Site icon Vistara News

yoga day 2022: ದೇಶದಾರೋಗ್ಯಕ್ಕಾಗಿ ನಾವೆಲ್ಲರೂ ಯೋಗ ಮಾಡೋಣ!

Guru Sandesha

ಜಗದ್ಗುರು ಶ್ರೀ ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.

ಭಾರತ ಅತ್ಯಂತ ಪುರಾತನವಾದ ರಾಷ್ಟ್ರ. ದೇವಾನುದೇವತೆಗಳು, ಋಷಿಮುನಿಗಳು, ಮಹಾಮಹಿಮರು ನಡೆದಾಡಿದ ಭೂಮಿ. ಇಲ್ಲಿ ಉಸಿರಾಡುವ ಪ್ರತಿ ಉಸಿರಿಗೂ ಅಧ್ಯಾತ್ಮಕ್ಕೂ ನಂಟಿದೆ. ನಿಜ ಹೇಳಬೇಕೆಂದರೆ ಜಗತ್ತಿಗೆ ನಾವು ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ದೇಶವೂ ನೀಡಿಲ್ಲ. ಅದರಲ್ಲೂ ‘ಯೋಗ’ ನಾವು ಜಗತ್ತಿಗೆ ನೀಡಿದ ಮಹಾನ್ ಕೊಡುಗೆ. ಇದನ್ನು ಈಗ ವಿಶ್ವವೇ ಅನುಸರಿಸುತ್ತಿದೆ.

‘ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಬೆಸೆಯುವುದೇ ಯೋಗ’ ಎನ್ನುತ್ತಿದ್ದರು ಮಹಾತ್ಮ ಗಾಂಧಿ. ಯೋಗಕ್ಕೆ ಒಂದು ದೈವೀ ಗುಣವಿದೆ. ದಿವ್ಯಶಕ್ತಿ ಇದೆ. ಪಾರಮಾರ್ಥಿಕತೆ ಇದೆ. ಅದು ನಮ್ಮ ಮೈ-ಮನಸ್ಸು ಎರಡನ್ನೂ ಸ್ವಸ್ಥವಾಗಿಡಬಲ್ಲದು. ನಮ್ಮ ಬಳಿ ಬಂದ ಅನೇಕ ಭಕ್ತರು ಕೇಳುತ್ತಾರೆ. ‘ಬುದ್ಧೀ ಈ ಯೋಗವನ್ನ ಯಾತಕ ಕಲಿಬೇಕ್ರಿ?’ ಉತ್ತರ ಸರಳ. ಆರೋಗ್ಯಯುತವಾಗಿ ಉಸಿರಾಡಲು ನೆಮ್ಮದಿಯಿಂದ ಬದುಕಲು ಮನುಷ್ಯ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಅದು ನಮ್ಮ ಬದುಕಿನ ಒಂದು ಭಾಗವಾಗಬೇಕು. ಯೋಗದ ಜತೆಜತೆಗೆ ಧ್ಯಾನ ಮಾಡಬೇಕು. ಅದು ಏಕಾಗ್ರತೆಯನ್ನು, ಮಾನಸಿಕ ಸಮತೋಲನವನ್ನು ನಮಗೆ ತಂದುಕೊಡುತ್ತದೆ.

ದುರಂತವೆಂದರೆ, ಯೋಗವನ್ನು ಜಗತ್ತಿಗೆ ಪರಿಚಯಿಸಿದ ನಾವೇ ಇನ್ನೂ ಪರಿಪೂರ್ಣವಾಗಿ ಯೋಗವನ್ನು ಅಪ್ಪಿಕೊಂಡಿಲ್ಲ. ಆದರೆ ಹೊರ ದೇಶದವರು ಹಾಗಲ್ಲ, ಅವರು ನಮಗಿಂತ ಹೆಚ್ಚು ಯೋಗಕ್ಕೆ ಮೊರೆಹೋಗಿದ್ದಾರೆ. ಅಮೆರಿಕದಲ್ಲಿ ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಯೋಗ ಕೇಂದ್ರವಿದೆ. ಚೀನಾದಲ್ಲಿ ಭಾರತದ ಹತ್ತು ಸಾವಿರ ಯೋಗ ಶಿಕ್ಷಕರು ಯೋಗವನ್ನು ಕಲಿಸುತ್ತಿದ್ದಾರೆ.

