Site icon Vistara News

Holi 2023 : ಉತ್ತರ ಕರ್ನಾಟಕದಲ್ಲಿ ಹೋಳಿ ಸಂಭ್ರಮ ಜೋರು; ಬಗೆಬಗೆಯಲ್ಲಿ ಆಚರಣೆ

Across north Karnataka, festival of colours celebrated differently

#image_title

ಮಮತಾ ಹಿರೇಮಠ ಹೊಕ್ರಾಣಿ
ಭಾರತೀಯ ಸಂಪ್ರದಾಯಗಳಲ್ಲಿ ಬರುವ ಪ್ರತಿಯೊಂದು ಹಬ್ಬವು ಒಂದಕ್ಕಿಂತ ಒಂದು ವಿಶೇಷ ಮತ್ತು ವಿಭಿನ್ನ. ಇನ್ನು ಹೋಳಿ ಹಬ್ಬವು (Holi 2023) ಬಣ್ಣಗಳಲ್ಲಿ ಎಷ್ಟು ವಿಧಗಳು ಅಷ್ಟೇ ವರ್ಣ ರಂಜಿತವಾಗಿದೆ. ಸತ್ಯದ ಸೋಲು ಕ್ಷಣಿಕ, ಕೆಡುಕಿನ ಗೆಲುವು ಶಾಶ್ವತವಲ್ಲ ಎಂಬ ಅಂಶವನ್ನು ಸಾರುವ ಹಬ್ಬ ಈ ಹೋಳಿ ಹಬ್ಬ.

ಪುರಾಣ ಕತೆಯ ಪ್ರಕಾರ ರಾಕ್ಷಸ ಹಿರಣ್ಯ ಕಶ್ಯಪ್‌ ಮತ್ತು ಆತನ ದೈವ ಭಕ್ತ ಮಗ ಪ್ರಹ್ಲಾದ್‌ನ ಸಂಬಂಧ ಈ ಹಬ್ಬಕ್ಕಿದೆ. ದೇವರು ತನ್ನ ಭಕ್ತರನ್ನು ಸದಾ ಜೊತೆಗಿದ್ದು ಸಲಹುತ್ತದೆ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ದೇಶಾದ್ಯಂತ ಆಚರಿಸುವ ಈ ಹಬ್ಬವನ್ನು ಉತ್ತರ ಕರ್ನಾಟಕದ ಒಂದೊಂದು ಭಾಗಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಮುಖ್ಯವಾದ ಆಚರಣೆಗಳೆಂದರೆ; ಕಾಮದಹನ, ಅಣಕು ಶವಯಾತ್ರೆ ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಅಲಂಕಾರ.

ಕಾಮ ದಹನ ಹೇಗೆ?

ಹೋಳಿ ಹುಣ್ಣಿಮೆಯ ಹಿಂದಿನ ದಿನ ಉತ್ತರ ಕರ್ನಾಟಕದ ಬಹುತೇಕ ಕಡೆ ಕಾಮದಹನ ಮಾಡಲಾಗುತ್ತದೆ. ಅರಿಷಡ್ವರ್ಗಗಳನ್ನು ಸುಡಬೇಕೆಂಬ ಉದ್ದೇಶದಿಂದ ಈ ಆಚರಣೆ ಜಾರಿಗೆ ಬಂದಿದೆ. ಕಟ್ಟಿಗೆ, ಜೋಳದ ದಂಟು ಹಾಗೂ ಗೋಣಿ ಚೀಲಗಳನ್ನು ಬಳಸಿ ಎತ್ತರದ ಕಾಮನ ಪ್ರತಿಕೃತಿ ನಿರ್ಮಿಸಿ, ಅದನ್ನು ಊರವರೆಲ್ಲಾ ಸೇರಿ ಸುಡುತ್ತಾರೆ.

