Site icon Vistara News

Hindu – Muslim Harmony : ಸಿದ್ಧೇಶ್ವರ ಹಿರೇಮಠಕ್ಕೆ ಮುಸ್ಲಿಂ ದರ್ಗಾದಿಂದ 25 ಲಕ್ಷ ಮೌಲ್ಯದ ರಥ ಕೊಡುಗೆ

Hindu Muslim Harmony gadaga

ಗದಗ: ದೇಶದಲ್ಲಿ ಇನ್ನೂ ಹಿಂದೂ ಮುಸ್ಲಿಂ ಸಾಮರಸ್ಯದ (Hindu – Muslim Harmony) ಅದ್ಭುತ ಕಥೆಗಳು ಜೀವಂತವಾಗಿವೆ. ಅದಕ್ಕೆ ಸಾಕ್ಷಿಯಾಗಿರುವುದು ಗದಗ ಜಿಲ್ಲೆ (Gadaga News) ನರಗುಂದ ಪಟ್ಟಣದ ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ (Siddeshwara Hiremata) ಮತ್ತು ಹಜರತ್ ಮೆಹಬೂಬಸುಭಾನಿ ದರ್ಗಾದ (Hazarat Mehaboobasubhani) ನಡುವಿನ ಸಂಬಂಧ.

ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠಕ್ಕೆ ಹಜರತ್ ಮೆಹಬೂಬಸುಭಾನಿ ದರ್ಗಾದ ಖಾದಿಮ್‌ ಅವರು ರಥವನ್ನು ಕೊಡುಗೆಯನ್ನು ನೀಡಿದ್ದಾರೆ. ಇದು ಸುಮಾರು 25 ಲಕ್ಷ ಮೌಲ್ಯ ರೂಪಾಯಿ! ಹೌದು ಬಾಬುಸಾಹೇಬ ಇಮಾಮಸಾಹೇಬ ಜಮಾದಾರರು ರಥ ಸಮರ್ಪಣೆಯ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ಹೊಸ ಮಾದರಿಯನ್ನು ಮುಂದಿಟ್ಟಿದ್ದಾರೆ.

Hindu Muslim Harmony gadag

26 ಅಡಿ ಎತ್ತರದ ಸಾಗುವಾನಿ ಮರದ ತೇರು

ಹಿಂದೂ ಮುಸ್ಲಿಂ ಭಾವೈಕ್ಯತೆಯ ಮಹಾನ್‌ ರೂಪಕದಂತಿರುವ ಈ ತೇರಿನ ಎತ್ತರ ಸುಮಾರು 26 ಅಡಿ. ಸಾಗುವಾನಿ ಮರದಿಂದಲೇ ಸಂಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ.

ಈ ವಿಶಿಷ್ಟ ರಥವನ್ನು ನಿರ್ಮಿಸಿರುವುದು ಇಡಗುಂಜಿಯ ರಥಶಿಲ್ಪಿ ವಿದ್ವಾನ್ ವಿಷ್ಣು ಎಲ್. ಭಟ್ಟ ಅವರು. ತೇರಿನ ಮುಂಭಾಗದಲ್ಲಿ ವಿಘ್ನ ನಿವಾರಕನ ಮೂರ್ತಿ, ಸುತ್ತಲೂ ಪಂಚಗ್ರಹ ಗುಡ್ಡದ ಹಿರೇಮಠದ ಹಿಂದಿನ ನಾಲ್ವರು ಪೀಠಾಧಿಪತಿಗಳ ಭಾವಚಿತ್ರಗಳಿವೆ. ಸಿಂಹಾಸನ, ಈಶ್ವರ ಲಿಂಗಗಳು, ಗಜವಂದನೆ ಹಾಗೂ ಎಂಟು ಮಂಟಪಗಳ ಸುಂದರ ಕಲಾಕುಸರಿ ಕೆತ್ತನೆಗಳೂ ಈ ರಥದಲ್ಲಿವೆ.

Hindu Muslim Harmony gadag

ರಥಕ್ಕೆ ಕೇಸರಿ ಬಿಳಿ ಹಸುರಿನ ಸಿಂಗಾರ

15 ಅಡಿ ಎತ್ತರದ ಗಡ್ಡಿ ತೇರಿನ ಮೇಲೆ 5 ಅಡಿ ಎತ್ತರದ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಅದರ ಮೇಲ್ಬಾಗದ 5 ಅಡಿ ಎತ್ತರದವರೆಗೆ ಕೇಸರಿ ಬಿಳಿ ಮತ್ತು ಹಸಿರು ಬಣ್ಣದ ಪಟಗಳಿಂದ ಸಿಂಗಾರ ಮಾಡಲಾಗಿದೆ.

ಶರಣ ಬಾಬುಸಾಹೇಬ ಜಮಾದಾರ ಅವರು ಕೊಡುಗೆಯಾಗಿ ನೀಡಿದ ಈ ರಥದ ಸಮರ್ಪಣೆ ಕಾರ್ಯಕ್ರಮ ಗುರುವಾರ ಬೆಳಗ್ಗೆ ದರ್ಗಾ ಮತ್ತು ಮಠದಲ್ಲಿ ನಡೆಯಿತು. ಬೆಳಗ್ಗೆ ದರ್ಗಾದಲ್ಲಿ 11 ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥಕ್ಕೆ ವಿಶೇಷ ಪೂಜೆ ನಡೆಯಿತು. ಧಾರ್ಮಿಕ ಪ್ರಮುಖರ ಸಮ್ಮುಖದಲ್ಲಿ ಧರ್ಮ ಸಭೆ ನಡೆಯಿತು. ಬಳಿಕ ಶ್ರೀಮಠಕ್ಕೆ ನೂತನ ರಥ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠಕ್ಕೆ ತೇರು ಕೊಡುಗೆ ನೀಡಿ ಭಾವೈಕ್ಯತೆ ಮೆರೆದ ಖಾದಿಮ್ ಅವರ ಈ ಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಮಾ.11ರಂದು ಉಜ್ಜಯಿನಿ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಈ ರಥ ಸಮರ್ಪಣೆಯಾಗಿದೆ.

ಇದನ್ನೂ ಓದಿ : Hindu-Muslim : ರಾಜ್ಯದ ಈ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್ ; ಎಲ್ಲಿ?

ರಥದ ಹಗ್ಗ ಮತ್ತು ಕಳಶ ಕೂಡಾ ದರ್ಗಾದಿಂದಲೇ ರವಾನೆ

ಜಾತ್ರಾ ಮಹೋತ್ಸವದಂದು ರಥದ ಹಗ್ಗ ಮತ್ತು ಕಳಶವನ್ನು ದರ್ಗಾದಿಂದಲೇ ರವಾನೆ ಮಾಡಲಾಗುತ್ತದೆ. ಜಾತ್ರೆ ಮುಗಿದ ಬಳಿಕವೂ ಹಗ್ಗ, ಕಳಸ ದರ್ಗಾಕ್ಕೆ ತೆಗೆದುಕೊಂಡು ಬರುವುದು ಉದ್ದೇಶಿತ ಹೊಸ ಸಂಪ್ರದಾಯ.

Exit mobile version