Site icon Vistara News

ದೇವಗಢದ ಬೈದ್ಯನಾಥನ ದರ್ಶನ ಮಾಡಿದ ಪ್ರಧಾನಿ ಮೋದಿ, ಏನೀ ಕಾರಣಿಕ ದೇಗುಲದ ವಿಶೇಷ?

deogarh PM

ದೇವಗಢ (ಜಾರ್ಖಂಡ್‌): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಾರ್ಖಂಡ್‌ ರಾಜ್ಯದ ದೇವಗಢಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು, ೪೦೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ದೇವಗಢ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಜತೆಗೆ ೧೬,೮೦೦ ಕೋಟಿ ರೂ. ವೆಚ್ಚದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ೨೦೧೮ರ ಮೇ ೨೫ರಂದು ಅವರೇ ಈ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದರು. ದೇವಗಢದಲ್ಲಿ ನಾಲ್ಕು ತಾಸು ಇದ್ದ ಅವರು ಇಲ್ಲಿನ ಪುರಾಣ ಪ್ರಸಿದ್ಧ ಬಾಬಾ ಬೈದ್ಯನಾಥ ಧಾಮ ಎಂಬ ಪೌರಾಣಿಕ, ಕಾರಣಿಕ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇಶದ ದ್ವಾದಶ ಜ್ಯೋತಿರ್ಲಿಂಗಗಲ್ಲಿ ಒಂದಾಗಿರುವ ಈ ಪವಿತ್ರ ಕ್ಷೇತ್ರ ದೇಶದೆಲ್ಲೆಡೆ ಪ್ರಸಿದ್ಧವಾಗಿದೆ. ಹಾಗಿದ್ದರೆ ಈ ದೇಗುಲದ ವಿಶೇಷತೆಗಳೇನು? ತಿಳಿಯೋಣ ಬನ್ನಿ.

ಜಾರ್ಖಂಡ್‌ನ ದೇವಗಢದಲ್ಲಿರುವ ಬಾಬಾ ಬೈದ್ಯನಾಥೇಶ್ವರನ ದೇವಾಲಯ

೧೨ ಜ್ಯೋತಿರ್ಲಿಂಗಗಳಲ್ಲಿ ಒಂದು

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಮ್ || ೧ ||
ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ || ೨ ||
ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ || ೩ ||
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ || ೪ ||
|| ಇತಿ ದ್ವಾದಶಜ್ಯೋತಿರ್ಲಿಂಗಸ್ಮರಣಂ ಸಂಪೂರ್ಣಮ್ ||
ಈ ಸ್ತೋತ್ರದಲ್ಲಿ ಬರುವ ಪರಲ್ಯಾಂ ವೈದ್ಯನಾಥಂಚ ಎಂದರೆ ದೇವಗಢದ ಈ ವೈದ್ಯನಾಥನೆ.

ಗುಜರಾತಿನ ಸೋಮನಾಥ, ಶ್ರೀಶೈಲಂನ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲೇಶ್ವರ, ಮಧ್ಯಪ್ರದೇಶದ ಓಂಕಾರೇಶ್ವರ, ಉತ್ತರಾಖಂಡದ ಕೇದಾರನಾಥ, ಮಹಾರಾಷ್ಟ್ರದ ಭೀಮಶಂಕರ್‌, ವಾರಾಣಸಿಯ ವಿಶ್ವನಾಥ, ಮಹಾರಾಷ್ಟ್ರದ ತ್ರ್ಯಯಂಬಕೇಶ್ವರ, ದೇವಗಢದ ಬೈದ್ಯನಾಥ, ದ್ವಾರಕಾದ ನಾಗೇಶ್ವರ, ರಾಮೇಶ್ವರದ ರಾಮೇಶ್ವರ ಮತ್ತು ಮಹಾರಾಷ್ಟ್ರದ ಘುಷಮೇಶ್ವರ ಇವು ದ್ವಾದಶಃ ಜ್ಯೋತಿರ್ಲಿಂಗಗಳು. ಇವುಗಳನ್ನು ಶ್ರೀ ಶಂಕರಾಚಾರ್ಯರು ಸ್ಥಾಪನೆ ಮಾಡಿದರೆಂಬ ಪ್ರತೀತಿ ಇದೆ.

ಕೊಳದ ಸುಂದರ ಹಿನ್ನೆಲೆಯಲ್ಲಿ ಮೈದಳೆದ ಸೌಂದರ್ಯ

ಎಲ್ಲಿದ್ದಾನೆ ದೇವಗಢದ ಬಾಬಾ ವೈದ್ಯನಾಥ?
ಜಾರ್ಖಂಡ್‌ ರಾಜ್ಯದಲ ಸಂತಾಲ್‌ ಪರಗಣಾಸ್‌ ವಿಭಾಗದ ದಿಯೋಗಢ ಎಂಬಲ್ಲಿದೆ. ಇಲ್ಲಿ ಪ್ರಧಾನ ದೇವರು ಬಾಬಾ ಬೈದ್ಯನಾಥ. ಇದೊಂದು ದೇವಸ್ಥಾನ ಸಂಕೀರ್ಣವಾಗಿದ್ದು, ಇಲ್ಲಿ ತಾಯಿ ಪಾರ್ವತಿಯ ದೇಗುಲವೂ ಇದೆ.