ಊರಿನ ಬೀದಿಗಳಲ್ಲಿ, ವೃತ್ತಗಳಲ್ಲಿ ತಡರಾತ್ರಿ ಊರಿನ ಹಿರಿಕಿರಿಯರು ಎಲ್ಲರೂ ಸೇರಿ ಒಂದಷ್ಟು ಕಟ್ಟಿಗೆಗಳನ್ನು ಕೂಡಿಹಾಕಿ ಕಾಮದಹನ ಮಾಡಲಾಗುತ್ತದೆ. ಹೀಗೆ ದಹನಗೊಂಡ ಕಾಮನ ಬೂದಿಯನ್ನು ದೇವರು ಎಂದು ಭಾವಿಸಿ ಜನರು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ನಂತರ ಜನರು ತಮ್ಮ ಆಪ್ತ ಹಾಗೂ ಸಂಬಂಧಿಕರ ಮನೆಗೆ ತೆರಳಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಎಲ್ಲಾ ಹಬ್ಬಗಳಿಗೆ ಹೊಸ ವಸ್ತ್ರಗಳನ್ನು ಧರಿಸಿದರೆ ಈ ಹೋಳಿ ಹಬ್ಬಕ್ಕೆ ಮಾತ್ರ ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಹಾಕಿಕೊಳ್ಳಲಾಗುತ್ತದೆ.

ಹಿಂದೆಲ್ಲಾ ಅಮಾವಾಸ್ಯೆಯ ಮೂರನೇ ದಿನ ಚಂದಿರನನ್ನು ಕಂಡ ಮೇಲೆ ಯುವಕರು ಮನೆ ಮನೆಗೆ ತೆರಳಿ ಕುಳ್ಳು-ಕಟ್ಟಿಗೆ, ಒಣ ಕಟ್ಟಿಗೆ ಪಡೆದು ಆಯಾ ಓಣಿ ಯಲ್ಲಿ ಸಂಗ್ರಹಿಸುತ್ತದ್ದರು. 8-10 ದಿನಗಳ ಕಾಲ ಸಂಗ್ರಹಿಸಿ ಬಹತ್ ಪ್ರಮಾಣದಲ್ಲಿ ಕಾಮನನ್ನು ನಿರ್ಮಾಣ ಮಾಡಿ ಹೋಳಿ ಹಬ್ಬದ ಬೆಳಗ್ಗೆ ಕಾಮನ ಮೂರ್ತಿಗಳನ್ನು ತಂದು, ಪ್ರಮುಖ ಬೀದಿಗಳಲ್ಲಿ ಸುತ್ತಾಡಿಸಿ ನಂತರ ಪ್ರತಿಷ್ಠಾಪಿಸಿ ಕಾಮಣ್ಣನಿಗೆ ಪೂಜೆ ಮಾಡುವ ಮೂಲಕ ಲೀನಗೊಳಿಸಿ ದಹನ ಮಾಡುತ್ತಿದ್ದರು. ಆದರೆ ಈಗ ಹಿಂದಿನಷ್ಟು ಸಂಭ್ರಮ ಉಳಿದಿಲ್ಲ. ಮನೆ ಮನೆಯಲ್ಲೀಗ ಕಟ್ಟಿಗೆ ಸಿಗುವುದಿಲ್ಲ. ಹೀಗಾಗಿ ಹಣವನ್ನು ಸಂಗ್ರಹಿಸಿ ಕಟ್ಟಿಗೆಯನ್ನು ತಂದು ಕಾಮನನ್ನು ದಹಿಸಲಾಗುತ್ತದೆ.

ಅಣಕು ಶವಯಾತ್ರೆಯೂ ನಡೆಯುತ್ತದೆ!

ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆಯ ಒಂದು ಜನಪ್ರಿಯ ಆಚರಣೆ ಎಂದರೆ ಅದು ಅಣಕು ಶವಯಾತ್ರೆಯಾಗಿದೆ. ಪರಶಿವನ ಮೂರನೇ ಕಣ್ಣಿನ ಜ್ವಾಲೆಗೆ ಗುರಿಯಾಗಿ ಮನ್ಮಥನು ಬೂದಿಯಾಗುತ್ತಾನೆ. ಆಗ ರತಿಯ ದುಃಖ ದುಮ್ಮಾನ ಸಂಕಟಗಳನ್ನು ಬಿಂಬಿಸುವ ಆಚರಣೆಯೇ ಈ ಅಣಕು ಶವಯಾತ್ರೆಯಾಗಿದೆ. ಊರಿನ ಒಬ್ಬ ವ್ಯಕ್ತಿ ಮನ್ಮಥನ ಪಾತ್ರಧಾರಿಯಾಗಿ ಶವದಂತೆ ಮನೆಯಂಗಳದಲ್ಲಿ ಕುಳಿತಿರುತ್ತಾನೆ. ಮತ್ತೊಬ್ಬರು ರತಿ ದೇವಿಯ ಪಾತ್ರದ ಪರಕಾಯ ಪ್ರವೇಶದೊಂದಿಗೆ ಮನ್ಮಥನ ಶವದ ಮುಂದೆ ಕುಳಿತು ಹಾಡಿಹಾಡಿ ಅಳುತ್ತಾಳೆ. ಇವಳ ದುಃಖಕ್ಕೆ ಎಲ್ಲರೂ ಸೇರಿಕೊಂಡು ಬಾಯಿ ಬಾಯಿ ಪಡೆದುಕೊಳ್ಳುತ್ತಾರೆ. ನಂತರ ಊರಿನ ಎಲ್ಲಾ ಬೀದಿಗಳಲ್ಲಿ ಶವ ಯಾತ್ರೆ ಮಾಡುತ್ತಾರೆ. ಹೀಗೆ ಅಣಕು ಶವಯಾತ್ರೆ ನಡೆಸುವುದು ಊರಿಗೆ ಶ್ರೇಯಸ್ಕರ ಎಂದು ನಂಬಲಾಗಿದೆ.

ಚಿಕ್ಕ ಮಕ್ಕಳಿಗೆ ವಿಶೇಷ ಅಲಂಕಾರ

ಉತ್ತರ ಕರ್ನಾಟಕದ ಹೋಳಿ ಹಬ್ಬದ ಹಲವಾರು ವಿಶೇಷತೆಗಳಲ್ಲಿ ಚಿಕ್ಕ ಮಕ್ಕಳಿಗೆ ವಿಶೇಷ ಅಲಂಕಾರ ಮಾಡುವುದು ಪ್ರಮುಖವಾದದು. ಪ್ರತಿ ಮನೆಯಲ್ಲಿಯೂ ಮೂರು ವರ್ಷದೊಳಗಿನ ಮಕ್ಕಳಿಗೆ ಅಲಂಕಾರ ಮಾಡುವುದು ಒಂದು ವಾಡಿಕೆಯಾಗಿ ಬೆಳೆದು ಬಂದಿದೆ. ಮಗು ಹುಟ್ಟಿದ ಮೊದಲ ವರ್ಷದ ಹೋಳಿಯಲ್ಲಿ ಒಂದು ರೀತಿಯ ಅಲಂಕಾರ, ದ್ವಿತೀಯ ಹಾಗೂ ತೃತೀಯ ವರ್ಷಗಳಲ್ಲಿ ಮತ್ತೊಂದು ರೀತಿಯ ಅಲಂಕಾರ ಮಾಡಲಾಗುತ್ತದೆ.

