ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ತಮಿಳುನಾಡಿನ ಕ್ರೈಸ್ತ ಶಾಸಕ ಉದಯನಿಧಿ ಸ್ಟಾಲಿನ್ (Tamil Nadu Minister Udhayanidhi Stalin) ಸನಾತನ ಧರ್ಮವನ್ನು (Sanatan Dharma) ನಾಶ ಮಾಡುವ ಹೇಳಿಕೆ ನೀಡಿದ ನಂತರ ಸನಾತನ ಧರ್ಮ ಬೇರೆ ಮತ್ತು ಹಿಂದೂ ಧರ್ಮ (Hindu religion) ಬೇರೆಯೇ ಎಂಬ ಚರ್ಚೆಗಳು ದೇಶದಲ್ಲಿ ಪ್ರಾರಂಭವಾಗಿದೆ. ಕೆಲವರು ಸನಾತನ ಧರ್ಮವು ಬ್ರಾಹ್ಮಣರ ಧರ್ಮವಾಗಿದ್ದು, ಅದು ಧರ್ಮವೇ ಅಲ್ಲ, ಅದಕ್ಕೆ ಯಾವುದೇ ಮಾನ್ಯತೆ ಇಲ್ಲ, ಅದು ಶೋಷಣೆ, ಭೇದ – ಭಾವದಿಂದ ಕೂಡಿದೆ. ಅದನ್ನು ನಾಶ ಮಾಡಬೇಕು. ಆದರೆ, ಹಿಂದೂ ಧರ್ಮವು ಸಾಮಾನ್ಯ ಹಿಂದೂಗಳ ಧರ್ಮವಾಗಿದೆ, ಅದಕ್ಕೆ ನಮ್ಮ ವಿರೋಧ ಇಲ್ಲ ಎಂಬ ಅರ್ಥಹೀನವಾದ ವಾದವು ಬುದ್ಧಿಜೀವಿಗಳಿಂದ ಪ್ರಾರಂಭವಾಗಿದೆ.
ಇದು ಹಿಂದೂಗಳಲ್ಲಿಯೇ ಬುದ್ಧಿ ಭೇದ ಮಾಡಿ, ಒಡಕಿನ ಮೂಲಕ ದ್ವೇಷ ಬಿತ್ತುವ ವ್ಯವಸ್ಥಿತ ಷಡ್ಯಂತ್ರ್ಯವಾಗಿದೆ. ಈ ಷಡ್ಯಂತ್ರ್ಯಕ್ಕೆ ಹಿಂದೂಗಳು ಯಾವತ್ತು ಬಲಿಯಾಗಬಾರದು. ಇದರ ವಿರುದ್ಧ ಎಲ್ಲ ಸನಾತನಿ ಹಿಂದೂಗಳು ಜಾತಿ, ಮತ, ಪಂಥ ಭೇದ ಮರೆತು ಸಂಘಟಿತರಾಗುವುದು ಅತ್ಯಂತ ಅವಶ್ಯವಾಗಿದೆ.
ಧರ್ಮ ಮತ್ತು ಮತಗಳ ನಡುವೇ ವ್ಯತ್ಯಾಸ:
ಸನಾತನ ಧರ್ಮ, ಹಿಂದೂ ಧರ್ಮ, ವೈದಿಕ ಧರ್ಮ, ಆರ್ಯ ಧರ್ಮ ಇವೆಲ್ಲವೂ ಒಂದೇ ಆಗಿದೆ. ಈ ಪದಗಳು ಕೇವಲ ಸಮಾನಾರ್ಥಕ ಪದಗಳು ಅಷ್ಟೇ. ಸನಾತನ ಈ ಶಬ್ದವು ವೇದಗಳಿಂದ ಹಿಡಿದು ರಾಮಾಯಣ, ಮಹಾಭಾರತ, ಭಗವದ್ಗೀತೆ ಹೀಗೆ ಎಲ್ಲ ಹಿಂದೂ ಧರ್ಮದ ಗ್ರಂಥಗಳಲ್ಲಿ ಉಲ್ಲೇಖ ಇದೆ. ಸನಾತನ ಎಂದರೆ ನಿತ್ಯ ನೂತನ ಇತಿ ಸನಾತನಃ ಅಂದರೆ ಯಾವುದು ನಿತ್ಯವೂ, ನೂತನವೂ, ಎಂದಿಗೂ ಹಳೆಯದಾಗುವುದಿಲ್ಲವೋ ಅದುವೇ ಸನಾತನವಾಗಿದೆ. ಸನಾತನ ಧರ್ಮವು ಸೃಷ್ಟಿ ನಿರ್ಮಾಣವಾದಾಗಿನಿಂದ ಅಸ್ತಿತ್ವದಲ್ಲಿದೆ. ಇದು ಪೃಕೃತಿದತ್ತವಾಗಿದೆ. ಮನುಕುಲದ ಉದ್ಧಾರಕ್ಕಾಗಿ ಮತ್ತು ಮರ ಗಿಡ, ಪ್ರಾಣಿ ಪಕ್ಷಿ ಉದ್ಧಾರಕ್ಕಾಗಿಯೇ ನಿರ್ಮಾಣವಾಗಿದೆ. ಇದು ಪೃಕೃತಿದತ್ತವಾದ ಧರ್ಮವಾಗಿದೆ. ಧರ್ಮ ಈ ಶಬ್ದವು ಧೃ ಧಾತುವಿನಿಂದ ನಿರ್ಮಾಣವಾಗಿದೆ. ಧೃ ಎಂದರೆ ಧಾರಯತಿ. ಅಂದರೆ ಜಗತ್ತನ್ನು ಯಾವುದು ಉದ್ಧರಿಸುವುದೋ, ರಕ್ಷಿಸುವುದೋ ಅದುವೇ ಧರ್ಮವಾಗಿದೆ.
ಆದಿ ಶಂಕರಾಚಾರ್ಯರು ಧರ್ಮದ ಬಗ್ಗೆ ಹೇಳುವಾಗ ಜಗತಃ ಸ್ಥಿತಿಕಾರಣಂ ಪ್ರಾಣಿನಾಂ ಸಾಕ್ಷಾತ್ ಅಭ್ಯುದಯನಿಃ ಶ್ರೇಯಸಹೇತುರ್ಯಃ ಸ ಧರ್ಮಃ ಎಂದು ಹೇಳಿದರು. ಅಂದರೆ ಯಾವುದರ ಆಚರಣೆಯಿಂದ ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿಮಾತ್ರರ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯಾಗುವುದೋ ಹಾಗೂ ಸಮಾಜ ವ್ಯವಸ್ಥೆಯು ಉತ್ತಮವಾಗಿರುತ್ತದೆಯೋ ಅದುವೇ ಧರ್ಮವಾಗಿದೆ ಎಂದು ಹೇಳಿದ್ದಾರೆ. ಅದು ಕೇವಲ ಸನಾತನ ಧರ್ಮದಿಂದ ಮಾತ್ರ ಸಾಧ್ಯವಾಗಿದೆ. ಬ್ರಹ್ಮಾಂಡದಲ್ಲಿ ಧರ್ಮ ಇರುವುದು ಒಂದೇ, ಅದುವೇ ಸನಾತನ ಧರ್ಮವಾಗಿದೆ. ಉಳಿದವು ಧರ್ಮವಲ್ಲ, ಅವು ಮತಗಳು.
