Site icon Vistara News

Holi 2024: ಭಾವ್ಯಕ್ಯತೆಯನ್ನು ಬೆಸೆಯುವ ವಿಶಿಷ್ಟ ಹಬ್ಬ ಹೋಳಿ ಹುಣ್ಣಿಮೆ

Person's Hand Full Of Colored Powder

:: ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ.ಪುರಾಣಿಕ
ಲೇಖಕರು ಸಂಸ್ಕೃತ ಉಪನ್ಯಾಸಕರು, ಅಂಕಣಕಾರರು ಹಾಗೂ ಖ್ಯಾತ ಜ್ಯೋತಿಷಿ

ಭವ್ಯ ಭಾರತದ ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠತೆಯನ್ನು ಸಾರುವ ಪುರಾಣ ಇತಿಹಾಸಗಳ ಪುಟಗಳನ್ನು ನೋಡುತ್ತಾ ಅನಾದಿ ಕಾಲದಿಂದಲೂ ನಡೆದು ಬಂದಿರುವ ರೂಢಿಗಳನ್ನು ಆಚರಿಸುವ ಮೂಲಕ ಈ ಹಬ್ಬ ಹರಿದಿನಗಳು ಮನುಷ್ಯರ ಮನಸ್ಸನ್ನೂ ಸದಾ ನೆಮ್ಮದಿ ಮತ್ತು ಸಂತೋಷವಾಗಿ ಇರಲೆಂದು, ಕಾಲಕಾಲಕ್ಕೆ ಬದಲಾಗುವ ಋತು ನಿಯಮಗಳಿಗೆ ಅನುಗುಣವಾಗಿ ನಮ್ಮ ಹಿರಿಯರು ಭಗವಂತನ ಪ್ರತಿರೂಪವನ್ನು ಸೃಷ್ಟಿಯಲ್ಲಿ ದೃಷ್ಟಿಯಿಟ್ಟು ಮಾನವ ಜನಾಂಗದ ಸರ್ವಾಂಗೀಣ ಏಳಿಗೆಗೆ ಶ್ರಮಿಸಿದ್ದಾರೆ. ಪಂಚಭೂತಗಳಲ್ಲಿ ದೇವರನ್ನು ಹುಡುಕಿದ್ದಾರೆ. ಹಿಗಾಗಿ ಭಾರತ ಪ್ರತ್ಯಕ್ಷ ಸಂಸ್ಕೃತಿಯ ಜೀವಂತ ಸ್ವರ್ಗದ ಪ್ರತಿ ರೂಪ. ಭಾರತ ಸಂಪ್ರದಾಯವನ್ನ ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೆ ಸಂಪ್ರದಾಯ. ಪುರಾಣದ ಕಾಲದಿಂದಲೂ ಯಾವುದೇ ಮೇಲು ಕೀಳು ಎನ್ನುವ ಬೇಧ ಭಾವವಿಲ್ಲದೆ ಮಾನವೀಯತೆಯ ಭಾವನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಏಕತೆಯನ್ನು ಪ್ರತಿಬಿಂಬಿಸುವ ಬಾಂಧವ್ಯದ ವಿವಿಧ ಬಣ್ಣಗಳ ಓಕುಳಿಯಲ್ಲಿ (Holi 2024) ಮಿಂದು ನಾವೆಲ್ಲರೂ ಒಂದೇ ಎಂಬ ಭಾವನೆ ಸಾರುವ ಈ ಹಬ್ಬವು ಹೊಸತನದ ಸಂತೋಷವನ್ನು ತಂದುಕೊಡುವುದಾಗಿದೆ.

