Site icon Vistara News

Hayagreeva Jayanthi | ಜ್ಞಾನದ ಮೂರ್ತ ಸ್ವರೂಪ ಹಯಗ್ರೀವವತಾರ

Hayagreeva Jayanthi

ಇಂದು ಹಯಗ್ರೀವ ಜಯಂತಿ (Hayagreeva Jayanthi). ಕುದುರೆಯ ಮುಖವುಳ್ಳ, ಮಾನವ ಶರೀರವುಳ್ಳ ಅತ್ಯಂತ ಸ್ತುತ್ಯವಾದ, ಪೂಜ್ಯವಾದ ಮಹಾವಿಷ್ಣುವಿನ ಅವತಾರ ಹಯಗ್ರೀವ ದೇವರನ್ನು ಪೂಜಿಸುವ ಸಮಯ. ʼಹಯʼ ಎಂದರೆ ಕುದುರೆ ಮತ್ತು ʼಗ್ರೀವʼ ಎಂದರೆ ಕತ್ತು. ಹೀಗಾಗಿ ಕತ್ತಿನಿಂದ ಮೇಲಕ್ಕೆ ಕುದುರೆಯ ಆಕಾರವನ್ನು ಹೊಂದಿರುವ ರೂಪವನ್ನು ಹಯಗ್ರೀವ ಎಂದು ಕರೆಯುತ್ತಾರೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಹಯಗ್ರೀವಾವತಾರವು ಪ್ರತಿನಿಧಿಸುವ ತತ್ತ್ವದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.

ಪರಮಾತ್ಮನ ಇಪ್ಪತ್ತನಾಲ್ಕು ಅವತಾರಗಳಲ್ಲಿ ಹಯಗ್ರೀವವತಾರವೂ ಒಂದು. ಹಯಗ್ರೀವನು 4 ತೋಳುಗಳ, ಎರಡೂ ಕೈಗಳಲ್ಲಿ ಶಂಖ ಮತ್ತು ಚಕ್ರವನ್ನು ಹಾಗೂ ಒಂದು ಕೈಯಲ್ಲಿ ಅಕ್ಷಾ ಮಾಲೆಯನ್ನು ಹಾಗೂ ಉಳಿದೊಂದು ಕೈಯಲ್ಲಿ ವ್ಯಕ್ತಮುದ್ರೆಯನ್ನು ಧರಿಸಿದ ದೈವವೆಂದು ಚಿತ್ರಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ವೇದಗಳನ್ನು ಹಿಡಿದಿರುವಂತೆಯೂ ಚಿತ್ರಿಸಲಾಗುತ್ತದೆ. ಹಯಗ್ರೀವ ದೇವರು ಜ್ಞಾನದ ಶುದ್ಧತೆಗೆ ಸಂಬಂಧಿಸಿ ದೇವರಾಗಿದ್ದಾನೆ.

ಈ ಅವತಾರದ ಕಥೆಯೇನು?

