ಕಾರವಾರ: ರಾಜ್ಯದ ಹಲವು ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯ (Dress code in temple) ಕೂಗು ಜೋರಾಗಿದೆ. ಇದೇ ಕೂಗು ಈಗ ಮುರುಡೇಶ್ವರದಲ್ಲೂ ಪ್ರತಿಧ್ವನಿಸಿದೆ. ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಸ್ಥಾನವನ್ನು ಪ್ರವೇಶಿಸುವ ಭಕ್ತರಿಗೆ, ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮುರ್ಡೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಪನ್ನು ಕಡ್ಡಾಯಗೊಳಿಸಬೇಕು ಎಂದು ಹಿಂದು ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿದೆ. ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಈ ಬಗ್ಗೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.
ಮುರ್ಡೇಶ್ವರ ಪ್ರವಾಸಿ ಸ್ಥಳವಾಗಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಕ್ಕೆಂದು ಬಂದವರು ಬೇಕಾಬಿಟ್ಟಿ ವಸ್ತ್ರ ಧರಿಸಿ ದೇವಸ್ಥಾನ ಪ್ರವೇಶಿಸುತ್ತಾರೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ, ಆಧ್ಯಾತ್ಮಿಕತೆಗೆ ಧಕ್ಕೆ ಉಂಟಾಗುತ್ತಿದೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಭಕ್ತರ ಕರ್ತವ್ಯ. ಈ ನಿಟ್ಟಿನಲ್ಲಿ ಸಾತ್ವಿಕ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ನ್ಯಾಯಾಲಯ, ಪೊಲೀಸ್ ಠಾಣೆ, ಶಾಲೆ- ಕಾಲೇಜುಗಳಲ್ಲೇ ವಸ್ತ್ರ ಸಂಹಿತೆ ಇದೆ. ದೇವಾಲಯದಲ್ಲೂ ಇದು ಬರಬೇಕಾಗಿದೆ ಎಂದು ಸಂಘಟನೆಯವರು ಆಗ್ರಹಿಸಿದ್ದಾರೆ. ಹಿಂದು ಪದ್ಧತಿಯಂತೆ ವಸ್ತ್ರಗಳನ್ನು ಧರಿಸಬೇಕು ಎಂಬ ಆಗ್ರಹವನ್ನು ಮುಂದಿಡಲಾಗಿದೆ. ಈ ಬಗ್ಗೆ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.
ಈ ಹಿಂದೆ ಮಂಗಳೂರು, ಶಿರಸಿ, ಗೋಕರ್ಣ, ಬನವಾಸಿ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯ ಆಗ್ರಹ ಕೇಳಿಬಂದಿತ್ತು.
ಇದನ್ನೂ ಓದಿ | Dress code in temple | ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರಸಂಹಿತೆ ಸದ್ದು! ಹಿಂದು ಜಾಗೃತಿ ವೇದಿಕೆ ಮನವಿ