ಈ ವಿಶೇಷ ಅಲಂಕಾರವೆಂದರೆ, ಮಕ್ಕಳಿಗೆ ಬಿಳಿಯ ಬಣ್ಣದ ಹೊಸ ಉಡುಪು ತೊಡಿಸಿ, ಆ ವಸ್ತ್ರಗಳ ಮೇಲೆ ಮನೆಯಲ್ಲಿಯೇ ತಯಾರಿಸಿದ ಕೆಲವು ವಿಶೇಷ ಹಾರಗಳನ್ನು ಹಾಕಲಾಗುತ್ತದೆ. ಮನೆಯಲ್ಲಿಯೇ ಇರುವ ಕಡಲೆಕಾಳು, ಶೇಂಗಾ, ಮಂಡಾಳು, ಬಿಸ್ಕತ್ ಚಾಕಲೇಟ್ ಗಳನ್ನು ಬಳಸಿಕೊಂಡು ಹಾರಗಳನ್ನು ತಯಾರಿಸಲಾಗುತ್ತದೆ. ಕಡಲೆ ಅಥವಾ ಪುಟಾಣಿ ಹಾರ, ಶೇಂಗಾ ಹಾರ, ಮಂಡೋಳು (ಚುರುಮುರಿ) ಹಾರ, ಚಾಕಲೇಟ್‌ ಹಾರ, ಬಿಸ್ಕೆಟ್ ಹಾರ, ಒಣ ದ್ರಾಕ್ಷಿಹಾರ, ಗೋಡಂಬಿ ಹಾರ, ಬಾದಾಮಿ ಹಾರ, ಏಲಕ್ಕಿ ಹಾರ, ಸಕ್ಕರೆ ಅಚ್ಚುಗಳ ಹಾರ, ಮೇಣದ ಬತ್ತಿಹಾರ, ಎಳ್ಳಿನ ಹಾರ ಹೀಗೆ 5 ರಿಂದ 9 ಬಗೆಯ ಹಾರಗಳನ್ನು ಮಾತ್ರ ಮಕ್ಕಳ ಅಲಂಕಾರಕ್ಕೆ ಬಳಸುತ್ತಾರೆ.ಈ ರೀತಿ ಶೃಂಗಾರಗೊಂಡ ಎಲ್ಲಾ ಮಕ್ಕಳನ್ನು ಒಂದು ಮಣೆಯ ಮೇಲೆ ಕೂರಿಸಿ, ಐದು ಜನ ಮುತ್ತೈದೆಯರು ಮಕ್ಕಳ ಕೆನ್ನೆಗೆ ಬಣ್ಣ ಹಚ್ಚುವುದರೊಂದಿಗೆ ಹೋಳಿ ಆಚರಿಸುತ್ತಾರೆ. ಇಂತಹ ವಿಶೇಷ ಆಚರಣೆಗಳು ಬಹುತೇಕವಾಗಿ ಕಣ್ಮರೆಯಾಗುತ್ತಿವೆ.

ಭಗವಂತನೇ ನೀಡಿದ ಈ ಪ್ರಕೃತಿಯಲ್ಲಿ ಸುಕೃತಿ ಒಂದೇ ಇರುವುದಿಲ್ಲ ಅದಕ್ಕೆ ಅಂಟಿಕೊಂಡು ವಿಕೃತಿಯು ಇರುತ್ತದೆ. ಎಲ್ಲಿ ಹಗಲು ಇರುತ್ತದೆಯೋ ಅಲ್ಲಿ ರಾತ್ರಿ ಇದ್ದಂತೆ. ಪ್ರಕೃತಿ ವಿಕೃತಿಗಳ ಸಮರೂಪಗಳನ್ನು ಬಿಂಬಿಸುವುದೇ ಹೋಳಿ ಹಬ್ಬವಾಗಿದೆ. ಕೆಟ್ಟ ಯೋಚನೆಗಳು ರಾವಣನ ಪ್ರತಿಕೃತಿಯಂತೆ ದಹನಗೊಳ್ಳಲಿ, ಸತ್ಯಪರ ಯೋಚನೆಗಳು, ನ್ಯಾಯ ಸಮ್ಮತ, ದೈವಪ್ರೇರಿತ ಕಾರ್ಯಗಳು ಸದಾ ವಿಜೃಂಭಿಸಲಿ. ಈ ಬಾರಿಯ ಹೋಳಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸುಖ, ಶಾಂತಿ, ಸಂತೋಷ, ನೆಮ್ಮದಿ ಯಶಸ್ಸುಗಳಂತಹ ಬಣ್ಣಗಳಿಂದ ಬದುಕು ಮತ್ತಷ್ಟು ವರ್ಣ ರಂಜಿತವಾಗಿರಲಿ.

ಇದನ್ನೂ ಓದಿ : Holi 2023 : ಹೋಳಿ ಹುಣ್ಣಿಮೆಯಲ್ಲಿ ಗುರು ಶುಕ್ರ ಯುತಿ; ಬದಲಾಗಲಿದೆ ಈ ರಾಶಿಗಳ ಅದೃಷ್ಟ!

Exit mobile version