ಧರ್ಮ ಮತ್ತು ಮತಗಳನ್ನು ಒಂದೇ ಎನ್ನುವುದು ತಪ್ಪು. ಸೃಷ್ಟಿಯನ್ನು ನಿರ್ಮಾಣ ಮಾಡುವ ಮೊದಲು ಭಗವಂತನು ಧರ್ಮವನ್ನು ನಿರ್ಮಾಣ ಮಾಡಿದನು ಮತ್ತು ನಂತರ ಮಾನವನ ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ. ಅದನ್ನು ವೇದಗಳ ರೂಪದಲ್ಲಿ ಸಪ್ತಋಷಿಗಳು ಬರೆದರು. ಆದರೆ ಮತಗಳನ್ನು ಮನುಷ್ಯ ನಿರ್ಮಾಣ ಮಾಡಿದನು. ಅದಕ್ಕೆ ಪ್ರಾರಂಭದ ದಿನಾಂಕ ಇದೆ ಮತ್ತು ಅದಕ್ಕೆ ಅಂತ್ಯದ ದಿನಾಂಕವು ಸಹ ಇದೆ. ಎಷ್ಟೋ ಮತಗಳು ಅಸ್ತಿತ್ವಕ್ಕೆ ಬಂದವು, ಅದರಲ್ಲಿ ಎಷ್ಟೋ ಮತಗಳು ನಶಿಸಿ ಹೋದವು. ಆದರೆ ಧರ್ಮಕ್ಕೆ ಪ್ರಾರಂಭದ ಮತ್ತು ಅಂತ್ಯದ ದಿನಾಂಕ ಇಲ್ಲದ ಕಾರಣ, ಧರ್ಮವು ಅನಂತ ಮತ್ತು ಅನಾದಿಯಾಗಿದೆ. ಹಿಂದೆ ಭಾರತದಲ್ಲಿ 4 ಲಕ್ಷಕ್ಕೂ ಅಧಿಕ ಗುರುಕುಲದ ಮೂಲಕ ಹಿಂದೂಗಳಿಗೆ ಜಾತಿ ಭೇದವಿಲ್ಲದೇ 14 ವಿದ್ಯೆ ಮತ್ತು 64 ಕಲೆಗಳ ಶಿಕ್ಷಣ ನೀಡಲಾಗುತ್ತಿತ್ತು. ಆದರೆ, ಮೆಕಾಲೆ ಶಿಕ್ಷಣದ ಪ್ರಭಾವದಿಂದ, ಗುರುಕುಲ ಶಿಕ್ಷಣ ನಶಿಸಿ ಕಳೆದ 4 ಪೀಳಿಗೆಗೆ ಶಾಲೆಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ನೀಡದ ಪರಿಣಾಮ ಜನರಿಗೆ ಈ ಸರ್ವಶ್ರೇಷ್ಠವಾದ ಜ್ಞಾನದ ಕಲ್ಪನೆ ಹಿಂದೂಗಳಿಗೆ ಇಲ್ಲವಾಗಿದೆ. ಅದರ ಪರಿಣಾಮ ಹಿಂದೂಗಳು ಜಾತಿ – ಉಪಜಾತಿಗಳಲ್ಲಿ ಒಡೆದು ಹಂಚಿ ಹೋಗಿದೆ.
ಜಾತಿಗಳನ್ನು ಧರ್ಮ ನಿರ್ಮಾಣ ಮಾಡಿಲ್ಲ, ಅದನ್ನು ರಾಜಕಾರಣಿಗಳು ಮಾಡಿದರು:
ಹಿಂದೂ ಧರ್ಮದ ಮೂಲಗ್ರಂಥದಲ್ಲಿ ಎಲ್ಲಿಯೂ ಸಹ ಜಾತಿಗಳ ಉಲ್ಲೇಖವಿಲ್ಲ. ಮಾನ್ಯ ಅಂಬೇಡ್ಕರ್ ಅವರು ತಮ್ಮ ‘ಅಸ್ಪೃಶ್ಯರು’ ಎಂಬ ಗ್ರಂಥದಲ್ಲಿ ವೇದಕಾಲದಲ್ಲಿ ಕೇವಲ 8ರಿಂದ 10 ಜಾತಿಗಳ ಉಲ್ಲೇಖವಿದೆ ಎಂದು ಬರೆದಿದ್ದಾರೆ. ಆದರೆ, ಆಂಗ್ಲರು ಸನಾತನ ಧರ್ಮವು ತುಚ್ಚವೆಂದು ತೋರಿಸಲು 1935ರ ಜನಗಣತಿಯಲ್ಲಿ ಅಸ್ಪೃಶ್ಯ ಜಾತಿಗಳ ಸಂಖ್ಯೆ 150ರ ಆಸುಪಾಸಿನಲ್ಲಿದೆ ಎಂದು ಮಾಡಿದರು. ಸ್ವಾತಂತ್ರ್ಯ ನಂತರ ಜಾತಿಗಳ ಸಂಖ್ಯೆಯು 1000 ಆಯಿತು. 1990ರ ಮಂಡಲ್ ಆಯೋಗವು ಹಿಂದುಳಿದ ಜಾತಿಗಳನ್ನು 2000ಕ್ಕೂ ಹೆಚ್ಚು ಪಟ್ಟಿ ಮಾಡಿತು. ಈಗ 3500ಕ್ಕೂ ಅಧಿಕ ಜಾತಿಗಳನ್ನು ರಾಜಕಾರಣಿಗಳು ತಮ್ಮ ಮತ ಬ್ಯಾಂಕ್‌ಗಾಗಿ ನಿರ್ಮಾಣ ಮಾಡಿದರು.
