ಲಾಹೋರ್: ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ಸುಮಾರು1,200 ವರ್ಷ ಹಳೆಯದಾದ ಹಿಂದೂ ದೇಗುಲ ಅತಿಕ್ರಮಿಸಿಕೊಂಡವರನ್ನು ನ್ಯಾಯಾಲಯದ ಸೂಚನೆ ಮೇರೆಗೆ ತೆರವುಗೊಳಿಸಲಾಗಿದ್ದು, ದೇಗುಲವನ್ನು ಸಂರಕ್ಷಿಸಲಾಗಿದೆ.
ಅಲ್ಪಸಂಖ್ಯಾತರ ಪೂಜಾ ಸ್ಥಳಗಳನ್ನು ಸಂರಕ್ಷಿಸಲು ಪಾಕ್ ಸರ್ಕಾರ ರಚಿಸಿದ ಮಂಡಳಿಯೇ ಈ ದೇಗುಲವನ್ನು ಉಳಿಸಲು ಕಾನೂನು ಹೋರಾಟ ನಡೆಸಿ, ದೇಗುಲವನ್ನು ಕಾನೂನು ಬಾಹಿರವಾಗಿ ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಬಜಾರ್‌ನಲ್ಲಿದ್ದ ವಾಲ್ಮೀಕಿ ಮಂದಿರವನ್ನು ಕ್ರೈಸ್ತ ಕುಟುಂಬವೊಂದು ಅತಿಕ್ರಮಣ ಮಾಡಿಕೊಂಡಿತ್ತು. ಸರ್ಕಾರವೇ ರಚಿಸಿರುವ ವಿಶ್ವಸ್ಥ ಮಂಡಳಿಗಳ ಆಸ್ತಿ ತೆರವು ಸಂಸ್ಥೆ (ಇಟಿಪಿಬಿ) ಕಳೆದ ತಿಂಗಳೇ ಅತಿಕ್ರಮಣವನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿತ್ತು.
ಲಾಹೋರ್‌ನಲ್ಲಿರುವ ಕೃಷ್ಣ ಮಂದಿರವನ್ನು ಬಿಟ್ಟರೆ ವಾಲ್ಮೀಕಿ ಮಂದಿರದಲ್ಲಿ ಮಾತ್ರ ಈಗ ನಿತ್ಯ ಪೂಜೆ-ಪುನಸ್ಕಾರ ನಡೆಸಲಾಗುತ್ತಿದೆ. ಹಿಂದೂಗೆ ಮತಾಂತರಗೊಂಡಿದ್ದೇವೆ ಎಂದು ಹೇಳಿಕೊಳ್ಳುವ ಕ್ರೈಸ್ತ ಕುಟುಂಬವೊಂದು ಈ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯವರಿಗೆ ಮಾತ್ರ ಈ ದೇಗುಲದಲ್ಲಿ ಪೂಜೆ-ಪುನಸ್ಕಾರ ನಡೆಸಲು ಅವಕಾಶ ನೀಡುತ್ತಿತ್ತು.
ಬಹಳ ಹಿಂದೆಯೇ ಇಟಿಪಿಬಿಗೆ ಈ ದೇಗುಲದ ಜಾಗ ಹಸ್ತಾಂತರಗೊಂಡಿತ್ತು. ಆದರೆ ಈ ಕ್ರೈಸ್ತ ಕುಟುಂಬವು ೨೦೧೦-೧೧ರಿಂದ ಈ ದೇಗುಲ ತನಗೆ ಸೇರಿದ್ದು ಎಂದು ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿತ್ತು. ಇದೀಗ ನ್ಯಾಯಾಲಯ ಇಟಿಪಿಬಿ ಪರವಾಗಿ ತೀರ್ಪು ನೀಡಿರುವುದರಿಂದ ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸಲಾಗಿದೆ.
ಗುರುವಾರ ದೇಗುಲವನ್ನು ಇಟಿಪಿಬಿ ತನ್ನ ವಶಕ್ಕೆ ಪಡೆಯುತ್ತಿದ್ದಂತೆಯೇ ನೂರಕ್ಕೂ ಹೆಚ್ಚು ಹಿಂದೂಗಳು ಮತ್ತು ಸಿಖ್ಖರು ದೇಗುಲಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಪ್ರಸಾದವನ್ನೂ ವಿತರಣೆ ಮಾಡಿದರು. ಇಟಿಪಿಬಿಯ ಸದ್ಯ ಸುಮಾರು ೨೦೦ ಗುರುದ್ವಾರಗಳ ಹಾಗೂ ೧೫೦ ದೇಗುಲಗಳನ್ನು ನೋಡಿಕೊಳ್ಳುತ್ತಿದೆ.
ಹಿನ್ನೆಲೆ ಏನು?: ಇಡೀ ಪ್ರಕರಣದ ಹಿನ್ನೆಲೆ ಆರಂಭವಾಗುವುದು ೧೯೯೨ರ ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ. ಭಾರತದಲ್ಲಿ ನಡೆದ ಈ ಪ್ರಕರಣದಿಂದ ಕೆರಳಿದ್ದ ಜನಸಮೂಹವೊಂದು, ಈ ವಾಲ್ಮೀಕಿ ದೇವಾಯಕ್ಕೆ ಮುತ್ತಿಗೆ ಹಾಕಿತ್ತು. ಇಡೀ ಮಂದಿರವನ್ನು ಒಡೆದು, ಲೂಟಿ ಮಾಡಿ, ನೆಲಸಮ ಮಾಡಿದ್ದೇ ಅಲ್ಲದೆ, ಬೆಂಕಿ ಹಚ್ಚಿತ್ತು.
ಆಗ ಎದ್ದಿದ್ದ ಬೆಂಕಿಗೆ ಸುತ್ತಲಿನ ಅಂಗಡಿ ಮುಂಗಟ್ಟುಗಳೂ ಉರಿದು ಬೂದಿಯಾಗಿದ್ದೇ ಅಲ್ಲದೆ, ಅಗ್ನಿಯನ್ನು ಶಮನಗೊಳಿಸಲು ದಿನಗಳೇ ಬೇಕಾದವು. ಆನಂತರ ಈ ದೇವಳದ ಪುನರುಜ್ಜೀವನಕ್ಕಾಗಿ ಏಕಸದಸ್ಯ ಆಯೋಗವೊಂದನ್ನು ಅಲ್ಲಿನ ಸುಪ್ರೀಂಕೋರ್ಟ್ ರಚಿಸಿತ್ತು. ಆದರೆ ಮಂದಿರವನ್ನು ಅಕ್ರಮವಾಗಿ ವಶದಲ್ಲಿ ಇರಿಸಿಕೊಳ್ಳಲಾಗಿದ್ದ ಹಿನ್ನೆಲೆಯಲ್ಲಿ, ಪುನರುಜ್ಜೀವನದ ಕೆಲಸ ಹಾಗೆಯೇ ಉಳಿದಿತ್ತು. ಕಾನೂನು ಸಮರ ಆರಂಭವಾಗಿತ್ತು.
ಇದನ್ನೂ ಓದಿ| ದೇಗುಲ ಸಿಬ್ಬಂದಿಯ ಎಡವಟ್ಟು; ಭಕ್ತನಿಗೆ ಪ್ರಸಾದದ ಬದಲು ದುಡ್ಡಿನ ಚೀಲ !