Site icon Vistara News

Holi 2023: ಹೋಳಿ ಹಬ್ಬ ಸಂಭ್ರಮಿಸಲು ಸುರಕ್ಷತೆಯ ಹತ್ತು ಸೂತ್ರಗಳು!

holi 2023

ಹೋಳಿ ಹಬ್ಬ (Holi 2023) ಬಂದಾಗ ದೀಪಾವಳಿ ಬಂದಂತೆ ಸಂಭ್ರಮಿಸುತ್ತೇವೆ. ದೀಪಾವಳಿ ದೀಪಗಳ ಹಬ್ಬವಾದರೆ ಹೋಳಿ ಬಣ್ಣಗಳ ಹಬ್ಬ. ಎರಡೂ ಹಬ್ಬಗಳು ಖುಷಿಯ ಸಂಕೇತ. ಕತ್ತಲು ಅಥವಾ ಕೆಟ್ಟದ್ದರ ಮೇಲೆ ಒಳಿತಿನ ವಿಜಯದ ಸಂಕೇತ. ನಮ್ಮೆಲ್ಲ ದುಃಖ ದುಮ್ಮಾನಗಳನ್ನು ಬದಿಗಿಟ್ಟು ಸಂಭ್ರಮಿಸುವ ದಿನ. ಇಂತಹ ಖುಷಿಯ ಹಬ್ಬದ ಆಚರಣೆಯ ಸಂದರ್ಭ ಮೈಮರೆತು ಕೆಲವೊಮ್ಮೆ ಅಪಾಯಗಳನ್ನೂ ತಂದೊಡ್ಡಿಕೊಳ್ಳುವ ಸಂದರ್ಭಗಳು ಇವೆರಡೂ ಹಬ್ಬಗಳ ಸಂದರ್ಭ ಎದುರಾಗುತ್ತವೆ. ಅದಕ್ಕಾಗಿ ಹೋಳಿ ಹಬ್ಬ ಸಂತೋಷವನ್ನಷ್ಟೇ ತರಲು, ಖುಷಿಯನ್ನು ಕಸಿದುಕೊಳ್ಳದೆ ಇರಲು ಕೆಲವು ಸೂತ್ರಗಳು ಇಲ್ಲಿವೆ.

1. ಹೋಳಿ ಹಬ್ಬ ಆಡಬೇಕು ಆದರೆ, ಬಣ್ಣಗಳು ಮೈಗೆ ಮೆತ್ತಕೊಂಡರೆ ವಾರವಿಡೀ ಮೈಯ ಮೇಲಿನ ಬಣ್ಣಗಳು ಹೋಗುವುದಿಲ್ಲ ಎಂಬ ಚಿಂತೆಯಾದರೆ, ಹೋಳಿ ಆಡಲು ತೆರಳುವ ಅರ್ಧ ಗಂಟೆಗೂ ಮುನ್ನ ಮೈಗೆ ಎಣ್ಣೆ ಹಚ್ಚಿ. ಸೂರ್ಯಕಾಂತಿ ಎಣ್ಣೆಯಂಥ ಜಿಡ್ಡು ರಹಿತ ಎಣ್ಣೆಯನ್ನು ಹಚ್ಚಿಕೊಂಡು ಆಡಲು ತೆರಳಿದರೆ, ಬಣ್ಣ ಅಷ್ಟಾಗಿ ಮೈಗೆ ಮೆತ್ತಿಕೊಳ್ಳುವುದಿಲ್ಲ. ಸುಲಭವಾಗಿ ತೊಳೆದುಕೊಳ್ಳಬಹುದು.

2. ತಲೆಯ ಮೇಲೊಂದು ಬಟ್ಟೆ ಕಟ್ಟಿಕೊಳ್ಳುವುದು ಒಳ್ಳೆಯದು. ಹೋಳಿ ಆಡಲೆಂದೇ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಮುಂಡಾಸು (ಪೇಟ)ಗಳೂ ಸಿಗುತ್ತವೆ. ತಲೆಗೆ ಎಣ್ಣೆ ಚೆನ್ನಾಗಿ ಹಚ್ಚಿಕೊಂಡು ಪೇಟ ಹಾಕಿದರೆ ಕೂದಲಿಗೆ ಬಣ್ಣ ಮೆತ್ತದು.

3. ಹೋಳಿ ಆಡುವಾಗ ಕಣ್ಣಿನ ಮೇಲೆ ವಿಶೇಷ ಕಾಳಜಿಯಿರಲಿ. ಕಾಂಟಾಕ್ಟ್‌ ಲೆನ್ಸ್‌ ಬಳಸುತ್ತಿದ್ದರೆ ಅದನ್ನು ಮೊದಲೇ ತೆಗೆದು ಆಡಲು ಹೋಗಿ.

4. ಬೇರೆಯವರು, ಹೋಳಿ ಆಡುವಾಗ ನಿಮ್ಮ ಮೇಲೆ ಬಣ್ಣದ ನೀರು ಎರಚಿದರೆ, ಮೊದಲು ಕಣ್ಣುಗಳನ್ನು ಮುಚ್ಚಿಕೊಳ್ಳಿ. ಆದಷ್ಟು ಬಣ್ಣ ಕಣ್ಣೊಳಗೆ ಹೋಗದಂತೆ ಕಾಪಾಡಿಕೊಳ್ಳಿ. ಬೇರೆಯವರಿಗೂ ಬಣ್ಣವೆರಚುವಾಗ ನೀವು ಅವರ ಕಣ್ಣಿಗೆ ಹಾನಿಯಾಗದಂತೆ ಎಚ್ಚರ ವಹಿಸಿ. ಮೋಜಿನಲ್ಲಿ ಬೇರೆಯವರ ಸುರಕ್ಷತೆ ಮರೆಯಬೇಡಿ.