ಇಂದು ಪ್ರತಿಯೊಂದು ಜಾತಿಯವರೂ ತಮ್ಮನ್ನು ಹಿಂದುಳಿದ ಜಾತಿ ಎಂದು ಘೋಷಿಸಿ ಎಂದು ಆಂದೋಲನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜಾತಿಗಳನ್ನು ಧರ್ಮವು ಮಾಡಿಲ್ಲ, ಬದಲಾಗಿ ಅದನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ನಿರ್ಮಾಣ ಮಾಡಿದರು. ಅತ್ಯಂತ ಹಿಂದುಳಿದ ಜಾತಿಯ ರತ್ನಾಕರನು ವಾಲ್ಮೀಖಿ ಋಷಿಯಾಗಿ ರಾಮಾಯಣವನ್ನು ಬರೆದಾಗ ಅದನ್ನು ಬ್ರಾಹ್ಮಣರು ಸೇರಿ ಎಲ್ಲರೂ ಗೌರವದಿಂದ ಪೂಜಿಸುತ್ತಾರೆ. ಸನಾತನ ಧರ್ಮಕ್ಕೆ ಶೇಕಡಾ 70ರಷ್ಟು ಜ್ಞಾನವನ್ನು ನೀಡಿದ ವ್ಯಾಸ ಮಹರ್ಷಿಗಳು ಜನ್ಮತಃ ಬ್ರಾಹ್ಮಣರಾಗಿರಲಿಲ್ಲ. ಆದರೆ, ಇಂದು ವ್ಯಾಸ ಜಯಂತಿಯಂದು ಎಲ್ಲ ಬ್ರಾಹ್ಮಣ ಸ್ವಾಮೀಜಿಯವರು ಚಾತುರ್ಮಾಸವನ್ನು ಮಾಡುತ್ತಾರೆ. ರಾಕ್ಷಸ ಕುಲದಲ್ಲಿ ಜನಿಸಿದ ಭಕ್ತ ಪ್ರಹ್ಲಾದನ ಆದರ್ಶವನ್ನು ಹಿಂದೂಗಳು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ಆದರೆ, ಬ್ರಾಹ್ಮಣ ಕುಲದಲ್ಲಿ ಜನಿಸಿದ ರಾವಣನ ಆದರ್ಶವನ್ನು ಯಾರೂ ಕಲಿಸುವುದಿಲ್ಲ. ಸನಾತನ ಧರ್ಮವು ಯಾವ ಜನ್ಮದಲ್ಲಿ ಹುಟ್ಟಿದೆ ಎನ್ನುವುದಕ್ಕೆ ಮಹತ್ವ ನೀಡದೇ, ಯಾವ ಕರ್ಮಗಳನ್ನು ಮಾಡಿದೆ ಎಂಬುದಕ್ಕೆ ಮಹತ್ವ ನೀಡುತ್ತದೆ.
ಮಹಿಳೆಯರಿಗೆ ಸರ್ವೋತ್ಕೃಷ್ಟ ಗೌರವ ನೀಡುವ ಸನಾತನ ಧರ್ಮ:
ಇಂದು ಬುದ್ಧಿಜೀವಿಗಳು ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಗೌರವ ಇಲ್ಲ, ಅವರಿಗೆ ಹಿಂದೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು, ಅವರನ್ನು ತುಚ್ಛವಾಗಿ ಕಾಣಲಾಗುತ್ತದೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಸನಾತನ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ನೀಡಿದಷ್ಟು ಸರ್ವೋತ್ಕೃಷ್ಟವಾದ ಗೌರವದ ಸ್ಥಾನವನ್ನು ಯಾವುದೇ ಮತಗಳಲ್ಲಿ ಸಹ ನೀಡಿಲ್ಲ. ಸನಾತನ ಧರ್ಮದಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಎಂದು ಹೇಳಲಾಗಿದೆ. ಅಂದರೆ ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ನವರಾತ್ರಿಯ ಹಬ್ಬದ ಸಮಯದಲ್ಲಿ ಕುಮಾರಿಯನ್ನು ದೇವತೆಯೆಂದು ಪೂಜೆ ಮಾಡಲಾಗುತ್ತದೆ.