ನಮ್ಮಲ್ಲಿ ಮಾತ್ರ ಯೋಗಕ್ಕೆ ಅಷ್ಟು ಪ್ರಾಶಸ್ತ್ಯ ಸಿಕ್ಕಿಲ್ಲ. ಇದನ್ನು ನಿವಾರಿಸಲೆಂದೇ ನಾವು ಬೆಂಗಳೂರಿನಲ್ಲಿ ಶ್ವಾಸಯೋಗ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಯೋಗವನ್ನು ಜನಪ್ರಿಯಗೊಳಿಸಿದೆವು. ಮೊದಲ ಸಲ ವಿಶ್ವ ಯೋಗದಿನಾಚರಣೆಯನ್ನು ಆಚರಿಸಿದೆವು. ಎಲೆ ಮರೆಕಾಯಿಯಂತಿದ್ದ ಯೋಗ ಮಾಸ್ಟರ್‌ಗಳಿಗೆ  ‘ಯೋಗರತ್ನ’ ಪುರಸ್ಕಾರ ನೀಡಿ ಗೌರವಿಸಿದೆವು. ನಮ್ಮ ಪ್ರಕಾರ ಬಡವ-ಶ್ರೀಮಂತನೆನ್ನದೆ ಪ್ರತಿಯೊಬ್ಬರೂ ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಆಗ ಮಾತ್ರ ದೇಶ ಆರೋಗ್ಯವಾಗಿರಲು ಸಾಧ್ಯ.

ದೇಶಕ್ಕೇನು ಲಾಭ?

ನಿಮಗೆ ಗೊತ್ತಿದೆ ಇವತ್ತಿನದ್ದು ಬಿಡುವಿಲ್ಲದ ಬದುಕು.ಆಧುನಿಕ ಜೀವನ ವಿಧಾನದ ಒತ್ತಡಕ್ಕೆ ಸಿಕ್ಕಿದ ಮಾನವ ಹಲವು ರೋಗರುಜಿನಗಳಿಂದ ನರಳುತಿದ್ದಾನೆ. ಯಾರಿಗೂ ಹಿಡಿ ನೆಮ್ಮದಿ ಇಲ್ಲ. ಎಲ್ಲರ ಮನಸಿನಲ್ಲೂ ಸಿಟ್ಟು ಆಕ್ರೋಶ ಮಡುಗಟ್ಟಿದೆ. 21ನೇ ಶತಮಾನದಲ್ಲಿದ್ದರೂ ಮೇಲು ಕೀಳು ಮನೆ ಮಾಡಿದೆ. ತ್ವೇಷಮಯ ವಾತಾವರಣ ಸಮಾಜದಲ್ಲಿ ಹೆಚ್ಚಿದೆ. ಇವೆಲ್ಲಕ್ಕೂ ಮೂಲ ಮದ್ದೆಂದರೆ ಯೋಗ ಮತ್ತು ಧ್ಯಾನ. ಯೋಗ ಮಾಡಿ ಮನಸ್ಸನ್ನು ಹತೋಟಿಯಲ್ಲಿಟ್ಟರೆ ಎಲ್ಲರ ಮನಸ್ಸೂ ಪ್ರಶಾಂತವಾಗಿರುತ್ತದೆ.

ಧ್ಯಾನದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಆರೋಗ್ಯ ಲಭಿಸುತ್ತದೆ. ಜನ ಆರೋಗ್ಯವಾಗಿದ್ದರೆ ತಾನೆ ದೇಶ ಆರೋಗ್ಯವಾಗಿರುವುದು. ದೇಶ ಆರೋಗ್ಯವಾಗಿದ್ದರೆ ತಾನೆ ಆರ್ಥಿಕಾಭಿವೃದ್ಧಿಯೂ ಹೆಚ್ಚುವುದು. ಹಾಗಾಗಿ ಯೋಗ ದೇಶದ ಜನರ ಮೊದಲ ಆದ್ಯತೆಯಾಗಬೇಕು. ಪ್ರತಿ ನಿತ್ಯ ಎಲ್ಲರೂ ಸ್ವಯಂಪ್ರೇರಿತರಾಗಿ ಯೋಗಾಭ್ಯಾಸ ಮಾಡಬೇಕು. ಇದನ್ನು ಕಾನೂನಿನ ಮೂಲಕ ಹೇರಲಾಗುವುದಿಲ್ಲ, ಹೇರಲೂಬಾರದು. ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆಮ್ಮದಿಯಾಗಿ ಜೀವಿಸಲು ಜನರೇ ಯೋಗ ಪಾಲನೆಗೆ ಮುಂದಾಗಬೇಕು.