ವಿವಿಧ ಬಣ್ಣಗಳೊಂದಿಗೆ ಆಚರಿಸುವ ಹಬ್ಬ ಈ ಹೋಳಿ ಹಬ್ಬ. ಚಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಅನೇಕ ಕಡೆ ವಿವಿಧ ಪದ್ಧತಿಗನುಣವಾಗಿ ಆಚರಿಸಲಾಗುತ್ತದೆ. ಎಲ್ಲಾ ಹಳೆಯ ವಸ್ತುಗಳನ್ನು ಬೆಂಕಿಯಲ್ಲಿ ದಹನ ಮಾಡಿ, ವಿವಿಧ ಬಣ್ಣಗಳನ್ನು ಬಳಸಿಕೊಂಡು ಆಡುವ ಸಂಭ್ರಮದ ಕ್ಷಣಗಳೇ ಈ ಹೋಳಿ ಹಬ್ಬದ (Holi 2024) ವಿಶೇಷತೆ.

ಹೋಳಿ ಹಬ್ಬದ ಹಿಂದಿನ ಪುರಾಣದ ಕಥೆಗಳು

ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ.
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸರಾಜ ಬ್ರಹ್ಮನ ವರ ಪಡೆದು,ಆ ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಯೋಗ ಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ(ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರೂ ಸಹ ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ,ಶಿವನ ತಪೋಭಂಗ ಮಾಡುತ್ತಾನೆ. ಇದರಿಂದ ಕೆರಳಿ ತನ್ನ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು,ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ನಾರದ ಪುರಾಣದಲ್ಲಿ ಉಲ್ಲೇಖವಾಗಿರುವ ಮತ್ತೊಂದು ಕಥೆ ಹೀಗಿದೆ

ಹಿಂದೆ ಹಿರಣ್ಯಕಶಿಪು ಎಂಬ ರಾಕ್ಷಸ ರಾಜನಿದ್ದನು. ತಾನು ಪಡೆದ ವರಗಳ ಆಧಾರದ ಮೇಲೆ ದುರಹಂಕಾರಿ ಹಿರಣ್ಯಕಶಿಪು ‘ತಾನೆ ದೇವರೆಂದು’ ಮೆರೆಯುತ್ತಿದ್ದನು. ತನ್ನನ್ನೇ ಪೂಜಿಸಬೇಕು ಎಂದು ತ್ರಿಲೋಕದಲ್ಲಿ ಆಜ್ಞೆಯನ್ನು ಹೊರಡಿಸಿದನು. ಆದರೆ ಅವನ ಮಗನಾದ ಪ್ರಹ್ಲಾದನು ಮಹಾನ್ ವಿಷ್ಣು ಭಕ್ತನಾಗಿದ್ದನು! ಇದನ್ನು ಸಹಿಸದ ಹಿರಣ್ಯಕಶಿಪು ಪ್ರಹ್ಲಾದನ ಭಕ್ತಿಯನ್ನು ಮುರಿಯಲು ಅನೇಕ ಪ್ರಯಾಸಗಳನ್ನು ಮಾಡಿ ಕೊನೆಗೆ ಅವನಿಗೆ ಮೃತ್ಯುದಂಡವನ್ನು ವಿಧಿಸಿದನು. ಹಿರಣ್ಯಕಶಿಪುವಿನ ಸಹೋದರಿ ‘ಹೋಲಿಕಾ’ ಎಂಬವಳಿಗೆ ಒಂದು ವಿಶೇಷ ವರವಿತ್ತು, ಅದೇನೆಂದರೆ ಅವಳಿಗೆ ಅಗ್ನಿಸ್ಪರ್ಶವಾಗುತ್ತಿರಲಿಲ್ಲ. ಆದುದರಿಂದ ಒಂದು ದಿನ ಹಿರಣ್ಯಕಶಿಪು, ಅವಳನ್ನು ಒಂದು ಚಿತೆಯ ಮೇಲೆ ಏರಿಸಿ, ಬಾಲಕ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿ ಆ ಚಿತೆಗೆ ಬೆಂಕಿಯನ್ನು ಹಚ್ಚಿಸಿದನು! ಆದರೆ ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮಗ್ನನಾಗಿದ್ದ ಪ್ರಹ್ಲಾದನ ರಕ್ಷಣೆಗೆ ಧಾವಿಸಿಬಂದ ಭಗವಂತನು, ಹೋಲಿಕಾ ಭಾಸ್ಮವಾಗುವ ಹಾಗೆ ಮಾಡಿ ಪ್ರಹ್ಲಾದನನ್ನು ರಕ್ಷಿಸಿದನು!ಹೋಲಿಕಾ ದಹನದ ಕಾರಣ ಈ ಹಬ್ಬಕ್ಕೆ ಹೋಳಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ.

ಭವಿಷ್ಯಪುರಾಣದಲ್ಲಿಯು ಸಹ ಹೋಳಿಯ ಕುರಿತಾಗಿ ಹೀಗೆ ಉಲ್ಲೇಖಿಸಲಾಗಿದೆ

ಒಂದು ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ಒಬ್ಬ ರಾಕ್ಷಸಿಯು ಊರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಹಾಗೆಯೇ ಅವಳು ರೋಗಗಳನ್ನು ಸಹ ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು, ಆದರೆ ಅವಳು ಹೋಗಲಿಲ್ಲ. ಕೊನೆಗೆ ಜನರು ಅವಾಚ್ಯ ಮಾತುಗಳಿಂದ ಬೈಯುತ್ತಾ ಶಾಪ ಕೊಟ್ಟದ್ದಲ್ಲದೇ ಎಲ್ಲೆಡೆಯೂ ಬೆಂಕಿಯನ್ನು ಹಚ್ಚಿ ಅವಳನ್ನು ಹೆದರಿಸಿದರು. ಅದರಿಂದಾಗಿ ಅವಳು ಊರಿನ ಹೊರಗೆ ಓಡಿಹೋದಳು ಎಂದು ಉಲ್ಲೇಖಿಸಲಾಗಿದೆ.

ಶ್ರೀಕೃಷ್ಣನ ಪ್ರಸ್ತಾಪ

ಶ್ರೀಕೃಷ್ಣ ಪರಮಾತ್ಮನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಎದೆ ಹಾಲಿನೊಂದಿಗೆ ರಕ್ತವನ್ನು ಸಹ ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ಎಂಬ ರಾಕ್ಷಸಿಯನ್ನು ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.

ಮೇಲೆ ಹೇಳಿದ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.