ಮಧುಕೈಟಭರೆಂಬ ಇಬ್ಬರು ರಾಕ್ಷಸರು ಚತುರ್ಮುಖಬ್ರಹ್ಮನ ಬಳಿಯಿಂದ ವೇದಗಳನ್ನು ಅಪಹರಿಸಿ ಅವುಗಳನ್ನು ಯಾರಿಗೂ ಸಿಗದಂತೆ ಸಮುದ್ರದ ಅಡಿಯಲ್ಲಿ ಬಚ್ಚಿಟ್ಟರು. ಜ್ಞಾನರೂಪವಾದ ವೇದಗಳ ಸಾನಿಧ್ಯ-ಸಹಕಾರವಿಲ್ಲದೇ ಚತುರ್ಮುಖಬ್ರಹ್ಮನೂ ಕೂಡ ತನ್ನ ಸೃಷ್ಟಿ ಕಾರ್ಯದಲ್ಲಿ ತೊಡಗಲು ಅಸಮರ್ಥನಾದನು. ಇದರಿಂದ ಜಗತ್ತೆಲ್ಲವೂ ಅಂಧಕಾರಮಯವಾಯಿತು. ಇಂತಹ ಪರಿಸ್ಥಿತಿಯನ್ನು ನಿವಾರಿಸುವ ದೃಷ್ಟಿಯಿಂದ ಚತುರ್ಮುಖಬ್ರಹ್ಮನು ಪರಮಾತ್ಮನಾದ ಶ್ರೀಮನ್ನಾರಾಯಣನ ಮೊರೆಹೋದನು. ಆಗ ಶ್ರೀಮನ್ನಾರಾಯಣನು ಹಯಗ್ರೀವರೂಪನಾಗಿ ಅವತರಿಸಿ ಮಧುಕೈಟಭರೆಂಬ ರಾಕ್ಷಸರನ್ನು ಸಂಹರಿಸಿ ಮತ್ತೆ ವೇದಗಳನ್ನು ಉದ್ಧರಿಸಿ ಅವುಗಳನ್ನು ಚತುರ್ಮುಖಬ್ರಹ್ಮನಿಗೆ ನೀಡಿ ಅವನು ಎಂದಿನಂತೆ ತನ್ನ ಸೃಷ್ಟಿಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟನು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ದೇವೀ ಭಾಗವತದ ಪ್ರಕಾರ ಒಮ್ಮೆ ವಿಷ್ಣು ಲಕ್ಷ್ಮೀ ಯೊಂದಿಗೆ ಸರಸವಾಡುತ್ತಿದ್ದಾಗ ಹರಿಯ ಹಾಸ್ಯದಿಂದ ಸಿಟ್ಟಾಗಿ ಲಕ್ಷ್ಮೀ ನಿನ್ನ ತಲೆ ಉರುಳಲಿ ಎಂದು ಶಾಪಕೊಡುತ್ತಾಳೆ. ಈ ಸಂದರ್ಭದಲ್ಲಿಯೇ ರಾಕ್ಷಸರಾದ ಮಧುಕೈಟಭರ ಉಪದ್ರವಕ್ಕೀಡಾದ ದೇವತೆಗಳು ನೆರವಿಗಾಗಿ ವಿಷ್ಣುವಿನ ಸನ್ನಿಧಿಗೆ ಬಂದಾಗ ವಿಷ್ಣು ಕ್ಷೀರಸಮುದ್ರದಲ್ಲಿ ಆದಿಶೇಷನ ಮೇಲೆ ಮಲಗಿ ಶಾಙ್ರ್ಗ ಎಂಬ ತನ್ನ ಬಿಲ್ಲನ್ನು ತಲೆದಿಂಬಾಗಿಟ್ಟುಕೊಂಡು ನಿದ್ರಿಸುತ್ತಿದ್ದನು. ಅವನನ್ನು ಎಚ್ಚರಿಸುವ ಮಾರ್ಗ ಕಾಣದ ದೇವತೆಗಳು, ಗೆದ್ದಲುಹುಳುಗಳಿಗೆ ಯಜ್ಞದಲ್ಲಿ ಹವಿರ್ಭಾಗ ಕೊಡುವ ಆಸೆ ತೋರಿಸಿ ಅವು ವಿಷ್ಣುವಿನ ದಿಂಬನ್ನಾಗಿ ಮಾಡಿಕೊಂಡ ಶಾಙ್ರ್ಗಧನುಸ್ಸಿನ ಹೆದೆಯನ್ನು ಕತ್ತರಿಸುವಂತೆ ಮಾಡುತ್ತಾರೆ.

ಬಿಲ್ಲಿನ ಹೆದೆ ತುಂಡಾದಾಗ ಸಿಡಿದ ಬಿಲ್ಲು ವಿಷ್ಣುವಿನ ತಲೆಯನ್ನು ಹಾರಿಸುತ್ತದೆ. ಬಳಿಕ ದೇವತೆಗಳು ಒಂದು ಕುದುರೆಯ ಮುಖವನ್ನು ತಂದು ವಿಷ್ಣುವಿನ ದೇಹಕ್ಕೆ ಜೋಡಿಸುತ್ತಾರೆ. ಹೀಗೆ ವಿಷ್ಣು ಹಯಗ್ರೀವನಾದ ಎನ್ನಲಾಗಿದೆ. ಪುರಾಣಗಳಿಂದ ಮಹಾಭಾರತದವರೆಗೆ ಹಯಗ್ರೀವ ದೇವರ ಹಲವು ರೀತಿಯ ವರ್ಣನೆಗಳನ್ನು ಕಾಣಬಹುದಾಗಿದೆ.