ಧ್ಯಾನವೇ ವಿಸ್ಮಯ

ಯೋಗ ಮತ್ತು ಧ್ಯಾನದ ಶಕ್ತಿ ಏನು ಅನ್ನುವುದಕ್ಕೆ ನಿಮಗೊಂದು ಉದಾಹರಣೆ ಕೊಡಲು ನಾವು ಬಯಸುತ್ತೇವೆ. ಇತ್ತೀಚೆಗೆ ಒಂದು ಬಹಳ ಮಹತ್ವದ ಅಧ್ಯಯನ ನಡೆಯಿತು. ಅಂತರಿಕ್ಷ ಯಾನ ಮಾಡುವ ಗಗನಯಾತ್ರಿಗಳಿಗೆ ಅನ್ಯಗ್ರಹದಲ್ಲಿ ಇಳಿಯಬೇಕಾದರೆ ಹಲವು ಚಾಲೆಂಜಸ್ ಎದುರಾಗುತ್ತದೆ. ರಕ್ತದೊತ್ತಡ, ಮಾನಸಿಕ ಸ್ಥಿಮಿತದ ಏರುಪೇರು ಇತ್ಯಾದಿ. ಅಲ್ಲಿ ಏಕಾಗ್ರತೆ ಕೂಡ ಇನ್ನೊಂದು ಚಾಲೆಂಜ್. ಹೀಗಾಗಿ ರಷ್ಯಾದ ವಿಜ್ಞಾನಿಗಳು ಬೌದ್ಧ ಬಿಕ್ಕುಗಳ ಧ್ಯಾನ ಪದ್ಧತಿಯನ್ನು ಅವ್ಯಾಹತವಾಗಿ ಅಭ್ಯಾಸ ಮಾಡ್ತಿದ್ದಾರೆ.

ಯೋಗ ಮಾಡಿದಾಗ ಮತ್ತು ಧ್ಯಾನದಲ್ಲಿ ಕುಳಿತಾಗ ಅವರ ಮನಸ್ಸಿನಲ್ಲಿ ಏಳುವ ತರಂಗಗಳೇನು? ಸತತ ಹಲವು ದಿನಗಳ ಕಾಲ ಅನ್ನಾಹಾರ ಸೇವಿಸದೆ ಹೇಗೆ ಬೌದ್ಧ ಬಿಕ್ಕುಗಳು ಧ್ಯಾನ ಮಾಡಬಲ್ಲರು? ಸುಪ್ತಾವಸ್ಥೆಗೆ ಅವರು ಹೇಗೆ ಜಾರುತ್ತಾರೆ ಅನ್ನೋದನ್ನೆಲ್ಲಾ ಸ್ಟಡಿ ಮಾಡಿದ್ದಾರೆ. ಅಂದ್ರೆ ನಮ್ಮ ಪರಂಪರಾಗತ ಯೋಗದಲ್ಲೇ ಧ್ಯಾನದಲ್ಲೇ ವಿಸ್ಮಯಕಾರಿ ಸತ್ಯ ಅಡಗಿದೆ. ಅದನ್ನು ಮೊದಲು ನಾವು ಅರಿತುಕೊಳ್ಳಬೇಕು ಅಷ್ಟೆ.

ಉಸಿರಾಟವೇ ಮುಖ್ಯ

ಯೋಗ, ಧ್ಯಾನದ ಅಂತಃಸತ್ವ ಉಸಿರಾಟದ ಮೇಲೆ ನಿಂತಿದೆ. ನಮ್ಮ ಆಯಸ್ಸನ್ನು ತೀರ್ಮಾನಿಸುವುದು ಕೂಡ ಉಸಿರಾಟವೆ. ನಾವು ಹೆಚ್ಚುಬಾರಿ ಉಸಿರಾಡುತ್ತೇವೆ. ಬೇಗಬೇಗ ಮಣ್ಣಿಗೆ ಸೇರುತ್ತೇವೆ. ಆದರೆ ಮೊಸಳೆ ನಿಮಿಷಕ್ಕೆ ನಾಲ್ಕುಸಲ ಮಾತ್ರ ಉಸಿರಾಡಿ ನೂರು ವರ್ಷ ಬದುಕುತ್ತದೆ. ಆಮೆ ನಿಮಿಷಕ್ಕೆ ಮೂರು ಸಲ ಉಸಿರಾಡಿ  ನಾಲ್ಕುನೂರು ವರ್ಷ ಬದುಕಿದ್ದಕ್ಕೆ ಉದಾಹರಣೆಗಳಿವೆ.

