ನವದೆಹಲಿ/ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆ, ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ (Pran Pratishtha) 11 ದಿನ ಮಾತ್ರ ಬಾಕಿ ಉಳಿದಿವೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಕುರಿತು ದೇಶದ ಜನರಿಗೆ ಆಡಿಯೊ ಸಂದೇಶ (Audio Message) ರವಾನಿಸಿದ್ದಾರೆ. ಹಾಗೆಯೇ, ಶುಕ್ರವಾರದಿಂದ (ಜನವರಿ 12) 11 ದಿನಗಳವರೆಗೆ ವಿಶೇಷ ವ್ರತವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.
“ನನ್ನ ಪ್ರೀತಿಯ ದೇಶವಾಸಿಗಳೇ ರಾಮ್ ರಾಮ್. ದೇಶದ ಎಲ್ಲ ಜನರು, ಜಗತ್ತಿನಾದ್ಯಂತ ಇರುವ ರಾಮಭಕ್ತರಲ್ಲಿ ಈಗ ರಾಮನ ಜಪ ಮೂಡಿದೆ. ಜನವರಿ 22ರಂದು ರಾಮಭಕ್ತರಿಗೆ ಐತಿಹಾಸಿಕ ಕ್ಷಣವಾಗಲಿದೆ. ರಾಮಮಂದಿರ ಉದ್ಘಾಟನೆಗೆ ಕೇವಲ 11 ದಿನಗಳು ಬಾಕಿ ಇವೆ. ಇಂತಹ ಐತಿಹಾಸಿಕ ಕ್ಷಣದಲ್ಲಿ ನಾನೂ ಪಾಲ್ಗೊಳ್ಳುತ್ತಿರುವುದು ನನ್ನ ಪುಣ್ಯವಾಗಿದೆ. ನನ್ನಲ್ಲಿ ಈಗ ವಿಶೇಷ ಭಾವನೆಗಳು ಒಡಮೂಡಿವೆ. ನಾನು ಇದೇ ಮೊದಲ ಬಾರಿಗೆ ಭಾವುಕನಾಗಿದ್ದೇನೆ. ನನ್ನಲ್ಲಿ ಅಭಿವ್ಯಕ್ತಿಗಿಂತ ಅನುಭೂತಿಯ ಭಾವ ಹೆಚ್ಚಾಗಿದೆ” ಎಂದು ಮೋದಿ ಅವರು ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಹೇಳಿದ್ದಾರೆ.
ಮೋದಿ ಸಂದೇಶ ಆಲಿಸಿ
“ರಾಮಮಂದಿರಕ್ಕಾಗಿ ಸಾವಿರಾರು ಜನ ಹೋರಾಡಿದ್ದಾರೆ. ಸುದೀರ್ಘ ಕನಸು ಈಗ ನನಸಾಗುತ್ತಿದೆ. ನಾನು ಭಾವನೆಗಳ ಮಡುವಿನಲ್ಲಿ ಸಿಲುಕಿ ಮೂಕ ವಿಸ್ಮಿತನಾಗಿದ್ದೇನೆ. ನನ್ನ ಭಾವನೆಗಳನ್ನು ನಿಮ್ಮೆದುರು ವ್ಯಕ್ತಪಡಿಸಲು ಪದಗಳೇ ಇಲ್ಲದಂತಾಗಿದೆ. ನಮ್ಮ ದೇಶದ ಸಂತರು ಕಠಿಣ ತಪಸ್ಸು ಮಾಡಿದ್ದಾರೆ. ಆ ಮೂಲಕ ಭಕ್ತಿಯ ಪರಾಕಾಷ್ಠೆ ಮಾಡಿದ್ದಾರೆ. ಅಂತಹ ತಪಸ್ವಿಗಳು, ಋಷಿಗಳು ಹಾಗೂ ಜನಾರ್ದನ ರೂಪದಲ್ಲಿರುವ ಜನರನ್ನು ಸ್ಮರಿಸುತ್ತ ನಾನು ಇಂದಿನಿಂದ 11 ದಿನಗಳ ವಿಶೇಷ ವ್ರತ ಆಚರಿಸುತ್ತಿದ್ದೇನೆ” ಎಂದು ಘೋಷಿಸಿದರು.
