ಬೆಂಗಳೂರು: ‘ಹಲಾಲ್ ಪ್ರಮಾಣೀಕೃತ’ ಆಹಾರವನ್ನು ಮಾರಾಟ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದು ಜನಜಾಗೃತಿ ಸಮಿತಿಯು (Ganesh Chaturthi), ಈ ಬಾರಿ ‘ಹಲಾಲ್ ಮುಕ್ತ ಭಾರತ’ ಅಭಿಯಾನದಡಿ ‘ಹಲಾಲ್ ಮುಕ್ತ ಗಣೇಶೋತ್ಸವ‘ ಅಭಿಯಾನ ಕೈಗೊಂಡಿದೆ. ಹಿಂದುಗಳು ಹಲಾಲ್ ಪ್ರಮಾಣೀಕೃತ ಯಾವುದೇ ವಸ್ತುಗಳನ್ನು ಬಳಸದೆ ಗಣೇಶ ಹಬ್ಬ ಆಚರಿಸುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿದೆ.
ಮೂಲತಃ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿದ್ದ ‘ಹಲಾಲ್’ ಎಂಬ ಮೂಲ ಇಸ್ಲಾಮಿಕ್ ಪರಿಕಲ್ಪನೆಯು ಇಂದು ಆಹಾರ ಧಾನ್ಯಗಳು, ಸಿಹಿತಿಂಡಿಗಳು, ಸೌಂದರ್ಯ ವರ್ಧಕಗಳು, ಸಸ್ಯಾಹಾರಿ ಆಹಾರಗಳು, ಔಷಧಗಳು, ಪ್ರವಾಸೋದ್ಯಮ, ಆಸ್ಪತ್ರೆಗಳು, ಕಟ್ಟಡಗಳು, ರೆಸ್ಟೋರೆಂಟ್‌ಗಳು, ವೆಬ್‌ಸೈಟ್‌ಗಳು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿಟ್ಟಿದೆ. ‘ಮೆಕ್‌ಡೊನಾಲ್ಡ್’, ‘ಕೆಎಫ್‌ಸಿ, ‘ಬರ್ಗರ್ ಕಿಂಗ್’, ‘ಪಿಜ್ಜಾ ಹಟ್’ ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಮುಸ್ಲಿಮೇತರ ಸಮುದಾಯಗಳಾದ ಹಿಂದುಗಳು, ಜೈನರು, ಬೌದ್ಧರಿಗೆ ಬಲವಂತವಾಗಿ ‘ಹಲಾಲ್ ಪ್ರಮಾಣೀಕೃತ’ ಆಹಾರವನ್ನು ಮಾರಾಟ ಮಾಡುತ್ತಿವೆ ಎಂದು ಹಿಂದು ಜನಜಾಗೃತಿ ಸಮಿತಿ ತಿಳಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತು ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ದಂತಹ ಭಾರತ ಸರ್ಕಾರದ ಆಹಾರ ಪ್ರಮಾಣೀಕೃತ ಸಂಸ್ಥೆಗಳು ಇರುವಾಗಲೂ, ಪ್ರತ್ಯೇಕವಾಗಿ ‘ಹಲಾಲ್ ಪ್ರಮಾಣಪತ್ರದ’ ಮೂಲಕ ಸಮಾನಾಂತರ ಇಸ್ಲಾಮಿಕ್ ಅರ್ಥ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ. ದೇಶದಲ್ಲಿ ಶೇ.15 ಇರುವ ಮುಸ್ಲಿಮರ ಹಲಾಲ್ ಪದಾರ್ಥವನ್ನು ಶೇ.80 ಇರುವ ಹಿಂದು ಸಮಾಜದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ‘ಹಲಾಲ್ ಪ್ರಮಾಣಪತ್ರ’ದಿಂದ ಬಂದ ಹಣವನ್ನು ಭಯೋತ್ಪಾದಕರಿಗೆ ಕಾನೂನು ನೆರವು ನೀಡಲು ಬಳಸಲಾಗುತ್ತಿದೆ ಎಂದು ಆರೋಪಿಸಿರುವ ಸಮಿತಿ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ‘ಹಲಾಲ್ ಅರ್ಥವ್ಯವಸ್ಥೆಯು’ ಒಂದು ದೊಡ್ಡ ಬಿಕ್ಕಟ್ಟಾಗಿದೆ ಎಂದು ಹೇಳಿದೆ.