ವಿದ್ಯೆಗಾಗಿ ಹಯಗ್ರೀವ ಪೂಜೆ

ವೇದಗಳನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ಸ್ಪಟಿಕದಂತೆ ನಿರ್ಮಲ ಸ್ವರೂಪರಾದ ಶ್ರೀಹಯಗ್ರೀವರು ಸಕಲ ವಿದ್ಯೆ ಜ್ಞಾನಗಳ ಆಧಾರವಾಗಿರುವುದರಿಂದ ಹಯಗ್ರೀವನನ್ನು ಜ್ಞಾನದ ದೇವರೆಂದು ಪೂಜಿಸಲಾಗುತ್ತದೆ. ವಿದ್ಯಾಧಿದೇವತೆ ಸರಸ್ವತಿ ಮಾದರಿಯಲ್ಲೇ ಹಯಗ್ರೀವನ ಪೂಜೆ ನಡೆಯುತ್ತದೆ. ಬಿಳಿ ಎಂಬುದು ಪರಮ ಶುದ್ಧತೆಯ ಪ್ರತೀಕವಾಗಿದ್ದು “ಶ್ವೇತಾಶ್ವದ” ಮುಖದ ರೂಪದಲ್ಲಿ ಇರುವ ಹಯಗ್ರೀವನಿಗೆ ಶುದ್ಧ ಜ್ಞಾನಕ್ಕಾಗಿ ಪೂಜಿಸುವ ಪರಿಪಾಠ ಬೆಳೆದು ಬಂದಿದೆ.

ವಿಶೇಷವಾಗಿ ವಿದ್ಯಾರ್ಥಿಗಳು ಹಯಗ್ರೀವವನ್ನು ಆರಾಧನೆ ಮಾಡುವುದರಿಂದ ತಾಮಸ ಪ್ರಕೃತಿಯು ದೂರವಾಗುತ್ತದೆ ಹಾಗೂ ಎಲ್ಲರೊಂದಿಗೂ ಹೊಂದಿಕೊಳ್ಳುವ ಸ್ವಭಾವವು ಮೈಗೂಡುತ್ತದೆ ಎಂದು ಹೇಳಲಾಗಿದೆ. ಅಧ್ಯಯನಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಹಯಗ್ರೀವ ದೇವರು ನೆರವಾಗುತ್ತಾನೆ ಎಂದು ಪುರಾಣಕಥೆಗಳು ಹೇಳುತ್ತಿವೆ. ಹೀಗಾಗಿಯೇ ಪರೀಕ್ಷೆಗಳಿಗಿಂತ ಮುಂಚೆ ಹಲವಾರು ವಿದ್ಯಾರ್ಥಿಗಳು ಹಯಗ್ರೀವ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಜ್ಞಾನಾನಂದ-ಮಯಮ್ ದೇವಮ್ ನಿರ್ಮಲಸ್ ಸಟಿಕಾಕೃತಿಮ್ |
ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ ||

ಎಂದು ಪ್ರಾರ್ಥಿಸುತ್ತಾರೆ.

ಅಧ್ಯಾತ್ಮ ಜ್ಞಾನ ನಮಗೆ ಸಿದ್ಧಿಸಬೇಕಾದರೆ ಹಯಗ್ರೀವ ಮಂತ್ರ ಜಪಿಸಬೇಕಾಗುತ್ತದೆ. ಈ ಮಂತ್ರದ ಸ್ವರೂಪವನ್ನೂ, ಅರ್ಥ ಹಾಗೂ ವೈಶಿಷ್ಟ್ಯಗಳನ್ನು ಹಯಗ್ರೀವೋಪನಿಷತ್ ಎಂಬ ಕಿರಿದಾದ ಉಪನಿಷತ್ತಿನಲ್ಲಿ ತಿಳಿಸಲಾಗಿದೆ. ಹಯಗ್ರೀವ ದೇವರಿಗೆ ವಾಗೀಶ ಎಂಬ ಮತ್ತೊಂದು ಹೆಸರು ಕೂಡ ಇದೆ. ಎಲ್ಲಾ ಭಾಷಾಮಯವಾದ ವಾಕ್ಕಿಗೆ ಅಧಿದೇವನಾದವನು ಹಯಗ್ರೀವ.

ಶ್ರಾವಣಮಾಸದ ಶ್ರವಣ ನಕ್ಷತ್ರದಲ್ಲಿ ಭಗವಂತನು ಹಯಗ್ರೀವನಾಗಿ ಅವತರಿಸಿದ. ಹೀಗಾಗಿ ಈ ದಿನವನ್ನುನ ಹಯಗ್ರೀವ ಜಯಂತಿ ಎಂದು ಆಚರಿಸಿಕೊಂಡು ಬರಲಾಗಿದೆ. ಇಂದು ಹಯಗ್ರೀವ ದೇವರನ್ನು ಸದ್ಭಕ್ತಿಯಿಂದ ಆರಾಧಿಸುವ ಮೂಲಕ ದಿವ್ಯಜ್ಞಾನವನ್ನು ಬೇಡೋಣ.

ಇದನ್ನೂ ಓದಿ| Raksha Bandhan | ಅಣ್ಣ ತಂಗಿಯರ ಬಾಂಧವ್ಯ ಬಲಪಡಿಸುವ ಹಬ್ಬ

Exit mobile version