ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿದೆ. ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವದಲ್ಲಿ ಅರಸು ಮನೆತನದ ನಂಜರಾಜೇಅರಸ್ ಅವರು ದೇವಾಲಯದ ಮುಂಭಾಗ ಬಾಳೆಕಂಬ ಕಡಿಯುತ್ತಿದ್ದಂತೆ, ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
ಇದಕ್ಕೂ ಮೊದಲು ಕಳೆದ ಬಾರಿ ಹಾಕಿದ್ದ ಸೀಲ್‌ಅನ್ನು ತಹಸೀಲ್ದಾರ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪುರೋಹಿತರು ತೆರೆದರು. ಪ್ರಧಾನ ಅರ್ಚಕರಾದ ನಾಗರಾಜ್ ನೇತೃತ್ವದಲ್ಲಿ ಮಂಗಳ ವಾದ್ಯಗಳೊಂದಿಗೆ ದೇಗುಲಕ್ಕೆ ಆಗಮಿಸಿದ ಅರ್ಚಕರ ತಂಡ ದೇವಿ ಒಡವೆ, ಪೂಜಾ ಸಾಮಗ್ರಿಗಳೊಂದಿಗೆ ಗರ್ಭಗುಡಿಯ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪುರೋಹಿತರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸರಿಯಾಗಿ 12.12ಕ್ಕೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ, ಎಸ್‌ಪಿ ಹರಿರಾಂಶಂಕರ್ ಸೇರಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಚಕರು ಬಾಗಿಲು ತೆರೆದರು.
ಸಾರ್ವಜನಿಕರಿಗಿಲ್ಲ ದರ್ಶನ ಭಾಗ್ಯ
ಮೊದಲ ದಿನ ದೇವಾಲಯದ ಸ್ವಚ್ಛತೆ, ಸುಣ್ಣ ಬಣ್ಣ ಬಳಿಯಲಿದ್ದು ಪೂಜೆ, ನೈವೇದ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಂಕ್ರಾಮಿಕ ಕೊರೊನಾ ಸೋಂಕಿನ ನಂತರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಜತೆಗೆ ಈ ಬಾರಿ ಒಂದು ದಿನ ಗ್ರಹಣ ಬಂದಿದ್ದು, ಆ ದಿನವೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ.