Site icon Vistara News

Holi 2023 : ದ್ವೇಷ ಮರೆಸಿ, ಉತ್ಸಾಹ ತುಂಬುವ ಹೋಳಿ ಹುಣ್ಣಿಮೆ

history significance all you need to know about holi

#image_title

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಹೋಳಿ ಹಬ್ಬ (Holi 2023). ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಸಾರ್ವಜನಿಕವಾಗಿ, ಆಧ್ಯಾತ್ಮಿಕವಾಗಿ ಆರರಿಂದ ಅರವತ್ತು ವರುಷದವರೆಲ್ಲರೂ ಒಂದಾಗಿ, ದೇಶಾದ್ಯಂತ ಆಚರಿಸುವ ಪ್ರಮುಖ ಹಬ್ಬ ಇದು.

ಉತ್ತರ ಭಾರತದಲ್ಲಿ ಇದನ್ನು ಡೋಲ್‌ ಯಾತ್ರಾ ಎಂದು ಕರೆಯುತ್ತಾರೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಶಿಮಗಾ, ಹೋಳಿ, ಹುತಾಶನಿ ಮಹೋತ್ಸವ, ಹೋಲಿಕಾದಹನ ಮತ್ತು ದಕ್ಷಿಣದಲ್ಲಿ ಕಾಮದಹನ ಎಂದು ಸಹ ಕರೆಯುತ್ತಾರೆ. ಬಂಗಾಲದಲ್ಲಿ ಹೋಳಿಹಬ್ಬವನ್ನು ದೌಲಾಯಾತ್ರಾ ಎಂದು ಆಚರಿಸುತ್ತಾರೆ. ಇದನ್ನು ವಸಂತೋತ್ಸವ ಅಥವಾ ವಸಂತಾಗಮನೋತ್ಸವ ಅಂದರೆ ವಸಂತ ಋತುವಿನ ಆಗಮನದ ಪ್ರಯುಕ್ತ ಆಚರಿಸುವ ಉತ್ಸವವೆಂದು ಹೆಸರಿಸಲಾಗಿದೆ. ರಂಗ ಪಂಚಮಿ, ಫಗ್ವಾ ಎಂಬ ಹೆಸರುಗಳೂ ಇವೆ.

ದೇವಸ್ಥಾನದ ಮುಂದೆ ಅಥವಾ ಊರ ಮುಂದಿನ ಅನುಕೂಲತೆ ಇರುವ ಬಯಲು ಜಾಗದಲ್ಲಿ ನಮ್ಮಲ್ಲಿ ಕಾಮ ದಹನ ಮತ್ತು ಹೋಳಿಯನ್ನು ಆಚರಣೆ ನಡೆಯುತ್ತದೆ. ಹುಣ್ಣಿಮೆಯ ಸಾಯಂಕಾಲದಿಂದ ಹಿಡಿದು ಬೆಳಗಿನ ಜಾವದವರೆಗೆ ಕಾಮದಹನ ಮಾಡಿದ ನಂತರ ಹೋಳಿಯನ್ನು ಆಡುವ ಪದ್ಧತಿ ಕೆಲವುಕಡೆ ಇದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ಆಚರಿಸಲಾಗುತ್ತದೆ.

ಪೌರಾಣಿಕ ಕತೆಗಳೇನು?

ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ. ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ; ತಾರಕಾಸುರನೆಂಬ ರಾಕ್ಷಸರಾಜ ಬ್ರಹ್ಮನ ವರ ಪಡೆದು, ಆ ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಯೋಗ ಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ.
ದೇವತೆಗಳು ಕಾಮ(ಮನ್ಮಥ)ನ ಮೊರೆ ಹೋದರು.

