ಬೆಂಗಳೂರು: ರಾಜ್ಯದಲ್ಲಿರುವ ದೇವಾಲಯಗಳ (Hindu Temples) ಹುಂಡಿಗೆ ಸರ್ಕಾರ ಕನ್ನ ಹಾಕಿದೆ. ಶ್ರೀಮಂತ ದೇವಾಲಯಗಳ ಆದಾಯದ ಶೇಕಡಾ 10ರಷ್ಟನ್ನು ಸರ್ಕಾರವೇ (State Government) ನುಂಗಿ ಹಾಕಲು ಹುನ್ನಾರ ನಡೆಸಿದೆ. ಇದು ಬುಧವಾರ ಮಂಡನೆಯಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024ರಲ್ಲಿ (Karnataka Hindu religous and Charitable Endoment act 2024) ಸ್ಪಷ್ಟವಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಆದರೆ, ಸರ್ಕಾರ ಈ ಆಪಾದನೆಯನ್ನು ಅಲ್ಲಗಳೆದಿದೆ. ಹೊಸ ವಿಧೇಯಕದಲ್ಲಿ ದೇಗುಲಗಳಿಂದ ಹಣ ಸಂಗ್ರಹಿಸುವ ಆದಾಯ ಮಿತಿಯನ್ನೇ ಹೆಚ್ಚಿಸಲಾಗಿದೆ. ಇದರಿಂದ ದೇವಾಲಯಗಳಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದೆ.
ಅಂಗೀಕಾರವಾಗಿರುವ ವಿಧೇಯಕದಲ್ಲಿರುವ ಅಂಶಗಳೇನು?
1. ಒಂದು ಕೋಟಿಗಿಂತ ಹೆಚ್ಚು ಆದಾಯ ಇರುವ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ 10ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.
2. ಒಂದು ಕೋಟಿಗಿಂತ ಕಡಿಮೆ ಆದಾಯ ಇರುವ ದೇವಾಲಯಗಳ ನಿವ್ವಳ ಆದಾಯದ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು.
ಅಂದರೆ ಒಂದು ದೇವಸ್ಥಾನದ ಆದಾಯ 1 ಕೋಟಿ ರೂ. ಒಳಗೆ ಇದ್ದರೆ ಆ ದೇವಸ್ಥಾನ ಧಾರ್ಮಿಕ ಪರಿಷತ್ ಶೇ. 5ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು. ಆದಾಯ ಒಂದು ಕೋಟಿ ರೂ. ಮೀರಿದ್ದರೆ ಶೇ. 10 ಮೊತ್ತವನ್ನು ಪರಿಷತ್‌ಗೆ ನೀಡಬೇಕು.
ಹಾಗಿದ್ದರೆ ಈ ವಿಧೇಯಕ ಅಂಗೀಕಾರಕ್ಕೆ ಮೊದಲು ಹೇಗಿತ್ತು? ಆಗಿರುವ ಬದಲಾವಣೆ ಏನು?
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-1997ರ ಪ್ರಕಾರ, 10 ಲಕ್ಷ ರೂ. ಒಳಗೆ ಆದಾಯ ಇರುವ ದೇವಸ್ಥಾನಗಳು ಶೇಕಡಾ 5ರಷ್ಟು ಮೊತ್ತವನ್ನು ಮತ್ತು 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ ದೇವಾಲಯಗಳು ಶೇ. 10ರಷ್ಟು ಮೊತ್ತವನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು.
2011ರಲ್ಲಿ ತಿದ್ದುಪಡಿಗೆ ಒಳಗಾದ ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕದಲ್ಲಿ ಈ ಮಿತಿಯನ್ನು ಹೆಚ್ಚಿಸಲಾಯಿತು. ಇದರ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಮತ್ತು 25 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ದೇವಾಲಯಗಳ ಆದಾಯ ಶೇ. 5ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕು ಎಂದು ತಿಳಿಸಲಾಯಿತು.
ಇದನ್ನೂ ಓದಿ : Hindu Temple: ದೇವಸ್ಥಾನದ ಹಣಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ: ಸರ್ಕಾರಕ್ಕೆ ವಿಜಯೇಂದ್ರ ಸಲಹೆ
ಹೊಸದಾಗಿ ಮಾಡಿರುವ ತಿದ್ದುಪಡಿ ಏನು?
2011ರ ವಿಧೇಯಕದ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್ ನಿಧಿಗೆ ಸಂಗ್ರಹಿಸುತ್ತಿದ್ದ ನಿಯಮಕ್ಕೆ ತಿದ್ದುಪಡಿ ತಂದು 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್ ನಿಧಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹಿಂದೆ 25 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ. 5ರಷ್ಟು ಆದಾಯವನ್ನು ಧಾರ್ಮಿಕ ಪರಿಷತ್ ಸಂಗ್ರಹಿಸುತ್ತಿದ್ದರೆ ಈಗ ಒಂದು ಕೋಟಿವರೆಗೆ ಆದಾಯವಿದ್ದರೂ ಶೇ. 5ರಷ್ಟು ಮೊತ್ತವನ್ನು ಮಾತ್ರ ಸರ್ಕಾರಕ್ಕೆ ನೀಡಬೇಕಾಗಿದೆ.
ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡುವ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ಮಾಹಿತಿ ಹೀಗಿದೆ.
ಈವರೆಗೆ ಯಾವ ಸಂಸ್ಥೆಗಳ ಆದಾಯವು 25 ಲಕ್ಷಕ್ಕಿಂತ ಹೆಚ್ಚಿದೆಯೋ ಅವುಗಳ ಆದಾಯದ ಶೇ.10 ರಷ್ಟು ಹಾಗೂ 25 ಲಕ್ಷಕ್ಕಿಂತ ಕಡಿಮೆ ಇರುವ ಸಂಸ್ಥೆಗಳ ಆದಾಯದಿಂದ ಶೇ.5 ರಷ್ಟನ್ನು ಧಾರ್ಮಿಕ ಪರಿಷತ್‌ಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿ 10 ಲಕ್ಷದಿಂದ 1 ಕೋಟಿ ರು.ವರೆಗೆ ಆದಾಯವುಳ್ಳ ಸಂಸ್ಥೆಗಳಿಂದ ಕೇವಲ ಶೇ.5 ರಷ್ಟು ಸಂಗ್ರಹಿಸುವುದು. 1 ಕೋಟಿ ರು.ಗೂ ಹೆಚ್ಚು ಆದಾಯ ಇರುವ ಸಂಸ್ಥೆಗಳಿಂದ ಶೇ.10 ರಷ್ಟು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.