದೆ. ನೀನು ಪ್ರವಿತ್ರಾತ್ಮರಿಂದ ಗರ್ಭ ತಾಳಿ ಒಂದು ಗಂಡು ಮಗುವಿಗೆ ಜನ್ಮ ತಾಳುವೆ ಎಂಬ ವಾಣಿ ಕೇಳಿಸುತ್ತದೆ. ಜೋಸೆಫನಿಗೆ ಕೂಡ ದೇವ ದೂತ ಮೇರಿಯನ್ನು ನಿನ್ನ ಪತ್ನಿಯಾಗಿ ಸ್ವೀಕರಿಸು. ಆಕೆ ಪ್ರವಿತ್ರಾತ್ಮದ ಪ್ರಭಾವದಿಂದ ಒಬ್ಬ ಮಗನನ್ನು ಹಡೆಯುವಳು. ಆತನಿಗೆ ಯೇಸು ಎಂದು ಹೆಸರಿಡಬೇಕು ಎಂದು ಹೇಳುತ್ತದೆ. ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವನು ಆತನೇ ಎಂದು ದೇವವಾಣಿಯಾಗಿದ್ದರಿಂದ ಮೇರಿ ಮತ್ತು ಜೋಸೆಫರು ಯೇಸುವನ್ನು ತಂದೆ ತಾಯಿಯಾಗಿ ಸಾಕಿ ಸಲಹಿದರು.

ಹೀಗೆ ʻಪ್ರೀತಿಯೇ ಪರಮಾತ್ಮ-ಪ್ರೀತಿಯೇ ಪರಂಧಾಮʼ ಎನ್ನುವ ಸತ್ಯವನ್ನು ನಿಜವಾಗಿಸಲು ದೇವರು ಮಾನವರಾದರು ಎಂದು ಜಗತ್ತು ನಂಬಿದೆ. ಜಗದಲ್ಲಿರುವ ಅಸತ್ಯವನ್ನು ಅಳಿಸಿ, ಸತ್ಯವನ್ನು ಉಳಿಸಲು. ನಮ್ಮಲ್ಲಿರುವ ಕತ್ತಲನ್ನು ತೊಲಗಿಸಿ ಬೆಳಕು ತುಂಬಲು ಸಾವಿನ ಬಂಧನ ಬಿಡಿಸಿ, ಪುನರುತ್ಥಾನದ ಸಂದೇಶ ಸಾರಲು ದೇವರು ದೀನ ಮಾನವರಾದರು. ಮಾನವ ಮಾನವರ ಮಧ್ಯೆ ಮೈತ್ರಿಯನ್ನು ಮೊಳಗಿಸುವ ಮಹಾಪುರುಷ ಪ್ರಭುಯೇಸುವಾದರು.

ಇದನ್ನೂ ಓದಿ: Christmas Trend: ಕ್ರಿಸ್ಮಸ್‌ ಸೆಲೆಬ್ರೇಷನ್‌ಗೆ ಕಾಲಿಟ್ಟ ಕಲರ್‌ಫುಲ್‌ ಚಿತ್ತಾರದ ಕುಕ್ಕೀಸ್‌

ಯೇಸುವಿನ ಜನನ ಸಂಭ್ರಮದ ಸಂದೇಶಗಳು

ಯೇಸುವಿನ ಜನನದ ಘಟನಾವಳಿಗಳಿಗೆ ಪ್ರತೀಕವಾಗಿ ಗೋದಲಿ, ಘಂಟೆ, ನಕ್ಷತ್ರ, ಕ್ಯಾರಲ್ಸ್‌, ಕುಸ್ವಾರ್‌, ಸಾಂತಾಕ್ಲಾಸ್‌ಗಳನ್ನು ಸಂಕೇತವಾಗಿ ಬಳಸಲಾಗುತ್ತದೆ.

ನಕ್ಷತ್ರ ಎನ್ನುವುದು ನಕ್ಷತ್ರ ಯೇಸುವಿನ ಜನನದ ಒಂದು ಸಂಕೇತವಾಗಿ ಗೋಚರಿಸುತ್ತದೆ. ಯೇಸುವಿನ ಜನನ ಪೂರ್ವ ದಿಕ್ಕಿನಲ್ಲಿ ನಕ್ಷತ್ರ ಗೋಚರಿಸುವ ಮೂಲಕ ಮೂವರು ಜ್ಯೋತಿಷಿಗಳಿಗೆ ಯೇಸುವಿನ ಜನನದ ಸಂಕೇತವಾಗಿ ಗೋಚರಿಸಲ್ಪಟ್ಟದ್ದರಿಂದ ಇಂದಿಗೂ ಯೇಸುವಿನ ಜನನದ ಶುಭ ಸಂದೇಶವನ್ನು ಪ್ರತಿಬಿಂಬಿತವಾಗಿರುವುದರಿಂದ ಕ್ರಿಸ್ಮಸ್ ಹಬ್ಬದ ಮುನ್ನವೇ ನಕ್ಷತ್ರ ಮನೆಯಲ್ಲಿ ಗೋಚರಿಸುತ್ತದೆ.

