ಶಿವಮೊಗ್ಗ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಭದ್ರಾವತಿಯ ಹಿಂದು ಮಹಾಸಭಾ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಸಂಗಮೇಶ್ವರ್ ಸೇರಿದಂತೆ ಹಲವು ಗಣ್ಯರು, ಹಿಂದುಪರ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗಣೇಶ ಮೆರವಣಿಗೆಯಲ್ಲಿ ನಟ ಪುನೀತ್ ರಾಜಕುಮಾರ್ ಮತ್ತು ಹಿಂದು ಹರ್ಷ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ ಮತ್ತು ಭದ್ರಾವತಿ ಶಾಸಕ ಸಂಗಮೇಶ್ವರ್ ಭಾಗಿಯಾಗಿದ್ದರು.
ಹೊಸ ಮನೆ ಮುಖ್ಯರಸ್ತೆ ತಮಿಳು ಶಾಲೆ ಬಳಿ ಶಾಸಕ ಬಿ.ಕೆ. ಸಂಗಮೇಶ್ವರ್ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ನೃತ್ಯ, ಕೋಲಾಟ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಿ ಮೆರವಣಿಗೆಗೆ ಮೆರುಗು ನೀಡಿದವು. ಮೆರವಣಿಯುದ್ದಕ್ಕೂ ಭಕ್ತರಿಂದ, ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ, ಮೈಸೂರ್ ಪಾಕ್, ಲಾಡು ವಿತರಣೆ ನಡೆಯಿತು. ಜತೆಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇದನ್ನೂ ಓದಿ | ಗಣೇಶೋತ್ಸವ ಭದ್ರತೆಗೆ ಹೋಗಿದ್ದ ಪೊಲೀಸರು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದು ನಿಜ, ಸಿಕ್ಕಿತು ಮೃತದೇಹ
ರಂಗಪ್ಪ ವೃತ್ತದಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ದ್ವಾರಬಾಗಿಲಿಗೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ನಗರಸಭೆ ಪ್ರಭಾರ ಅಧ್ಯಕ್ಷ ಚೆನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಸುದೀಪ್ ಕುಮಾರ್, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಕದಿರೇಶ್ ಮತ್ತಿತರರು ಭಾಗಿಯಾಗಿದ್ದರು. ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಂಭ್ರಮಪಟ್ಟರು.
ಬಿಗಿ ಪೊಲೀಸ್ ಬಂದೋಬಸ್ತ್
ಒಬ್ಬರು ಹೆಚ್ಚುವರಿ ಪೊಲೀಸ್ ಅಧಿಕ್ಷಕರು, 9 ಪೊಲೀಸ್ ಉಪಾಧೀಕ್ಷಕರು, 18 ಪೊಲೀಸ್ ನಿರೀಕ್ಷಕರು, 27 ಪೊಲೀಸ್ ಉಪನಿರೀಕ್ಷಕರು, 1000 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 400 ಗೃಹರಕ್ಷಕದಳ ಸಿಬ್ಬಂದಿಗಳು, 1 ಆರ್‌ಎಎಫ್ ತುಕಡಿ, 6 ಕೆಎಸ್ಆರ್‌ಪಿ ತುಕಡಿ, 6 ಡಿಎಆರ್ ತುಕಡಿಯನ್ನೂ ಸಹ ನಿಯೋಜನೆ ಮಾಡಲಾಗಿದೆ. ಯಾವುದೇ ಗಲಾಟೆಯಾಗದಂತೆ ಭದ್ರಾವತಿ ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಪಟ್ಟಣದ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಿಡಿಸಲಾಗಿತ್ತು.
ಇದನ್ನೂ ಓದಿ | ಗಣೇಶಮೂರ್ತಿ ಮೆರವಣಿಗೆ ವೇಳೆ ಮಚ್ಚು ಪ್ರದರ್ಶಿಸಿ ಬೆದರಿಸಿದ ಇಬ್ಬರು ಯುವಕರ ಬಂಧನ