ಹೋಳಿ ಉತ್ಸವ ಆಚರಿಸುವ ವಿವಿಧ ಪದ್ಧತಿಗಳು

ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರಿಗೆ ,ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.
ಉತ್ತರ ಭಾರತದಲ್ಲಿ ಇದನ್ನು ಹೋರಿ, ದೋಲಾಯಾತ್ರಾ ಎಂದು ಕರೆಯುತ್ತಾರೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಶಿಮಗಾ, ಹೋಳಿ, ಹುತಾಶನಿ ಮಹೋತ್ಸವ, ಹೋಲಿಕಾದಹನ ಮತ್ತು ದಕ್ಷಿಣದಲ್ಲಿ ಕಾಮದಹನ ಎಂದು ಸಹ ಕರೆಯುತ್ತಾರೆ. ಬಂಗಾಲದಲ್ಲಿ ಹೋಳಿಹಬ್ಬವನ್ನು ದೌಲಾಯಾತ್ರಾ ಎಂದು ಆಚರಿಸುತ್ತಾರೆ. ಇದನ್ನು ವಸಂತೋತ್ಸವ ಅಥವಾ ವಸಂತಾಗಮನೋತ್ಸವ,ಅಂದರೆ ವಸಂತ ಋತುವಿನ ಆಗಮನದ ಪ್ರಯುಕ್ತ ಆಚರಿಸುವ ಉತ್ಸವವೆಂದು ಹೆಸರಿಸಲಾಗಿದೆ.
ಇನ್ನೂ ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಭಾಂಗ್ ಪಾನೀಯವನ್ನು ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ವ್ಯಕ್ತಿ ಒಂದು ರೀತಿಯ ಗುಂಗಿಗೆ ಒಳಗಾಗುತ್ತಾನೆ. ಆಗ ವ್ಯಕ್ತಿಯಲ್ಲಿ ಎಲ್ಲಾ ರೀತಿಯ ನಿರ್ಬಂಧಗಳು ಮರೆಯಾಗುತ್ತವೆ. ದ್ವೇಷಗಳನ್ನು ಮರೆಸಿ, ಉತ್ಸಾಹವನ್ನು ಹೆಚ್ಚಿಸುವುದು. ಹಾಗಾಗಿ ಹಬ್ಬದ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಭಾಂಗ್ ಎಲೆಯ ರಸವನ್ನು ಕುಡಿದು ಹಬ್ಬವನ್ನು ಆಚರಿಸುತ್ತಾರೆ.
ಕಾಠ್ಮಂಡುವಿನಲ್ಲಿ ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣದ ನೀರನ್ನು ತುಂಬಿದ ಪಿಚಕಾರಿ, ನೀರಿನ ಬಲೂನು, ವಿವಿಧ ಬಣ್ಣಗಳಿಂದ ಕೂಡಿದ ಬಿದಿರಿನ ಕಡ್ಡಿಗಳಿಂದ ಅಲಂಕಾರವನ್ನು ಮಾಡಿ ಹನುಮಂತನ ದೇವಾಲಯ ನಿರ್ಮಿಸುತ್ತಾರೆ. ಇದು ಹಬ್ಬದ ಆರಂಭವನ್ನು ಸೂಚಿಸುವುದು. ಇಲ್ಲಿ ಒಂದು ವಾರ ಮುಂಚಿತವಾಗಿಯೇ ಬಣ್ಣದ ನೀರಿನ ಸಿಂಚನಗಳು ಸಾಮಾನ್ಯವಾಗಿ ಇರುತ್ತವೆ. ಹಿಂದೂ ಧರ್ಮದಲ್ಲಿ ಹೋಳಿಯ ಆಚರಣೆಯು 16 ದಿನಗಳ ಕಾಲ ವಿಶೇಷ ಆಚರಣೆಯನ್ನು ಸೂಚಿಸುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೂ ಮುಂಚೆ 16 ದಿನಗಳ ಕಾಲ ವಿಶೇಷ ಅಲಂಕಾರ, ವೇಷ-ಭೂಷಣದಲ್ಲಿ ಮನೆ ಮನೆಗೆ ಹೋಗಿ ನೃತ್ಯವನ್ನು ಮಾಡುತ್ತಾರೆ. ಹಬ್ಬದ ದಿನ ಆ ಬಣ್ಣಗಳನ್ನು ತೆಗೆದು ಕಾಮದೇವನನ್ನು ದಹಿಸುವುದರ ಮೂಲಕ ಹಬ್ಬವನ್ನು ಆಚರಿಸುವರು.
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಸಹ ಆಚರಿಸುತ್ತಾರೆ.

ನಮ್ಮಲ್ಲಿ ಆಚರಣೆ ಹೇಗೆ?

ನಮ್ಮಲ್ಲಿ ದೇವಸ್ಥಾನದ ಮುಂದೆ ಅಥವಾ ಊರ ಮುಂದಿನ ಅನುಕೂಲತೆ ಇರುವ ಬಯಲು ಜಾಗೆಯಲ್ಲಿ,ಹುಣ್ಣಿಮೆಯ ಸಾಯಂಕಾಲದಿಂದ ಹಿಡಿದು ಬೆಳಗಿನ ಜಾವ ಕಾಮದಹನ ಮಾಡಿದ ನಂತರ ಹೋಳಿಯನ್ನು ಆಡುವ ಪದ್ಧತಿ ಕೆಲವುಕಡೆ
ಸ್ಥಾನ ಮತ್ತು ಸಮಯಕ್ಕನುಣವಾಗಿ ಆಚರಿಸುವ ಪದ್ದತಿಯು ಸಹ ಇದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ಆಚರಿಸಲಾಗುತ್ತದೆ.

ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡದ ಗರಿಗಳು, ಅಡಿಕೆಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಹೊಂದಿಸಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು ಮಾಡುತ್ತಾರೆ. ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಿ. ನಂತರ ‘ಹೋಲಿಕಾಯೈ ನಮಃ’। ಎಂದು ಹೇಳಿ ಹೋಳಿಯನ್ನು ಹೊತ್ತಿಸುತ್ತಾರೆ. ಹೋಳಿಯು ಹೊತ್ತಿದ ನಂತರ ಹೋಳಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಿದ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಿ. ಆ ರಾತ್ರಿಯನ್ನು ನೃತ್ಯಗಾಯನಗಳಲ್ಲಿ ಕಳೆದು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸುತ್ತಾರೆ. ಆ ಹೋಳಿಯ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ ಎಂಬುದು ನಂಬಿಕೆ (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ) ನಂತರ ಉಳಿದ ಬೂಧಿಯನ್ನುವಿಸರ್ಜಿಸುವ ಪದ್ಧತಿ ಇದೆ. ಅನಂತರ ಹೋಳಿಯ ಪ್ರಾರ್ಥನೆ ಮಾಡುತ್ತಾರೆ.ಅದೇ ಧೂಳಿವಂದನ.

ಧೂಳಿವಂದನ
ಫಾಲ್ಗುಣ ಕೃಷ್ಣ ಪ್ರತಿಪದೆಯಂದು
ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಕರೇಣ ಚ।
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ॥

ಅರ್ಥ

ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿರುವೆ, ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು ಎಂದು.

ರಂಗಪಂಚಮಿ

ಫಾಲ್ಗುಣ ಕೃಷ್ಣ ಪಂಚಮಿ, ಬಹಳ ಕಡೆಗಳಲ್ಲಿ ಹೋಳಿಯ ಮರುದಿನವಾಗಲಿ ಅಥವಾ ರಂಗಪಂಚಮಿಯ ದಿನ ಹೋಳಿ ಉತ್ಸವ ಆಚರಿಸಲಾಗುತ್ತದೆ. ಈ ದಿನದಂದು ಇತರರ ಮೇಲೆ ಗುಲಾಲು,ಬಣ್ಣದ ನೀರು ಮುಂತಾದವುಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಹೋಳಿದಹನಕ್ಕೆ ಬಳಸಬಹುದಾದ ಪದಾರ್ಥಗಳು

ಹೋಲಿಕಾ ದಹನದ ಸಂದರ್ಭದಲ್ಲಿ, ಆಯ್ದ ಕೆಲವು ಮರಗಳ ಕಟ್ಟಿಗೆಯನ್ನು ಮಾತ್ರ ಸುಡಬೇಕು ಎಂಬುದು ಪ್ರತಿತಿ. ಅವು ಯಾವುವೆಂದರೆ ಔಡಲ ಮರ ಅಥವಾ ಕ್ಯಾಸ್ಟರ್ ಮತ್ತು ಹತ್ತಿ ಮರದ ಕಟ್ಟಿಗೆ. ಈ ಸಮಯದಲ್ಲಿ ಔಡಲ ಮತ್ತು ಹತ್ತಿ ಎರಡು ಮರಗಳ ಎಲೆಗಳು ಉದುರುತ್ತವೆ. ಹಾಗಾಗಿ ಅವುಗಳನ್ನು ಸುಡದಿದ್ದರೆ, ಅವುಗಳಲ್ಲಿ ಕೀಟಗಳಾಗುತ್ತವೆ. ಈ ಕಾರಣದಿಂದ ಈ ಎರಡೂ ಮರಗಳ ಕಟ್ಟಿಗೆಯನ್ನು ಹೋಲಿಕಾ ದಹನದಲ್ಲಿ ಬಳಸುವುದು ವಾಡಿಕೆ.