“ನಾನು 11 ದಿನ ವಿಶೇಷ ವ್ರತ ಆರಂಭಿಸುತ್ತೇನೆ. ಪ್ರಭು ಶ್ರೀರಾಮನು ಕಾಲ ಕಳೆದ ಪಂಚವಟಿಯ ನಾಸಿಕ್ ಧಾಮದಿಂದ ನಾನು ವ್ರತ ಆರಂಭಿಸುತ್ತೇನೆ. ಸ್ವಾಮಿ ವಿವೇಕಾನಂದರ ಜಯಂತಿಯಂದೇ ನಾನು ವ್ರತ ಆರಂಭಿಸುತ್ತಿರುವುದು ಪ್ರಮುಖ ಸಂಗತಿಯಾಗಿದೆ. ಅಲ್ಲದೆ ಇಂದು ಮಾತಾ ಜೀಜಾಬಾಯಿ ಅವರ ಜಯಂತಿ ಇದೆ. ಅವರು ಛತ್ರಪತಿ ಶಿವಾಜಿಯವರಂತಹ ವೀರನಿಗೆ ಜನ್ಮ ನೀಡಿದ್ದಾರೆ. ಮಾತಾ ಜೀಜಾಬಾಯಿ ಅವರನ್ನು ಸ್ಮರಿಸುತ್ತಲೇ ನನ್ನ ತಾಯಿಯ ನೆನಪಾಗುತ್ತದೆ. ಇದು ಸ್ವಾಭಾವಾಗಿದೆ. ನನ್ನ ತಾಯಿಯು ಜೀವನದ ಕೊನೆಯ ಕ್ಷಣದವರೆಗೆ ಶ್ರೀರಾಮ ಜಪ ಮಾಡುತ್ತಿದ್ದರು” ಎಂದು ಹೇಳಿದರು.
ಇದನ್ನೂ ಓದಿ: Ram Halwa: ರಾಮಮಂದಿರ ಉದ್ಘಾಟನೆಗಾಗಿ ಸಿದ್ಧವಾಗಲಿದೆ 7 ಸಾವಿರ ಕೆಜಿ ರಾಮ ಹಲ್ವಾ; ವಿಶೇಷ ಏನು?
“ನಾನು ಭೌತಿಕವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಹೃದಯದಲ್ಲಿ ದೇಶದ 140 ಕೋಟಿ ಜನರೇ ಇದ್ದಾರೆ. ನಿಮ್ಮೆಲ್ಲರ ಪರವಾಗಿ, ನಿಮ್ಮ ಆಶೀರ್ವಾದ, ಬೆಂಬಲದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಅಸಂಖ್ಯ ಜನರ ತ್ಯಾಗ, ಹೋರಾಟ, ಬಲಿದಾನದ ಸ್ಮರಣೆಯೊಂದಿಗೆ ತೆರಳುತ್ತಿದ್ದೇನೆ. ಇಂತಹ ಸೌಭಾಗ್ಯದ ಕ್ಷಣದಲ್ಲಿ ನೀವೂ ನನ್ನೊಂದಿಗೆ ಇದ್ದೀರಿ ಎಂಬ ಭರವಸೆಯೊಂದಿಗೆ ಗರ್ಭಗುಡಿ ಪ್ರವೇಶಿಸುತ್ತೇನೆ. ನೀವು ಲಿಖಿತವಾಗಿ ನನಗೆ ಪತ್ರ ಬರೆಯುವ ಮೂಲಕ ಆಶೀರ್ವಾದ ಮಾಡಿ. ನಮೋ App ಮೂಲಕ ಪತ್ರ ಬರೆದು ನನಗೆ ಆಶೀರ್ವದಿಸಿ ಹಾಗೂ ಶ್ರೀರಾಮನ ಭಕ್ತಿಯಲ್ಲಿ ಮಿಂದೇಳಿ. ರಾಮನ ಕೋಟಿ ಕೋಟಿ ಭಕ್ತರಿಗೆ ನನ್ನ ನಮನಗಳು. ಜೈ ಶ್ರೀರಾಮ್” ಎಂದು ಮೋದಿ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