ಗಂಟೆ ನಮ್ಮನ್ನು ಎಚ್ಚರಿಸುವ ಸಂಕೇತ. ಗಂಟೆಯ ಸದ್ದು ಇಲ್ಲಿ ಸಂರಕ್ಷಕ ಬರುವವನಿದ್ದಾನೆ ಎಂಬುದನ್ನು ಪ್ರತಿನಿಧಿಸುತ್ತದೆ. ಹಾಗೂ ಕ್ರಿಸ್ತ ಜನನದ ಸಂಕೇತವನ್ನು ತಿಳಿಸುತ್ತದೆ.

ಸಾಂತಾಕ್ಲಾಸ್ ಕಲ್ಪನೆ ಪರಿಚಯಿಸಿದ್ದು ಸಂತ ನಿಕೋಲಸ್ ಈತ 4ನೇ ಶತಮಾನದಲ್ಲಿದ್ದ ವ್ಯಕ್ತಿ ಬಡವ, ದೀನರಿಗೆ, ಬಲಿದವರಿಗೆ ಉಡುಗೊರೆ ನೀಡಲು ಈ ವೇಷ ಧರಿಸಿದರು. ಉದ್ದವಾದ ಬಿಳಿಗಡ್ಡ , ದೊಡ್ಡ ಹೊಟ್ಟೆ , ನಗುವಿನ ಮುಖ, ಉದ್ದವಾದ ಕೆಂಪು ದೋತಿ. ಕೆಂಪು ಬಿಳಿ ಮಿಶ್ರಿತ ಟೋಪಿ, ಕೈ ತುಂಬಾ ಉಡುಗೊರೆ ಕೈಯಲ್ಲೊಂದು ಕೋಲು, ಕ್ರಿಸ್ಮಸ್ ಅಜ್ಜ ಎಂದು ಕರೆಯಲ್ಪಡುವ ಸಾಂತಾ ಕ್ಲಾಸ್ ಚಿಕ್ಕ ಮಕ್ಕಳಿಗೂ ಅತೀ ಪ್ರೀತಿ. ಯೇಸುವಿನ ಜನನದ ಸಂದೇಶವನ್ನು ಮನೆ ಮನೆಗೆ ತಲುಪಿಸಲು ವಿಶೇಷವಾಗಿ ಬಿಂಬಿಸಲಾಗುತ್ತದೆ. ಶಾಂತಿ ಪ್ರೀತಿಯ ದ್ಯೋತಕವಾಗಿ ಏಸುವಿನ ಜನನದ ಸಂದೇಶವನ್ನು ಸಾರಲಾಗುತ್ತದೆ.

ಕ್ಯಾರಲ್ಸ್ ಏಸುವಿನ ಜನನ ಸಂದೇಶವನ್ನು ಗೀತೆ ಹಾಡುವುದರ ಮೂಲಕ ಸಾರುವುದಾಗಿದೆ. ಈ ಕ್ಯಾರೆಲ್ಸ್ ಎಂಬ ಹಾಡುವ ಗುಂಪು ಸಾಂತಕ್ಲಾಸ್ ಜೊತೆ ಮನೆ ಮನೆಗೆ ಹೋಗಿ ಸಂದೇಶವನ್ನು ಸಾರುತ್ತಾರೆ. ಮಾತ್ರವಲ್ಲದೆ ಹಬ್ಬದ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕ್ರಿಸ್‌ಮಸ್‌ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ತಯಾರಿಸುವ ಸಿಹಿ ತಿಂಡಿಗಳನ್ನು ಖುಸ್ವಾರ್‌ ಎನ್ನುತ್ತಾರೆ. ಜನ್ಮ ದಿನದ ಸಂಕೇತವೇ ಕೇಕ್. ತಿಂಡಿ. ಚಕ್ಕುಲಿ, ರವೆಲಾಡು, ಕುಕ್ಕಿಸ್ ಹೀಗೆ ಅನೇಕ ಸಿಹಿತಿಂಡಿ ತಯಾರಿಕೆ ಜೋರಾಗಿ ನಡೆಯುತ್ತದೆ.

ಗೋದಲಿಯ ರಚನೆಯ ಮೂಲಕ ಕ್ರಿಸ್ತನ ಜನನವನ್ನು ಪ್ರತಿನಿಧಿಸುವುದು ಒಂದು ಕಡೆಯಾದರೆ ವೈಭವ , ಅಡಂಬರ, ಅಹಂಕಾರಗಳೆಲ್ಲವನ್ನು ತೊರೆದು ಸಾಮಾನ್ಯವಾಗಿ ಜೀವಿಸಿ ಎಂಬ ಸಂದೇಶ ನೀಡಲಾಗುತ್ತದೆ. ಬಡವರಿಗೆ, ನಿರಾಶ್ರಿತರಿಗೆ, ರೋಗಿಗಳಿಗೆ ಸಹಾಯ ಹಸ್ತರಾಗಿ ಎಂಬುದು ಯೇಸುವಿನ ಜನನದ ನಿಜವಾದ ಸಂದೇಶ ಸಾರಿ ಹೇಳುತ್ತದೆ.

ಹೀಗೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಹೊಂದಿರುವ ಕ್ರಿಸ್‌ಮಸ್‌ ಎಲ್ಲರಿಗೂ ಶುಭ ತರಲಿ.


Exit mobile version