Site icon Vistara News

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌

mohan bhagwat

ನಾಗಪುರ: ನಾವು ಕೆಲವು ಸ್ಥಳಗಳ ಬಗ್ಗೆ ವಿಶೇಷ ಭಕ್ತಿ ಹೊಂದಿರುತ್ತೇವೆ. ಅವುಗಳ ಬಗ್ಗೆ ಮಾತನಾಡುತ್ತೇವೆ. ನಮಗೆ ಜ್ಞಾನವಾಪಿ ಬಗ್ಗೆ ಭಕ್ತಿ ಇದೆ, ಅದರ ಬಗ್ಗೆ ಮಾಡಬಹುದು. ಆದರೆ ಪ್ರತಿದಿನ ಏಕೆ ಹೊಸ ವಿವಾದ ಹುಟ್ಟುಹಾಕಬೇಕು, ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರಶ್ನಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು. ಜ್ಞಾನವಾಪಿ ವಿವಾದವು ನಂಬಿಕೆಯ ವಿಷಯವಾಗಿದೆ. ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ, ಈಗಿನ ಹಿಂದೂಗಳು ಮತ್ತು ಮುಸ್ಲಿಮರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದಾಗ ಸ್ವಾತಂತ್ರ್ಯ ಬಯಸಿದ ಜನರ ಮನೋಧೈರ್ಯವನ್ನು ಕುಗ್ಗಿಸಲು ಹಲವು ದೇಗುಲಗಳನ್ನು ಧ್ವಂಸಗೊಳಿಸಲಾಯಿತು. ಈ ಬಗ್ಗೆ ಸಂಘವು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

ಮನಸ್ಸಿನಲ್ಲಿ ಸಮಸ್ಯೆಗಳಿದ್ದರೆ ಅವು ಬೆಳೆಯುತ್ತವೆ,. ಪರಸ್ಪರ ಚರ್ಚೆ, ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಇದು ಸಾಧ್ಯವಾಗದಿದ್ದಾಗ ಜನರು ನ್ಯಾಯಾಲಯವನ್ನು ಆಶ್ರಯಿಸುತ್ತಾರೆ. ಹಾಗೆ ಮಾಡಿದರೆ ನ್ಯಾಯಾಲಯ ಏನು ತೀರ್ಪು ನೀಡುತ್ತದೋ ಅದನ್ನು ಒಪ್ಪಿಕೊಳ್ಳಬೇಕು. ನ್ಯಾಯಾಂಗವನ್ನು ಪವಿತ್ರ ಮತ್ತು ಸರ್ವೋಚ್ಚ ಎಂದು ಪರಿಗಣಿಸಿ ನಿರ್ಧಾರಗಳನ್ನು ಪ್ರಶ್ನಿಸದೆ ಅವುಗಳಿಗೆ ಬದ್ಧರಾಗಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಈಗಾಗಲೇ ಹೇಳಲಾಗಿದೆ. ಕೆಲ ಐತಿಹಾಸಿಕ ಕಾರಣಗಳಿಗಾಗಿ ರಾಮ ಜನ್ಮಭೂಮಿ ಅಭಿಯಾನದಲ್ಲಿ ಭಾಗವಹಿಸಿದ್ದೆವು, ಅದರಲ್ಲಿ ಯಶಸ್ಸು ಕಂಡೆವು. ಆದರೆ ಮುಂದೆ ನಾವು ಇಂತಹ ಯಾವುದೇ ಚಳವಳಿಯನ್ನು ಮುನ್ನಡೆಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ | ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿನ ಮದರಸಾ ಖಾಲಿ ಮಾಡಿಸಲು ಆಗ್ರಹ

Exit mobile version