ಹಸುವಿನ ಸಗಣಿಯಿಂದ ತಯಾರಿಸಿದ ಭೆರಣಿ

ಹೋಲಿಕಾ ದಹನದ ವೇಳೆ ಬಳಸಲಾಗುತ್ತದೆ, ಗೋವಿನ ಸಗಣಿಯಿಂದ ತಯಾರಿಸಿದ ಭೆರಣಿ(ಕುಳ್ಳು)ನ್ನು ಬಳಸಿದರೆ ಶುಭ ಫಲ ಸಿಗುತ್ತದೆ ಎನ್ನುತ್ತಾರೆ.ಇದರ ಹಿಂದೆ ಇರುವ ವೈಜ್ಞಾನಿಕ ಉದ್ದೇಶವಿಷ್ಟೇ ಕುಳ್ಳಿನಿಂದ ಬರುವ ಧೂಮವು ವಾತಾವರಣ ಶುದ್ಧವಾಗಿಡುತ್ತದೆ ,ಹೋಲಿಕಾ ಬೆಂಕಿಯಲ್ಲಿ ಕಳೆಗಳನ್ನು ಸಹ ಸುಡಲಾಗುತ್ತದೆ. ಹೋಲಿಕಾ ದಹನ ದುಷ್ಟತೆಯ ಅಂತ್ಯವನ್ನು ಪ್ರತಿನಿಧಿಸುತ್ತದೆ.

ಭಾವ್ಯಕ್ಯತೆಯನ್ನು ಸೂಚಿಸುವ ಹಬ್ಬ

ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುವ, ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.
ಫಾಲ್ಗುಣ ಮಾಸದ ಫೆಬ್ರುವರಿಯಿಂದ ಮಾರ್ಚ್ ನಡುವೆ ಬರುವ ಸಮಯದಲ್ಲಿ ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.
ಈ ಪುರಾಣ ಕಥೆಯ ಹಿನ್ನೆಲೆಯಲ್ಲಿಯೇ ಇಂದಿಗೂ ಸಹ ಕೆಲವು ಹಳ್ಳಿಗಳಲ್ಲಿ ಬೆಂಕಿಯ ಕೆಂಡದ ಮೇಲೆ ನಡೆದು ಸಾಗುವುದು, ಹಸುವನ್ನು ನಡೆಸುವ ಆಚರಣೆಯನ್ನು ಅನುಸರಿಸುತ್ತಾರೆ. ಬೆಂಕಿಯಲ್ಲಿ ನಡೆದು ಸಾಗಿದ ವ್ಯಕ್ತಿಗಳ ಕಾಲಿನಲ್ಲಿ ಒಂದೂ ಸುಟ್ಟ ಗುಳ್ಳೆಗಳು ಇರುವುದಿಲ್ಲ. ಅದನ್ನು ಒಂದು ದೈವ ಲೀಲೆ ಎಂದು ಪರಿಗಣಿಸಲಾಗುವುದು. ಈ ರೀತಿಯ ಅನೇಕ ಆಚರಣೆಗಳು ಶ್ರೇಷ್ಠವಾದ ನಂಬಿಕೆಯ ಮೂಲಕ ಇಂದಿಗೂ ಕೆಲವು ಪದ್ಧತಿಗಳು ಜೀವಂತವಾಗಿರುವುದು ವಿಶೇಷ. ಕೆಲವೆಡೆ ಕಾಮದೇವನನ್ನು ಸುಡುವುದು, ನಂತರ ಬೂದಿ ಮತ್ತು ಬಣ್ಣವನ್ನು ಬಳಿದುಕೊಂಡು, ನೃತ್ಯ ಮಾಡುವುದು, ಆತ್ಮೀಯರಿಗೆ ಬಣ್ಣವನ್ನು ಬಳಿಯುವ ಆಚರಣೆಯನ್ನು ಕೈಗೊಳ್ಳುವುದು. ವಿವಿಧ ಕಥೆ ಹಾಗೂ ಆಚರಣೆಯಿಂದ ಕೂಡಿದ್ದರೂ ಏಕತೆ ಹಾಗೂ ಸಂತೋಷದ ಆಚರಣೆಯ ಮೂಲಕ ಬಣ್ಣದ ಹಬ್ಬವನ್ನು ಆಚರಿಸಲಾಗುವುದು.

Exit mobile version