ಬೆಂಗಳೂರು : ರಾಜ್ಯಾದ್ಯಂತ ಅದ್ಧೂರಿಯಾಗಿ ಶುಕ್ರವಾರ (ಆ.19) ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು. ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇಗುಲದಲ್ಲಿ (ISKCON Janmashtami) ಸಾವಿರಾರು ಭಕ್ತರು ಶ್ರೀ ಕೃಷ್ಣನ ದರ್ಶನ ಪಡೆದು ಪುನೀತರಾದರು.
ಶುಕ್ರವಾರ ಬೆಳಗಿನ ಜಾವದಿಂದ ದೇವಾಲಯದಲ್ಲಿ ವಿಶೇಷ ಅಲಂಕಾರ, ಮಂಗಳಾರತಿ ಸೇರಿದಂತೆ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ರಾಧಾಕೃಷ್ಣನಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ಏಳು ನದಿ ನೀರಿನಿಂದ ವಿಶೇಷ ಅಭಿಷೇಕ ಮಾಡಲಾಗಿದೆ. ಬೆಳಗಿನಿಂದ ಆರಂಭವಾಗಿರುವ ಕೃಷ್ಣನ ಆರಾಧನೆ, ವಿಶೇಷ ಪೂಜೆಗಳು ಮಧ್ಯ ರಾತ್ರಿ 12:30ರವರೆಗೆ ನಡೆಯಿತು. ಮಧ್ಯರಾತ್ರಿಯವರೆಗೂ ಸಾಲು ಗಟ್ಟಿ ನಿಂತ ಜನರು ಶ್ರೀ ಕೃಷ್ಣನ ದರ್ಶನ ಪಡೆದರು.
ಕೃಷ್ಣ ಜನ್ಮಾಷ್ಟಮಿ ನಿಮಿತ್ತ ರಾಧಾಕೃಷ್ಣರಿಗೆ, ಹೂವಿನ ಅಲಂಕಾರದ ಜತೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾ ಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಸಲಾಗಿತ್ತು. ಕೃಷ್ಣನಿಗೆ ಪ್ರಿಯವಾದ 108 ರೀತಿಯ ತಿಂಡಿಗಳನ್ನು ನೈವೇದ್ಯ ಮಾಡಲಾಯಿತು. ರಾಧಾಕೃಷ್ಣನಿಗೆ ಚಾಮರ ಸೇವೆ ನಡೆದಿದ್ದು, ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಧಾಕೃಷ್ಣರಿಗೆ ವಿವಿಧ ಸೇವೆಗಳು ನಡೆದವು.
ಈ ಬಾರಿ ಇಸ್ಕಾನ್ ದೇಗುಲದಲ್ಲಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಹೊರಾಂಗಣ ಮತ್ತು ಒಳಾಂಗಣ ಅಂಲಕಾರ ಮಾಡಲಾಗಿತ್ತು. ಇದು ಭಕ್ತರನ್ನು ಆಕರ್ಷಿಸಿತು.
ಇದನ್ನೂ ಓದಿ | Festive Fashion | ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್