ಇದನ್ನೂ ಓದಿ | Ganesh Chaturthi Recipes: ಈ 5 ತಿನಿಸುಗಳು ಗಣಪತಿಗೆ ತುಂಬಾ ಇಷ್ಟ; ಹೀಗೆ ಸುಲಭವಾಗಿ ತಯಾರಿಸಿ
ಇತ್ತೀಚೆಗೆ ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯವು ‘ಜಮಿಯತ್ ಉಲೇಮಾ ಇ-ಹಿಂದ್’ ಸಂಸ್ಥೆಗೆ `ಹಲಾಲ್ ಪ್ರಮಾಣ ಪತ್ರ’ವನ್ನು ಅಧಿಕೃತವಾಗಿ ಅಂಗೀಕಾರ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಇದು ಜಾರಿಯಾದರೆ ಈಗ ನಡೆಯುತ್ತಿರುವ ಅಘೋಷಿತ ಹಲಾಲ್ ಕಡ್ಡಾಯವು ಅಧಿಕೃತವಾಗಲಿದೆ. ಹೀಗಾಗಿ ಇದರ ವಿರುದ್ಧ ಹಿಂದು ಜನಜಾಗೃತಿ ಸಮಿತಿಯು ‘ಹಲಾಲ್ ಮುಕ್ತ ಭಾರತ’ ಅಭಿಯಾನದಡಿ ‘ಹಲಾಲ್ ಮುಕ್ತ ಗಣೇಶೋತ್ಸವ’ ಅಭಿಯಾನ ಕೈಗೊಂಡಿದೆ ಎಂದು ತಿಳಿಸಿದೆ.
ಗಣೇಶ ಮಂಡಳಿಗಳು ‘ಹಲಾಲ್ ಮುಕ್ತ ಗಣೇಶೋತ್ಸವ’ ಅಭಿಯಾನದಲ್ಲಿ ಹೇಗೆ ಭಾಗವಹಿಸಬಹುದು?
- ಶ್ರೀ ಗಣೇಶನ ಪೂಜಾ ಸಾಮಗ್ರಿ ಮತ್ತು ಪ್ರಸಾದವು ‘ಹಲಾಲ್ ಪ್ರಮಾಣೀಕೃತ’ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಗಣೇಶೋತ್ಸವದಲ್ಲಿ ‘ಹಲಾಲ್ ಪ್ರಮಾಣಪತ್ರದ’ದ ಭೀಕರತೆಯ ಬಗ್ಗೆ ಜನಜಾಗೃತಿ ಮೂಡಿಸುವ ವಿಡಿಯೊವನ್ನು ತೋರಿಸಬೇಕು.
- ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಖರೀದಿಸಲು ನಾಗರಿಕರನ್ನು ಹೇಗೆ ಒತ್ತಾಯಿಸಲಾಗುತ್ತಿದೆ ಎಂಬುದರ ಕುರಿತು ಜಾಗೃತಿ ವಿಡಿಯೊವನ್ನು ಮಂಟಪದಲ್ಲಿ ಪ್ರದರ್ಶಿಸಬೇಕು.
- ‘ಹಲಾಲ್’ ಪ್ರಮಾಣಪತ್ರ’ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಂಟಪದ ಪ್ರದೇಶದಲ್ಲಿ ‘ಬೋರ್ಡ್’ಗಳನ್ನು ಹಾಕಬೇಕು.
- ಗಣೇಶ ಭಕ್ತರಿಗೆ ‘ಹಲಾಲ್ ಪ್ರಮಾಣ ಪತ್ರ’ದ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ವಿತರಿಸಬೇಕು.
- ‘ಭಾರತೀಯ ಆರ್ಥಿಕತೆಯ ಮೇಲೆ ಹೊಸ ಆಕ್ರಮಣ : ಹಲಾಲ್ ಜಿಹಾದ್’ ಕುರಿತು ಉಪನ್ಯಾಸ ಆಯೋಜಿಸಿ.
- ಹಲಾಲ್ ಪ್ರಮಾಣಿಕೃತ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಬಹಿಷ್ಕಾರಕ್ಕೆ ಕರೆ ನೀಡುವುದು.
- ʼಹಲಾಲ್ ಆರ್ಥಿಕತೆʼ ವಿಷಯದ ಕುರಿತು ಗಣ್ಯರನ್ನು ಆಹ್ವಾನಿಸಿ ವಿಚಾರ ಸಂಕಿರಣ ನಡೆಸುವುದು.
- ಹಲಾಲ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಧಿಸೂಚನೆ ಹಿಂಪಡೆಯಲು ಹಾಗೂ ಅನಧಿಕೃತ ಹಲಾಲ್ ಪ್ರಮಾಣ ಪತ್ರದ ಪದ್ಧತಿಯನ್ನು ನಿಲ್ಲಿಸಲು ಗಣೇಶ ಭಕ್ತರ ಸಹಿ ಪಡೆದು, ಆ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು.
- ‘ಹಲಾಲ್’ ಅರ್ಥ ವ್ಯವಸ್ಥೆಯ’ ಅಪಾಯದ ಕುರಿತು ಮಂಡಳಗಳ ಸ್ಮರಣಿಕೆ ಅಥವಾ ವಾರ್ಷಿಕ ವರದಿಗಳಲ್ಲಿ ಲೇಖನಗಳನ್ನು ಪ್ರಕಟಿಸಬೇಕು
- ಹಲಾಲ್ ಪ್ರಮಾಣಪತ್ರದ ಬಗ್ಗೆ ವಿರೋಧವನ್ನು ನೋಂದಾಯಿಸಲು ‘ಆನ್ ಲೈನ್ ಅರ್ಜಿ ಸಹಿ’ ವ್ಯವಸ್ಥೆ ಕಲ್ಪಿಸಿ, ಗಣೇಶ ಭಕ್ತರಿಗೆ ಸಹಿ ಮಾಡಲು ಜನಜಾಗೃತಿ ಮೂಡಿಸಬೇಕು.