ಹಬ್ಬಗಳೆಂದರೆ ಗೆಳೆಯರು, ನೆಂಟರಿಷ್ಟರ ಸಮ್ಮಿಲನ. ಖುಷಿ, ಸಂಭ್ರಮ ಸಡಗರ. ಬಗೆಬಗೆಯ ತಿನಿಸುಗಳನ್ನು ಬೇರೆಯವರಿಗೂ ಹಂಚುವ, ಹಂಚಿ ಖುಷಿಪಟ್ಟು ನಾವೂ ತಿನ್ನುವ ಖುಷಿ. ಒಂದಷ್ಟು ವಿಶೇಷ ತಿನಿಸುಗಳಿಗನ್ನು ಮಾಡಲೆಂದೇ ಬರುವ ವರ್ಷಾವಧಿ ಉತ್ಸಾಹ. ಇನ್ನು, ಹೋಳಿಯೇನೂ ಇದರಿಂದ ಹೊರತಲ್ಲ. ಅದು ಕೇವಲ ಬಣ್ಣಗಳ ಹಬ್ಬವಷ್ಟೇ ಅಲ್ಲ. ಹೋಳಿಯೆಂದರೆ, ಅಧರ್ಮದ ವಿರುದ್ಧ ಧರ್ಮದ ಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯ ಎಂಬ ನಂಬಿಕೆ. ಸಾಕಷ್ಟು ಖುಷಿ, ಉತ್ಸಾಹಗಳಿಂದ ಆಚರಿಸಲ್ಪಡುವ ಹೋಳಿ ಹಬ್ಬದ ಖುಷಿಗೆ ಕೇವಲ ಬಣ್ಣಗಳಷ್ಟೇ ಜೊತೆಯಾಗುವುದಿಲ್ಲ. ಹಲವು ಸಿಹಿತಿಂಡಿಗಳೂ, ಬಗೆಬಗೆಯ ಭಕ್ಷ್ಯಗಳೂ ಹೋಳಿ ಹೈಲೈಟು.
ಹಾಗಾದರೆ, ಹೋಳಿಯ ಹೆಸರಿನಲ್ಲಿ ಯಾವೆಲ್ಲ ತಿನಿಸುಗಳನ್ನು ಮಾಡಿ, ಕೊಂಡು ತಿನ್ನಬಹುದು, ಯಾವುದು ಹೋಳಿಯ ದಿನದಂದೇ ವಿಶೇಷವಾಗಿ ದೊರೆಯುತ್ತದೆ ಎಂಬುದನ್ನು ನೋಡೋಣ.
1. ಲಡ್ಡು: ಭಾರತೀಯ ಸಿಹಿತಿಂಡಿಗಳ ಬಗ್ಗೆ ಯೋಚಿಸುವಾಗಮೊದಲ ಸಾಲಿನಲ್ಲಿ ಬಂದು ನಿಲ್ಲುವುದು ಲಡ್ಡು. ಯಾವ ಸಿಹಿಯಾದ ಉಂಡೆಯೂ ಲಡ್ಡೇ. ಅದಕ್ಕಾಗಿಯೇ ಲಡ್ಡಿನಲ್ಲಿರುವಷ್ಟು ಬಗೆ ಬೇರೆ ಯಾವ ಸಿಹಿತಿಂಡಿಯಲ್ಲೂ ಇರಲಿಕ್ಕಿಲ್ಲವೇನೋ. ಕಡ್ಲೆಹಿಟ್ಟು, ಮೋತಿಚೂರ್, ಎಳ್ಳು, ಬೂಂದಿ, ಗೋಧಿ, ರವೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಹಳಷ್ಟು ಹಬ್ಬಗಳ ವಿಶೇಷದಂತೆ, ಹೋಳಿಯ ದಿನವೂ ಕೂಡಾ ಲಡ್ಡಿಗೆ ವಿಶೇಷ ಸ್ಥಾನವಿದೆ. ಜನರು ಹಾಡಿ ಕುಣಿದು, ಖುಷಿಯನ್ನು ಹಂಚಿ, ರಂಗನ್ನು ಹಂಚುವ ಜೊತೆಗೆ ಲಡ್ಡನ್ನೂ ಹಂಚಿ ತಿಂದು ಸಂಭ್ರಮಿಸುತ್ತಾರೆ. ರಾಧೆಯ ಊರು ಬರ್ಸಾನಾದಲ್ಲಿ ಜನರು ಹೋಳಿಯ ದಿನ ಲಡ್ಡು ಮೈಮೇಲೆ ಎಸೆದೂ ಹೋಳಿ ಆಡುವ ಕ್ರಮವಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿ ಲಡ್ಡು ಪ್ರಸಾದವಾಗಿಯೂ ವಿತರಣೆ ಮಾಡುವ ಕ್ರಮ ಹಲವು ಉತ್ತರ ಭಾರತೀಯ ದೇಸಸ್ಥಾನಗಳಲ್ಲಿವೆ.
2. ಕಚೋಡಿ: ಮಾರ್ವಾಡಿ ಸಮುದಾಯದ ಮಂದಿ ವಿಶೇಷವಾಗಿ ಮಾಡುವ ಕಚೋಡಿ ಬೇರೆ ಬೇರೆ ಬಗೆಯಲ್ಲಿ ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಹರ್ಯಾಣ ಸೇರಿದಂತೆ ಹಲವು ಉತ್ತರ ಭಾರತೀಯ ರಾಜ್ಯಗಳಲ್ಲಿ ನಿತ್ಯವೂ ಮಾಡುವ ತಿನಿಸು. ಆದರೂ ಹೋಳಿಯ ದಿನ ವಿಶೇಷವಾಗಿ ಕಚೋಡಿಯನ್ನು ಮನೆಗಳಲ್ಲಿ ಮಾಡಲಾಗುತ್ತೆ. ಗೋಧಿ ಹಿಟ್ಟಿನಿಂದ ಮಾಡುವ ಈ ತಿನಿಸಿನ ಒಳಗೆ ಹೆಸರುಬೇಳೆ, ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಬಗೆಬಗೆಯ ಹೂರಣವನ್ನು ತುಂಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ.
3. ಗುಜಿಯಾ: ಮೈದಾ, ರವೆ ಇತ್ಯಾದಿಗಳಿಂದ ಮಾಡಲಾಗುವ ಕುರುಕಲು ಗುಜಿಯಾ ಹೋಳಿಯ ದಿನದ ಉತ್ತರ ಭಾರತದ ಜನರ ಮನೆಗಳಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ಸಕ್ಕರೆ ಪಾಕದಲ್ಲಿ ಅದ್ದಿದ ಈ ಕುರುಕಲು, ಬೇರೆ ಬೇರೆ ಬಗೆಯ ಒಣಹಣ್ಣುಗಳನ್ನು ಹಾಕಿಯೂ ತಯಾರು ಮಾಡುತ್ತಾರೆ.
ಇದನ್ನೂ ಓದಿ: Holi 2023 : ಹೋಳಿ ಹಬ್ಬದ ಸಂಭ್ರಮಕ್ಕೆ ನೀವು ಕೇಳಲೇಬೇಕಾದ ಸಾಂಗ್ ಲಿಸ್ಟ್ ಇಲ್ಲಿದೆ…
4. ಥಂಡೈ: ದೇಹವನ್ನು ತಂಪು ಮಾಡುವ ಪೇಯವಾಗಿ ಥಂಡೈ ಜನಪ್ರಿಯ. ಸಾಕಷ್ಟು ಒಣಬೀಜ ಹಾಗೂ ಒಣಹಣ್ಣುಗಳು, ಹಾಗೂ ಕೆಲವು ಮಸಾಲೆಯನ್ನೂ ಹಾಕಿ ಹಾಲು ಹಾಕಿ ಮಾಡಿದ ಈ ಪೇಯ ದೇಹಕ್ಕೆ ತಂಪು ಎಂಬ ನಂಬಿಕೆ. ಉತ್ತರ ಭಾರತದಲ್ಲಿ ಮುಖ್ಯವಾಘಿ ಈ ಪಾನೀಯ ಬೇಸಿಗೆಯಲ್ಲಿ ದೇಹಕ್ಕೆ ತಂಪು ಎಂಬ ಕಾರಣಕ್ಕೆ ಕುಡಿಯುವ ಪೇಯ. ಹೋಳಿ ಆಡಿ ಬಂದು ಹೊಟ್ಟೆ ಮನಸ್ಸು ತಂಪು ಮಾಡುವ ಈ ಪೇಯ ಬಹಳ ಜನಪ್ರಿಯ.
5: ಲಸ್ಸಿ: ಮೊಸರಿನಿಂದ ಮಾಡುವ ಲಸ್ಸಿ ಎಂಬ ಪೇಯವೂ ಥಂಡೈಗಿಂತ ಒಂದು ಹೆಜ್ಜೆ ಮುಂದೆ ಎಂಬಷ್ಟು ಜನಪ್ರಿಯ. ಬೇಸಗೆ ಬರುತ್ತಿದ್ದಂತೆ ತಂಪಾಗಿ ಹೊಟ್ಟೆಗಿಳಿಸುವ ಪೇಯಗಳ ಪೈಕಿ ಲಸ್ಸಿ ಮುಂಚೂಣಿಯ ಸ್ಥಾನ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರ್ಯಾಣ, ದೆಹಲಿ, ಪಂಜಾಬ್ ಸೇರಿದಂತೆ ಹಲವೆಡೆ ಲಸ್ಸಿಯೆಂದರೆ ನಿತ್ಯದ ಪೇಯ. ಹೋಳಿಯ ದಿನ ಇದಕ್ಕೆ ಮನ್ನಣೆ ಹೆಚ್ಚು.
ಇದನ್ನೂ ಓದಿ: Holi Beauty Care : ಹೋಳಿ ಸಂಭ್ರಮದ ನಂತರ ಹೀಗಿರಲಿ ಮುಖದ ಆರೈಕೆ