history significance all you need to know about holi

ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರೂ ಸಹ ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ,ಶಿವನ ತಪೋಭಂಗ ಮಾಡುತ್ತಾನೆ. ಇದರಿಂದ ಕೆರಳಿ ತನ್ನ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು,ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ನಾರದ ಪುರಾಣದಲ್ಲಿ ಉಲ್ಲೇಖವಾಗಿರುವ ಮತ್ತೊಂದು ಕಥೆ ಹೀಗಿದೆ; ಹಿಂದೆ ಹಿರಣ್ಯಕಶಿಪು ಎಂಬ ರಾಕ್ಷಸ ರಾಜನಿದ್ದನು. ತಾನು ಪಡೆದ ವರಗಳ ಆಧಾರದ ಮೇಲೆ ದುರಹಂಕಾರಿ ಹಿರಣ್ಯಕಶಿಪು ‘ತಾನೆ ದೇವರೆಂದು’ ಮೆರೆಯುತ್ತಿದ್ದನು. ತನ್ನನ್ನೇ ಪೂಜಿಸಬೇಕು ಎಂದು ತ್ರಿಲೋಕದಲ್ಲಿ ಆಜ್ಞೆಯನ್ನು ಹೊರಡಿಸಿದನು. ಆದರೆ ಅವನ ಮಗನಾದ ಪ್ರಹ್ಲಾದನು ಮಹಾನ್ ವಿಷ್ಣು ಭಕ್ತನಾಗಿದ್ದನು! ಇದನ್ನು ಸಹಿಸದ ಹಿರಣ್ಯಕಶಿಪು ಪ್ರಹ್ಲಾದನ ಭಕ್ತಿಯನ್ನು ಮುರಿಯಲು ಅನೇಕ ಪ್ರಯಾಸಗಳನ್ನು ಮಾಡಿ ಕೊನೆಗೆ ಅವನಿಗೆ ಮೃತ್ಯುದಂಡವನ್ನು ವಿಧಿಸಿದನು.

ಹಿರಣ್ಯಕಶಿಪುವಿನ ಸಹೋದರಿ ʻಹೋಲಿಕಾ’ ಎಂಬವಳಿಗೆ ಒಂದು ವಿಶೇಷ ವರವಿತ್ತು, ಅದೇನೆಂದರೆ ಅವಳಿಗೆ ಅಗ್ನಿಸ್ಪರ್ಶವಾಗುತ್ತಿರಲಿಲ್ಲ. ಆದುದರಿಂದ ಒಂದು ದಿನ ಹಿರಣ್ಯಕಶಿಪು, ಅವಳನ್ನು ಒಂದು ಚಿತೆಯ ಮೇಲೆ ಏರಿಸಿ, ಬಾಲಕ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿ ಆ ಚಿತೆಗೆ ಬೆಂಕಿಯನ್ನು ಹಚ್ಚಿಸಿದನು! ಆದರೆ ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದ ಪ್ರಹ್ಲಾದನ ರಕ್ಷಣೆಗೆ ಧಾವಿಸಿಬಂದ ಭಗವಂತನು, ಹೋಲಿಕಾ ಭಾಸ್ಮವಾಗುವ ಹಾಗೆ ಮಾಡಿ ಪ್ರಹ್ಲಾದನನ್ನು ರಕ್ಷಿಸಿದನು!ಹೋಲಿಕಾ ದಹನದ ಕಾರಣ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

ಮೇಲೆ ಹೇಳಿದ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.

ಕಾಮದಹನ ಹೇಗೆ?

ಔಡಲಗಿಡ, ತೆಂಗಿನಗಿಡದ ಗರಿ, ಅಡಿಕೆಮರ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಜೋಡಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು ಮಾಡುತ್ತಾರೆ. ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಿ. ನಂತರ ‘ಹೋಲಿಕಾಯೈ ನಮಃ’ ಎಂದು ಹೇಳಿ ಹೋಳಿಯನ್ನು ಹೊತ್ತಿಸುತ್ತಾರೆ.

ಹೋಳಿಯು ಹೊತ್ತಿದ ನಂತರ ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಿದ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಿ. ಆ ರಾತ್ರಿಯನ್ನು ನೃತ್ಯಗಾಯನಗಳಲ್ಲಿ ಕಳೆದು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸುತ್ತಾರೆ. ಆ ಹೋಳಿಯ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ ಎಂಬುದು ನಂಬಿಕೆ (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ) ನಂತರ ಉಳಿದ ಬೂಧಿಯನ್ನುವಿಸರ್ಜಿಸುವ ಪದ್ಧತಿ ಇದೆ. ಅನಂತರ ಹೋಳಿಯ ಪ್ರಾರ್ಥನೆ ಮಾಡುತ್ತಾರೆ. ಅದೇ ಧೂಳಿವಂದನ.

ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುವ, ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

ಇದನ್ನೂ ಓದಿ : Holi 2023 : ಹೋಳಿ ಹುಣ್ಣಿಮೆಯಲ್ಲಿ ಗುರು ಶುಕ್ರ ಯುತಿ; ಬದಲಾಗಲಿದೆ ಈ ರಾಶಿಗಳ ಅದೃಷ್ಟ!

Exit mobile version