5. ನೀರನ್ನು ಹೀರಿಕೊಳ್ಳುವ ಬಗೆಯ ಬಟ್ಟೆಗಳನ್ನು ಹೋಳಿ ಆಡುವಾಗ ಧರಿಸಬೇಡಿ. ಗಂಟೆಗಟ್ಟಲೆ ಹೋಳಿ ಆಡುವಾಗ ಬಣ್ಣಗಳಲ್ಲಿ ಮುಳುಗೆದ್ದ ಬಟ್ಟೆ ಮೈಗೆ ಅಂಟಿಕೊಳ್ಳುವುದರಿಂದ ಹಾಗೂ ಅದು ನಿಧಾಗವಾಗಿ ಒಣಗುವುದರಿಂದ ಚರ್ಮದ ಸಮಸ್ಯೆ ಆಗುವ ಮಂದಿಗೆ ಬಣ್ಣದ ನೀರು ಮೈಗೆ ತಾಗುತ್ತಲೇ ಇರುವುದರಿಂದ ಅಲರ್ಜಿಯಾಗಬಹುದು. ಹಾಗಾಗಿ ಆದಷ್ಟೂ ನೀರು ಹೀರಿಕೊಳ್ಳದ, ಬೇಗ ಒಣಗಿಕೊಳ್ಳುವ ಬಟ್ಟೆಯನ್ನು ಧರಿಸಿ.

6. ಹೋಳಿ ಆಡಿದ ಕೂಡಲೇ ಸ್ನಾನ ಮಾಡಿ, ಅಥವಾ ಚೆನ್ನಾಗಿ ಮೈಯನ್ನು ತೊಳೆದುಕೊಳ್ಳಿ.

7. ಮೈಮೇಲೆ ಹೋಗದ ಕಲೆಗಳನ್ನು ತೆಗೆಯಲು ನೇಲ್‌ ಪಾಲಿಶ್‌ ರಿಮೂವರ್‌ ಬಳಸಿ ತೆಗೆಯಬಹುದು. ಚರ್ಮದ ಮೇಲೆ ಅಂಟಿಕೊಂಡ ಬಣ್ಣ ತೆಗೆಯಲು ಅತಿಯಾಗಿ ತಿಕ್ಕಬೇಡಿ ಅಥವಾ ಒರಟಾಗಿ ಉಜ್ಜಬೇಡಿ. ಇದರಿಂದ ಚರ್ಮದಲ್ಲಿ ಅಲರ್ಜಿಗಳೂ ಉಂಟಾಗಬಹುದು.

ಇದನ್ನೂ ಓದಿ: Holi 2023 : ಬಣ್ಣಗಳ ಹಬ್ಬ ಹೋಳಿಯ ವೇಳೆ ನಿಮ್ಮ ವಾಹನಗಳನ್ನು ಜೋಪಾನ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್​

8. ಹೋಳಿ ಆಡಿ ಮುಗಿದ ನಂತರ, ಸ್ನಾನ ಮಾಡಿದ ನಂತರ, ಬಣ್ಣವನ್ನು ತೊಳೆದುಕೊಂಡಾದ ನಂತರ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಆದಷ್ಟೂ ಮನೆಯೊಳಗಿರಿ.

9. ಹೋಳಿ ಆಡಿದ ಮೇಲೆ ಕಣ್ಣು ಕೆಂಪಾದರೆ, ತುರಿಕೆ ಅಲರ್ಜಿ ಇದ್ದರೆ, ಚರ್ಮದಲ್ಲಿ ಕಜ್ಜಿ ತುರಿಕೆಗಳಾದರೆ, ಕಣ್ಣು ಹಾಗೂ ಚರ್ಮ ವೈದ್ಯರನ್ನು ಸಂಪರ್ಕಿಸಿ.

10. ಆದಷ್ಟೂ ಒಳ್ಳೆಯ ಬಣ್ಣಗಳನ್ನೇ ಬಳಸಿ. ನೈಸರ್ಗಿಕ ಬಣ್ಣಗಳಾದರೆ ಒಳ್ಳೆಯದು. ಬೇರೆಯವರಿಗೆ ತೊಂದರೆಯಾಗದಂತೆ ಹೋಳಿಯನ್ನು ಆಡಿದರೆ, ಲ್ಲರಿಊ ಒಳ್ಳೆಯದು. ಆಗ ಎಲ್ಲರ ಮುಖದಲ್ಲಿ ನಿಜವಾದ ಅರ್ಥದಲ್ಲಿ ಸಂತಸ ಕಾಣಬಹುದು. ಹೋಳಿಯ ಖುಷಿ ಇದರಲ್ಲಿ ಅಡಗಿದೆ.

ಹೋಳಿ ಸಂತೋಷ ಹಂಚುವ ಹಬ್ಬ. ಹೋಳಿಯ ಖುಷಿ ನಿಮ್ಮಿಂದ ಎಲ್ಲರಿಗೂ ಸಿಗಲಿ. ಆದರೆ, ಖುಷಿಯ ನೆಪದಲ್ಲಿ ಬೇರೆಯವರ ನೆಮ್ಮದಿ ಕಸಿಯದಿರಿ. ಹೋಳಿ ಹಬ್ಬದ ಶುಭಾಶಯಗಳು!

ಇದನ್ನೂ ಓದಿ: Holi 2023 : ದ್ವೇಷ ಮರೆಸಿ, ಉತ್ಸಾಹ ತುಂಬುವ ಹೋಳಿ ಹುಣ್ಣಿಮೆ

Exit mobile version