ಕೊಳದ ಚೆಲುವಲ್ಲಿ ಮಿಂದೇಳುವ ದೇಗುಲ

ಇಲ್ಲಿ ಶಿವ ವೈದ್ಯನಾಥನಾಗಿದ್ದು ಹೇಗೆ?
ದಶಕಂಠನಾದ ರಾವಣ ಇಡೀ ಜಗತ್ತಿನ ಮೇಲೆ ವಿಕ್ರಮ ಸಾಧಿಸುವಷ್ಟು ಶಕ್ತವಾದ ವರವೊಂದನ್ನು ಬೇಡುವುದಕ್ಕಾಗಿ ಶಿವನನ್ನು ಕುರಿತು ತಪಸ್ಸು ಆಚರಿಸುತ್ತಿದ್ದ. ದೀರ್ಘ ಕಾಲ ತಪಸ್ಸು ಮಾಡಿದರೂ ಶಿವ ಒಲಿಯಲೇ ಇಲ್ಲ. ಆಗ ರಾವಣ ತನ್ನ ಹತ್ತು ತಲೆಗಳಲ್ಲಿ ಒಂದರ ಬಳಿಕ ಒಂದರಂತೆ ಕಡಿದು ಶಿವನಿಗೆ ಸಮರ್ಪಿಸುತ್ತಾನೆ. ಕೊನೆಯ ತಲೆಯನ್ನೂ ಸಮರ್ಪಿಸಬೇಕು ಎನ್ನುವಷ್ಟರಲ್ಲಿ ಪ್ರತ್ಯಕ್ಷನಾಗುವ ಈಶ್ವರ ಬೇಡಿದ ವರವನ್ನು ಕೊಡುತ್ತಾನೆ. ಜತೆಗೆ ಕತ್ತರಿಸಿದ ತಲೆಗಳನ್ನು ಮತ್ತೆ ಜೋಡಿಸಿ ನೋವನ್ನೂ ಶಮನ ಮಾಡುತ್ತಾನೆ. ರಾವಣನ ಪಾಲಿಗೆ ವೈದ್ಯನಾಗಿ ಉಪಚರಿಸಿದ ರಾವಣ ಮುಂದೆ ಬೈದ್ಯನಾಥೇಶ್ವರನಾಗಿ ನೆಲೆಗೊಳ್ಳುತ್ತಾನೆ. ಆ ಜಾಗವೇ ದೇವಗಢ.

ಕನ್ವರ್‌ ಯಾತ್ರೆಯ ಪುಣ್ಯಭೂಮಿ
ಪ್ರತಿ ವರ್ಷವೂ ಬೈದ್ಯನಾಥನಿಗೆ ಗಂಗಾ ತೀರ್ಥಾರ್ಚನೆ ನಡೆಸುವ ಕನ್ವರ್‌ ಯಾತ್ರೆ ನಡೆಯುತ್ತದೆ. ಬಿಹಾರದ ಸುಲ್ತಾನ್‌ ಗಂಜ್‌ನಿಂದ ಗಂಗಾ ನದಿಯಿಂದ ನೀರನ್ನು ಸಂಗ್ರಹಿಸುವ ಲಕ್ಷಾಂತರ ಭಕ್ತರು ಅಲ್ಲಿಂದ ದೇವಗಢದ ಬೈದ್ಯನಾಥ ದೇವಾಲಯಕ್ಕೆ ಬಂದು ತೀರ್ಥ ಸಮರ್ಪಣೆ ಮಾಡುತ್ತಾರೆ.

ದೇವಗಢವೆಂಬುದು ಚಿತಾಭೂಮಿ
ಬೈದ್ಯನಾಥನ ಜ್ಯೋತಿರ್ಲಿಂಗ ಇರುವುದು ಪ್ರಜ್ವಲಿಕಾ ನಿಧನಂ ಎಂಬಲ್ಲಿ ಎನ್ನುತ್ತದೆ ಸ್ತೋತ್ರ. ಅಂದರೆ ಮರಣ ಹೊಂದಿದವರನ್ನು ದಹನ ಮಾಡುವ ಚಿತಾಭೂಮಿ ಎಂದರ್ಥ. ಇದು ಕಪಾಲಿಕರು ಮತ್ತು ಭೈರವ ಪಂಥದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಆತ್ಮಬಂಧನದ ನೆಲೆವೀಡು
ಇಲ್ಲಿ ಶಿವನ ದೇವಸ್ಥಾನವಲ್ಲದೆ, ಪಾರ್ವತಿ ದೇವಿಯ ದೇಗುಲವೂ ಇದೆ. ಎರಡು ಪ್ರತ್ಯೇಕ ದೇಗುಲಗಳಾಗಿದ್ದು, ಇವೆರಡನ್ನೂ ಕೆಂಪು ಬಣ್ಣದ ಪವಿತ್ರ ದಾರಗಳಿಂದ ಬೆಸೆಯಲಾಗಿದೆ. ಇದನ್ನು ಶಿವ ಮತ್ತು ಶಕ್ತಿಯ ಆತ್ಮಬಂಧನ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಶಿವ ಪುರಾಣದಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ಇಲ್ಲಿ ಮನಸುಗಳು ಒಂದಾಗುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಲ್ಲಿಗೆ ಹರಕೆ ಹೊತ್ತರೆ ಮದುವೆಯೂ ಆಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ| Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ

Exit mobile version