ಆದ್ರೆ ಶ್ವಾನ ಹಾಗಲ್ಲ. ಅದು ಬಾಯಿ ಮೂಲಕ ಹೆಚ್ಚು ಉಸಿರಾಡುತ್ತದೆ. ಅದರ ಜೀವಿತಾವಧಿ ಕಡಿಮೆ. ಇದನ್ನೆಲ್ಲಾ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿವರ್ಯರು ಅರಿತಿದ್ದರು. ಯಾವುದೇ ಒತ್ತಡವಿಲ್ಲದೆ ನಿರುಮ್ಮಳವಾಗಿ ಬದುಕುವ ಪ್ರಾಣಿ ಪಕ್ಷಿಗಳ ಜೀವನಕ್ರಮವನ್ನು ಗಮನಿಸುತ್ತಿದ್ದರು. ಯಾವ ಪ್ರಾಣಿಗೂ ಬೆನ್ನು ನೋವು ಬರಲ್ಲ. ಯಾವ ಪ್ರಾಣಿಗೂ ರಕ್ತದೊತ್ತಡ ಇರಲ್ಲ, ಮಧುಮೇಹ ಇರಲ್ಲ, ಕ್ಯಾನ್ಸರ್ ಇರಲ್ಲ. ಹಾಗಿದ್ದ ಮೇಲೆ ಮನುಷ್ಯನಿಗೆ ಏಕೆ ಈ ಎಲ್ಲಾ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಮನುಷ್ಯನ ಜೀವನ ವಿಧಾನ.

ಸಹಜ ಆಹಾರ ಸೇವನೆ, ಸಹಜ ಬದುಕು ಇಲ್ಲದ ಮಾನವ ರೋಗಕ್ಕೆ ತುತ್ತಾಗುತ್ತಿದ್ದಾನೆ. ಪ್ರಾಣಿಗಳನ್ನು ನೀವು ಗಮನಿಸಿ ನೋಡಿ ಅವಕ್ಕೆ ಯೋಗ ಕಲೆ ಪ್ರಾಕೃತಿಕವಾಗಿ ಸಿದ್ಧಿಸಿದೆ. ಅವಕ್ಕೆ ಉಸಿರಿನ ಮೇಲೆ ನಿಯಂತ್ರಣವಿದೆ. ಇದನ್ನೆಲ್ಲಾ ಗಮನಿಸಿದ ಋಷಿ ಮುನಿಗಳೂ ಮಾನವನ ಒಳಿತಿಗೆಂದು ಯೋಗವಿಧಾನವನ್ನು ಬೆಳಕಿಗೆ ತಂದರು. ಗಮನಿಸಿ ಪ್ರತಿಯೊಂದು ಯೋಗಾಸನವೂ ಪ್ರಾಣಿಯ ಭಂಗಿಯನ್ನೇ ಹೋಲುತ್ತದೆ. ಅವುಗಳ ಹೆಸರನ್ನೇ ಪ್ರತಿ ಯೋಗಾಸನಕ್ಕೂ ಇಡಲಾಗಿದೆ.

ನಿಸರ್ಗ ನಮಗೆ ಹಲವು ಪಾಠಗಳನ್ನು ಆಗಾಗ್ಗೆ ಕಲಿಸುತ್ತಿರುತ್ತದೆ. ನಾವು ಕಲಿಯಬೇಕು. ಯಾಕೆಂದ್ರೆ ಮಾನವ ಪ್ರಕೃತಿಯ ಕೂಸು. ಪ್ರಕೃತಿಗೆ ವಿರುದ್ಧವಾಗಿ ಹೋದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಸಾಕಷ್ಟು ತೆತ್ತಿದ್ದೇವೆ. ಇನ್ನು ಮುಂದೆಯಾದರೂ ಯೋಗವನ್ನು ಧ್ಯಾನವನ್ನು ಪ್ರತಿ ನಿತ್ಯವೂ ಅಭ್ಯಾಸ ಮಾಡಿ. ಮೈ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಿ. ಜೂನ್ 21ಕ್ಕೆ ಮಾತ್ರ ಯೋಗ ದಿನವಲ್ಲ. ಪ್ರತಿನಿತ್ಯವೂ ಯೋಗದಿನವಾಗಬೇಕು ಅನ್ನೋದು ನಮ್ಮ ಇಚ್ಛೆ.

ಇದನ್ನೂ ಓದಿ| ಯೋಗದಿನದಲ್ಲಿ ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ: ಸಂಸದ ಪ್ರತಾಪ್‌ ಸಿಂಹ

Exit mobile version