ಹಾಸನ: ಪ್ರಸಕ್ತ ಬಾರಿ ಅಕ್ಟೋಬರ್ 13 ರಿಂದ 27ರ ವರೆಗೆ ಹಾಸನಾಂಬ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.
ಶನಿವಾರ (ಸೆ.೧೦) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 13 ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 13ಕ್ಕೆ ಬಾಗಿಲು ತೆರೆಯಲಾಗುತ್ತಿದ್ದು, ಅಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ತಿಳಿಸಿದರು.
ಅಕ್ಟೋಬರ್ 26ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 27 ಕೊನೆಯ ದಿನವಾಗಿದ್ದು, ಅಂದೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಶುಕ್ರವಾರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ದೇವಸ್ಥಾನಕ್ಕೆ ಭೇಟಿ ನೀಡಲಾಗಿದೆ ಎಂದು ಪ್ರೀತಂ ಗೌಡ ತಿಳಿಸಿದರು.
ಇದನ್ನೂ ಓದಿ | ಹಾಸನ ಬಿಜೆಪಿ ಮುಖಂಡನ ಮನೆಗೆ ಪಿಸ್ತೂಲ್ ಹಿಡಿದು ದುಷ್ಕರ್ಮಿಗಳ ಲಗ್ಗೆ, ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳೆ
ಎಲ್ಲರಿಗೂ ಆಹ್ವಾನ
ಸ್ಥಳೀಯರೊಂದಿಗೆ ಚರ್ಚಿಸಿ, ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬಾಗಿಲು ತೆರೆಯಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಶಾಸಕರಿಗೂ ಆಹ್ವಾನ ನೀಡಲಾಗುವುದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಸೇರಿದಂತೆ ವಿರೋಧ ಪಕ್ಷದವರಿಗೂ ಆಹ್ವಾನ ನೀಡಲಾಗುತ್ತದೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.
ಈ ಭಾರಿ ಕಳೆದ ಬಾರಿಗಿಂತ ಹೆಚ್ಚು ಜನರ ನಿರೀಕ್ಷೆಯಲ್ಲಿದ್ದೇವೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಪಾರ್ಕಿಂಗ್, ಶೌಚಾಲಯ ಸೇರಿದಂತೆ ಎಲ್ಲ ಸೌಕರ್ಯವನ್ನೂ ಒದಗಿಲಾಗುತ್ತದೆ ಎಂದು ಶಾಸಕ ಪ್ರೀತಂ ತಿಳಿಸಿದರು.
ಇದನ್ನೂ ಓದಿ | ಜೆಡಿಎಸ್ ಸಮಾವೇಶದಲ್ಲಿ ಗದ್ದಲ; ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು