Site icon Vistara News

Dress code in temple | ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರಸಂಹಿತೆ ಸದ್ದು! ಹಿಂದು ಜಾಗೃತಿ ವೇದಿಕೆ ಮನವಿ

ಶಿರಸಿ ಮಾರಿಕಾಂಬಾ ದೇವಸ್ಥಾನ ವಸ್ತ್ರ ಸಂಹಿತೆ

ಶಿರಸಿ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು (Dress code in temple) ಎಂಬ ಚರ್ಚೆ ಈಗ ಕರಾವಳಿಯಿಂದ ಮಲೆನಾಡಿಗೆ ವಿಸ್ತರಿಸಿದೆ. ಕರಾವಳಿಯ ಹಲವು ದೇವಾಲಯಗಳಲ್ಲಿ ಈ ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇದೆ. ಇದೀಗ ದಕ್ಷಿಣ ಭಾರತದಲ್ಲೇ ಅತ್ಯಂತ ಜಾಗೃತ ಪೀಠ ಎನಿಸಿಕೊಂಡ ಮಲೆನಾಡ ಆದಿ ದೇವತೆ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದತ್ತ ಮುಖ ಮಾಡಿದೆ. ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಹಿಂದೂ‌ ಜನ ಜಾಗೃತಿ ವೇದಿಕೆ ದೇವಾಲಯದ ಆಡಳಿತ ಮಂಡಳಿಗೆ ಮನವಿ ನೀಡಿದೆ.

ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನ ಪ್ರವೇಶಕ್ಕೆ ಸದ್ಯಕ್ಕೆ ಯಾವುದೇ ವಸ್ತ್ರಸಂಹಿತೆ ಇಲ್ಲ. ಆದರೆ, ಬರುವವರು ಸಾತ್ವಿಕ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ದೇವಸ್ಥಾನದ ಆಡಳಿತ ವರ್ಗಕ್ಕೆ ಮನವಿ ಮಾಡಿದೆ.

ಶ್ರೀ ಮಾರಿಕಾಂಬಾ ದೇವಸ್ಥಾನವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದು. ಭಕ್ತರು ಬೇಡಿದ್ದನ್ನು ದೇವಿ ನೀಡುತ್ತಾಳೆಂಬ ನಂಬಿಕೆ ಇರುವ ಶ್ರೀ ಮಾರಿಕಾಂಬಾ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವೆಂದು ಹೆಸರಾಗಿದೆ.

ಶಿರಸಿ ಮಾರಿಕಾಂಬಾ ದೇವಸ್ಥಾನ

ʻʻದೇವಸ್ಥಾನದ ಪಾವಿತ್ರ್ಯವನ್ನು ಜೋಪಾಸನೆ ಮಾಡಿದರೆ ಮಾತ್ರ ಅಲ್ಲಿರುವ ದೇವತ್ವದ ಅನುಭವವನ್ನು ಪಡೆಯಬಹುದು. ಹಿಂದು ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ. ಅಲ್ಲದೆ ದೇವತೆಯ ತತ್ವದ ಅನುಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲೂ ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ ಭಂಗ ಉಂಟಾಗಲಿದೆʼʼ ಎಂಬುದು ವೇದಿಕೆಯ ಅಭಿಪ್ರಾಯವಾಗಿದೆ.

ಜಾಗೃತಿ ಸಮಿತಿ ನಿರ್ದಿಷ್ಟವಾಗಿ ಯಾವುದೇ ದಿರಸಿನ ಉಲ್ಲೇಖ ಮಾಡಿಲ್ಲ. ಆದರೆ, ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌, ಮೈಗೆ ಅಂಟಿಕೊಂಡ ವಸ್ತ್ರಗಳಿಗೆ ನಿಷೇಧ ಮಾಡಬೇಕು ಎಂಬ ಬೇಡಿಕೆ ಇಡುವ ಸಾಧ್ಯತೆ ಇದೆ.

ಆದರೆ, ಭಕ್ತರಿಂದ ಬೇರೆ ಅಭಿಪ್ರಾಯವೂ ಇದೆ
ಈ ನಡುವೆ, ವಸ್ತ್ರ ಸಂಹಿತೆ ಜಾರಿ ಮಾಡಿದರೆ ಅಗಾಧ ಭಕ್ತ ಸಮೂಹ ಹೊಂದಿದ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗುವ‌ ಭೀತಿಯೂ ಇದೆ ಎನ್ನುತ್ತಾರೆ ಕೆಲವು ಭಕ್ತರು. ಪ್ರವಾಸಿ ತಾಣಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿರುವ ಶಿರಸಿ ಭಾಗಕ್ಕೆ ದಿನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗೆ ಬಂದ ಪ್ರವಾಸಿಗರು ಶ್ರೀ ದೇವಿಯ ದರ್ಶನ ಪಡೆಯದೆ ಹೊಗಲಾರರು. ಆದರೆ ಇಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದೆ ಆದರೆ ಭಕ್ತರು ದೇವಾಲಯಕ್ಕೆ ಬರಲು ಹಿಂದೇಟು ಹಾಕಬಹುದು ಎನ್ನುವ ಅಭಿಪ್ರಾಯವೂ ಇದೆ.

ಇದನ್ನೂ ಓದಿ | Kukke subrahmanya | ಕುಕ್ಕೆ ಕ್ಷೇತ್ರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ: ಜಾಗರಣ ವೇದಿಕೆ ಮನವಿ

Exit mobile version