ಭಾರತದಲ್ಲಿ ಗಂಗೆ, ಯಮುನೆ, ಕಾವೇರಿ, ಗೋದಾವರಿ ಹೀಗೆ ಎಲ್ಲ ನದಿಗಳ ಹೆಸರನ್ನು ಮಹಿಳೆಯರ ಹೆಸರಿನಿಂದ ಕರೆಯಲಾಗುತ್ತದೆ. ಹಿಂದೆ ವೇದ ಕಾಲದಲ್ಲಿ ಗಾರ್ಗಿ, ಅತ್ರಿ, ಮೈತ್ರೇಯಿ, ಮುಂತಾದ ಮಹಿಳಾ ವಿದ್ವಾಂಸರಾಗಿ ಹೋಗಿದ್ದಾರೆ. ಅಹಲ್ಯಾಬಾಯಿ ಹೋಳ್ಕರ್ ಅಂತಹ ಶ್ರೇಷ್ಠ ರಾಣಿಯರು ಆಗಿ ಹೋಗಿದ್ದಾರೆ. ಸನಾತನ ಧರ್ಮದಲ್ಲಿ ಸರ್ವ ಶ್ರೇಷ್ಠವಾದ ಸ್ಥಾನ ಮಹಿಳೆಯರಿಗೆ ನೀಡಲಾಗಿದೆ. ಇಷ್ಟು ಸರ್ವ ಶ್ರೇಷ್ಠವಾದ ಸ್ಥಾನವು ಬೇರೆ ಯಾವುದೇ ಮತದಲ್ಲಿ ಇಲ್ಲ.
ಇದನ್ನೂ ಓದಿ: Sanatan Dharma : ಬಳಸುವ ಪದಗಳ ಬಗ್ಗೆ ನಿಗಾ ಇರಲಿ; ಉದಯನಿಧಿ ಸ್ಟಾಲಿನ್ ಮೇಲೆ ನಿರ್ಮಲಾನಂದನಾಥ ಶ್ರೀ ಗುಡುಗು
ಹಿಂದೂ ಶಬ್ದದ ಶ್ರೇಷ್ಠ ಅರ್ಥ:
ಮೇರುತಂತ್ರದ ಗ್ರಂಥದ ಪ್ರಕಾರ ಹಿಂದೂ ಎಂದರೆ ‘ಹೀನಾನಿ ಗುಣಾನಿ ಇತಿ ದೂಷಯಿತಿ ಇತಿ ಹಿಂದೂ`. ಅಂದರೆ ಯಾರು ಹೀನ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುತ್ತಾನೋ ಅವನು ಹಿಂದೂ. ಒಬ್ಬ ಮುಸಲ್ಮಾನ ಅಥವಾ ಕ್ರೈಸ್ತ ಹೀನ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡರೆ ಅವನು ಸಹ ಹಿಂದೂ ಎಂದು ಅರ್ಥ. ಅದಕ್ಕಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹಿಂದೂ ಎಂದರೆ ಒಂದು ಜೀವನ ಪದ್ಧತಿ ಎಂದು ಹೇಳಿದೆ. ಆದರೆ, ಇಂದು ಹಿಂದೂ ಎಂದರೆ ಕೋಮುವಾದಿ, ಪರ್ಶಿಯನ್ ಭಾಷೆಯಿಂದ ಬಂದಿದ್ದು ಎಂದು ತಪ್ಪು ಮಾಹಿತಿಯನ್ನು ಬುದ್ಧಿಜೀವಿಗಳು ಹರಡುತ್ತಿದ್ದಾರೆ. ಸಮಸ್ತ ಹಿಂದೂಗಳು ಹಿಂದೂ ಧರ್ಮದ ಶಿಕ್ಷಣವನ್ನು ಪಡೆಯಬೇಕಿದೆ. ಹಿಂದೂ ಧರ್ಮದ ನಿಜವಾದ ಶಿಕ್ಷಣ ಪಡೆದು, ಜಾತಿಯಿಂದ ಆಚೆಗೆ ಇರುವ ಧರ್ಮದ ರಕ್ಷಣೆಯನ್ನು ಮಾಡುವ ಮೂಲಕ ಧರ್ಮ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವುದೊಂದೇ ಪರ್ಯಾಯವಾಗಿದೆ.