Site icon Vistara News

Hindu Temples : ದೇಗುಲದ ಹಣ ಚರ್ಚ್‌, ಮಸೀದಿಗೆ ಹೋಗ್ತಿದೆ ಎನ್ನೋದು ಸುಳ್ಳು; ಅರ್ಚಕರ ಸಂಘ

Hindu temple Pooja

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Budget Session) ಮಂಡನೆಯಾದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕವನ್ನು (Hindu Religious institutes and Endoment Act 2024) ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಕೂಟ (BJP-JDS Coalition) ನಾನಾ ಕಾರಣಗಳನ್ನು ನೀಡಿ ವಿರೋಧಿಸುತ್ತಿರುವ ನಡುವೆಯೇ ರಾಜ್ಯದ ದೇವಾಲಯಗಳ (Hindu Temples) ಅರ್ಚಕರ ಸಂಘ (Priests Association) ಸರ್ಕಾರದ ರಕ್ಷಣೆಗೆ ಬಂದಿದೆ. ಅರ್ಚಕರ ಸಂಘದ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಮೇಲೆ ಬಿಜೆಪಿ ನಡೆಸುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಅರ್ಚಕರು ವಾದಿಸಿದರು. ಜತೆಗೆ ಪ್ರತಿಯೊಬ್ಬ ಬಿಜೆಪಿ ನಾಯಕರಿಗೂ ಸುಳ್ಳು ಪ್ರಚಾರ ಮಾಡದಂತೆ ಮನವಿ ಮಾಡುವುದಾಗಿ ಹೇಳಿದರು.

ಮುಖ್ಯವಾಗಿ ಹಿಂದೂ ದೇವಾಲಯಗಳ ಹುಂಡಿ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ ಎಂಬ ಆರೋಪವನ್ನು ಅರ್ಚಕರ ಸಂಘ ಅಲ್ಲಗಳೆದಿದೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಕರ್ನಾಟಕ ಧಾರ್ಮಿಕ ದೇವಾಲಯಗಳ ಅರ್ಚಕರು, ನಮ್ಮ ರಾಜ್ಯದ ಎ, ಬಿ, ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗುತ್ತಿಲ್ಲ. ನಮ್ಮ ದೇವಾಲಯದ ಹಣ ರಾಜ್ಯ ಸರ್ಕಾರ ಒಳ್ಳೆಯ ಕೆಲಸಕ್ಕೆ ಉಪಯೋಗ ಆಗುತ್ತಿದೆ. ದೇವಾಲಯಗಳ ಹಣ ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಮಾತನಾಡಿ, ರಾಜ್ಯದ ಎ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎ ದರ್ಜೆ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದೇವಾಲಯಗಳ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಸಹಿಸಲಾಗದ ರೀತಿ ಬಿಜೆಪಿ ನಾಯಕರು ಚರ್ಚ್, ಮಸೀದಿಗಳಿಗೆ ಹಣ ಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : Hindu Temples : ಇನ್ನು ದೇವಾಲಯ ಆದಾಯದ 10% ಹಣ ಸರ್ಕಾರಕ್ಕೆ; ಹಿಂದೆ ಎಷ್ಟಿತ್ತು?

ಮನೆಗೆ ಹೋಗಿ ಕಾಲಿಗೆ ಬಿದ್ದು ಮನವಿ ಮಾಡುತ್ತೇವೆ ಎಂದ ಅರ್ಚಕರು

ನಾವು ಈ ವಿಚಾರದಲ್ಲಿ ಪ್ರತಿಭಟನೆ ಮಾಡುವುದಿಲ್ಲ. ನೇರವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿಯೇ ಮನವಿ ಮಾಡಿಕೊಳ್ಳುತ್ತೇವೆ. ನಾವು ಪ್ರತಿ ಬಿಜೆಪಿಯವರ ಮನೆಗೆ ಹೋಗಿ ಮನವಿ ಪತ್ರಗಳನ್ನ ಕೊಟ್ಟು ಕಾಲಿಗೆ ಬಿದ್ದು ವಿರೋಧ ಮಾಡಬೇಡಿ ಅಂತ ಕೇಳಿ ಕೊಳ್ಳುತ್ತೇವೆ. ಇದು ಸರಿಯಲ್ಲ ಅನ್ನೋದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಎಸ್ ದೀಕ್ಷಿತ್ ಹೇಳಿದರು.

ಹೊಸ ಧರ್ಮಾದಾಯ ವಿಧೇಯಕದಲ್ಲಿ ಏನಿದೆ?

ಹಿಂದೆ 25 ಲಕ್ಷ ರೂ. ಒಳಗೆ ಆದಾಯ ಇರುವ ದೇವಸ್ಥಾನಗಳು ಶೇಕಡಾ ಐದರಷ್ಟು ಆದಾಯವನ್ನು ರಾಜ್ಯ ಸರ್ಕಾದ ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು. ಆದರೆ ಈಗ ಒಂದು ಕೋಟಿ ರೂ.ವರೆಗಿನ ಆದಾಯವಿದ್ದರೂ ಶೇ. 5ರಷ್ಟು ಪಾಲನ್ನು ಧಾರ್ಮಿಕ ಪರಿಷತ್‌ಗೆ ನೀಡಿದರೆ ಸಾಕು.

ಹಿಂದೆ 25 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದ ದೇಗುಲಗಳ ಆದಾಯದ ಶೇ. 10ರಷ್ಟನ್ನು ಧಾರ್ಮಿಕ ಪರಿಷತ್‌ಗೆ ನೀಡಬೇಕಾಗಿತ್ತು. ಈಗ ಈ ಮಿತಿಯನ್ನು ಒಂದು ಕೋಟಿಗೆ ಏರಿಸಲಾಗಿದೆ. ಅಂದರೆ ಒಂದು ಕೋಟಿ ರೂ. ಆದಾಯ ಹೊಂದಿದ ಶ್ರೀಮಂತ ದೇಗುಲಗಳು ಮಾತ್ರ ಶೇ. 10 ಆದಾಯ ನೀಡಿದರೆ ಸಾಕಾಗುತ್ತದೆ.

ಸರ್ಕಾರದ ಈ ವಿಧೇಯಕದ ಬಗ್ಗೆ ಸಾಕಷ್ಟು ಅಪಪ್ರಚಾರಗಳು ನಡೆಯುತ್ತಿವೆ. ದೇವಾಲಯಗಳಿಂದ ಶೇಕಡಾವಾರು ಹಣ ಪಡೆಯುವ ಮಿತಿಯನ್ನು ಏರಿಸಿದ್ದರೂ ಪಡೆಯುವ ಹಣದ ಮೊತ್ತವನ್ನೇ ಹೆಚ್ಚಿಸಲಾಗಿದೆ ಎಂದು ಪ್ರಚಾರ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು ಕನ್ನ ರಾಮಯ್ಯ ಎಂದೆಲ್ಲ ಅವಹೇಳನ ಮಾಡಲಾಗಿದೆ.

ಈ ಕಾರಣಕ್ಕಾಗಿ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಲು ಅರ್ಚಕರ ಸಂಘ ಪತ್ರಿಕಾಗೋಷ್ಠಿ ನಡೆಸಿದೆ.

Exit mobile version